ಮತೀಯ ಗೂಂಡಾಗಿರಿ ಸಮರ್ಥನೆ : ಸಿಎಂ ಬೊಮ್ಮಾಯಿಗೆ ಲಾಯರ್ಸ್‌ ಅಸೋಸಿಯೇಷನ್‌ ನಿಂದ ನೋಟಿಸ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ಮತೀಯ ಗೂಂಡಾಗಿರಿ ಸಮರ್ಥಿಸಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಲಾಯಾರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ ನಿಂದ ಸಿಎಂಗೆ ನೋಟಿಸ್ ಜಾರಿಯಾಗಿದೆ.

ಮುಖ್ಯಮಂತ್ರಿ ನೀಡಿರೊ ಹೇಳಿಕೆ ಅವರು ಮಾಡಿದ‌ ಪ್ರಮಾಣಕ್ಕೆ ವಿರುದ್ಧವಾದುದು. ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.

ಸರ್ವೋಚ್ವ ನ್ಯಾಯಲಯ ಅಂತರ್ ಜಾತಿ ಹಾಗು ಅಂತರ್ ಧರ್ಮ ವಿವಾಹದ ರಕ್ಷಣೆ ಬಗ್ಗೆ ನೀಡಿದ ತೀರ್ಪುಗಳ‌ ಸ್ಪಷ್ಟ ‌ಉಲ್ಲಂಘನೆಯಾಗಿದೆ. ಮತೀಯ ಗೂಂಡಾಗಿರಿಯನ್ನು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದು, ಆ ಹೇಳಿಕೆಯನ್ನು ವಾಪಸ್ಸ ಪಡೆಯಬೇಕು. ಮತ್ತು ರಾಜ್ಯದ ಜನರನ್ನು ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಿಎಂ ಬೊಮ್ಮಾಯಿಯವರು ಸಂವಿಧಾನದ ಮೌಲ್ಯಗಳನ್ನು ಎತ್ತುಹಿಡಿಯಲು ಕೂಡಲೆ‌ ಕ್ರಮ ತೆಗೆದುಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯ ಶಕ್ತಿವಾಹಿಣಿ ಹಾಗು ತೆಹ್ಸೀನ್ ಪೂನಾವಾಲ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನ ಜಾರಿಗೆ ತರಬೇಕೆಂದು ಎಐಎಲ್‌ಎಜ ನ ಸಹ ಸಂಚಾಲಕಿ ಮೈತ್ರೆಯಿ ಕೃಷ್ಣನ್‌ ಆಗ್ರಹಿಸಿದ್ದಾರೆ.

ಸಿಎಂ ಏನು ಹೇಳಿದ್ದರು ? :  “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕವಾಗಿಯೂ ಸಾಮರಸ್ಯ ಕಾಪಾಡಲು ನಾವೆಲ್ಲರೂ ಕ್ರಮ ಕೈಗೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು” ಎಂದು ಹೇಳುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸಿಕೊಂಡಿದ್ದರು.

ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗುತ್ತಾ? ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದಕ್ಕೆ ಧಕ್ಕೆಯಾದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತದೆ” ಎಂದು ಹೇಳಿದ್ದರು.

ಸಿಎಂ ಅವರ ಈ ಹೇಳಿಕೆಯನ್ನು ವಿಪಕ್ಷಗಳು, ಜನಪರ ಸಂಘಟನೆಗಳು, ಸಾಹಿತಿ, ಬುದ್ಧಿಜೀವಿಗಳು ಖಂಡಿಸಿದ್ದರು. ಕಾನೂನು ಕಾಪಾಡಬೇಕಾದ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘಿಸುವವರ ರಕ್ಷಣೆಗೆ ನಿಲ್ಲುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ವಕೀಲರ ಸಂಘಟನೆ ನೋಟಿಸ್‌ ನೀಡಿದ್ದು ಸಿಎಂ ಏನು ಉತ್ತರಿಸುತ್ತಾರೆ ಕಾದು ನೋಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *