ಅಧಿಕಾರದ ಎದುರು ಸತ್ಯದ ಮಾತು

ಪ್ರಕಾಶ್ ಕಾರಟ್

ಪ್ರಕಾಶ್ ಕಾರಟ್

ದೇಶವು ಕ್ರಮೇಣ ಸರ್ವಾಧಿಕಾರಶಾಹಿಯತ್ತ ಹೊರಳುತ್ತಿರುವ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಪ್ರಬೋಧಕ ಅಭಿಪ್ರಾಯಗಳು ಸಂತಸ ತರುತ್ತವೆ. ಆದರೆ ನಮ್ಮ ಸುತ್ತಮುತ್ತ ಕಣ್ಣು ಹಾಯಿಸುವಾಗ, ಸತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನ್ಯಾ.ಚಂದ್ರಚೂಡ್ ವ್ಯಕ್ತಪಡಿಸಿರುವ ಚಿಂತನೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಚಿತ್ರವನ್ನು ಕಾಣುತ್ತಿದ್ದೇವೆ.

ಜನರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂವೇದನಾಶೀಲವಾಗಿರುವ ಕೆಲವು ಲಕ್ಷಣಗಳು ಕಂಡುಬಂದಿವೆಯಾದರೂ ನ್ಯಾಯಾಂಗದ ಸ್ವತಂತ್ರ ಪಾತ್ರ ಹಾಗೂ ಕಾರ್ಯಾಂಗಕ್ಕೆ ಅದರ ಮೌನಸಮ್ಮತಿಯ ಬಗ್ಗೆ ಇನ್ನೂ ಕಳವಳ ಉಳಿದಿರುವಾಗ ‘ಸತ್ಯ’ವನ್ನು ಆಧರಿಸಿರುವ ಗಾಢವಾದ ಪ್ರಜಾಸತ್ತಾತ್ಮಕ ಕಣ್ಣೋಟವು ತದ್ವಿರುದ್ಧವಾದ ಪ್ರವೃತ್ತಿಗಳಿಗೆ ಎದುರಾಗಿ ನಿಲ್ಲುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಅದು ಇಡೀ ಉನ್ನತ ನ್ಯಾಯಾಂಗವನ್ನು ವ್ಯಾಪಿಸುತ್ತದೆ ಎಂದು ಆಶಿಸಬೇಕಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇತ್ತೀಚೆಗೆ ಜಸ್ಟಿಸ್ ಎಂ.ಸಿ.ಛಾಗ್ಲಾ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ “ಅಧಿಕಾರಕ್ಕೆ ಎದುರಾಗಿ ಸತ್ಯದ ಮಾತು: ನಾಗರಿಕರು ಮತ್ತು ಕಾನೂನು” ಎಂಬ ವಿಷಯದ ಮೇಲೆ ಚಿಂತನೆಗೆ ಹಚ್ಚುವ ಉದ್ಭೋಧಕ ಉಪನ್ಯಾಸ ನೀಡಿದರು.

ಸತ್ಯ ಮತ್ತು ಪ್ರಜಾಪ್ರಭುತ್ವದ ನಡುವಿನ ಸಂಬಂಧ ಮತ್ತು ಪ್ರಭುತ್ವಕ್ಕೆ ಸತ್ಯವನ್ನು ಹೇಳುವಲ್ಲಿ ಪ್ರಜೆಗಳ ಪಾತ್ರವನ್ನು ವಿದ್ವತ್‌ಪೂರ್ಣವಾಗಿ ವಿಶ್ಲೇಷಿಸುತ್ತ ಜಸ್ಟಿಸ್ ಚಂದ್ರಚೂಡ್ “ಪ್ರಜಾಪ್ರಭುತ್ವ ಉಳಿಯಬೇಕಾದರೆ ಸತ್ಯದ ಶಕ್ತಿ ಬೇಕು. `ಅಧಿಕಾರಸ್ಥರಿಗೆ ಸತ್ಯವನ್ನು ಹೇಳುವುದು’ ಪ್ರಜಾಪ್ರಭುತ್ವದಲ್ಲಿ ಪ್ರತಿ ಪ್ರಜೆಯು ಹೊಂದಿರಲೇಬೇಕಾದ ಹಕ್ಕು ಎಂದು ಪರಿಗಣಿಸುವುದಾದರೆ ಅದು ಪ್ರತಿ ಪ್ರಜೆಯ ಕರ್ತವ್ಯವೂ ಆಗಬೇಕು’’ ಎನ್ನುತ್ತಾರೆ.

ಮುಂದುವರೆದು ಅವರು “‘ಸತ್ಯ’ ಹೇಳುವ ಕ್ರಿಯೆ ಅಧಿಕಾರಕ್ಕೆ ಎದುರಾಗಿ ನಡೆಯುತ್ತದೆ, ಹಾಗೂ ಅದು ನಿರಂಕುಶತ್ವದತ್ತ ಒಲವನ್ನು ನಿವಾರಿಸುತ್ತದೆ ಎಂಬ ಭಾವನೆ ಇದೆ ಎಂಬುದು ಮಹತ್ವದ ವಿಷಯ” ಎಂದು ಹೇಳುತ್ತಾರೆ.

ಕೆಲವು ದಿನಗಳ ಹಿಂದೆ ‘ಆಳ್ವಿಕೆಯಲ್ಲಿ ನ್ಯಾಯಾಂಗದ ಪಾತ್ರ’ ಕುರಿತ ಒಂದು ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೊಬ್ಬ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಹೀಗೆ ಹೇಳಿದ್ದರು: “ಭಾರಿ ಬೆಲೆ ತೆತ್ತು ನಾವು ನಮ್ಮ ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಆದ್ದರಿಂದ ಪ್ರತಿ ಭಾರತೀಯರು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಸತತವಾಗಿ ಬಳಸಿಕೊಳ್ಳಬೇಕು. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಆದ್ದರಿಂದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸವಾಗಬೇಕು, ಯಾವುದೇ ಅತಿಕ್ರಮಣವನ್ನು ಸಹಿಸಿಕೊಂಡು ಸುಮ್ಮನಿರಬಾರದು”. ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಬೇಕಾದರೆ ಪ್ರಜೆಗಳು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಬೇಕೆಂಬ ಭಾವ ಇಲ್ಲಿಯೂ ಧ್ವನಿಸುತ್ತದೆ.

ದೇಶವು ಕ್ರಮೇಣ ಸರ್ವಾಧಿಕಾರಶಾಹಿಯತ್ತ ಹೊರಳುತ್ತಿರುವ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಇಂತಹ ಪ್ರಬೋಧಕ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು ಸಂತಸದ ಸಂಗತಿ. ಆದರೆ, ತದ್ವಿರುದ್ಧವಾಗಿ, ನಮ್ಮ ಸುತ್ತಮುತ್ತ ಕಣ್ಣು ಹಾಯಿಸುವಾಗ, ಸತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನ್ಯಾ. ಚಂದ್ರಚೂಡ್ ವ್ಯಕ್ತಪಡಿಸಿರುವ ಮಾದರಿ ಚಿಂತನೆಗಳಿಗೆ ಸಂಪೂರ್ಣವಾಗಿ ಭಿನ್ನವಾದ ಚಿತ್ರವನ್ನು ಕಾಣುತ್ತಿದ್ದೇವೆ.

