ಕೇಂದ್ರ ಮಂತ್ರಿ ಅಜಯ್‍ ಮಿಶ್ರಾರನ್ನು ಕೂಡಲೇ ವಜಾ ಮಾಡಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್‍ ಮಿಶ್ರ ಇನ್ನೂ ಕೇಂದ್ರ ಮಂತ್ರಿಯಾಗೇ ಇದ್ದಾರೆ. ಗೃಹ ಇಲಾಖೆಯಲ್ಲಿ ರಾಜ್ಯಮಂತ್ರಿಯಾಗಿರುವ ಆತ ಆ ಹುದ್ದೆಯಲ್ಲಿ ಮುಂದುವರೆಯುವ ವರೆಗೆ ಈ ಘಟನೆಯಲ್ಲಿ ನ್ಯಾಯ ಸಿಗದು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಪುನರುಚ್ಛರಿಸಿದ್ದಾರೆ. ಅಕ್ಟೋಬರ್ 11ರಂದು ಸಿಪಿಐ(ಎಂ)ನ ಪೊಲಿಟ್‍ ಬ್ಯುರೊ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಅಜಯ್‍ ಮಿಶ್ರರವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್‍ ಪರಿಸ್ಥಿತಿಯಿಂದಾಗಿ ಸುಮಾರು ಎರಡು ವರ್ಷಗಳ ನಂತರ ಮೊದಲ ಬಾರಿಗೆ ನೇರವಾಗಿ ಸಭೆ ಸೇರಿದ ಪೊಲಿಟ್‍ ಬ್ಯುರೊ ಲಸಿಕೀಕರಣ ಮತ್ತಿತರ ವಿಷಯಗಳನ್ನೂ ಚರ್ಚಿಸಿತು.

ಲಸಿಕೀಕರಣ ಈಗಿನ ಗತಿಯಲ್ಲೇ ಮುಂದುವರೆದರೆ  ಸರಕಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಮತ್ತು ದೇಶಕ್ಕೆ ಕೊಟ್ಟ ಆಶ್ವಾಸನೆಯನ್ನು ಈಡೇರಿಸುವುದು ಅಸಾಧ್ಯ, ಪ್ರಧಾನ ಮಂತ್ರಿಗಳ ಜನ್ನದಿನಾಚರಣೆಯೆಂದು ಸಾಧ್ಯವಾಗುವ ತೀವ್ರ ಲಸಿಕೀಕರಣವನ್ನು ಬೇರೆ ದಿನಗಳಲ್ಲಿಯೂ ಮಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಯೆಚುರಿ ತಕ್ಷಣವೇ ಲಸಿಕೀಕರಣವನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಹಬ್ಬಗಳ ದಿನಗಳು ಆರಂಭವಾಗಿದ್ದು, ಲಸಿಕೀಕರಣದ ಈ ನಿಧಾನಗತಿ ಮಹಾಸೋಂಕಿನ ದುಷ್ಪರಿಣಾಮವನ್ನು ಇನ್ನಷ್ಟು ದೀರ್ಘಗೊಳಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಸತತ ಬೆಲೆಯೇರಿಕೆಗಳು ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಟಮಯಗೊಳಿಸುತ್ತಿವೆ, ಇನ್ನೊಂದೆಡೆಯಲ್ಲಿ ಅಬಕಾರಿ ಸುಂಕಗಳ ಮೂಲಕ ರೂ.3.61 ಲಕ್ಷ ಕೋಟಿಗಳಷ್ಟು ಬೃಹತ್‍ ಮೊತ್ತದ ಹೆಚ್ಚುವರಿ ಆದಾಯವನ್ನು ಸರಕಾರ ಗಳಿಸಿಕೊಂಡಿದೆ. ಆದ್ದರಿಂದ ಕೂಡಲೇ ಇವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು  ಆಗ್ರಹಿಸಿದರು.

