ಕೋಲಾರ: ಹಿರಿಯ ನಾಗರಿಕರ ಪಿಂಚಣಿಯನ್ನು ಹೆಚ್ಚಿಸುವ ಮೂಲಕ ಯೋಗ್ಯವಾದ ಬದುಕು ರೂಪಿಸಿಕೊಳ್ಳು ಹಾಗೂ ಆರೋಗ್ಯ ರಕ್ಷಣೆ, ಬಿಸಿಯೂಟ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಕರ್ನಾಟಕ ವಯೊವೃದ್ಧರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಡೆದ ಪ್ರತಿಭಟನೆ ಉದ್ದೇಶಿಸಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ.ಮುನಿವೆಂಕಟಪ್ಪ ಮಾತನಾಡಿ ʻಹಿರಿಯ ನಾಗರಿಕರು ದುಡಿಯುವ ಶಕ್ತಿ ಕಳೆದುಕೊಂಡ ಕಾಲದಲ್ಲಿ ಸಮಾಜದ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ ಇದು ಬೇಸರದ ಸಂಗತಿ. ಸರಕಾರಗಳು ಹಿರಿಯ ನಾಗರಿಕರಿಗೆ ಮನೆಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಬೇಕಾಗಿದೆ ಎಂದರು.
ಇದನ್ನು ಓದಿ: ಬುದ್ದಿಮಾಂದ್ಯ ಮಕ್ಕಳನ್ನು ಕೀಳಾಗಿ ನೋಡುವುದು ಬಿಟ್ಟುಬಿಡಿ
ಅಸಂಘಟಿತ ವಲಯದಲ್ಲಿ ಶ್ರಮಿಸಿದ ಹಿರಿಯ ನಾಗರಿಕರ ಸ್ಥಿತಿಗತಿಯನ್ನು ಅವಲೋಕನ ಮಾಡುವುದರೊಂದಿಗೆ ಯೋಗ್ಯವಾದ ಮಾಸಿಕ ಪಿಂಚಣಿಯನ್ನು ಇಂದಿನ ಬೆಲೆ ಏರಿಕೆಯ ಅನುಗುಣವಾಗಿ, ವಯೋಮಿತಿಗೆ ಅನುಗುಣವಾಗಿ ನೀಡಬೇಕು ಮಾಸಾಶನ ಭಿಕ್ಷೆಯಾಗಿ ನೀಡದೆ ಇದು ಹಿರಿಯ ನಾಗರಿಕರ ಹಕ್ಕಾಗಬೇಕು. ಹಿರಿಯ ನಾಗರಿಕರ ಹಾಲಿ ಪರಿಸ್ಥಿತಿಗಳು ಯೋಗ್ಯ ಪಿಂಚಣಿ ಇಲ್ಲದೆ ಇರುವುದರಿಂದ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣ ಸರ್ವೆ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುದವತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ನಾಗೇಂದ್ರಪ್ರಸಾದ್ ಮಾತನಾಡಿ ʻರಾಷ್ಟ್ರೀಯ ಕನಿಷ್ಠ ಕೂಲಿಯ ಅರ್ಧದಷ್ಟು ಮಾಸಿಕ 6000 ರೂ.ನಂತೆ ವಯೋವೃದ್ಧರಿಗೆ ಪಿಂಚಣಿ ನೀಡಬೇಕು. ನಿವೃತ್ತ ಹಿರಿಯ ಕಾರ್ಮಿಕರಿಗೆ ಸರಕಾರಿ ಪ್ರಯಾಣದಲ್ಲಿ ಕನಿಷ್ಠ 50% ರಿಯಾಯಿತಿ ನೀಡಬೇಕು, ಹಿರಿಯ ನಾಗರಿಕರಿಗೆ ಅಂಗವಾಡಿ ಮಾದರಿಯಲ್ಲಿ ಬಿಸಿಯೂಟದ ವ್ಯವಸ್ಥೆ ಹಾಗೂ ಆರೋಗ್ಯದ ರಕ್ಷಣೆಗಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಕ್ಕರೆ ಕಾಯಿಲೆ, ರಕ್ತದೊತ್ತಡ ಕ್ಯಾಲ್ಸಿಯಂ ಮಾತ್ರೆ ನೀಡಬೇಕು. ವಯೋಚವೃದ್ಧರ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆಯನ್ನು ಮನೆ ಬಾಗಿಲಿಗೆ ನೀಡವಂತಾಗಬೇಕುʼ ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್ ನಾಗರಾಜ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮುನಿಸ್ವಾಮಿ, ಸೇರಿದಂತೆ ಹಿರಿಯ ನಾಗರಿಕರು ವಹಿಸಿದ್ದರು.
ವರದಿ: ಅಮರೇಶ್ ಸಿ.