ಬೆಳಗಾವಿ: ಖಾನಾಪುರ ತಾಲೂಕಿನ ಅರ್ಬಾಜ್ ಮುಲ್ಲಾ ಎಂಬ ಯುವಕನನ್ನು ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕಾಧ್ಯಕ್ಷನಿಗೆ ಯುವತಿಯ ಪೋಷಕರು ಸೂಪಾರಿ ನೀಡಿ ಅಮಾನುಷ್ಯವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹತ್ಯೆಯಾದ ಯುವಕನ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕೆಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಜನವಾದಿ ಸಂಘಟನೆ(ಎಐಡಿಡಬ್ಲ್ಯೂಎ) ಅಧ್ಯಕ್ಷೆ ಗೌರಮ್ಮ ಒತ್ತಾಯಿಸಿದರು.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದ ಕಾನೂನಿನ ವ್ಯವಸ್ಥೆಯಡಿ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂಥ ಘಟನೆಗಳು ಸಂಭವಿಸುತ್ತಿರುವುದು ಆಘಾತಕಾರಿ ಸಂಗತಿ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿಸುವ ಹಾಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಇಂಥ ಕೊಲೆ ಪ್ರಕರಣಗಳು ಖಂಡಿಸಿದೆ. ಆದರೂ ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಿರುವುದು ದುರ್ದೈವದ ಸಂಗತಿ ಎಂದರು.
ಯುವಕ ಅರ್ಬಾಜ್ ಮುಲ್ಲಾ ಕೊಲೆಯು ಶ್ರೀರಾಮಸೇನೆ ಹಿಂದೂಸ್ತಾನ್ ಸೇರಿದಂತೆ ಮೂಲಭೂತವಾದಿ, ಧರ್ಮಾಂಧ ಗುಂಪುಗಳ ಸದಸ್ಯರಿಗೆ ಮನುಷ್ಯರ ಪ್ರಾಣ ಹಾಗೂ ಸಂವಿಧಾನದ ತತ್ವಗಳ ಮೇಲೆ ಇರುವ ಅಗೌರವವನ್ನು ಸೂಚಿಸುತ್ತದೆ. ಸಂವಿಧಾನವನ್ನು ಬದಲಾಯಿಸಲು ಬಂದವರು ತಾವೆಂದು ಅವರು ಹೇಳಿಕೊಳ್ಳುತ್ತಿರಬಹುದು. ಆದರೆ, ಜನಪರ, ಮಾನವ ಹಕ್ಕುಗಳನ್ನು ಗೌರವಿಸುವ ಸಂಘಟನೆಗಳಾದ ನಾವು ಪ್ರೀತಿಸುವುದನ್ನು ಮತ್ತಾವರನ್ನು, ಪ್ರೀತಿಸಿದ್ದಕ್ಕಾಗಿ ಕೊಚ್ಚಿ ಕೊಲ್ಲುವಂಥ ಹೀನ ಕೃತ್ಯ ಖಂಡನೀಯ ಎಂದರು.
ಇಂಥ ಅಪರಾಧ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ಕೊಡಬೇಕು. ಒಂದು ವೇಳೆ ಆಡಳಿತ ಅಪರಾಧಿಗಳನ್ನು ಬಂಧಿಸುವುದು ಒಳಗೊಂಡಂತೆ ಕ್ರಮಕೈಗೊಳ್ಳಲು ವಿಫಲರಾದರೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮರ್ಯಾದೆ ಹತ್ಯೆ, ಅನ್ಯ ಕೋಮಿನ ಪ್ರೀತಿಯ ಕೊಲೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಖಾನಾಪುರ ಅರ್ಬಾಜ್ ಮುಲ್ಲಾ ಕೊಲೆ ಪ್ರಕರಣದ ತನಿಖೆ ವಿಳಂಬಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ರಾಜಕೀಯ, ಕೋಮುಶಕ್ತಿಗಳ ಒತ್ತಡಕ್ಕೆ ಮಣಿಯದೆ, ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮ, ಧರ್ಮಗಳ ನಡುವೆ ವಿಷದ ಬೀಜವನ್ನು ಬಿತ್ತುತ್ತಿರುವ ಇಂಥ ಧರ್ಮಾಂಧ , ಬಲಪಂಥೀಯ ಮನುಷ್ಯ ವಿರೋಧಿ ಗುಂಪುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾರದಾ ಗೋಪಾಲ, ಶಿಲ್ಪಾ ಕೋಲಕಾರ, ರಾಜೇಶ್ವರಿ ಜೋಳಿ, ವಿಮಾ ಚನ್ನಿ, ಶಿವಾಜಿ ಕಾಗಣಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಗೂ ಮುಂಚಿತವಾಗಿ ಅರ್ಬಾಜ್ ಮುಲ್ಲಾ ಅವರ ತಾಯಿಯನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಜನವಾದಿ ಮಹಿಳಾ ಸಂಘಟನೆಯ ನಿಯೋಗ ಭೇಟಿ ಮಾಡಿತು. ನಿಯೋಗದಲ್ಲಿ ಗೌರಮ್ಮ, ಸುನೀತ, ಸಿಐಟಿಯು ಸಂಘಟನೆಯಿಂದ ಮಂದಾ ನೇವಗಿ ಇದ್ದರು.