ದೇಶದ ಪ್ರತಿಷ್ಠಿತ ಸಂಸ್ಥೆ ಏರ್ ಇಂಡಿಯಾವನ್ನು ಟಾಟಾಗಳಿಗೆ ಮಾರಿರುವುದಲ್ಲ, ವಾಸ್ತವವಾಗಿ ಅದನ್ನು ಪುಕ್ಕಟೆ ಉಡುಗೊರೆಯಾಗಿ ಕೊಡಲಾಗಿದೆ. ಅಪಾರ ಸಾಲ ಮಾಡಿ ನಿರ್ಮಿಸಲಾದ ಅದರ ಅಗಾಧ ಸೊತ್ತುಗಳು ಕೇವಲ 2700 ಕೋಟಿ ರೂ.ಗೆ ಟಾಟಾಗಳ ಒಡೆತನಕ್ಕೆ ಹೋಗುತ್ತಿವೆ, ಈ ಸೊತ್ತುಗಳನ್ನು ನಿರ್ಮಿಸಲು ಮಾಡಿದ ಸಾಲದ ಬಹುಭಾಗ, ರೂ.46,262 ಕೋಟಿ ಹೊರೆಯನ್ನು ಸರಕಾರವೇ ಇಟ್ಟುಕೊಂಡಿದೆ, ಅಂದರೆ ಜನಗಳ ಹಣದಿಂದಲೇ ತೀರಿಸಬೇಕಾಗಿದೆ ಎಂಬ ಸಂಗತಿಯತ್ತ ಯೆಚುರಿ ಗಮನ ಸೆಳೆದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಅಮಾಯಕ ಜನಗಳ ಹತ್ಯೆಗಳಿಂದಾಗಿ ಆತಂಕಕಾರೀ ಪರಿಸ್ಥಿತಿ ಉಂಟಾಗಿದೆ, 2019ರಲ್ಲಿ ಸರಕಾರ ಕೈಗೊಂಡ ತೀವ್ರ ಕ್ರಮಗಳಿಂದಾಗಿ ಭಾರತದೊಂದಿಗೆ ಆ ಪ್ರದೇಶದ ಸಮಗ್ರೀಕರಣ ಪೂರ್ಣಗೊಳ್ಳುತ್ತದೆ, ಎಂಬ ಸರಕಾರದ ಹೆಗ್ಗಳಿಕೆ ಹುಸಿಯಾಗಿದೆ, ತದ್ವಿರುದ್ಧವಾಗಿ ಭಯದ ವಾತಾವರಣ ಮತ್ತು ಜನಗಳಲ್ಲಿ ಪರಕೀಯ ಭಾವ ಇನ್ನಷ್ಟು ಹೆಚ್ಚಿದೆ ಎಂದು ಯೆಚುರಿ ಹೇಳಿದರು.

ಈ ಪೊಲಿಟ್‍ ಬ್ಯುರೊ ಸಭೆಯ ಮುಖ್ಯ ಅಜೆಂಡಾ ಪಕ್ಷದ 23ನೇ ಮಹಾಧಿವೇಶನದ ರಾಜಕೀಯ ನಿರ್ಣಯದ ಬಗ್ಗೆ ಚರ್ಚಿಸುವುದು ಎಂದು ಯೆಚುರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅಕ್ಟೋಬರ್‍ 20 ರಿಂದ 22ರ ವರೆಗೆ ನಡೆಯುವ ಪಕ್ಷದ ಕೇಂದ್ರ ಸಮಿತಿಯ ಸಭೆಯಲ್ಲಿ ಇದನ್ನು ಅಂತಿಮಗೊಳಿಸಲಾಗುವುದು ಎಂದ ಯೆಚುರಿಯವರು ಆಂತರಿಕ ಪ್ರಜಾಪ್ರಭುತ್ವವನ್ನು ಚಾಚೂ ತಪ್ಪದೆ ಪಾಲಿಸುವ ಪಕ್ಷದ ಆಚರಣೆಯತ್ತ ಗಮನ ಸೆಳೆದರು. ಪಕ್ಷದ ಸಂವಿಧಾನದ ಪ್ರಕಾರ ಪಕ್ಷದ ಅತ್ಯುನ್ನತ ಅಂಗವಾದ ಮಹಾಧಿವೇಶನ ನಡೆಯುವ ಎರಡು ತಿಂಗಳ ಮೊದಲು ರಾಜಕೀಯ ನಿರ್ಣಯವನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಬೇಕು. ಫೆಬ್ರುವರಿ 2022ರೊಳಗೆ ಇದನ್ನು ದೇಶದ ಎಲ್ಲ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು, ಈ ನಡುವೆ ಮಹಾಧಿವೇಶನಕ್ಕೆ ಸಿದ್ಧತೆಯಾಗಿ ರಾಜ್ಯ ಸಮ್ಮೇಳನಗಳು ಆರಂಭವಾಗಿವೆ  ಎಂದು ಯೆಚುರಿ ಹೇಳಿದರು.

ಪೊಲಿಟ್‍ ಬ್ಯುರೊ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯ ಪೂರ್ಣಪಾಟ ಹೀಗಿದೆ:

ಲಖಿಂಪು ಖೇರಿ ಕ್ರೌರ್ಯ

ರೈತರ ಹತ್ಯಾಕಾಂಡದಲ್ಲಿ ಪ್ರಧಾನ ಆರೋಪಿಯಾದ ಆಶೀಶ್ ಮಿಶ್ರಾ ಟೇನಿ, ಕೇಂದ್ರ ಗೃಹ ರಾಜ್ಯಮಂತ್ರಿ ಅಜಯ್‍ ಮಿಶ್ರಾ ಟೇನಿಯವರ ಮಗನನ್ನು, ಒಂದು  ಸುಪ್ರಿಂ ಕೋರ್ಟ್ ದೋಷಾರೋಪಣೆಯ ನಂತರ, ಕೊನೆಗೂ ಐದು ದಿನಗಳ ನಂತರ ಬಂಧಿಸಲಾಗಿದೆ.

ಕೇಂದ್ರ ಮಂತ್ರಿ ಅಜಯ್‍ ಮಿಶ್ರ ಟೇನಿಯವರನ್ನು, ನಾಲ್ಕು  ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಜನಗಳ ಪ್ರಾಣ ಹೋಗುವಂತೆ ಮಾಡಿದ ಈ  ಬರ್ಬರ ಅತ್ಯಾಚಾರದಲ್ಲಿ ಆತನ ಪಾತ್ರಕ್ಕಾಗಿ ಕೂಡಲೇ ಕೇಂದ್ರ ಸಂಪುಟದಿಂದ ವಜಾ ಮಾಡಬೇಕು. ಆತ ಮಂತ್ರಿಯಾಗಿ ಮುಂದುವರೆಯುವಾಗ ನ್ಯಾಯ ಸಿಗದು.

ಈ ಘಟನೆ ಕುರಿತಂತೆ ಬಹಳಷ್ಟು ದೃಶ್ಯಗಳು ಸೆರೆಯಾಗಿದ್ದು, ಇವು ಈ ಅತ್ಯಾಚಾರವನ್ನು ಹೇಗೆ ಉದ್ದೇಶಪೂರ್ವಕವಾಗಿ ಎಸಗಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಪ್ರಧಾನ ಆರೋಪಿಯನ್ನು ಇವುಗಳಲ್ಲಿ ಗುರುತಿಸಬಹುದಾಗಿದೆ.

ಮಂತ್ರಿ ಅಜಯ್‍ ಮಿಶ್ರಾರನ್ನು ತಕ್ಷಣವೇ ವಜಾ ಮಾಡಬೇಕು ಮತ್ತು ಆಶೀಶ್ ಮಿಶ್ರಾ ವಿರುದ್ಧ ಅಮಾನುಷ ಕಗ್ಗೊಲೆಯ ಮೇಲೆ  ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸುತ್ತದೆ.

ಲಸಿಕೆ ನೀಡಿಕೆಯ ವೇಗವನ್ನು ತುರ್ತಾಗಿ ಹೆಚ್ಚಿಸಬೇಕು

ಎಷ್ಟೊಂದು ಪ್ರಚಾರ-ಸಮಾಚಾರಗಳನ್ನು ಹಬ್ಬಿಸಿದ್ದರೂ, ಇದುವರೆಗೆ ನಮ್ಮ ಜನಗಳಲ್ಲಿ ಕೇವಲ 18.9ಶೇ. ಮಂದಿಗೆ ಪೂರ್ಣ ಲಸಿಕೆ ದೊರೆತಿದೆ. ಮೊದಲ ಡೋಸ್‍ ಪಡೆದವರ ಪ್ರಮಾಣ 48.7ಶೇ. ವರ್ಷಾಂತ್ಯದೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವುದಾಗಿ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ದೇಶಕ್ಕೆ ಆಶ್ವಾಸನೆ ಕೊಟ್ಟಿದ್ದರೂ ಸದ್ಯದ ಸನ್ನಿವೇಶ ಹೀಗಿದೆ. ಲಸಿಕೆ ನೀಡಿಕೆಯ ದರ ಹೀಗೆಯೇ ಮುಂದುವರೆದರೆ ಈ ಗುರಿ ಮುಟ್ಟುವುದು ಸುಮಾರಾಗಿ ಸಾಧ್ಯವೇ ಇಲ್ಲ.

ತಕ್ಷಣವೇ ಲಸಿಕೀಕರಣವನ್ನು ತೀವ್ರಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸುತ್ತದೆ, ಹಬ್ಬಗಳ ದಿನಗಳು ಆರಂಭವಾಗಿದ್ದು, ಲಸಿಕೀಕರಣದ ಈ ನಿಧಾನಗತಿ ಮಹಾಸೋಂಕಿನ ದುಷ್ಪರಿಣಾಮವನ್ನು ಇನ್ನಷ್ಟು ದೀರ್ಘಗೊಳಿಸಬಹುದು ಎಂದು ಹೇಳಿದೆ.

ಅಸಹನೀಯ ಬೆಲೆಯೇರಿಕೆ

ಸತತವಾಗಿ ಆರು ದಿನಗಳ ವರೆಗೆ, ಪೆಟ್ರೋಲ್‍ ಮತ್ತು ಡೀಸೆಲಿನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಕಳೆದ ಹತ್ತು ದಿನಗಳಲ್ಲಿ, ಈ ಬೆಲೆಗಳಲ್ಲಿ ಲೀಟರಿಗೆ 20ರೂ.ಗಿಂತಲೂ ಹೆಚ್ಚಿನ ಏರಿಕೆಯಾಗಿದೆ. ದೇಶದಲ್ಲಿ ಸರಾಸರಿಯಾಗಿ ಪೆಟ್ರೋಲ್‍ ಬೆಲೆ ಲೀಟರಿಗೆ 110ರೂ. ಮತ್ತು ಡೀಸೆಲಿನ ಬೆಲೆ 100ರೂ. ಆಗಿದೆ. ಇದು ನಮ್ಮ ಬಹುಪಾಲು ಜನಗಳ ಜೀವನೋಪಾಯಗಳನ್ನು ಕುಂಠಿತಗೊಳಿಸುತ್ತಿದೆ.

ಈ ಏರಿಕೆಗಳು ಒಟ್ಟಾರೆಯಾಗಿ ಹಣದುಬ್ಬರದ ಸುರುಳಿಯನ್ನು ಆರಂಭಿಸಿವೆ. ಸಾರಿಗೆ ವೆಚ್ಚದಲ್ಲಿ ಏರಿಕೆ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ಏರಿಸಿ ಜನಗಳ ಬೆನ್ನು ಮುರಿಯುತ್ತಿದೆ. ಅಡುಗೆ ತೈಲ, ತರಕಾರಿಗಳು ಮತ್ತು ಹಣ್ಣುಗಳು, ಹಾಲು ಇತ್ಯಾದಿ ವಿಪರೀತ ವೆಚ್ಚದಾಯಕವಾಗಿವೆ. 2021ರ ಮೊದಲ ಒಂಭತ್ತು ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯಲ್ಲಿ 205ರೂ. ಏರಿಕೆಯಾಗಿದೆ, ಬಹಳಷ್ಟು ಸ್ಥಳಗಳಲ್ಲಿ ಒಂದು ಸಿಲಿಂಡರಿನ ಬೆಲೆ ರೂ.1000 ದಾಟಿದೆ. ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಸತತ ಏರಿಕೆಯಾಗುತ್ತಿದೆ.

ಆಗಲೇ ಸಂಕಟಪಡುತ್ತಿರುವ ಮತ್ತು ಮಹಾಸೋಂಕಿನಿಂದಾಗಿ ಸಾಲದಲ್ಲಿ ಮುಳುಗಿರುವ, ಹೆಚ್ಚುತ್ತಿರುವ ನಿರುದ್ಯೋಗ, ಆದಾಯಗಳಲ್ಲಿ ಇಳಿಕೆ ಮತ್ತು ಬಡತನವನ್ನು ಎದುರಿಸುತ್ತಿರುವ  ಜನಗಳಿಗೆ, ಈ ಬೆಲೆಯೇರಿಕೆಗಳು ಮತ್ತಷ್ಟು ಹೊಡೆತಗಳನ್ನು ಹಾಕುತ್ತಿವೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸುತ್ತದೆ. 2020ರಲ್ಲಿ ಇದರ  ಮೂಲಕ ಕೇಂದ್ರ ಸರಕಾರ ರೂ.3.61ಲಕ್ಷ ಕೋಟಿಗಳಷ್ಟು ಬೃಹತ್‍ ಮೊತ್ತದ ಹೆಚ್ಚುವರಿ ಆದಾಯವನ್ನು ಗಳಿಸಿಕೊಂಡಿದೆ.

ಏರ್‍ ಇಂಡಿಯ ಮಾರಾಟವಲ್ಲ, ಉಡುಗೊರೆ

ಕೇಂದ್ರ ಸರಕಾರ ಭಾರತದ ರಾಷ್ಟ್ರೀಯ ಆಸ್ತಿಗಳ ಅವಿರತ ಲೂಟಿಯನ್ನು ಮುಂದುವರೆಸುತ್ತಿದೆ. ರಾಷ್ಟ್ರೀಯ ಬಾವುಟಧಾರೀ ಪ್ರತೀಕವಾಗಿರುವ  ಏರ್‍ ಇಂಡಿಯಾವನ್ನು ಟಾಟಾಗಳಿಗೆ ಮಾರಲಾಗಿದೆ. ಈ ಮಾರಾಟದ ಮೂಲಕ ಟಾಟಾಗಳಿಗೆ ಮೋದಿ ಸರಕಾರ ಪುಕ್ಕಟೆ ಉಡುಗೊರೆಯನ್ನು ಕೊಟ್ಟಿದೆಯೆಂದೇ  ಹೇಳಬೇಕಾಗುತ್ತದೆ. ಟಾಟಾಗಳು ಈ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಕೇವಲ ರೂ.2700 ಕೋಟಿ ತೆತ್ತು ಅದರ ಸಕಲ ಸೊತ್ತುಗಳನ್ನು ಮತ್ತು ರೂ. 15300 ಕೋಟಿ ಸಾಲವನ್ನು ಪಡೆದಿದ್ದಾರೆ. ಆದರೆ ಈ ಸಾಲವನ್ನು ಖಂಡಿತವಾಗಿಯೂ ‘ಪನರ್ರಚಿಸ’ಲಾಗುತ್ತದೆ. ಉಳಿದ ರೂ.46,262 ಕೋಟಿ ಸಾಲದ ಹೊರೆ ಸರಕಾರದ ಮೇಲೆಯೇ ಇರುತ್ತದೆ, ಅಂದರೆ ಜನಗಳು ಈ ಸಾಲವನ್ನು ತೀರಿಸುವ ಹೊರೆಯನ್ನು ಹೊರಬೇಕಾಗುತ್ತದೆ. ಆದರೆ ಈ ಸಾಲಗಳಿಂದ ಏರ್ ಇಂಡಿಯ ಪಡೆದುಕೊಂಡಿರುವ ಎಲ್ಲಾ ಸೊತ್ತುಗಳು, ಹೊಚ್ಚಹೊಸ ವಿಮಾನಗಳ ಪಡೆಯೂ ಕೂಡ ಈಗ ಟಾಟಾಗಳ ಸೊತ್ತಾಗುತ್ತವೆ.

ಆದ್ದರಿಂದ ಇದು ರಾಷ್ಟ್ರೀಯ ಸೊತ್ತುಗಳ ಲೂಟಿಯಷ್ಟೇ ಅಲ್ಲ. ಇದು ಪ್ರಧಾನ ಸಾರ್ವಜನಿಕ ವಲಯ ಮತ್ತು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಟಾಟಾಗಳಿಗೆ ಕವಡೆ ಕಾಸಿಗೆ ಮಾರಿ ಅದರ ಹೊರೆಯನ್ನು ಜನಗಳು ಹೊರುವಂತೆ ಮಾಡಿರುವ ಕೃತ್ಯ.

ಸಿಪಿಐ(ಎಂ)  ಪೊಲಿಟ್‍ ಬ್ಯುರೊ ಭಾರತೀಯ ಸೊತ್ತುಗಳ ಇಂತಹ ಲೂಟಿಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಅದರ ವಿರುದ್ಧ ಪ್ರತಿಭಟನೆಗಳನ್ನು ಬಲಪಡಿಸಬೇಕು ಎಂದು ಕರೆ ನೀಡುತ್ತದೆ.

ಜಮ್ಮು ಮತ್ತು ಕಾಶ್ಮೀರ

ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ಮುಗ್ಧ ಜನಗಳ ಹತ್ಯೆಗಳನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸುತ್ತದೆ. “ಈ ಹತ್ಯೆಗಳು ಕಾಶ್ಮೀರದಲ್ಲಿ 1990ರ ದಶಕದ ಆರಂಭದ ವರ್ಷಗಳ ನಂತರ ಕಾಣಬರದ ಭಯದ ವಾತಾವರಣವನ್ನು ಸೃಷ್ಟಿಸಿದೆ” ಎಂದು ‘ಗುಪ್ಕರ್‍ ಘೋಷಣೆಯ ಜನತಾ ಮೈತ್ರಿಕೂಟ’(ಪಿ.ಎ.ಜಿ.ಡಿ.) ಹೇಳಿದೆ.

ಭಾರತೀಯ ಸಂವಿಧಾನದ ಕಲಮು 370 ಮತ್ತು 35ಎ ರದ್ದತಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಸರ್ಜನೆ, ಮತ್ತು ಅದನ್ನು ನೇರವಾಗಿ ಕೇಂದ್ರ ಸರಕಾರದ ಆಳ್ವಿಕೆಯಲ್ಲಿರುವ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ್ದು ಇವನ್ನೆಲ್ಲ ಭಾರತದೊಡನೆ ಜಮ್ಮು ಮತ್ತು ಕಾಶ್ಮೀರದ “ನಿಜವಾದ” ಸಮಗ್ರೀಕರಣ ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವ ಮತ್ತು ಪರಕೀಯ ಭಾವದ ಅಂತ್ಯ ಎಂದು ಸಾರಲಾಯಿತು. ಅದರ ಬದಲು, ದಿಲ್ಲಿಯಲ್ಲಿರುವ ಕೇಂದ್ರ ಸರಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಈ ಹೆಚ್ಚೆಚ್ಚು ಹಿಂಸಾಚಾರದಿಂದ ಈ ಪ್ರದೇಶದ ಜನಗಳಲ್ಲಿ ಪರಕೀಯ ಭಾವವನ್ನು ಇನ್ನಷ್ಟು ಹೆಚ್ಚಿಸುವ ಸ್ಥಿತಿಗೆ ತಂದು ನಿಲ್ಲಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ದುಷ್ಟತನದಿಂದ ಗುರಿ ಮಾಡುತ್ತಿರುವುದರ ಉದ್ದೇಶ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದೇ ಆಗಿದೆ.

ಈ ವರ್ಷ ಜೂನ್‍ ನಲ್ಲಿ ಪ್ರಧಾನ ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ಮುಖಂಡರನ್ನು ಭೇಟಿ ಮಾಡಿ “ದಿಲ್‍ಕೀ ದೂರೀ , ದಿಲ್ಲಿ ಕೀ ದೂರೀ’(ಹೃದಯದ ದೂರ ಮತ್ತು ದಿಲ್ಲಿಯ ದೂರವನ್ನು) ಅಳಿಸಿ ಹಾಕುವ ಆಶ್ವಾಸನೆ ಆಡಂಬರದ ಟೊಳ್ಳು  ಮಾತು ಎಂಬುದು ಸ್ಪಷ್ಟವಾಗಿದೆ. ಮನಬಂದಂತೆ ದಸ್ತಗಿರಿ ಮತ್ತು ವಿಪರೀತ ಬಲಪ್ರಯೋಗ ಸಾಮಾನ್ಯ ಸಂಗತಿಗಳಾಗಲು ಸಾಧ್ಯವಿಲ್ಲ. ಶಾಂತಿ ಮತ್ತು ನೆಮ್ಮದಿಯನ್ನು ಖಾತ್ರಿಪಡಿಸಬೇಕಾದರೆ ಜಮ್ಮು ಮತ್ತು ಕಾಶ್ಮೀರದ ಜನತೆಯ ವಿಶ್ವಾಸವನ್ನು ಗಳಿಸಬೇಕಾಗುತ್ತದೆ.

ಸಿಪಿಐ(ಎಂ)ನ 23ನೇ ಮಹಾಧಿವೇಶನ

ಕಣ್ಣೂರಿನಲ್ಲಿ ಎಪ್ರಿಲ್‍ 2022ರಲ್ಲಿ ಸಿಪಿಐ(ಎಂ)ನ 23ನೇ ಮಹಾಧಿವೇಶನಕ್ಕೆ ಸಿದ್ಧತೆಯಾಗಿ ರಾಜ್ಯ ಸಮ್ಮೇಳನಗಳು ಆರಂಭವಾಗಿವೆ. ದಿಲ್ಲಿ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಉತ್ತರಪ್ರದೇಶದ ರಾಜ್ಯ ಘಟಕಗಳು ತಮ್ಮ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿವೆ ಮತ್ತು ಅಖಿಲ ಭಾರತ ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಆರಿಸಿವೆ. ಇತರೆಲ್ಲ ರಾಜ್ಯ ಸಮ್ಮೇಳನಗಳ ದಿನಾಂಕಗಳನ್ನು ನಿರ್ಧರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *