ಔರಾದ್(ಬೀದರ್): ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಔರಾದ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕರ್ನಾಟಕ ಆದಿ ಜಾಂಬವ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಅಡ್ಡಿಪಡಿಸುತ್ತಿರುವ ಸಚಿವ ಚೌವ್ಹಾಣ್ ಅವರು ಆಯೋಗದ ಕುರಿತು ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಸದಾಶಿವ ಆಯೋಗ ವರದಿಯ ಮೂಲ ಉದ್ದೇಶಗಳೇ ಗೊತ್ತಿಲ್ಲದ ಸಚಿವರಿಗೆ ತಮ್ಮ ರಾಜಕೀಯ ದುರುದ್ದೇಶದಿಂದ ಜನತೆಗೆ ಆಯೋಗದ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪವಾಗಿದೆ.
ಸರ್ಕಾರದ ಒಬ್ಬ ಜವಾಬ್ದಾರಿ ಸಚಿವರಾದ ಅವರು ವರದಿ ಜಾರಿಗೆ ಅಡ್ಡಿಪಡಿಸುತ್ತಿರುವುದು ಖಂಡನೀಯವಾಗಿದೆ. ಕೂಡಲೇ ಸರ್ಕಾರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಂಘಟಕರು ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಜರುಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ರಾಯಚೂರಿನ ಅಂಬಣ್ಣ ಅರೋಲಿಕರ್ ಅವರು ಪ್ರಭು ಚವ್ಹಾಣ ಮೇಲೆ ರಚಿಸಿದ ಹಾಡೊಂದು ಹಾಡಿದಾಗ ಮೆರವಣಿಗೆಯಲ್ಲಿ ಭಾಗಿಯಾದವರಿಗೆ ಮತ್ತಷ್ಟು ಹುಮ್ಮಸ್ಸು ನೀಡಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಆದಿ ಜಾಂಬವ ಸಂಘಟನೆ, ಮಾದಿಗ ದಂಡೋರ ಸಮಿತಿ ಪದಾಧಿಕಾರಿಗಳು, ಪಟ್ಟಣ ಪಂಚಾಯ್ ಸದಸ್ಯ ಬಂಟಿ ದರಬಾರೆ ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.
ವರದಿ: ಬಾಲಾಜಿ ಕುಂಬಾರ