ಬೆಂಗಳೂರು: 75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ‘ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಯಡಿಯಲ್ಲಿ ಆರಂಭಿಕವಾಗಿ 750 ಗ್ರಾಮ ಪಂಚಾಯಿತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ಹೆಚ್ಚುವರಿಯಾಗಿ ₹ 25 ಲಕ್ಷ ಮಂಜೂರು ಮಾಡಲಾಗುತ್ತದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಗಿರಿರಾಜ್ ಸಿಂಗ್ ʻಗ್ರಾಮಗಳ ಸಶಕ್ತೀಕರಣ ಮಹಾತ್ಮಾ ಗಾಂಧಿಯವರ ಆಶಯ. ಆ ಆಶಯವನ್ನು ಈಡೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಹೆಜ್ಜೆ ಇಟ್ಟಿದೆ. ಈ ಯೋಜನೆಯಲ್ಲಿ ಇ- ಗ್ರಂಥಾಲಯ ಪರಿಕಲ್ಪನೆ ಉತ್ತಮವಾಗಿದೆ’ ಎಂದರು.
‘ಹಣಕಾಸು ಆಯೋಗಗಳ ಮೂಲಕ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂದು ನೋಡದೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. 13ನೇ ಹಣಕಾಸು ಆಯೋಗಕ್ಕಿಂತ ಮೂರು ಪಟ್ಟು ಹೆಚ್ಚಿನ ಅನುದಾನವನ್ನು 14ನೇ ಹಣಕಾಸು ಆಯೋಗದಲ್ಲಿ ನೀಡಲಾಗಿದೆ’ ಎಂದರು.
ರಾಜ್ಯದ ಗ್ರಾಮ ಪಂಚಾಯತ್ ಗಳ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎಲ್ಲ ಗ್ರಾಮ ಪಂಚಾಯತ್ ಗಳು 2024ರೊಳಗೆ ಡಿಜಿಟಲ್ ಕನೆಕ್ಟಿವಿಟಿ ಹೊಂದಿರಬೇಕು ಎಂದು ಆಶಿಸಿದ ಅವರು, ರಾಜ್ಯದಲ್ಲಿಯೂ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯತ್ ಹಂತದಲ್ಲೇ ಆನ್‌ಲೈನ್ ಮೂಲಕ ಒದಗಿಸುವ ವಿನೂತನ ‘ಗ್ರಾಮ ಸೇವಾ’ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಮುಂಬರುವ ಗಣರಾಜ್ಯೋತ್ಸವ ಜನವರಿ 26ರಿಂದ ಜಾರಿಗೊಳಿಸಲಾಗುವುದು ಎಂದರು.
ಅಭಿವೃದ್ಧಿ ಜನರ ಸುತ್ತ ಆಗಬೇಕು; ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಗಳು ಜನರಿಗೆ ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮ ಸೇವಾ ಸಂಸ್ಥೆಯಾಗಬೇಕು. ಮನೆ ಬಾಗಿಲಿಗೆ ಸೌಲಭ್ಯಗಳು ತಲುಪಬೇಕು. ಈ ಆಶಯದೊಂದಿಗೆ ‘ಗ್ರಾಮ ಸೇವಾ ಯೋಜನೆ’ಯನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಎಲ್ಲ ಗ್ರಾಮ ಪಂಚಾಯತ್ ಗಳು ಇದನ್ನು ಪೂರ್ಣಗೊಳಿಸಿದರೆ ಮುಂದಿನ ವರ್ಷ 1500 ಪಂಚಾಯತ್ ಗಳಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಯೋಜನೆಗೆ ಆಯ್ಕೆಯಾದ ಗ್ರಾಮಪಂಚಾಯಿತಿಗಳು: ಬಾಗಲಕೋಟೆ – 23, ಬಳ್ಳಾರಿ – 28, ಬೆಳಗಾವಿ – 59, ಬೆಂಗಳೂರು ನಗರ – 11, ಬೆಂಗಳೂರು ಗ್ರಾಮೀಣ – 12, ಬೀದರ್ – 22, ಚಾಮರಾಜನಗರ – 15, ಚಿಕ್ಕಬಳ್ಳಾಪುರ – 18, ಚಿಕ್ಕಮಗಳೂರು – 26, ಚಿತ್ರದುರ್ಗ – 22, ದಕ್ಷಿಣ ಕನ್ನಡ – 27, ದಾವಣಗೆರೆ – 23, ಧಾರವಾಡ – 17, ಗದಗ – 14, ಹಾಸನ – 31, ಹಾವೇರಿ – 26, ಕಲ್ಬುರ್ಗಿ – 31, ಕೊಡಗು – 12, ಕೋಲಾರ – 18, ಕೊಪ್ಪಳ – 18, ಮಂಡ್ಯ – 27, ಮೈಸೂರು – 31, ರಾಯಚೂರು – 21, ರಾಮನಗರ – 15, ಶಿವಮೊಗ್ಗ – 32, ತುಮಕೂರು – 38, ಉಡುಪಿ – 18, ಉತ್ತರ ಕನ್ನಡ – 27, ವಿಜಯಪುರ – 25, ಯಾದಗಿರಿ – 14, ಸರ್ಕಾರದ ಮಟ್ಟದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು– 50. ಹೀಗೆ ಒಟ್ಟು 750 ಗ್ರಾಮ ಪಂಚಾಯಿತಿಗಳು.
ಇದೇ ಸಂದರ್ಭದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ `ಯೋಜನೆಯಡಿ ತರಬೇತಿ ಪಡೆದ ನಾಲ್ವರು ಯುವತಿಯರಿಗೆ ಉದ್ಯೋಗ ಪ್ರಮಾಣ ಪತ್ರ ನೀಡಲಾಯಿತು. ಕಲಬುರಗಿಯಲ್ಲಿ ನಿರ್ಮಿಸಲಾಗಿರುವ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ತೋಟಗಾರಿಕೆ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.