ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹದಗೆಟ್ಟು ಹೋಗಿರುವ ರಸ್ತೆಗಳ ದುರಸ್ತಿ ಕೈಗೊಳ್ಳಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ನೀವು ಸಾಲ ಮಾಡಿ ಇಲ್ಲವೇ ಕಳ್ಳತನ ಮಾಡಿಯಾದರೂ ರಸ್ತೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ರಾಜ್ಯ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಕೀಲ ಅಶ್ವತ್ಥನಾರಾಯಣ ಚೌಧರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಬೂಬು ನೀಡದೆ, ಕಾಲಹರಣ ಮಾಡದೆ ರಸ್ತೆದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಮಸ್ಯೆಯ ತೀವ್ರತೆ ಕಂಡು ದಂಗಾಗಿ ಹೋಗಿರುವ ಹೈಕೋರ್ಟ್, ಬಿಬಿಎಂಪಿಗೆ, ‘ನೀವು ಸಾಲ ಮಾಡುತ್ತೀರೋ, ಕಳ್ಳತನ ಮಾಡುತ್ತೀರೋ ಮೂಲಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಮೊದಲು ಗುಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಸರಿ ಮಾಡಿ, ಮಳೆಯ ನಂತರ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ’ ಎಂದು ಹೇಳಿದೆ.
ನ್ಯಾಯಾಲಯದ ಸೂಚನೆ ಬರುವ ತನಕ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 13,974 ಕಿಲೋಮೀಟರ್ ರಸ್ತೆ ಜಾಲವಿದೆ. ಈ ಪೈಕಿ ಮುಖ್ಯರಸ್ತೆಗಳು ಮತ್ತು ಉಪ ಮುಖ್ಯರಸ್ತೆಗಳ ಉದ್ದ 1,344 ಕಿ.ಮೀ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆಂದೇ ಕಳೆದ ಐದು ವರ್ಷಗಳಲ್ಲಿ 20,060 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ನಲ್ಲಿ ನೀಡಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದರೂ ರಸ್ತೆಗಳ ನಿರ್ವಹಣೆ ಇಷ್ಟೊಂದು ಕಳಪೆ ಆಗಿರುವುದೇಕೆ? ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೇ ಭೇಟಿ ನೀಡುವುದಿಲ್ಲ, ಸೂಕ್ತ ಮೇಲ್ವಿಚಾರಣೆ ಮಾಡುವುದಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.
ಬಿಬಿಎಂಪಿ ಪರ ವಕೀಲರು, ಮಳೆ ಮುಗಿದ ಬಳಿಕ ರಸ್ತೆ ಕಾಮಗಾರಿ ನಡೆಸಲಾಗುವುದು. ಅನುದಾನ ಲಭ್ಯವಾದರೆ ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಈ ಸಂಬಂಧ ಜನವರಿ ತಿಂಗಳೊಳಗೆ ಕಾಮಗಾರಿ ಪ್ರಗತಿಯ ವರದಿ ನೀಡಿ ಎಂದು ಬಿಬಿಎಂಪಿಗೆ ಸೂಚಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಜನವರಿ 05 ಕ್ಕೆ ಮುಂದೂಡಿದೆ.
ಪ್ರತಿ ವರ್ಷವೂ ಮಳೆಗೆ ಬೆಂಗಳೂರಿನ ರಸ್ತೆಗಳು ಅಧ್ವಾನಗೊಳ್ಳುತ್ತವೆ. ಒಂದೆರಡು ಮಳೆಗೇ ರಸ್ತೆಗಳು ಪೂರ್ತಿ ಕಿತ್ತುಹೋಗುವುದರಿಂದ ಅವುಗಳ ‘ಗುಣಮಟ್ಟ’ ಎಂಥದ್ದು ಎಂಬುದನ್ನು ಅಂದಾಜಿಸಬಹುದು. ಈ ವರ್ಷವಂತೂ ಈ ಗುಂಡಿಗಳು ವಾಹನ ಸವಾರರ ಜೀವವನ್ನೇ ಬಲಿ ಪಡೆಯುತ್ತಿದ್ದರೂ, ಅಧಿಕಾರಿಗಳು ಜಡತ್ವದಿಂದ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ರಸ್ತೆ ಗುಂಡಿಗಳಿಗೆ ಇನ್ನಷ್ಟು ಪ್ರಾಣಗಳು ಬಲಿಯಾಗುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಳ್ಳಲಿ. ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮತ್ತು ಗುಣಮಟ್ಟದಿಂದ ನಡೆಸಬೇಕಿದೆ.