ಬೆಂಗಳೂರು: ನಗರದ ಹನುಮಂತನಗರ ಪ್ರದೇಶದಲ್ಲಿರುವ ಇಂಜಿನಿಯರಿಂಗ್, ಮೆಡಿಕಲ್, ಎಸ್ಸಿ/ಎಸ್ಟಿ ವಿದ್ಯಾರ್ಥಿ ವಸತಿ ನಿಲಯಗಳ ನೂರಾರು ವಿದ್ಯಾರ್ಥಿಗಳು ಇಂದು ಬೆಳಗ್ಗಿನಿಂದ ಉಪವಾಸ ಕೂತಿದ್ದಾರೆ. ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಮಾರ್ಗದರ್ಶನದಲ್ಲಿ ಈ ಚಳುವಳಿಯನ್ನು ವಿದ್ಯಾರ್ಥಿಗಳು ಮುನ್ನಡೆಸುತ್ತಿದ್ದಾರೆ. ಕಳಪೆ ಗುಣಮಟ್ಟದ ಆಹಾರ, ಪೌಷ್ಟಿಕತೆ ರಹಿತ ಆಹಾರ ಪದಾರ್ಥಗಳು, ನೈರ್ಮಲ್ಯವಿಲ್ಲದ ಶೌಚಾಲಯಗಳು, ಸರಿಯಾದ ಸೌಕರ್ಯ ಇರದ ಗ್ರಂಥಾಲಯ, ಓದಲು ತಾಂತ್ರಿಕ ಪುಸ್ತಕಗಳು ಲಭ್ಯ ಇಲ್ಲದಿರುವುದು. ಈ ಸಮಸ್ಯೆಗಳಿಗೆ ತಕ್ಷಣವೇ ಗಮನ ಹರಿಸಿ, ಬಗೆ ಹರಿಸುವಂತೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಲಕ್ಷ್ಮಣ್ ರೆಡ್ಡಿ ಹಾಗೂ ಹೆಚ್ಚುವರಿ ನಿರ್ದೇಶಕ ನಾಗೇಶ್ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ವಸತಿ ನಿಲಯಕ್ಕೆ ಹೆಚ್ಚುವರಿ ಹಾಸಿಗೆಗಳು ನೀಡುವಂತೆ, ಸೋಲಾರ್ ಗೀಸರ್ ಸಾಮರ್ಥ್ಯ ಹೆಚ್ಚಿಸುವಂತೆ, ಶೌಚಾಲಯಗಳ ಸ್ವಚ್ಛತೆ ಕಾಪಾಡಲು ಹಾಗೂ ನಿಗದಿಪಡಿಸಲಾದ ಕ್ರಮದಂತೆ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಬೇಕೆಂಬ ಬೇಡಿಕೆಗಳ ಬಗ್ಗೆ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಬೇಡಿಕೆಗಳ ಈಡೇರಿಸುವ ಬಗ್ಗೆ ಸೋಮವಾರದ ಒಳಗಾಗಿ ಪೂರ್ಣಗೊಳಿಸುವುದಾಗಿ ಎಂದು ಹೇಳಿದರು. ಇದರೊಂದಿಗೆ, ಇತರೆ ಮೂಲ ಸೌಕರ್ಯ, ಗ್ರಂಥಾಲಯ ಇವುಗಳ ವ್ಯವಸ್ಥೆಗೆ ತಗಲುವ ವೆಚ್ಚದ ಬಗ್ಗೆ ಈ ಕೂಡಲೇ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪರವಾದ ಈ ನಿರ್ಧಾರವನ್ನು ಸ್ವಾಗತ ಮಾಡುತ್ತಲೇ, ಈ ಬೇಡಿಕೆಗಳ ಅನುಷ್ಠಾನ ಅವರು ನೀಡಿದ ಗಡುವಿನ ಒಳಗಾಗಿ ಆಗದಿದ್ದರೆ, ಹೋರಾಟವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮುಂದುವರೆಸುತ್ತೇವೆ ಎಂದು ಎಐಡಿಎಸ್ಓ ಸಂಘಟನೆಯ ವಿದ್ಯಾರ್ಥಿಗಳು ಹೇಳಿದರು.