ವಸಂತರಾಜ ಎನ್.ಕೆ.
ನಾರ್ವೆಯ ಪಾರ್ಲಿಮೆಂಟರಿ ಚುನಾವಣೆಯಲ್ಲಿ ನಡು–ಎಡ ಕೂಟ ವಿಜಯ ಸಾಧಿಸಿದೆ. ಇದರೊಂದಿಗೆ ಉತ್ತರ ಯುರೋಪಿನ (ನಾರ್ಡಿಕ್ ದೇಶಗಳು ಎಂದು ಕರೆಯಲಾಗುವ) ಎಲ್ಲ ಐದು ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ನಡು–ಎಡಕೂಟದ ಸರಕಾರಗಳು ಆಳುವಂತಾಗಿರುವುದು ಮಹತ್ವದ ಬೆಳವಣಿಗೆ.
ಕಳೆದ ವಾರ ನಡೆದ ಚುನಾವಣೆಗಳಲ್ಲಿ ಲೇಬರ್ ಪಕ್ಷ, ಸೋಶಲಿಸ್ಟ್ ಎಡ ಪಕ್ಷ ಮತ್ತು ನಡುಪಂಥೀಯ ಪಕ್ಷಗಳಿಗೆ 169 ಸೀಟುಗಳಲ್ಲಿ 100 ಸೀಟುಗಳು ಬಂದಿದ್ದು, ಅವು ಸ್ಪಷ್ಟ ಬಹುಮತ ಪಡೆದು ಸರಕಾರ ರಚಿಸುವ ಜನಾದೇಶ ಪಡೆದಿವೆ. ಕಳೆದ ಪಾರ್ಲಿಮೆಂಟಿನಲ್ಲಿ ನಡು-ಬಲಪಂಥೀಯ ಕೂಟ 88 ಸೀಟು ಪಡೆದಿದ್ದು ನಡು-ಎಡಕೂಟ 81 ಸೀಟು ಗಳಿಸಿತ್ತು. ಕಳೆದ ಸರಕಾರದ ನಾಯಕತ್ವ ವಹಿಸಿದ್ದ ಎರ್ನಾ ಸೊಲ್ಬರ್ಗ್ ಕಳೆದ ಎರಡು ಅವಧಿಗಳಿಗೆ ಪ್ರಧಾನಿಯಾಗಿದ್ದರು.
ಆಳುವ ಕೂಟವಾಗಲಿರುವ ಪಕ್ಷಗಳಲ್ಲಿ ಲೇಬರ್ ಪಕ್ಷ 48 ಸೀಟು (ಶೇ. 26.3 ಮತ), ನಡುಪಂಥೀಯ ಪಕ್ಷ 28 ಸೀಟು (ಶೇ. 13.5) ಮತ್ತು ಸೋಶಲಿಸ್ಟ್ ಎಡ ಪಕ್ಷ 13 ಸೀಟು(ಶೇ. 7.6) ಗಳನ್ನು ಪಡೆದಿವೆ. ಕಳೆದ ಬಾರಿ ಆಳುವ ಕೂಟವಾಗಿದ್ದ ಕನ್ಸರ್ವೇಟಿವ್ ಪಕ್ಷ 36 (ಶೇ. 20.4) ಸೀಟುಗಳನ್ನು ಗಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 9 ಸೀಟುಗಳನ್ನು ಮತ್ತು ಶೇ. 4.7 ಮತಗಳನ್ನು ಕಳೆದುಕೊಂಡಿದೆ. ಕಳೆದ ಬಾರಿಯ ಆಳುವ ಕೂಟದ ಭಾಗವಾಗಿದ್ದ ಪ್ರೋಗ್ರೇಸ್ ಪಕ್ಷ 21 ಸೀಟು (ಶೇ. 3.5 ಮತ), ಲಿಬರಲ್ ಪಕ್ಷ 8 ಸೀಟು (ಶೇ. 4.6 ಮತ), ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ 3 ಸೀಟು (ಶೇ. 3.8ಮತ) ಗಳಿಸಿವೆ. ಲಿಬರಲ್ ಪಾರ್ಟಿ ಬಿಟ್ಟರೆ, ಕಳೆದ ಬಾರಿಯ ಆಳುವ ಕೂಟದ ಇತರ ಎಲ್ಲ ಪಕ್ಷಗಳು ಸೀಟು ಮತ್ತು ಶೇಕಡಾವಾರು ಮತಗಳನ್ನು ಕಳೆದುಕೊಂಡಿವೆ.
ಲೇಬರ್ ಪಕ್ಷ ಎಂದಿನಂತೆ ದೇಶದ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದ್ದರೂ, ಸೋಶಲಿಸ್ಟ್ ಎಡ ಪಕ್ಷ ಮತ್ತು ನಡುಪಂಥೀಯ ಪಕ್ಷಗಳ ಜತೆ ಮಾತುಕತೆ ನಡೆಸಿ ಸರಕಾರ ರಚಿಸಬೇಕಾಗಿದೆ. ಲೇಬರ್ ಪಕ್ಷದ ನಾಯಕ 61 ಪಕ್ಷದ ಮಾಜಿ ಉದ್ಯಮಿ ಹಾಗೂ ಸರಕಾರಿ ಅಧಿಕಾರಿ ಗಾಹರ್ ಸ್ಟೋರ್ ಪ್ರಧಾನಿಯಾಗಲಿದ್ದಾರೆ.
ಕೆಂಪು ಪಕ್ಷ ಎಂಬ ಹೆಸರಿನ ಕಮ್ಯುನಿಸ್ಟ್ ಪಕ್ಷ 8 ಸೀಟು (ಶೇ. 4.7 ಮತ) ಗಳಿಸಿದೆ. ಅದು ಕಳೆದ ಚುನಾವಣೆಗಿಂತ 7 ಸೀಟುಗಳನ್ನು ಹೆಚ್ಚು ಪಡೆದಿರುವುದು ಮಾತ್ರವಲ್ಲದೆ ಶೇ. 2.3 ಹೆಚ್ಚು ಮತ ಗಳಿಸಿ ಮತಗಳಿಕೆಯನ್ನು ಇಮ್ಮಡಿ ಮಾಡಿಕೊಂಡಿದೆ ಎಂಬುದು ಗಮನಾರ್ಹ. ಪರಿಸರವಾದಿ ಗ್ರೀನ್ ಪಕ್ಷ 3 ಸೀಟು (ಶೇ.3.9 ಮತ) ಗಳಿಸಿದೆ. ಅದು ಸಹ ಕಳೆದ ಚುನಾವಣೆಗಿಂತ 2 ಸೀಟುಗಳನ್ನು ಹೆಚ್ಚು ಪಡೆದಿರುವುದು ಮಾತ್ರವಲ್ಲದೆ ಶೇ. 0.7 ಹೆಚ್ಚು ಮತ ಗಳಿಸಿದೆ. ಆದರೆ ಕೆಂಪು ಮತ್ತು ಗ್ರೀನ್ ಪಕ್ಷಗಳು ಲೇಬರ್ ನಾಯಕತ್ವದ ಆಳುವ ಕೂಟವನ್ನು ಸೇರುವುದಿಲ್ಲ ಎಂದು ತಿಳಿದುಬಂದಿದೆ. ಇವಿಲ್ಲದೆಯೇ 3 ಪಕ್ಷಗಳ ಕೂಟಕ್ಕೆ ಸ್ಪಷ್ಟ ಬಹುಮತವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಾರ್ವೆ ರಾಜಕೀಯವಾಗಿ ಎಡದತ್ತ ವಾಲಿದೆ ಎಂಬುದು ಸ್ಪಷ್ಟ.
