ಗುರುರಾಜ ದೇಸಾಯಿ
ಸಂಶೋಧನೆಗೆ ಮೀಸಲಾಗಿರುವ ಕರ್ನಾಟಕದ ಏಕೈಕ ವಿಶ್ವವಿದ್ಯಾಲಯ ಎಂದು ಕರೆಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಹಲವು ಕಾರಣಗಳಿಗಾಗಿ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಹಾಗಾಗಿಯೇ ಈ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಾಂಗವನ್ನು ಪಡೆಯುವುದಕ್ಕೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಒಂದು ಉನ್ನತ ಸಂಸ್ಕೃತಿಯನ್ನು ಮತ್ತು ಸಂಶೋಧನಾ ಮಾರ್ಗದರ್ಶನವನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ವೈಶಿಷ್ಟ್ಯತೆಗಳಿಂದ ಕೂಡಿರುವ ವಿಶ್ವವಿದ್ಯಾಲಯದಲ್ಲಿ ದಿನಾಂಕ 03.09. 2021 ರಂದು 371(ಜೆ) ಕಲಂ ಅಡಿಯಲ್ಲಿ ಬೋಧಕ ಹುದ್ಧೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಅಧಿಸೂಚನೆಯು ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿದ್ದು, ಅಸಾಂವಿಧಾನಿಕವಾಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ನೇಮಕಾತಿಯಲ್ಲಿ 2018 ರ ಯುಜಿಸಿ ನಿಯಮದ ಅಡಿ ಹುದ್ಧೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಲಾಗಿದೆ. ಆದರೆ 2018 ರ ಯುಜಿಸಿ ನಿಯಮಗಳ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶವಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸದೇ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಬೇಕಾಗುತ್ತದೆ. ಈ ಮೆರಿಟ್ಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾನದಂಡಗಳನ್ನೂ ಯುಜಿಸಿ ಗುರುತಿಸಿದೆ. ಅದರ ಪ್ರಕಾರವಾಗಿಯೇ ನೇಮಕಾತಿ ಪ್ರಕ್ರಿಯೆ ಮಾಡಬೇಕಾಗುತ್ತದೆ. ಆದರೆ ಸದರಿ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಇದು ಯುಜಿಸಿ ನಿಯಮಗಳ ಉಲ್ಲಂಘನೆಯಾಗುತ್ತದೆ. ಹೀಗೆ ಮಾಡುವುದರ ಹಿಂದೆ ಆಡಳಿತ ವರ್ಗದವರ ಸ್ವಹಿತಾಸಕ್ತಿ ಅಡಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ನೇಮಕಾತಿಗೆ ಸಂಬಂಧಿಸಿದ ಬೋಧಕ ವರ್ಗದ ವೃಂದ ಮತ್ತು ನೇಮಕಾತಿ ಪರಿನಿಯಮವನ್ನು ಇದುವರೆಗೂ ಪ್ರಕಟಿಸಿಲ್ಲ. ಯಾವುದೇ ನೇಮಕಾತಿಯಲ್ಲಿ ಹುದ್ಧೆಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳನ್ನು ಸೂಚಿಸುವುದು, ಯಾವ ವಿಧಾನದಲ್ಲಿ ಹುದ್ಧೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು, ಹುದ್ಧೆಗಳ ಭರ್ತಿಗೆ ಕನಿಷ್ಠ ವಿದ್ಯಾರ್ಹತೆ ಯಾವುದು ಹೀಗೆ ಹಲವು ಮಾನದಂಡಗಳನ್ನು ಗುರುತಿಸುವ ಪರಿನಿಯಮವನ್ನು ಇದುವರೆಗೂ ಪ್ರಕಟಿಸಿಲ್ಲ ಎಂದು ಜನಪರ ಸಂಘಟನೆಗಳು ಆಕ್ಷೇಪವನ್ನು ಎತ್ತಿವೆ.
ಈ ಅಧಿಸೂಚನೆಯನ್ನು ರದ್ದು ಮಾಡಬೇಕು ಎಂದು ಬೇಡಿಕೆಯನ್ನಿಟ್ಟಿರುವ ಸಂಘಟನೆಗಳು ಯಾವವು ಎಂದರೆ. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಸಮುದಾಯ ಕರ್ನಾಟಕ, ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) , ದಲಿತ ಸಂಘರ್ಷ ಸಮಿತಿ ಭೀಮವಾದ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಎಐಡಿವೈಒ) ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) , ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಗಳು ಆಕ್ಷೇಪಣೆಯನ್ನು ಸಲ್ಲಿಸಿ ಅಧಿಸೂಚನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿವೆ.
ಹಾಗಾದರೆ ಆ ಅಧಿಸೂಚನೆ ಮೀಸಲಾತಿಗೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ತಿಳಿಯೋಣ ಈ ಅಧಿಸೂಚನೆಯನ್ನು ಗಮನಸಿದರೆ ಒಟ್ಟು 17 ಹುದ್ಧೆಗಳಲ್ಲಿ ಹೆಚ್ಚಿನ ಹುದ್ಧೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದು ಕಂಡುಬರುತ್ತದೆ. ಸಂವಿಧಾನ ಬದ್ಧವಾಗಿ ಎಸ್.ಸಿ, ಎಸ್.ಟಿ, ಓ.ಬಿ.ಸಿ, ಮತ್ತು ಅಲ್ಪ ಸಂಖ್ಯಾತ ವರ್ಗದವರಿಗೆ ಸಿಗಬೇಕಾಗಿದ್ದ ಮೀಸಲಾತಿಯನ್ನು ಗಾಳಿಗೆ ತೂರಲಾಗಿದೆ. ಕರೆದಿರುವ ಒಟ್ಟು 17 ಹುದ್ಧೆಗಳಲ್ಲಿ ಕೇವಲ ಒಂದು ಹುದ್ಧೆಯನ್ನು ಮಾತ್ರ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ್ದಾರೆ. ಕರ್ನಾಟಕ ಸರಕಾರ ಮೀಸಲಾತಿ ಸಂಬಂಧಿತ 1995 ರ ಆದೇಶದ ಪ್ರಕಾರ ಅಧಿಸೂಚನೆ ಮಾಡಿದ್ದರೆ, ಸಾಮಾನ್ಯ – 09, ಎಸ್ಸಿ – 02, ಎಸ್ಟಿ – 01 – ಪ್ರವರ್ಗ1 – 01, 2ಎ – 02, 3ಎ – 01, 3ಬಿ – 01 ಈ ಮಾದರಿಯಲ್ಲಿ ಹುದ್ದೆಗಳನ್ನು ಮೀಸಲಿಡಬೇಕಿತ್ತು.
ಸಂವಿಧಾನ ಬದ್ಧವಾಗಿ ರೋಸ್ಟರ್ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರಿಗೆ ಸಿಗಬೇಕಾದ ಜಾತಿ ಮೀಸಲಾತಿಯನ್ನು ಕಡೆಗಣಿಸಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದಾಗಿ ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ಸಮುದಾಯಗಳ ಉದ್ಯೋಗದ ಹಕ್ಕುಗಳನ್ನು ವಿಶ್ವವಿದ್ಯಾಲಯವು ಕಿತ್ತುಕೊಳ್ಳುತ್ತಿರುವುದು ಶೋಚನೀಯ ಸಂಗತಿ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಆರೋಪಿಸಿದ್ದಾರೆ.
ಅದೇ ರೀತಿಯಲ್ಲಿ ಈ ಅಧಿಸೂಚನೆಯಲ್ಲಿ ಮಹಿಳಾ ಮೀಸಲಾತಿ ನಿಯಮ ಪಾಲನೆಯಾಗಿಲ್ಲ. ಕರ್ನಾಟಕ ಸರಕಾರ ಮೀಸಲಾತಿ ಸಂಬಂಧಿತ 1995 ರ ಆದೇಶದ ಪ್ರಕಾರ ಅಧಿಸೂಚನೆ ಮಾಡಿದ್ದರೆ ಈ 17 ಹುದ್ದೆಗಳಲ್ಲಿ 5 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕಿತ್ತು. ಆದರೆ ಇಲ್ಲಿ ಕೇವಲ 1 ಹುದ್ದೆಯನ್ನು ಮಾತ್ರ ಮೀಸಲಿಟ್ಟಿದ್ದಾರೆ. ಮಹಿಳಾ ಅಧ್ಯಯನ ವಿಭಾಗಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲ ಎಂಬುದನ್ನು ತೋರಿಸುತ್ತದೆ. ಇದು ಮಹಿಳಾ ಅಧ್ಯಯನ ವಿಷಯದಲ್ಲಿ ಯಾವ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ಗೊಂದಲ ಕೂಡ ಈಗ ಆರಂಭವಾಗಿದೆ. ರೋಸ್ಟರ್ ನಿಯಮಗಳಿಗೆ ಸ್ಪಷ್ಟತೆ ಇಲ್ಲದಿರುವುದೆ ಇದಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ ಮಹಿಳಾ ಅಭ್ಯರ್ಥಿಗಳನ್ನು ತಡರಾತ್ರಿಯವರೆಗೆ ಠಾಣೆಯಲ್ಲಿ ಇರುವಂತಹ ಶಿಕ್ಷೆ ನೀಡಿ ಅವರನ್ನು ಹೆದರಿಸುವ ಕೆಲಸ ಮಾಡಲಾಗಿದೆ. ಮಹಿಳಾ ಅಧ್ಯಯನ ವಿಭಾಗಕ್ಕೆ ಮಹಿಳೆಯರನ್ನೆ ನೇಮಕ ಮಾಡಿಕೊಳ್ಳಬೇಕು ಎಂಬ ಕೂಗು ಕೇಳಿ ಬಂದಿದೆ.
“ಯಾವುದೇ ಸರ್ಕಾರಿ ಹುದ್ಧೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿಯನ್ನು ನೀಡಬೇಕು ಎಂಬುದು ಸರ್ಕಾರದ ನಿಯಮ”. ಆದರೆ ವಿಶ್ವವಿದ್ಯಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಮೀಸಲಾತಿಯನ್ನು ನೀಡಿಲ್ಲ. ಇದು ಇಡೀ ಮಹಿಳಾ ಸಮುದಾಯಕ್ಕೇ ಅನ್ಯಾಯವೆಸಗಿದಂತಾಗಿದೆ ದಲಿತ ಸಂಘರ್ಷ ಸಮಿತಿ ಭೀಮವಾದದ ರಾಜ್ಯ ಸಂಚಾಲಕರಾದ ಆರ್.ಮೋಹನರಾಜ್ ರವರು ಆರೋಪಿಸಿದ್ದಾರೆ.
ಈ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣೆಗಳನ್ನು ವಿಶ್ವವಿದ್ಯಾಲಯ ಮತ್ತು ರಾಜ್ಯ ಸರಕಾರ ಗಣನೆಗೆ ತೆಗೆದುಕೊಂಡು ಇದರಲ್ಲಿ ಉಂಟಾಗಿರುವ ತೊಡಕುಗಳನ್ನು ನಿವಾರಿಸಲು ಮುಂದಾಗಬೇಕಿದೆ. ವಿಶೇಷವಾಗಿ 371 (ಜೆ) ಕಲಂ ಗೆ ಧಕ್ಕೆಯಾಗದಂತೆ ಹಾಗೂ ಸಂವಿಧಾನ ಬದ್ದ ಮೀಸಲಾತಿಯನ್ನು ಜಾರಿ ಮಾಡುವ ಮೂಲಕ ಸರಕಾರ ಹಾಗೂ ವಿಶ್ವವಿದ್ಯಾಲಯ ಶೋಷಿತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕಿದೆ.