ಸೆಪ್ಟೆಂಬರ್ ಕೊನೆಯಲ್ಲಿ ಯು.ಕೆ. ಯ ಉದ್ದಗಲಕ್ಕೂ ಪೆಟ್ರೋಲ್ ಬಂಕ್ಗಳ ಮುಂದೆ ಹಲವು ಮೈಲುಗಳುದ್ದಕ್ಕೂ ಕಾರುಗಳು ಮತ್ತಿತರ ವಾಹನಗಳು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬಂದವು. ಕೋವಿಡ್ ಮಹಾಸೋಂಕಿನ ನಿರ್ಬಂಧಗಳ ನಂತರ ಸಹಜ ಸ್ಥಿತಿಗೆ ಮರಳುತ್ತಿದ್ದ ದೇಶದಲ್ಲಿ ಆತಂಕ ಆವರಿಸಿತ್ತು. ಯಾವುದೇ ಅಗತ್ಯ ವಸ್ತು ಕೊರತೆಯಾದಾಗ ಆಗುವಂತೆ ಬೆಲೆ ಏರಿಕೆ, ಕಾಳಸಂತೆ, ಗಾಬರಿಯ ಅತಿ ಖರೀದಿ ಎಲ್ಲ ಕಂಡುಬಂದವು. ತೈಲದ ಕೊರತೆಯಿಲ್ಲ. ಗಾಬರಿಯ ಅತಿ ಖರೀದಿ ಮತ್ತು ಕಾಳಸಂತೆಯಿಂದ ಕೃತಕ ಕೊರತೆಯುಂಟಾಗಿದೆ ಎಂಬ ಯು.ಕೆ ಸರಕಾರದ ಹೇಳಿಕೆಯನ್ನು ನಂಬುವವರಿಲ್ಲ. ಮಾತ್ರವಲ್ಲ ಸರಕಾರದ ವಿರುದ್ಧ ತೀವ್ರ ಆಕ್ರೋಶವ್ಯಕ್ತವಾಗಿದೆ. ಯು.ಕೆ ಯ ಸ್ವತಂತ್ರ 5500 ಪೆಟ್ರೋಲ್ ಬಂಕ್ ಗಳಲ್ಲಿ ಮೂರನೆಯ ಎರಡರಷ್ಟು ಬಂಕ್ ಗಳಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಖಾಲಿಯಾಗುವ ಮೊದಲು ಸಾಮಾನ್ಯ ಪರಿಸ್ಥಿತಿಯ 2-3 ಪಟ್ಟು ಮಾರಾಟ ನಡೆಯಿತು. ತೈಲದ ಕೊರತೆ ಎಷ್ಟು ಗಂಭೀರವಾಗಿತ್ತೆಂದರೆ ಬ್ರಿಟಿಷ್ ಮೆಡಿಕಲ್ ಅಸೋಸಿಯೇಶನ್ ಅಗತ್ಯ ಸೇವಾ ಸಿಬ್ಬಂಧಿಗೆ ಆದ್ಯತೆಯಲ್ಲಿ ತೈಲ ಲಭ್ಯಮಾಡಬೇಕೆಂದು ಒತ್ತಾಯಿಸಿತು. ಇಲ್ಲದಿದ್ದರೆ ವೈದ್ಯಕೀಯ ಸೇರಿದಂತೆ ಹಲವು ಅಗತ್ಯ ಸೇವೆಗಳು ಕುಸಿದು ಬೀಳಬಹುದು ಎಂದು ಎಚ್ಚರಿಕೆ ನೀಡಿದೆ.
ಸರಕಾರ ಮಾತ್ರವಲ್ಲ ಯು.ಕೆ.ಯ ಮೂರು ದೊಡ್ಡ ತೈಲ ಕಂಪನಿಗಳು ಸಹ ದೇಶದಲ್ಲಿ ತೈಲ ಕೊರತೆಯಿಲ್ಲವೆಂದು ಹೇಳಿವೆ. ಹಾಗಾದರೆ ಪೆಟ್ರೋಲ್ ಬಂಕ್ ಗಳಲ್ಲಿ ಯಾಕೆ ಕೊರತೆಯುಂಟಾಗಿದೆ? ಕೇಳಿದರೆ ಆಶ್ಚರ್ಯವಾಗಬಹುದು. ಇದು ತೈಲ ಸಾಗಾಣಿಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯಗಳಿಂದ. ಭಾರಿ ಸರಕು ಸಾಗಾಣಿಕಾ ಟ್ರಕ್ ಗಳನ್ನು ಚಲಾಯಿಸಲು ಚಾಲಕರ ತೀವ್ರ ಕೊರತೆಯುಂಟಾಗಿದೆ. ಸುಮಾರು 1 ಲಕ್ಷ ಚಾಲಕರ ಕೊರತೆಯಿದೆ ಎಂದು ಹೇಳಲಾಗಿದೆ. ಹಾಗಾಗಿ ತೈಲ ಕೊರತೆ ಇತರ ಅಗತ್ಯ ವಸ್ತುಗಳಿಗೂ ಹರಡಬಹುದು ಎಂಬ ಆತಂಕ ಹರಡಿದೆ. ತೈಲ ಮುಂತಾದ ಅಪಾಯಕಾರಿ ರಾಸಾಯನಿಕ ಸಾಗಾಣಿಕೆ ಟ್ರಕ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನಷ್ಟು ಹೆಚ್ಚಿನ ಷರತ್ತುಗಳು ನಿರ್ಬಂಧಗಳು ಇದ್ದು ಅಂತಹ ಡ್ರೈವರ್ ಗಳ ಕೊರತೆ ಇನ್ನಷ್ಟು ತೀವ್ರವಾಗಿದೆ.
ಡ್ರೈವರ್ ಕೊರತೆಗೆ ಬ್ರೆಕ್ಸಿಟ್ ಮತ್ತು ಕೋವಿಡ್ ಪ್ರಮುಖವಾಗಿ ಕಾರಣವಿದ್ದರೂ ಇತರ ಹಲವು ಕಾರಣಗಳಿವೆ ಎನ್ನಲಾಗಿದೆ. ಬ್ರೆಕ್ಸಿಟ್ ಘೋಷಣೆಯಾಗುತ್ತಿದ್ದಂತೆ ಯುರೋಕೂಟದ ದೇಶಗಳ ಡ್ರೈವರ್ ಗಳು ತಮ್ಮ ದೇಶಗಳಿಗೆ ವಾಪಸಾದರು. 2020ರಲ್ಲೇ 25-30 ಸಾವಿರ ಯುರೋಕೂಟದ ದೇಶಗಳ ಡ್ರೈವರ್ ಗಳು ವಾಪಸಾದರು. ಮುಂದಿನ ಸರದಿ ಕೋವಿಡ್ನದಾಗಿತ್ತು. ಕೋವಿಡ್ ಲಾಕ್ ಡೌನ್ ಜಾರಿಯಾಗಿ ಓಡಾಟಕ್ಕೆ ತೊಂದರೆಯಾದಾಗ ಇನ್ನಷ್ಟು ಡ್ರೈವರ್ ಗಳು ಯು.ಕೆ. ಬಿಟ್ಟು ಹೋದರು. ಹಲವರು ತಮ್ಮ ದೇಶಗಳಿಗೆ ಹೋದವರು ವಾಪಸಾಗಲು ಸಾಧ್ಯವಾಗಲಿಲ್ಲ. ಬ್ರೆಕ್ಸಿಟ್ ನಂತರ ಯುರೋ ಕೂಟದ ದೇಶಗಳವರಿಗೆ ಬಂದ ಹೊಸ ವೀಸಾ ಷರತ್ತುಗಳು ಇನ್ನಷ್ಟು ಡ್ರೈವರ್ ಗಳನ್ನು ಯು.ಕೆ. ಯಿಂದ ಹೊರಗಿಟ್ಟವು. ಇಷ್ಟು ಸಾಲದೆಂಬಂತೆ ಭಾರಿ ಸರಕು ಸಾಗಾಣಿಕಾ ಟ್ರಕ್ ಗಳ ಡ್ರೈವಿಂಗ್ ಲೈಸೆನ್ಸ್ ಪಡೆಯಲು 40 ಸಾವಿರ ಜನ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಯು.ಕೆ. ಯಲ್ಲಿ ಭಾರೀ ಸಾಗಾಣಿಕೆ ಡ್ರೈವರ್ ಗಳಿಗೆ ಬರುವ ಸಂಬಳ, ಸವಲತ್ತು ಇತರ ಯುರೋದೇಶಗಳಿಗೆ ಹೋಲಿಸಿದರೆ ಕಡಿಮೆ. ಹೆದ್ದಾರಿಗಳಲ್ಲಿ ಸವಲತ್ತುಗಳು ಸಹ ಕಳಪೆಯಾಗಿವೆ. ಉತ್ತಮ ಸೇವಾ ಪರಿಸ್ಥಿತಿ ಇಲ್ಲದಿರುವುದರಿಂದ ಈ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಯುಕೆಯ ಭಾರೀ ಸಾಗಾಣಿಕೆ ಡ್ರೈವರ್ ಗಳ ಸರಾಸರಿ ವಯಸ್ಸು 57 ಎಂಬುದೇ ಇದನ್ನು ಸಾಬೀತುಪಡಿಸುತ್ತದೆ. ಯು.ಕೆ. ಸರಕಾರ ಮಿಲಿಟರಿ ಡ್ರೈವರುಗಳನ್ನು ನಿಯೋಜಿಸುವ, ವಿದೇಶಿ ಡ್ರೈವರುಗಳಿಗೆ ವೀಸಾ, ಡ್ರೈವಿಂಗ್ ಲೈಸೆನ್ಸ್ ಅರ್ಜಿಗಳನ್ನು ತ್ವರಿತಗೊಳಿಸುವ, ಸಂಬಳ ಸವಲತ್ತುಗಳನ್ನು ಹೆದ್ದಾರಿ ಸವಲತ್ತುಗಳನ್ನು ನೀಡುವ ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಆದರೆ ಇವು ಈ ಬಿಕ್ಕಟ್ಟನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದು ಎಂದು ಕಾದು ನೋಡಬೇಕಾಗಿದೆ.