ಜಿ ಕೆ ಗೋವಿಂದ ರಾವ್ ಅವರಿಗೆ ಸಾಹಿತಿಗಳು, ಚಿಂತಕರು, ಜನಪರ ಚಳುವಳಿಯ ಹೋರಾಟಗಾರರು ನಮನಗಳನ್ನು ಸಲ್ಲಿಸಿದ್ದಾರೆ.
ಜಿ.ಎನ್.ನಾಗರಾಜ್ ರವರ ತಮ್ಮ ಫೆಸ್ಬುಕ್ ವಾಲ್ ನಲ್ಲಿ ಗೋವಿಂದರಾವ್ ರವರ ಕೆಲಸ, ಕಾರ್ಯಗಳನ್ನು ಮೆಲುಕು ಹಾಕಿದ್ದಾರೆ.
ಜಿ.ಕೆ.ಗೋವಿಂದರಾವ್‌ರವರು ಎಷ್ಟೊಂದು ಕ್ರಿಯಾಶಿಲ ವ್ಯಕ್ತಿತ್ವ. ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧತೆ. ಅದರ ರಕ್ಷಣೆಗೆ ಯವ್ವನವನ್ನು ಅಹ್ವಾನ ಮಾಡಿಕೊಂಡಂತಹ ಮುನ್ನುಗ್ಗುವಿಕೆ. ಪ್ರಜಾಪ್ರಭುತ್ವಕ್ಕೆ ಅಪಾಯ ತರುವವರ ಮೇಲೆ ಸಾತ್ವಿಕ ಸಿಟ್ಟು.
ಅದರಿಂದಾಗಿ ಹೊರಬರುವ ಸಿಡಿಗುಂಡಿನಂತಹ ಮಾತುಗಳು. ಕೋಮು ದ್ವೇಷದ ಹರಡುವಿಕೆಯನ್ನು ತಡೆಗಟ್ಟಲು ಅವರು ತಮ್ಮ ಇಳಿವಯಸ್ಸಿನಲ್ಲೂ ಎಷ್ಟೊಂದು ಪಟ್ಟಣಗಳು,ಹಳ್ಳಿಗಳನ್ನು ಸುತ್ತಿದ್ದಾರೆ.
ಸಿನಿಮಾ, ಟಿವಿ ನಟನೆಯ ಬಿಡುವಿಲ್ಲದ ಸಮಯದಲ್ಲೂ ಕೂಡಾ ದಣಿವರಿಯದ ಉತ್ಸಾಹ.
ಕೋಮುವಾದ, ಸಾಂಸ್ಕೃತಿಕ ಕ್ಷೇತ್ರದ ಕಾರ್ಯಕ್ರಮ ಮಾತ್ರವಲ್ಲದೆ, ಬೇರೆ ಅನೇಕ ಪ್ರಗತಿಪರರು ಬರಲೊಪ್ಪದ ಕಾರ್ಮಿಕ ನಾಯಕರ ಮೇಲೆ ಧಾಳಿಯ ವಿರುದ್ಧ ಪ್ರತಿಭಟನೆ, ಕೂಲಿಕಾರರ ಕ್ರೀಡಾ ಸ್ಫರ್ಧೆ ಉದ್ಘಾಟನೆ ಇಂತಹ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಬೆಂಬಲಿಸಿದ್ದಾರೆ. ನಾಲ್ಕಾರು ವ್ಯಕ್ತಿಗಳ ಕೆಲಸವನ್ನು ಒಬ್ಬರೇ ನಿರ್ವಹಿಸುತ್ತಿರುವಂತೆ.
ಅವರೊಡನೆ ಎಷ್ಟು ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ಅವರ ಮನೆಯಲ್ಲಿ ಹಲವು ಬಾರಿ ಗಂಟೆಗಟ್ಟಲೆ ಚರ್ಚೆ.
ಅವರ ಆಪ್ತ ವಿಷಯವಾದ ಕನ್ನಡ,ಇಂಗ್ಲಿಷ್ ಸಾಹಿತ್ಯ ಮಾತ್ರವಲ್ಲದೆ ಇತಿಹಾಸ, ಮಾರ್ಕ್ಸ್ವಾದದ ಮೂಲಭೂತ ಗ್ರಂಥಗಳು ಇತ್ಯಾದಿ.
ಅವರಿಗೆ ಮಾರ್ಕ್ಸ್ವಾದಿಗಳಲ್ಲಿ ಹೆಚ್ಚು ಪ್ರಿಯರಾದವರು ಆಂಟೋನಿಯೋ ಗ್ರಾಮ್ಷಿ. ಅವರ ಎಲ್ಲ ಬರಹಗಳ ಸಂಪುಟಗಳನ್ನು ಪಡೆದು ಓದಿದ್ದೇನೆ. ಅವರು ನನ್ನಿಂದ ಇತಿಹಾಸದ ಪುಸ್ತಕಗಳನ್ನು ಪಡೆದುಕೊಂಡರು.
ಒಂದು ರೀತಿ ಖಾಲಿಯಾದ ಮನಸ್ಥಿತಿ. ನನ್ನ ಗೌರವ ಪೂರ್ವಕ ಶ್ರದ್ಧಾಂಜಲಿಗಳು.
ಸಮುದಾಯ ಬೆಂಗಳೂರು : ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿದ್ದ ಪ್ರೊ ಜಿ ಕೆ ಗೋವಿಂದರಾವ್ ನಿಧನ ರಂಗ ಸಮುದಾಯ ಮತ್ತು ಸಾಮಾಜಿಕ ಚಳವಳಿಗೆ ತುಂಬಲಾರದ ನಷ್ಟ. ಸಮುದಾಯ ಬೆಂಗಳೂರು ಪ್ರೋ ಜಿ ಕೆ ಗೋವಿಂದರಾವ್ ಅವರಿಗೆ ಗೌರವಪೂರ್ಣ ನಮನಗಳನ್ನು ಸಲ್ಲಿಸುತ್ತದೆ.
ಕನ್ನಡ ಚಲನಚಿತ್ರ ಕಲಾವಿದ, ಸಾಹಿತಿ, ಹೋರಾಟಗಾರ ಏನೇ ಅಂದರೂ ಪ್ರೋ ಜಿ ಕೆ ಗೋವಿಂದರಾವ್ ಅವರು ಒಬ್ಬ ರಂಗಕರ್ಮಿ. ನಾಟಕಗಳನ್ನು ಅತೀವ ಪ್ರೀತಿಸುತ್ತಿದ್ದ ಜಿ ಕೆ ಗೋವಿಂದರಾವ್ ನಾಟಕಗಳು ಜನರ ನಡುವೆ ಸೇತುವೆಯಾಗಬೇಕು ಎಂದು ಬಯಸಿದ್ದರು.
ಪ್ರಭುತ್ವದ ವಿರುದ್ದದ ಬಂಡಾಯಗಾರರಾಗಿದ್ದ ಜಿ ಕೆ ಗೋವಿಂದರಾವ್, ಜನಚಳವಳಿಯಲ್ಲಿ ಜಿಕೆಜಿ ಎಂದೇ ಆಪ್ತರಾಗಿದ್ದರು. ಖಚಿತತೆಯ ಜೋರು ದ್ವನಿಯಲ್ಲಿ ಮಾತನಾಡುತ್ತಿದ್ದ ಜಿ ಕೆ ಗೋವಿಂದರಾವ್ ಅಪಾರ ಪ್ರೀತಿ ತುಂಬಿದ ಮಾತೃಹೃದಯಿಯಾಗಿದ್ದರು.
ಜಿಕೆ ಗೋವಿಂದರಾವ್ ಅವರು, ಈಶ್ವರಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್ಪೀಯರ್ ನಾಟಕ ಅಧ್ಯಯನ, ಶೇಕ್ಸ್ಪೀಯರ್ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರೀಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್ ಮುಂತಾದ ಹಲವು ಕೃತಿಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಶೇಕ್ಸ್ ಪಿಯರ್ ಬಗ್ಗೆ ನಿರರ್ಗಳವಾಗಿ ಜಿಕೆಜಿಯವರಷ್ಟು ಮಾತನಾಡಬಲ್ಲ ಇನ್ನೊಬ್ಬ ಸಾಹಿತಿ ಸಿಗಲಾರರೇನೊ?
