ʻಪಾಪಾ ಪಾಂಡುʼ ಖ್ಯಾತಿಯ ಹಿರಿಯ ಕಲಾವಿದ ಶಂಕರ್ ರಾವ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ ಶಂಕರ್​ ರಾವ್​ ನಿಧನರಾಗಿದ್ದಾರೆ. ಪಾಪಾ ಪಾಂಡು ಸೇರಿದಂತೆ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಶಂಕರ್‌ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು.

ಶಂಕರ್ ರಾವ್ ಇಂದು ಬೆಳಿಗ್ಗೆ 6:30ರ ಸುಮಾರಿಗೆ ನಿಧನ ಹೊಂದಿದ್ದಾರೆ.‌ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಹಲವು ಧಾರಾವಾಹಿ ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಪಾಪಾ ಪಾಂಡು’ ಧಾರಾವಾಹಿಯಲ್ಲಿ ಬಾಸ್ ಪಾತ್ರ ನಿರ್ವಹಿಸಿದ್ದ ಶಂಕರ್ ರಾವ್, ರಮೇಶ್ ಅರವಿಂದ್ ನಿರ್ದೇಶನದ ‘ಬಿಸಿ-ಬಿಸಿ’ ಸಿನಿಮಾದಲ್ಲಿಯೂ ನಟಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಪರ್ವ’, ‘ಸಿಲ್ಲಿ-ಲಲ್ಲಿ’ ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ.

ತುಮಕೂರಿನಲ್ಲಿ ಹುಟ್ಟಿ ಬೆಳೆದ ಶಂಕರ್ ರಾವ್ ಎಳವೆಯಿಂದಲೇ ಸಿನಿಮಾ ಪ್ರೇಮಿ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದ ತೆಲುಗು ಸಿನಿಮಾಗಳನ್ನು ನೋಡಿ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಶಾಲಾ ದಿನಗಳಲ್ಲಿ ನಟನೆಯ ಬಗ್ಗೆ ಅಭಿರುಚಿ ಬೆಳೆಸಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ಸಣ್ಣ ವಯಸ್ಸಿಗೆ ತಂದೆ ಕಳೆದುಕೊಂಡ ಶಂಕರ್ ರಾವ್ ಮನೆಯ ಜವಾಬ್ದಾರಿ ನಿಭಾಯಿಸುವ ಜೊತೆಗೆ ನಟನೆಯ ಹವ್ಯಾಸವನ್ನೂ ಮುಂದುವರೆಸಿದರು. 1956ರಲ್ಲಿ ಬೆಂಗಳೂರಿಗೆ ಬಂದ ಶಂಕರ್ ರಾವ್, ‘ಗೆಳೆಯರ ಬಳಗ’ ತಂಡ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ‘ನಟರಂಗ’ ತಂಡದಲ್ಲಿಯೂ ಸಕ್ರಿಯರಾಗಿದ್ದರು. ವೇದಿಕೆ ಮೇಲೆ ಶಂಕರ್​ ರಾವ್​ ಅವರ ಅಭಿನಯ ನೋಡಿದ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದರು. ಅವರ ಮೊದಲ ಸಿನಿಮಾ ‘ಯಾರ ಸಾಕ್ಷಿ’ ಎಂಬುದು. ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಶಂಕರ್ ರಾವ್ ನಟಿಸಿದರು.

ಶಂಕರ್ ರಾವ್ ಅವರ ಅಂತ್ಯಕ್ರಿಯೆಯು ಬೆಂಗಳೂರು ನಗರದ ಬನಶಂಕರಿ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *