ಅಕ್ಟೋಬರ್ 7- ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ: ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಕರೆ

ಕಾರ್ಮಿಕ ವರ್ಗದಿಂದ ರಾಷ್ಟ್ರೀಯ ಆಸ್ತಿಗಳನ್ನು, ಶ್ರಮಜೀವಿ ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸುವ ‘ಮಿಷನ್ ಭಾರತ’

10 ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಹಲವು ವಲಯವಾರು ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಸರಕಾರ ಭಾರತವನ್ನು ಮಾರಾಟಕ್ಕೆ ಇಟ್ಟಿದೆ, ಭಾರತವನ್ನು ಉಳಿಸುವುದು ಕಾರ್ಮಿಕ ವರ್ಗದ ಮುಂದಿರುವ ಕಾರ್ಯಭಾರ ಎಂದು ಸೆಪ್ಟೆಂಬರ್‍ 23ರಂದು ನೀಡಿರುವ ಹೇಳಿಕೆಯಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಟಿಸಿರುವ ‘ರಾಷ್ಟ್ರೀಯ ನಗದೀಕರಣ ಕ್ರಮ ಸರಣಿ(ನ್ಯಾಷನಲ್ ಮೊನೆಟೈಸೇಷನ್ ಪೈಪ್‌ಲೈನ್-ಎನ್‌ಎಂಪಿ) ಸೇರಿದಂತೆ ಕೇಂದ್ರ ಸರಕಾರದ ರಾಷ್ಟ್ರ-ವಿರೋಧಿ, ಜನ-ವಿರೋಧಿ ವಿಧ್ವಂಸಕಾರೀ ಪರಿಯೋಜನೆಗಳ ವಿರುದ್ಧ ನಿರ್ಣಾಯಕ ಪ್ರತಿರೋಧ ಹೋರಾಟವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಅದು ನಿರ್ಧರಿಸಿದೆ. ಈ ಕುರಿತ ಮಾರ್ಗನಿಕಾಶೆಗಳನ್ನು ರೂಪಿಸಿದ್ದು ಅದರ ಬಾಗವಾಗಿ ಅಕ್ಟೋಬರ್ 7ರಂದು ‘ರಾಷ್ಟ್ರೀಯ ಪ್ರತಿಭಟನಾ ದಿನ’ವನ್ನು ಆಚರಿಸಲು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ. ಬೃಹತ್ ಮತಪ್ರದರ್ಶನ/ ಚಳುವಳಿ/ ಅಣಿನೆರಿಕೆಗಳ ಮೂಲಕ ದೇಶವ್ಯಾಪಿಯಾಗಿ ಅದನ್ನು ನಡೆಸಲಾಗುವುದು ಎಂದು ಅದು ಹೇಳಿದೆ.

ಅಲ್ಲದೆ, ದಸರಾದ ನಂತರ, ದೀಪಾವಳಿಯ ಮೊದಲ ಒಂದು ದಿನಾಂಕದಂದು ಸರಕಾರದ ಜನ-ವಿರೋಧಿ, ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ನವದೆಹಲಿಯಲ್ಲಿ ಕಾರ್ಮಿಕರ ರಾಷ್ಟ್ರೀಯ ಸಮಾವೇಶ ನಡೆಸಲಾಗುವುದು. ಅದರಲ್ಲಿ ಸೂಕ್ತ ಸಮಯದಲ್ಲಿ ಬಹುದಿನಗಳ ಮುಷ್ಕರ ಕಾರ್ಯಾಚರಣೆಗೆ ಸಿದ್ಧತೆಯಾಗಿ ಮುಂದಿನ ಕಾರ್ಯಾಚರಣೆಗಳು/ಚಳುವಳಿಯನ್ನು ನಿರ್ಧರಿಸಲಾಗುವುದು ಎಂದಿದೆ.

ಈ ನಡುವೆ ಎನ್‌ಎಂಪಿ ನೇರವಾಗಿ ಮತ್ತು ತಕ್ಷಣವೇ ತಟ್ಟುವ ವಲಯಗಳಲ್ಲಿ ಮುಷ್ಕರಗಳೂ ಸೇರಿದಂತೆ ವಲಯವಾರು ಕಾರ್ಯಾಚರಣೆಗಳಿಗೆ ಬೆಂಬಲವನ್ನು ಜಂಟಿ ವೇದಿಕೆ ವ್ಯಕ್ತಪಡಿಸಿದೆ.

“ನಾವು, ಕಾರ್ಮಿಕ ವರ್ಗ, ಇದನ್ನು ‘ಮಿಷನ್ ಭಾರತ’ ಎಂದು ಕೈಗೆತ್ತಿಕೊಳ್ಳೋಣ. ಅಧಿಕಾರದಲ್ಲಿರುವ ಪ್ರಸಕ್ತ ಸರಕಾರದ ಈ ಪಕ್ಕಾ ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ಒಂದು ದೃಢ ಪ್ರತಿರೋಧ ಹೋರಾಟವನ್ನು ಬೆಳೆಸುವ ಮೂಲಕ ನಮ್ಮ ರಾಷ್ಟ್ರೀಯ ಆಸ್ತಿಗಳನ್ನು, ಇಡೀ ದೇಶವನ್ನು ಮತ್ತು ಶ್ರಮಜೀವಿ ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸುವ ಗುರಿಯನ್ನು ಇಟ್ಟುಕೊಳ್ಳೋಣ” ಎಂದು ಅದು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ.

ಈ ಕುರಿತು ಜಂಟಿ ವೇದಿಕೆಯ ಒಂದು ಹೇಳಿಕೆಗೆ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಹೆಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಮತ್ತು ವಿವಿಧ ಕ್ಷೆತ್ರಗಳಲ್ಲಿನ ಕಾರ್ಮಿಕರ ಮತ್ತು ನೌಕರರ ಒಕ್ಕೂಟಗಳು ಸಹಿ ಹಾಕಿವೆ.

ಈ ಮೊದಲು ಈ ಜಂಟಿ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾದ ‘ಭಾರತ ಬಂದ್’ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು.

ಜಂಟಿ ವೇದಿಕೆಯ ಸೆಪ್ಟೆಂಬರ್‍ 23ರ ಹೇಳಿಕೆಯ ಪೂರ್ಣ ಪಾಟವನ್ನು ಇಲ್ಲಿ ಕೊಡಲಾಗಿದೆ:

ಕೇಂದ್ರ ಹಣಕಾಸು ಮಂತ್ರಿಗಳು 23 ಆಗಸ್ಟ್ 2021ರಂದು ‘ರಾಷ್ಟ್ರೀಯ ನಗದೀಕರಣ ಕ್ರಮ ಸರಣಿ(ನ್ಯಾಷನಲ್ ಮೊನೆಟೈಸೇಷನ್ ಪೈಪ್‌ಲೈನ್-ಎನ್‌ಎಂಪಿ) ಎಂಬುದನ್ನು ಪ್ರಕಟಿಸಿದರು. ಈ ಕ್ರಮಗಳ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ 6ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯ ಅಡಿಯಲ್ಲಿ ರೂ.1.6ಲಕ್ಷ ಕೋಟಿ ಮೌಲ್ಯದ 26,700 ಕಿ.ಮೀ. ಹೆದ್ದಾರಿಗಳು, 400 ರೈಲ್ವೆ ನಿಲ್ದಾಣಗಳು ಮತ್ತು 150 ರೈಲುಗಳು(ರೂ.1.50 ಲಕ್ಷ ಕೋಟಿ), 42,300 ಸರ್ಕಿಟ್‌ ಕಿ.ಮೀ.ಗಳ ವಿದ್ಯುತ್ ಪ್ರಸರಣ ಲೈನುಗಳು(ರೂ.0.67ಲಕ್ಷ ಕೋಟಿ), 5000 ಮೆಗಾವಾಟ್ ಜಲ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಆಸ್ತಿಗಳು(ರೂ.0.32 ಲಕ್ಷ ಕೋಟಿ), 8000ಕಿ.ಮೀ. ರಾಷ್ಟ್ರೀಯ ಅನಿಲ ಪೈಪ್‌ಲೈನುಗಳು(ರೂ.0.24ಲಕ್ಷ ಕೋಟಿ), ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪಟ್ರೋಲಿಯಂ ಕಾರ್ಪೊರೇಷನ್‌ಗಳ 4000ಕಿ.ಮೀ. ಪೈಪ್‌ಲೈನ್(0.22ಲಕ್ಷ ಕೋಟಿ), ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನ ಟವರ್‌ಗಳು(ರೂ.0.39ಲಕ್ಷ ಕೋಟಿ), 21 ವಿಮಾನ ನಿಲ್ದಾಣಗಳು ಮತ್ತು 31 ಬಂದರುಗಳು(ರೂ.0.34 ಲಕ್ಷ ಕೋಟಿ), 160 ಕಲ್ಲಿದ್ದಲು ಗಣಿಗಾರಿಕೆ ಪ್ರಾಜೆಕ್ಟ್‌ಗಳು(ರೂ.0.32 ಲಕ್ಷ ಕೋಟಿ), ಮತ್ತು 2 ಕ್ರೀಡಾಂಗಣಗಳು(ರೂ.0.11ಲಕ್ಷ ಕೋಟಿ) ಮುಂತಾದ ನಮ್ಮ ವಿವಿಧ ಸರಕಾರೀ ಆಸ್ತಿಗಳನ್ನು ಭೋಗ್ಯಕ್ಕೆ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಬರುವ ಹಣವನ್ನು ಮೂಲರಚನೆಗಳನ್ನು ವಿಸ್ತರಿಸಲು ಹೂಡಲಾಗುವುದು ಎಂದು ಸರಕಾರ ಹೇಳಿಕೊಂಡಿದೆ. ಇದು ಎಲ್ಲ ಮೂಲರಚನೆ ಆಸ್ತಿಗಳನ್ನು ಸುಮಾರಾಗಿ ಪುಕ್ಕಟೆಯಾಗಿಯೇ ಖಾಸಗಿ ಕೈಗಳಿಗೆ ಹಸ್ತಾಂತರಿಸಿ, ಅವರು ಯಾವುದೇ ಬಂಡವಾಳ ವೆಚ್ಚದ ಬಾಧ್ಯತೆಯಿಲ್ಲದೆ ಅಪಾರ ಆದಾಯಗಳನ್ನು ಪೇರಿಸಿಕೊಳ್ಳಲು, ಅದರಲ್ಲಿ ಸ್ವಲ್ಪವೇ ಭಾಗವನ್ನು ಸರಕಾರದೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡುವ ಒಂದು ದುಷ್ಟ ತಂತ್ರವಲ್ಲದೆ ಬೇರೇನೂ ಅಲ್ಲ.

ಆದ್ದರಿಂದಲೇ ಇದನ್ನು ತೆರಿಗೆದಾರರ ಹಣದಿಂದ ಕಟ್ಟಿದ ರಾಷ್ಟ್ರೀಯ ಆಸ್ತಿಗಳ ಪುಕ್ಕಟೆ ಖಾಸಗೀಕರಣ(ಅಥವ ಧರ್ಮಾರ್ಥ ಕೊಡುಗೆ) ಎಂದು ಟೀಕಿಸಲಾಗುತ್ತಿದೆ. ಈ ಆಸ್ತಿಗಳು ಸರಕಾರದ ಒಡೆತನದಲ್ಲೇ ಇರುತ್ತವೆ, ಆದ್ದರಿಂದ ಇದು ಏಕ್‌ದಂ ಖಾಸಗೀಕರಣ ಅಲ್ಲ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಮರ್ಥನೆ ಯಾರಿಗೂ ಒಪ್ಪಿಗೆಯಾಗುತ್ತಿಲ್ಲ.

ಈ ಚರ್ಚೆ ನಡೆಯುತ್ತಿರುವಾಗಲೇ, ಸರಕಾರದಿಂದ ಎಲ್ಲ ಗ್ರಾಮ ಪಂಚಾಯತುಗಳಿಗೆ ತಮ್ಮ ಆಸ್ತಿಗಳನ್ನು, ಅಂದರೆ ಭೂಮಿಗಳು, ಜಲಾಗಾರಗಳು, ಕಟ್ಟಡಗಳು ಇತ್ಯಾದಿಗಳನ್ನು ನಗದೀಕರಿಸಿ ತಮ್ಮ ಹಣಕಾಸಿಗೆ ಸೇರಿಸಿಕೊಳ್ಳಬೇಕು ಎಂದು ಸಲಹಾ ಆದೇಶಗಳನ್ನು ಕಳಿಸಲಾಗಿದೆ. ಗ್ರಾಮ ಸಮಾಜದ ಮೇಲೆ ಇದರ ಪೈಶಾಚಿಕ ಪರಿಣಾಮಗಳನ್ನು ಊಹಿಸಿಕೊಳ್ಳಬಹುದಷ್ಟೇ.

ಸರಕಾರದ ಈ ನಡೆಯ ತಕ್ಷಣದ ಪರಿಣಾಮವೆಂದರೆ ಖಾಸಗಿಯವರಿಗೆ ಭೋಗ್ಯಕ್ಕೆ ಕೊಡಲಾಗುವ ಎಲ್ಲ ಮೂಲರಚನಾ ಸೇವೆಗಳಿಗೆ ಜನಸಾಮಾನ್ಯರು ಹೆಚ್ಚಿನ ಬೆಲೆಗಳನ್ನು ತೆರಬೇಕಾಗುತ್ತದೆ ಎಂಬುದು ಯಾರಿಗಾದರೂ ತಿಳಿಯುವ ಸಂಗತಿ. ಏಕೆಂದರೆ ಅಧಿಕೃತ ಎನ್‌ಎಂಪಿ ದಸ್ತಾವೇಜಿನ ಪ್ರಕಾರವೇ ಇವನ್ನು ವಹಿಸಿಕೊಳ್ಳುವ ಖಾಸಗಿಯವರಿಗೆ ಈ ಎಲ್ಲ ಮೂಲರಚನೆಗಳ ಬಳಕೆ/ಸೇವಾ ಶುಲ್ಕಗಳನ್ನು ಏರಿಸುವ ಮತ್ತು ಜನಸಾಮಾನ್ಯರನ್ನು ಸುಲಿದು ಲಾಭದ ಸುರಿಮಳೆ ಪಡೆಯುವ ಅಧಿಕಾರವಿರುತ್ತದೆ.

ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಸರಕಾರದ ವಾದ. ಆದರೆ, ತದ್ವಿರುದ್ಧವಾಗಿ ಸಾವಿರಾರು ಕಾರ್ಮಿಕರು ಕೆಲಸ ಕಳಕೊಳ್ಳುತ್ತಾರೆ, ಇದರಿಂದ ಈಗಾಗಲೇ ಆತಂಕಕಾರಿಯಾಗಿರುವ ನಿರುದ್ಯೋಗ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಉದ್ಯೋಗದ ಗುಣಮಟ್ಟ ಇನ್ನಷ್ಟು ಹದಗೆಡುತ್ತದೆ. ಇದರಿಂದ ಅತಿ ಹೆಚ್ಚು ಬಾಧಿತರಾಗುವವರು ಪರಿಶಿಷ್ಟ ಜಾತಿಗಳು/ಪಂಗಡಗಳಿಗೆ ಸೇರಿದವರು. ಏಕೆಂದರೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಇಲ್ಲ.

ಇದರೊಂದಿಗೆ, 100 ಲಾಭದಲ್ಲಿರುವ ಖಾಸಗಿ ವಲಯದ ಉದ್ದಿಮೆಗಳನ್ನು ಮಾರುವ ಯೋಜನೆಯನ್ನು ಸರಕಾರ ಪ್ರಕಟಿಸಿದೆ. ಇದರ ಅರ್ಥ ಸರಕಾರದ ಖಜಾನೆಗೆ ಹರಿದು ಬರುವ ಲಾಭಗಳೂ ನಿಂತುಹೋಗುತ್ತವೆ. ಈ ಎಲ್ಲ ಕ್ರಮಗಳಿಂದ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸರಕಾರದ ಸಾಮರ್ಥ್ಯ ಕೂಡ ಕುಂಠಿತಗೊಳ್ಳುತ್ತದೆ ಎಂದು ತಿಳಿಯಲು ಅರ್ಥಶಾಸ್ತ್ರದ ಆಳವಾದ ಜ್ಞಾನವೇನೂ ಬೇಕಾಗಿಲ್ಲ.

ಸರಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಬೇರೆ ಮಾರ್ಗಗಳೂ ಇವೆ, ಭಾರತದಲ್ಲಿನ ಶ್ರೀಮಂತರು ಮತ್ತು ಸೂಪರ್ ಶ್ರೀಮಂತರ ಮೇಲೆ ತೆರಿಗೆ ಹಾಕಿ ಇದನ್ನು ಸಂಗ್ರಹಿಸಬಹುದು ಎಂದು ತಿಳಿಯಲು ಕೂಡ ಆಳವಾದ ಅರ್ಥಶಾಸ್ತçದ ಜ್ಞಾನ ಬೇಕಾಗಿಲ್ಲ. ಆದರೆ ಈ ಸರಕಾರ ಇದನ್ನು ಮಾಡಲು ನಿರಾಕರಿಸುತ್ತಿದೆ. ಏಕೆಂದರೆ ಈ ಶ್ರೀಮಂತರು ಮತ್ತು ಸೂಪರ್ ಶ್ರೀಮಂತರು ಅವರ ಮಿತ್ರರು, ಅದಕ್ಕೂ ಮಿಗಿಲಾಗಿ ಅವರ ಯಜಮಾನರುಗಳು.

ಜನಸಾಮಾನ್ಯರ ಹಿತಗಳಿಗೆ ಬಾಧಕವಾಗುವ ಧೋರಣೆಗಳಿವು ಎಂಬುದು ಸ್ವಯಂವೇದ್ಯ. ಆದರೂ ಈ ಸರಕಾರ ಏಕೆ ಇಂತಹ ಧೋರಣೆಗಳನ್ನು ಅನುಸರಿಸ ಹೊರಟಿದೆ? ಏಕೆಂದರೆ ಇವು, ಅಧಿಕಾರದಲ್ಲಿರುವ ಪಕ್ಷಕ್ಕೆ ನಿಧಿ ಪೂರೈಸುವ ಕಾರ್ಪೊರೇಟ್‌ಗಳ ಹಿತಸಾಧಿಸುವಂತವುಗಳು ಎಂಬುದೇ ಇದಕ್ಕೆ ಕೊಡಬಹುದಾದ ಕಟುವಾದ ಉತ್ತರ.

ಹಾಗಿದ್ದರೆ ಜನಸಾಮಾನ್ಯರು ಏನು ಮಾಡಬೇಕು?

ಕೇಂದ್ರೀಯ ಕಾರ್ಮಿಕ ಸಂಘಗಳು, ಸ್ವತಂತ್ರ ಒಕ್ಕೂಟಗಳು ಮತ್ತು ಸಂಘÀಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ದಾರಿ ತೋರಿಸುತ್ತಿವೆ. ದೇಶಾದ್ಯಂತ ಇದರ ವಿರುದ್ದ ದೃಢವಾಗಿ ಐಕ್ಯ ಪ್ರತಿರೋಧವನ್ನು ಕಟ್ಟುತ್ತಲೇ, ರಾಷ್ಟ್ರೀಯ ಅರ್ಥವ್ಯವಸ್ಥೆ ಮತ್ತು ಶ್ರಮಜೀವಿಗಳ ಮೇಲೆ ಈ ಹೀನ ಅಪರಾಧಗಳನ್ನು ಎಸಗುವವರನ್ನು ಅವಕಾಶ ಸಿಕ್ಕಾಗಲೆಲ್ಲಾ, ಅಧಿಕಾರದಿಂದ ಹೊರಗೆಸೆಯುವುದೇ ಆ ದಾರಿ.

ನಾವು, ಕಾರ್ಮಿಕ ವರ್ಗ, ಇದನ್ನು ‘ಮಿಷನ್ ಭಾರತ’ ಎಂದು ಕೈಗೆತ್ತಿಕೊಳ್ಳೋಣ; ಅಧಿಕಾರದಲ್ಲಿರುವ ಪ್ರಸಕ್ತ ಸರಕಾರದ ಈ ಪಕ್ಕಾ ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ಒಂದು ದೃಢ ಪ್ರತಿರೋಧ ಹೋರಾಟವನ್ನು ಬೆಳೆಸುವ ಮೂಲಕ ನಮ್ಮ ರಾಷ್ಟ್ರೀಯ ಆಸ್ತಿಗಳನ್ನು, ಇಡೀ ದೇಶವನ್ನು ಮತ್ತು ಶ್ರಮಜೀವಿ ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸುವ ಗುರಿಯನ್ನು ಇಟ್ಟುಕೊಳ್ಳೋಣ; ಏಕೆಂದರೆ ಈ ವಿಧ್ವಂಸಕಾರೀ ಧೋರಣೆಗಳ ಹೊರೆಯನ್ನು, ಪ್ರತಿಯೊಂದು ಸರಕಿನ ಸತತ ಬೆಲೆಯೇರಿಕೆ, ಉದ್ಯೋಗಗಳ, ಜೀವನೋಪಾಯಗಳ ಸತತ ನಷ್ಟ ಮುಗಿಲೆತ್ತರ ಏರುತ್ತಿರುವ ನಿರುದ್ಯೋಗ, ಹೆಚ್ಚುತ್ತಿರುವ ಹಸಿವು ಮತ್ತು ದಾರಿದ್ರ್ಯ ಹಾಗೂ ಶ್ರಮಜೀವಿಗಳ ಹಕ್ಕುಗಳ ಮೇಲೆ ಆಕ್ರೋಶಕಾರೀ ಹಲ್ಲೆಗಳ ಸ್ವರೂಪಗಳಲ್ಲಿ ಹೊರುತ್ತಿರುವವರು ಶ್ರಮಜೀವಿಗಳು, ಇದರೊಂದಿಗೇ ಕಾರ್ಪೊರೇಟ್-ದೊಡ್ಡ ವ್ಯಾಪಾರಸ್ಥ ವರ್ಗದ ಹಿಡಿಯಷ್ಟು ಶ್ರೀಮಂತರು-ಸೂಪರ್‌ಶ್ರೀಮಂತರ ಸಂಪತ್ತಿನಲ್ಲಿ ಅಗಾಧ ಹೆಚ್ಚಳದ ಮೂಲಕ ಹೊಲಸು ಅಸಮಾನತೆಯ ಪ್ರದರ್ಶನ ನಡೆಯುತ್ತಿದೆ.

ಜನಸಾಮಾನ್ಯರ ನಡುವೆ ಈ ಜನ-ವಿರೋಧಿ, ರಾಷ್ಟç-ವಿರೋಧಿ ಧೋರಣೆಗಳ ಆಳ್ವಿಕೆಯ ವಿರುದ್ಧ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ, ಜನತೆಯ ಜೀವ ಮತ್ತು ಜೀವನೋಪಾಯಗಳ ಮೇಲೆ ಎಸಗುತ್ತಿರುವ ಅಪರಾಧದ ವಿರುದ್ಧ ತೀವ್ರ ಪ್ರಚಾರಾಂದೋಲನವನ್ನು ಹರಡಿಸೋಣ. ಅವರ ಕೈಸೆರೆಯಾಗಿರುವ ಮಾಧ್ಯಮ- ಬೆಂಬಲಿತ ಪ್ರಚಾರದ ಮೂಲಕ ಮರೆಮಾಚಿರುವ ಆಳುವ ವರ್ಗದ ನಿಜವಾದ ಜನ-ವಿರೋಧಿ, ರಾಷ್ಟ್ರ-ವಿರೋಧಿ ಹೊಲಸು ಮುಖವನ್ನು ಬಯಲಿಗೆಳೆಯೋಣ.

ನಾವು ಈ ಅಪಪ್ರಚಾರವನ್ನು ನಿಜಸಂಗತಿಗಳೊಂದಿಗೆ ಎದುರಿಸಬೇಕಾಗಿದೆ. ಈ ನಿಜಸಂಗತಿ ಎಲ್ಲರಿಗೂ ಕಾಣುತ್ತಿದೆ- ಅದೇ ಬೆಲೆಯೇರಿಕೆ.