ಈ ಎಡದತ್ತ ವಾಲಿಕೆ ಇತರ ನಾಲ್ಕು ನಾರ್ಡಿಕ್ ದೇಶಗಳಲ್ಲೂ (ಸ್ವೀಡನ್, ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್) ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬಂದಿದೆ ಎಂಬುದು ಇನ್ನೂ ಗಮನಾರ್ಹ. ನೆರೆಯ ಡೆನ್ಮಾರ್ಕ್ ನಲ್ಲಿ 2019ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಹ ಅಲ್ಲಿನ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷದ ನಾಯಕತ್ವದ ಇತರ ಐದು ಎಡ ಪಕ್ಷಗಳ ಕೂಟ 179ರಲ್ಲಿ 93 ಸೀಟು ಪಡೆದು ಹಿಂದೆ ಅಧಿಕಾರದಲ್ಲಿದ್ದ ಡೇನಿಶ್ ಪೀಪಲ್ಸ್ ಪಾರ್ಟಿಯ ನಡು-ಬಲಪಂಥೀಯ ಕೂಟವನ್ನು ಸೋಲಿಸಿ ಅಧಿಕಾರ ವಹಿಸಿಕೊಂಡಿದೆ.
ಸ್ವೀಡನ್ ನಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ 100 ಸೀಟು ಪಡೆದ ಸೋಶಿಯಲ್ ಡೆಮೊಕ್ರಾಟ್ ಪಕ್ಷದ ನಾಯಕತ್ವದ ಎಡ ಪಕ್ಷ, ಲಿಬರಲ್, ಮತ್ತು ಗ್ರೀನ್ ಪಕ್ಷಗಳಿರುವ ಎಡ ಕೂಟ ಅಲ್ಪಸಂಖ್ಯಾತ ಸರಕಾರ ಅಧಿಕಾರ ವಹಿಸಿಕೊಂಡಿದೆ. ವಲಸೆಗಾರ-ವಿರೋಧಿ 62 ಸೀಟು ಗಳಿಸಿದ ಉಗ್ರ ಬಲಪಂಥೀಯ ಸ್ವಿಡನ್ ಡೆಮೊಕ್ರಾಟರೊಂದಿಗೆ ಸರಕಾರದಲ್ಲಿ ಭಾಗವಹಿಸಲು ಲಿಬರಲ್ ಮತ್ತು ನಡುಪಂಥೀಯ ಪಕ್ಷಗಳು ತಯಾರಿಲ್ಲವಾದ್ದರಿಂದ, 70 ಸೀಟು ಪಡೆದ ಎರಡನೆ ಅತಿದೊಡ್ಡ ಪಕ್ಷವಾದ ನಡುಪಂಥೀಯ ಮೋಡರೇಟ್ ಪಕ್ಷಕ್ಕೆ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಹಿಂದೆನೂ ಸೋಶಿಯಲ್ ಡೆಮೊಕ್ರಾಟ್ ಪಕ್ಷದ ಸರಕಾರವೇ ಇತ್ತು.