ಹತ್ತುಹಲವು ಸಿನೇಮಾ, ಧಾರವಾಹಿಗಳಲ್ಲಿ ನಟಿಸಿದ್ದ ಜಿ ಕೆ ಗೋವಿಂದರಾವ್ ರವರು ತಮ್ಮ ಪ್ರಭಾವ, ವರ್ಚಸ್ಸನ್ನು ಸಂಪೂರ್ಣವಾಗಿ ಜನ ಚಳವಳಿಗಾಗಿ ಮೀಸಲಿಟ್ಟವರು. ಜಿ ಕೆ ಗೋವಿಂದರಾವ್ ಅವರು ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿದ್ದರು ಎಂಬುದೇ ಕರ್ನಾಟಕ ಸಾಂಸ್ಕೃತಿಕ ಲೋಕ ಹೆಮ್ಮೆಪಡುವಂತಹ ವಿಚಾರ.
ಬಹುಮುಖ ಪ್ರತಿಭೆಯ, ಸ್ನೇಹಮಯಿ ಕಲಾವಿದ, ರಂಗಕರ್ಮಿ, ಚಲನಚಿತ್ರ ನಟ, ಸಾಹಿತಿ, ವೈಚಾರಿಕ ಹೋರಾಟಗಾರ ಜಿಕೆಜಿ ನಿಧನ ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದು ಸಮುದಾಯ ಬೆಂಗಳೂರು ನಮನಗಳನ್ನು ಸಲ್ಲಿಸಿದೆ.
ಹಿರಿಯ ಪತ್ರಕರ್ತ, ಬರಹಗಾರ, ಅನುವಾದಕ ನಾ ದಿವಾಕರ್ ರವರು ಜಿಕೆಜಿಗೆ ನಮನ ಸಲ್ಲಿಸಿದ್ದಾರೆ.
ನೇರ ದಿಟ್ಟ ನಿರಂತರ ಎಂಬ ಪದಗಳನ್ನು ತಮ್ಮ ಸಾರ್ವಜನಿಕ ಬದುಕಿನಲ್ಲಿ ಸಾಕಾರಗೊಳಿಸಿದ ನಿಷ್ಠುರವಾದಿ ಚಿಂತಕ, ವಾಗ್ಮಿ, ಬೋಧಕ, ಕಲಾವಿದ ಮತ್ತು ಲೇಖಕ ಜಿ ಕೆ ಗೋವಿಂದರಾವ್ ಅವರ ನಿರ್ಗಮನದೊಂದಿಗೆ ಕನ್ನಡ ಸಾರಸ್ವತ ಲೋಕ ಮತ್ತು ವಿಚಾರವಾದದ ಜಗತ್ತಿನ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ತಮ್ಮ ಪ್ರಖರ ವಾಗ್ಬಾಣಗಳ ಮೂಲಕ, ಬರಹಗಳ ಮೂಲಕ, ಚಿಂತನೆಗಳ ಮೂಲಕ ವಿಚಾರವಾದವನ್ನು, ಪ್ರಗತಿಪರತೆಯನ್ನು ಮತ್ತು ಸಂವೇದನಾಶೀಲ ಚಿಂತನೆಗಳನ್ನು ಯುವ ಮನಸುಗಳಲ್ಲಿ ನಿರಂತರವಾಗಿ ಬಿತ್ತುತ್ತಲೇ ಇದ್ದ ‘ಜಿಕೆಜಿ‘ ಕರ್ನಾಟಕದ ವೈಚಾರಿಕ ಜಗತ್ತಿನ ಪ್ರಬಲ ದನಿಯಾಗಿದ್ದವರು. ಅವರೊಡನೆ ಕೆಲವು ಸಂದರ್ಭಗಳಲ್ಲಿ ವೇದಿಕೆ ಹಂಚಿಕೊಂಡ ನೆನಪು ನೆನಪಾಗಿಯೇ ಉಳಿಯಲಿದೆ. ‘ಜಿಕೆಜಿ‘ ಬಿತ್ತು ಹೋಗಿರುವ ವೈಚಾರಿಕತೆಯ ಬೀಜಗಳು ಜೀವಂತವಾಗಿರುತ್ತವೆ, ಇರಬೇಕಿದೆ. ಕರ್ನಾಟಕದ ವೈಚಾರಿಕ ಜಗತ್ತಿನ ಒಂದು ಕೊಂಡಿಯನ್ನು ಕಳೆದುಕೊಂಡು ಪ್ರಗತಿಪರ ಸಮಾಜ ಅನಾಥವಾಗಿದೆ. ಆದರೆ ಅವರು ಬಿಟ್ಟುಹೋದ ಹೆಜ್ಜೆ ಗುರುತುಗಳು ಸದಾ ನಮ್ಮೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಲೇ ಇರುತ್ತದೆ.
ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ : ಜಾಗ್ರತಿ ಮೂಡಿಸುವ ಧ್ವನಿಗಳು ಒಂದೊಂದಾಗಿ ಮೌನವಾಗುತ್ತಿವೆ.ನಾಡಿನ ಹೆಸರಾಂತ ಚಿಂತಕ.ಲೇಖಕ,ಕಲಾವಿದ,ಎಲ್ಲಕ್ಕಿಂತ ಮಿಗಿಲಾಗಿ ಮನುಷ್ಯ ದ್ವೇಷದ ಕಿಚ್ಚು ಹಚ್ಚುವ ಕೋಮುವಾದವನ್ನು ಬದುಕಿನ ಕೊನೆಯುಸಿರು ಇರುವವರೆಗೆ ವಿರೋದಿಸುತ್ತ ಬಂದಿದ್ದ,ಖಡಕ್ ಮಾತಿನ ಪ್ರೊ,ಜಿ.ಕೆ.ಗೋವಿಂದರಾವ ಇನ್ನಿಲ್ಲ.ಇವತ್ತು ಬೆಳಗಿನ ಜಾವ ಹುಬ್ಬಳ್ಳಿಯ ಮಗಳ ಮನೆಯಲ್ಲಿ ಗೋವಿಂದರಾವ ಕೊನೆಯುಸಿರೆಳೆದರು. ಬಾಬಾ ಬುಡನಗಿರಿಯಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ನಡೆದ ಪ್ರತಿರೋಧ ಆಂದೋಲನ ಸೇರಿದಂತೆ ಜನ ವಿಭಜಕ ಶಕ್ತಿಗಳ ವಿರುದ್ಧ ಅವರ ಜೊತೆಗೆ ಹಲವಾರು ಚಳವಳಿಗಳಲ್ಲಿ ಭಾಗವಹಿಸಿದ್ದು ಇನ್ನು ನೆನಪು ಮಾತ್ರ.
ಜನಪರ ಚಳುವಳಿಯ ನಾಯಕಿ ವಿಮಲಾ ಕೆ.ಎಸ್ : ತೊಂಭತ್ತರ ದಶಕ. ಇಟ್ಟಿಗೆಗಳು ಕಟ್ಟುವ ಬದಲು ಕೆಡಹಲು ಅಸ್ತ್ರವಾಗುವ ಎಲ್ಲ ತಯಾರಿಗಳು ನಡೆದಿದ್ದವು. ಬೆಂಗಳೂರಿನಲ್ಲಿ ಕೋಮು ಸೌಹಾರ್ದತೆಗಾಗಿ ಚಟುವಟಿಕೆಗಳನ್ನು ನಡೆಸುವ ಯೋಜನೆ ಸಿದ್ಧಪಡಿಸಿದೆವು. ನಗರದ ಸೂಕ್ಷ್ಮ ಎಂದು ಕರೆಸಿಕೊಳ್ಳುವ ಪ್ರದೇಶಗಳಲ್ಲಿ ಪಾದಯಾತ್ರೆ ಮಾಡಿದೆವು. ಹತ್ತಾರು ಸಣ್ಣ ದೊಡ್ಡ ಸಭೆಗಳನ್ನು ಸಂಘಟಿಸಿದೆವು. ಆಗ ಕಬ್ಬನ್ ಪಾರ್ಕ್ ಒಳಗೆ ಅಧಿಕಾರ ಕೇಂದ್ರ ವಿಧಾನಸೌಧದ ಎದುರಿನಲ್ಲಿಯೇ ಶಾಂತ ಪ್ರತಿಭಟನೆಗಳಿಗೆ ಅವಕಾಶ ಕೊಡುತ್ತಿದ್ದ ಸಮಯ. ಈಗಿನಂತೆ ಜಗತ್ತಿಗೆ ಕಾಣದ ಹಾಗೆ ಸ್ವಾತಂತ್ರ್ಯ ಉದ್ಯಾನದ ಹೆಸರಿನ ಜೈಲಿನಲ್ಲಿ ಅಲ್ಲ. ಕರಸೇವೆ ಇಟ್ಟಿಗೆ ಪೂಜೆಗಳ ಮೂಲಕ ದೇಶದ ಕೋಮುಸೌಹಾರ್ದತೆ ಕದಡ ಬೇಡಿರೆಂದು ದಿನವಿಡೀ ಧರಣಿ ನಡೆಸಿದ್ದೆವು. ಆದರೆ ಸೌಹಾರ್ದತೆ ಕದಡುವುದೇ ದೇಶಪ್ರೇಮವೆಂದು ಸಾರಿಕೊಂಡವರು ಕೊನೆಗೂ ಬಾಬರಿ ಮಸೀದಿ ಉರುಳಿಸಿಯೇ ಬಿಟ್ಟಾಗ…ಬೆಂಗಳೂರಿನಲ್ಲಿ ಕರ್ಫ್ಯೂ ಇದ್ದರೂ ಧೃತಿಗೆಡದೆ ಮೌನ ಯಾತ್ರೆ ಮೈಸೂರು ಬ್ಯಾಂಕ್ ವೃತ್ತದಿಂದ ಗಾಂಧೀ ವೃತ್ತದವರೆಗೆ ನಡೆಸಿದ್ದೆವು.
ಟೌನ್ ಹಾಲ್ ಮುಂದೆ ನಡೆದ ಅಸಂಖ್ಯ ಹೋರಾಟ ಗಳಲ್ಲಿ ಭಾಗಿಯಾದಿರಿ. ನಮ್ಮ ಜೊತೆ ಗಟ್ಟಿ ಧ್ವನಿಯಾಗಿ, ಮಾರ್ಗದರ್ಶಕರಾಗಿ ನಿಂತ ಗುರುಗಳೇ….ಹೀಗೆ ಹೊರಟು ಬಿಟ್ಟಿರಾ..
ಪತ್ರಕರ್ತ ವಿಠಲ ಮಲೆಕುಡಿಯ: ಜಾಗೃತ ಧ್ವನಿಯೊಂದು ಇಂದು ಮೌನವಾಗಿದೆ. ನಟ, ವಿಚಾರವಾದಿ ಜಿ.ಕೆ ಗೋವಿಂದ ರಾವ್ ನಿಧನರಾಗಿದ್ದಾರೆ. ದೇಶದ್ರೋಹದ ಆರೋಪದ ಮೇಲೆ ನನ್ನ ಮತ್ತು ನನ್ನ ತಂದೆಯ ಬಂಧನ ಪ್ರಕರಣದಲ್ಲಿ ‘ವಿಠಲ ಮಲೆಕುಡಿಯ ಕುಟುಂಬ ಸಂರಕ್ಷಣಾ ಸಮಿತಿ’ಯ ಅಧ್ಯಕ್ಷರಾಗಿದ್ದು ನಮ್ಮ ಕುಟುಂಬದ ಪರವಾಗಿ ನಿಂತಿದ್ದರು. ಮೇ 2012ರಲ್ಲಿ ಮಂಗಳೂರು ಜೈಲಿಗೂ ಭೇಟಿ ನೀಡಿ ಧೈರ್ಯ ತುಂಬಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳಲ್ಲೂ ಭಾಗವಹಿಸಿ ನನ್ನ ಮತ್ತು ತಂದೆಯ ಬಿಡುಗಡೆಗೆ ಆಗ್ರಹಿಸಿದ್ದರು. 2012ರ ಜುಲೈನಲ್ಲಿ ಬಿಡುಗಡೆಯಾದನಂತರ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಧೈರ್ಯ ತುಂಬಿದ್ದರು.
ಪತ್ರಕರ್ತ ಜಿ.ಎನ್. ಮೋಹನ್
ಅವರು ಕತ್ತಿ ಝಳಪಿಸಿದ್ದರು: ‘ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..’
-‘ಮ್ಯಾಕ್ ಬೆತ್‘ ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸನ್ನ ನಿರ್ದೇಶಿಸಿದ ರಾಮಚಂದ್ರದೇವರ ಅನುವಾದದ ನಾಟಕದಲ್ಲಿ ಜಿ ಕೆ ಗೋವಿಂದ ರಾವ್ ಮ್ಯಾಕ್ ಬೆತ್ ಆಗಿ ಈ ಸಾಲುಗಳನ್ನು ತಮ್ಮ ಕಂಚಿನ ಕಂಠದಿಂದ ಮೊಳಗಿಸುತ್ತಿದ್ದರೆ ನಮ್ಮೊಳಗೇ ಮಿಂಚಿನ ಸಂಚಾರ.
ಅವರು ಇದ್ದದ್ದೇ ಹಾಗೆ. ಮುಚ್ಚು ಮರೆ ಇಲ್ಲದೆಯೇ..
ಹಾಗಾಗಿಯೇ ಅವರದ್ದು ಕಟು ಮಾತು, ನೇರ, ಹರಿತ ನುಡಿ
ಅವರ ಶೈಲಿ ಥೇಟ್ ಹೇಗಿತ್ತೆಂದರೆ ಸಮಾಜದ ನೆಮ್ಮದಿ ಹಾಳು ಮಾಡುವವರನ್ನು, ಮಾನವೀಯತೆ ಮರೆತವರನ್ನು ‘ಮುಂದಿನ ಬರಗಾಲ ಬಂದು ಒಣಗಿ ಸಾಯುವವರೆಗೆ ತೂಗಾಡಿಸಿಬಿಡುತ್ತೇನೆ‘ ಎನ್ನುವಂತೆ.
ನಮ್ಮದೊಂದು ದೊಡ್ಡ ಬಳಗ ಎಸ ಎಫ್ ಐ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿತ್ತು. ಸಂಸ್ಥೆಗೆ ಹಣ ಸಂಗ್ರಹಿಸಲು ನಾವು ಯೋಚಿಸಿದ್ದು ‘ಸಮುದಾಯ‘ ತಂಡದ ಇದೇ ಮ್ಯಾಕ್ ಬೆತ್ ಪ್ರದರ್ಶನವನ್ನು. ಆಗ ಅದು ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ಹಾಗಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಷೋ ಏರ್ಪಡಿಸಿದ್ದೆವು.
ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳೇ ಪ್ರೇಕ್ಷಕರು. ಹೇಳಿ ಕೇಳಿ ಹದಿಹರಯದ ವಯಸು. ಹಾಗಾಗಿ ಇಡೀ ನಾಟಕದುದ್ದಕ್ಕೂ ಎಡಬಿಡದೆ ಗಲಾಟೆ ಮಾಡುತ್ತಲೇ ಇದ್ದರು. ಮ್ಯಾಕ್ ಬೆತ್ ಆಗಿದ್ದ ಜಿ ಕೆ ಗೋವಿಂದರಾವ್ ಸಮಾಧಾನ ಮಾಡಿಕೊಂಡದ್ದು ಎಷ್ಟು ಬಾರಿಯೋ. ಆದರೆ ಇನ್ನು ಆಗಲ್ಲ ಎಂದು ಗೊತ್ತಾದಾಗ ನಾಟಕ ಮಾಡುತ್ತಿದ್ದ ಅವರು ಮ್ಯಾಕ್ ಬೆತ್ಟ್ ಬದಲು ರೋಷಾವೇಷದ ಜಿ ಕೆ ಗೋವಿಂದರಾವ್ ಆಗಿಬಿಟ್ಟರು.
ತಮ್ಮ ಕೈನಲ್ಲಿದ್ದ ಕತ್ತಿಯನ್ನು ಝಳಪಿಸುತ್ತ ತಮ್ಮದೇ ಶೈಲಿಯಲ್ಲಿ ‘ಸುಮ್ಮನೆ ನಾಟಕ ನೋಡಲಿಲ್ಲ ಅಂದ್ರೆ ಅಷ್ಟೇ..’ ಎಂದು ಥೇಟ್ ಮೇಷ್ಟ್ರ ರೀತಿಯಲ್ಲಿ ಗದರಿಕೊಂಡೇಬಿಟ್ಟರು. ವಿದ್ಯಾರ್ಥಿಗಳು ಶೇಕ್ಸ್ಪಿಯರ್ ನ ಮ್ಯಾಕ್ ಬೆತ್ ಹೀಗೆ ನೇರಾನೇರ ನಮ್ಮ ವಿರುದ್ಧವೇ ಕತ್ತಿ ಝಳಪಿಸಿಬಿಡುತ್ತಾನೆ ಎಂದು ಖಂಡಿತಾ ಭಾವಿಸಿರಲಿಲ್ಲ. ಹಾಗಾಗಿ ಆಮೇಲೆ ನಾಟಕದುದ್ದಕ್ಕೂ ಸೈಲೆಂಟ್ ಆಗಿ ಕುಳಿತರು.
ಗೋವಿಂದರಾವ್ ತಮ್ಮ ಬದುಕಿನ ಉದ್ದಕ್ಕೂ ಇದೇ ಧಿಟ್ಟತನವನ್ನು, ಆಕ್ರೋಶವನ್ನೂ, ಸಮಾಜವನ್ನು ಹಿಂದಕ್ಕೆ ಎಳೆಯುತ್ತಿದ್ದವರ ಬಗ್ಗೆ ಆಕ್ರೋಶವನ್ನು ಹೊರ ಹಾಕುತ್ತಲೇ ಬಂದರು. ಅದು ಒಂದು ಚಳವಳಿಯ ಶಕ್ತಿಯಾಗಿತ್ತು.
ಮೈಸೂರಿನಲ್ಲಿದ್ದ ರಾಮದಾಸ್ ಹೇಗೆ ಇಡೀ ರಾಜ್ಯದ ಚಳವಳಿಗೆ ನೇರವಾಗಿ, ಪರೋಕ್ಷವಾಗಿ ಒಂದು ಆಸರೆಯಾಗಿದ್ದರೋ ಹಾಗೆ ಜಿ ಕೆ ಗೋವಿಂದರಾವ್ ಕೂಡಾ. ಅವರಿಗೆ ಚಕ್ರವ್ಯೂಹ ಹೊಕ್ಕುವುದೂ ಗೊತ್ತಿತ್ತು. ಅಲ್ಲಿ ಸೆಣಸಿ ಹೊರಬರುವುದೂ ಗೊತ್ತಿತ್ತು. ಆ ಕಾರಣದಿಂದಾಗಿಯೇ ಜಿ ಕೆ ಜಿ ಇದ್ದಾರೆ ಎಂದರೆ ಚಳವಳಿಯ ಹಲವರಿಗೆ ಆನೆ ಬಲ ಬರುತ್ತಿತ್ತು. ಅವರು ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಎಲ್ಲರಿಗೂ ಒಂದು ಶಕ್ತಿಯಾಗಿತ್ತು.