ಆದ್ದರಿಂದ ಸಹಿಸಂಗ್ರಹ ಆಂದೋಲನದಲ್ಲಿ ಭಾಗವಹಿಸಿ, ಇದನ್ನು ನೆರೆಕರೆಯ ಪ್ರತಿಯೊಬ್ಬರ ಬಳಿಯೂ ಒಯ್ಯಿರಿ. ಇದನ್ನು ‘ಮಿಷನ್ ಭಾರತ’ವಾಗಿ ಮಾಡೋಣ.

ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕೇಂದ್ರದಲ್ಲಿನ ಆಳ್ವಿಕೆಯ ರಾಷ್ಟ್ರ-ವಿರೋಧಿ ವಿಧ್ವಂಸಕಾರೀ ಪರಿಯೋಜನೆಗಳ ವಿರುದ್ಧ ನಿರ್ಣಾಯಕ ಪ್ರತಿರೋಧ ಹೋರಾಟವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಈ ಕೆಳಗಿನ ಮಾರ್ಗನಕಾಶೆಯನ್ನು ನಿರ್ಧರಿಸಿದೆ:

  1. ಈ ವಿಧ್ವಂಸಕಾರೀ ಧೋರಣೆಗಳ ಆಳ್ವಿಕೆ ಮತ್ತು ಎಲ್ಲಾ ರಂಗಗಳ ಜನಸಾಮಾನ್ಯರ ಜೀವ ಮತ್ತು ಜೀವನೋಪಾಯಗಳ ಮೇಲೆ ಅವುಗಳ ದುರ್ಭರ ಪರಿಣಾಮದ ವಿರುದ್ಧ ಜನಸಾಮಾನ್ಯರ ನಡುವೆ ವಿಸ್ತಾರವಾದ ಸತತ ಪ್ರಚಾರಾಂದೋಲನಕ್ಕೆ ಸರ್ವತೋಮುಖ ಸಾಮೂಹಿಕ ಮುತುವರ್ಜಿ.
  2. ಅಕ್ಟೋಬರ್ 7, 2021ರಂದು ಜಿಲ್ಲಾ ಮಟ್ಟದ ವರೆಗಾದರೂ ಬೃಹತ್ ಮತಪ್ರದರ್ಶನ/ಚಳುವಳಿ/ ಅಣಿನೆರಿಕೆಗಳ ಮೂಲಕ ದೇಶವ್ಯಾಪಿ ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ.
  3. ಸರಕಾರದ ಜನ-ವಿರೋಧಿ, ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ನವದೆಹಲಿಯಲ್ಲಿ ಕಾರ್ಮಿಕರ ರಾಷ್ಟ್ರೀಯ ಸಮಾವೇಶ. ಇದು ಜನತೆಯ ಮೇಲೆ ಲೂಟಿ ಮತ್ತು ಕೊಳ್ಳೆಯ ಇತ್ತೀಚಿನ ಕಸರತ್ತು, ಅಂದರೆ ಎನ್‌ಎಂಪಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ದಸರಾದ ನಂತರ, ದೀಪಾವಳಿಯ ಮೊದಲ ಒಂದು ದಿನಾಂಕದAದು ನಡೆಯಲಿರುವ ಈ ಸಮಾವೇಶ ಸೂಕ್ತ ಸಮಯದಲ್ಲಿ ಬಹುದಿನಗಳ ಮುಷ್ಕರ ಕಾರ್ಯಾಚರಣೆಗೆ ಸಿದ್ಧತೆಯಾಗಿ ಮುಂದಿನ ಕಾರ್ಯಾಚರಣೆಗಳು/ಚಳುವಳಿಯನ್ನು ನಿರ್ಧರಿಸುತ್ತದೆ.
  4. ಎನ್‌ಎಂಪಿ ನೇರವಾಗಿ ಮತ್ತು ತಕ್ಷಣವೇ ತಟ್ಟುವ ವಲಯಗಳಲ್ಲಿ ಮುಷ್ಕರಗಳೂ ಸೇರಿದಂತೆ ವಲಯವಾರು ಕಾರ್ಯಾಚರಣೆಗಳಿಗೆ ಬೆಂಬಲ.
Donate Janashakthi Media

Leave a Reply

Your email address will not be published. Required fields are marked *