ಫಿನ್‌ಲ್ಯಾಂಡಿನಲ್ಲಿ 2019ರ ಪಾರ್ಲಿಮೆಂಟಿನ ಚುನಾವಣೆಗಳಲ್ಲಿ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷದ ನಾಯಕತ್ವದ ಎಡ-ನಡುಪಂಥೀಯ ಕೂಟ, ಹಿಂದಿನ ನಡು-ಬಲಪಂಥೀಯ ಕೂಟವನ್ನು ಸೋಲಿಸಿ ಅಧಿಕಾರ ವಹಿಸಿಕೊಂಡಿದೆ. ಹಿಂದಿನ ಬಾರಿ ಸರಕಾರದ ನಾಯಕತ್ವ ವಹಿಸಿದ್ದ ನಡುಪಂಥೀಯ ಪಕ್ಷ ಪರಾಭವಗೊಂಡು ಮೊದಲ ಸ್ಥಾನದಿಂದ ನಾಲ್ಕನೆಯ ಸ್ಥಾನಕ್ಕೆ ಕುಸಿಯಿತು. 1917ರ ನಂತರದ ಅವಧಿಯ ಅತ್ಯಂತ ಕಡಿಮೆ ಸೀಟು/ಮತ ಗಳಿಸಿದೆ. ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷ 1999ರ ನಂತರ ಮೊದಲ ಬಾರಿಗೆ ಮೊದಲನೆಯ ಸ್ಥಾನವನ್ನು ಮತ್ತೆ ಪಡೆದಿದೆ. ಅದು ಗ್ರೀನ್ ಲೀಗ್, ನಡುಪಂಥೀಯ ಪಕ್ಷ, ಎಡ ಕೂಟ, ಪೀಪಲ್ಸ್ ಪಾರ್ಟಿ ಜತೆ 200 ಸೀಟುಗಳ ಸದನದಲ್ಲಿ 116 ಸೀಟುಗಳ ಬೆಂಬಲ ಪಡೆದ ಸರಕಾರ ರಚಿಸಿತು. ಇಲ್ಲೂ ನಡು-ಬಲಪಂಥೀಯ ಕೂಟದ ಪಕ್ಷಗಳು ಗಮನಾರ್ಹ ಪ್ರಮಾಣದಲ್ಲಿ ಸೀಟು/ಮತಗಳನ್ನು ಕಳೆದುಕೊಂಡವು.
ಐಸ್ ಲ್ಯಾಂಡಿನಲ್ಲಿ 2017ರಲ್ಲಿ ಸ್ವತಂತ್ರ ಪಕ್ಷದ ನಾಯಕತ್ವದ ಮೈತ್ರಿಕೂಟ ಸರಕಾರ ಪ್ರಧಾನಿಯ ಒಂದು ಹಗರಣದಿಂದಾಗಿ ಬಹಮತ ಕಳೆದುಕೊಂಡು ಮಧ್ಯಂತರ ಚುನಾವಣೆ ನಡೆಯಿತು. ಆ ಚುನಾವಣೆಯ ನಂತರ ಎಡ-ಗ್ರೀನ್ ಕೂಟದ ನಾಯಕತ್ವದ ನಡು-ಎಡ ಕೂಟದ ಸರಕಾರ ಅಧಿಕಾರವಹಿಸಿಕೊಂಡಿದೆ.
ಎಲ್ಲ ಐದು ನಾರ್ಡಿಕ್ ದೇಶಗಳಲ್ಲಿ ಎಡ ಪ್ರಮುಖ ಪಾತ್ರ ವಹಿಸುವ ಸರಕಾರಗಳು ಏಕಕಾಲದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಮತ್ತು ಎಲ್ಲ ದೇಶಗಳಲ್ಲಿ ಸೋಶಿಯಲ್ ಡೆಮೊಕ್ರಾಟ್ (ಸ್ವೀಡನ್ ಬಿಟ್ಟರೆ) ಮತ್ತು ಎಡ ಪಕ್ಷಗಳು ಸೀಟು/ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿವೆ ಎಂಬುದು ಗಮನಾರ್ಹ ಬೆಳವಣಿಗೆ. 1980ರ ದಶಕದವರೆಗೆ ಈ ಎಲ್ಲ ದೇಶಗಳಲ್ಲಿ ಸೋಶಿಯಲ್ ಡೆಮೊಕ್ರಾಟ್ ಪಕ್ಷಗಳು ಅತಿ ದೊಡ್ಡ ಪಕ್ಷಗಳಾಗಿದ್ದು ಬಹುಮತ ಪಡೆದು ಸರಕಾರ ನಡೆಸುತ್ತಿದ್ದವು. ಆದರೆ 1990ರ ದಶಕದಲ್ಲಿ ನಡು-ಬಲಪಂಥೀಯ ಪಕ್ಷಗಳು ಬೆಳೆದು ಸರಕಾರ ರಚಿಸಲು ಆರಂಭಿಸಿದ್ದವು.
61 Varhada Gahar?
61 Varshada