ಮಾತು ಪ್ರತಿ ನಾಗರಿಕರ ನಾಲಗೆ ತುದಿಯಲ್ಲಿದೆ, ಅದು ಕೋರ್ಟಿನ ಆದೇಶಕ್ಕೆ ಕಾಯುತ್ತಿದೆ ವ್ಯಂಗ್ಯಚಿತ್ರ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್

ತದ್ವಿರುದ್ಧವಾದ ಚಿತ್ರ

ಅಧಿಕಾರಸ್ಥರ ಎದುರು ಸತ್ಯವನ್ನು ಹೇಳುವ ಮತ್ತು ದಮನಿತರ ಪರವಾಗಿ ದನಿಯೆತ್ತುತ್ತಿರುವ ನಾಗರಿಕರಿಗೆ ಏನಾಗುತ್ತಿದೆ? ಎಲ್ಗಾರ್ ಪರಿಷತ್-ಭೀಮಾ ಕೋರೆಗಾಂವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಯುಎಪಿಎ ಅಡಿ ಕೇಸ್‌ಗಳನ್ನು ಹಾಕಲಾಗಿದೆ. ಈ ತಥಾಕಥಿತ ಪಿತೂರಿಯಲ್ಲಿ ಬಂಧಿತರಾದ ಕೆಲವರು ಈಗಾಗಲೇ ವಿಚಾರಣೆಯಿಲ್ಲದೆ ಮೂರು ವರ್ಷ ಜೈಲಿನಲ್ಲಿ ಕಳೆದಿದ್ದಾರೆ.

ಸತ್ಯದ ನಿರ್ಣಯಕ್ಕೆ ಬರಲು ಪ್ರಜೆಗಳಿಗೆ ನೆರವಾಗುವಂಥ ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕೆಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ. ಆ ಪೈಕಿ ಒಂದು ಮುಕ್ತ ಮಾಧ್ಯಮದ ಅಸ್ತಿತ್ವ ಮೊದಲನೆಯದಾಗುತ್ತದೆ. ಆದರೆ ವಾಸ್ತವವಾಗಿ ಮಾಧ್ಯಮ ಈಗ ಅಪಾರ ಒತ್ತಡದಲ್ಲಿದೆ. ಸ್ವತಂತ್ರವಾಗಿರಬೇಕಾದ ಹಾಗೂ ಸತ್ಯವನ್ನು ನುಡಿಯಬೇಕಾದ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ, ಅವರನ್ನು ಬೆದರಿಸಲಾಗುತ್ತಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ರಾಜದ್ರೋಹದ ಕಲಮನ್ನು ಅವರ ವಿರುದ್ಧ ಎಗ್ಗಿಲ್ಲದೆ ಬಳಸಲಾಗುತ್ತಿದೆ.

ಮೂಲಭೂತ ಹಕ್ಕುಗಳು ಮಾತ್ರವಲ್ಲದೆ ಸ್ವತಃ ಸಂವಿಧಾನದ ಮೇಲೆಯೇ ನೇರವಾಗಿ ದಾಳಿ ನಡೆಯುತ್ತಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿರುವುದರಿಂದ ಹಿಡಿದು ನಾಗರಿಕತ್ವಕ್ಕೆ ಧರ್ಮದ ಮಾನದಂಡವನ್ನು ಅಳವಡಿಸುವ ಪೌರತ್ವ ತಿದ್ದುಪಡಿ ಕಾನೂನಿನ (ಸಿಎಎ) ಅಂಗೀಕಾರದವರೆಗೆ, ಪ್ರತಿ ದಿನ ಕಾರ್ಯಾಂಗದ ಕ್ರಮಗಳ ಮೂಲಕ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ಅತಿಕ್ರಮಣವಾಗುತ್ತಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.

ಸಂಪನ್ಮೂಲ ಹಾಗೂ ಹಣಕಾಸು ಲಭ್ಯತೆಯ ವಿಚಾರದಲ್ಲಿ ಆಳುವ ಪಕ್ಷ ಏಕಸ್ವಾಮ್ಯ ಸಾಧಿಸಿರುವುದರಿಂದ ಚುನಾವಣಾ ವ್ಯವಸ್ಥೆಯಲ್ಲಿ ಸಮಾನ ಅವಕಾಶ ಇಲ್ಲದಿರುವುದರಿಂದ ಕೂಡ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. 2018ರಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ವ್ಯವಸ್ಥೆಯು ಇಂಥ ಎಲ್ಲ ಸಂಪನ್ಮೂಲ ಆಳುವ ಪಕ್ಷದ ಪಾಲಾಗುವಂತೆ ಮಾಡುವ ದೊಡ್ಡ ಹುನ್ನಾರವಾಗಿದೆ. ಬೇಹುಗಾರಿಕೆಗೆ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಬಳಕೆ ಕೂಡ ಆಳುವ ಪಕ್ಷಕ್ಕೆ ಯಾವುದೇ ರೀತಿಯ ವಿರೋಧ ಅಥವಾ ಭಿನ್ನಮತ ಬೆಳೆಯುವುದನ್ನು ತಡೆಯುವ ಉದ್ದೇಶ ಹೊಂದಿದೆ.

ಸತ್ಯದ ಸ್ಥಾಪನೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಹತ್ವದ ಕಾಳಜಿಯ ಅಂಶವಾಗಿರುವ ಈ ಎಲ್ಲವುಗಳು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಭೀಮಾ-ಕೋರೆಗಾಂವ್ ಆರೋಪಿಗಳ ಸ್ವೇಚ್ಛಾಚಾರಿ ಬಂಧನ, 370ನೇ ವಿಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿದ್ದು, ಚುನಾವಣಾ ಬಾಂಡ್‌ಗಳು, ರಾಜದ್ರೋಹದ ಕಲಮುಗಳ ಬಳಕೆ ಹಾಗೂ ಪೆಗಾಸಸ್ ಸ್ಪೈವೇರ್ ಬಳಕೆ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದ ಮುಂದಿವೆ.

ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಖ್ಯಾತ ಇತಿಹಾಸಕಾರರಾದ ಪ್ರೊ. ರೋಮಿಲಾ ಥಾಪರ್ ಹಾಗೂ ನಾಲ್ವರು ಪ್ರಮುಖ ನಾಗರಿಕರು 2018ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಪೊಲೀಸರು ಮನಬಂದಂತೆ ತನಿಖೆ ನಡೆಸುವುದನ್ನು ಹಾಗೂ ಬಂಧಿಸುವುದನ್ನು ನಿಲ್ಲಿಸಬೇಕು ಹಾಗೂ ಕೋರ್ಟ್ ಉಸ್ತುವಾರಿಯಲ್ಲಿ ಒಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಬೇಕೆಂದು ಅದರಲ್ಲಿ ಕೋರಲಾಗಿತ್ತು. ಆಗಿನ ಭಾರತದ ಮುಖ್ಯ ನ್ಯಾಯಾಧೀಶರು(ಸಿಜೆಐ) ಒಳಗೊಂಡಿದ್ದ ತ್ರಿಸದಸ್ಯ ಪೀಠ ಆ ಅರ್ಜಿಯನ್ನು ತಳ್ಳಿ ಹಾಕಿತ್ತು (ಆ ನ್ಯಾಯಪೀಠದಲ್ಲಿದ್ದ ನ್ಯಾ. ಚಂದ್ರಚೂಡ್ ಭಿನ್ನಮತದ ತೀರ್ಪು ಕೊಟ್ಟಿದ್ದರು ಎನ್ನುವುದು ಗಮನಾರ್ಹ). ಅಂದಿನಿಂದಲೂ ಈ ಮೊಕದ್ದಮೆಯ 16 ಆರೋಪಿಗಳಿಗೆ ವಿವಿಧ ಹಂತದ ನ್ಯಾಯಾಲಯಗಳು ಜಾಮೀನು ನಿರಾಕರಿಸಿವೆ. ವರವರ ರಾವ್ ಅವರಿಗೆ ಮಾತ್ರ ಅನಾರೋಗ್ಯದ ನೆಲೆಯಲ್ಲಿ ಅಲ್ಪಾವಧಿಯ ಜಾಮೀನು ಸಿಕ್ಕಿತ್ತು. ಈಗಾಗಲೇ ಉಲ್ಲೇಖಿಸಿದ ಇತರ ಹಲವು ಪ್ರಕರಣಗಳು ಸುಪ್ರೀಂ ಕೋರ್ಟಿನಲ್ಲಿ ಎರಡು-ಮೂರು ವರ್ಷಗಳಿಂದ ಬಾಕಿಯಿವೆ. ಈ ಪ್ರಮುಖ ವಿಷಯಗಳನ್ನು ವಿಚಾರಣೆ ನಡೆಸುವ ಯಾವುದೇ ತುರ್ತನ್ನು ನ್ಯಾಯಾಲಯ ತೋರುತ್ತಿಲ್ಲ. ಹಿಂದಿನ ಇಬ್ಬರು ಮುಖ್ಯ ನ್ಯಾಯಾಧೀಶರುಗಳ ಅಡಿಯಲ್ಲಿ ನ್ಯಾಯಾಂಗದ ಹೊಣೆಯಿಂದ ನುಣುಚಿ ಕೊಳ್ಳುವ ಪ್ರವೃತ್ತಿ ಎದ್ದು ಕಾಣುವಂತೆ ದಾಖಲಾಗಿದೆ.

ಸಂವಿಧಾನದ ಸಂರಕ್ಷಕರಾಗಿ

ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಹೊಣೆ ಕೇವಲ ಉನ್ನತ ನ್ಯಾಯಾಂಗ ಸಂಸ್ಥೆಗೆ ಸೇರಿದ್ದು ಎಂದೇನೂ ಅಲ್ಲ. ಅಂತಿಮವಾಗಿ ಅದು ಜನರನ್ನು ರಾಜಕೀಯವಾಗಿ ಅಣಿಗೊಳಿಸುವುದರ ಮೇಲೆ ಅವಲಂಬಿಸಿದೆ. ಆದರೆ ಶಾಸಕಾಂಗವನ್ನೇ ಕಾರ್ಯಾಂಗಕ್ಕೆ ಶರಣಾಗುವಂತೆ ತಳ್ಳುತ್ತಿರುವ ಹಾಗೂ ಅರ್ಥಪೂರ್ಣ ಸಂವಾದವನ್ನು ಹೊಸಕಿ ಹಾಕುವಂಥ ಸನ್ನಿವೇಶದಲ್ಲಿ ಸಂವಿಧಾನದ ಸಂರಕ್ಷಕನಾಗಿ ಹಾಗೂ ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಕನಾಗಿ ಸರ್ವೋಚ್ಚ ನ್ಯಾಯಾಲಯದ ಪಾತ್ರ ಅತ್ಯಂತ ಮಹತ್ವದ್ದಾಗುತ್ತದೆ.

ಜನರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂವೇದನಾಶೀಲವಾಗಿರುವ ಕೆಲವು ಲಕ್ಷಣಗಳು ಕಂಡುಬಂದಿವೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ವಲಸೆ ಕಾರ್ಮಿಕರ ವಿಚಾರದಲ್ಲಿ, ಪತ್ರಕರ್ತರು ಮತ್ತು ಮಾಧ್ಯಮದ ವಿರುದ್ಧ ದೇಶದ್ರೋಹದ ಕೇಸ್ ವಜಾ ಮಾಡುವಲ್ಲಿ ಹಾಗೂ ದಮನಕಾರೀ ಕ್ರಮ ಕೈಗೊಳ್ಳುವುದನ್ನು ತಡೆಯುವಲ್ಲಿ ಇದನ್ನು ಕಾಣುತ್ತಿದ್ದೇವೆ. ಆದರೂ ನ್ಯಾಯಾಂಗದ ಸ್ವತಂತ್ರ ಪಾತ್ರ ಹಾಗೂ ಕಾರ್ಯಾಂಗಕ್ಕೆ ಅದರ ಮೌನಸಮ್ಮತಿಯ ಬಗ್ಗೆ ಇನ್ನೂ ಕಳವಳ ಉಳಿದಿದೆ.

ಹೈ ಕೋರ್ಟುಗಳು ಮತ್ತು ನ್ಯಾಯವಾದಿ ವರ್ಗದಿಂದ ಒಂಬತ್ತು ಹೆಸರುಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಈಚೆಗೆ ಶಿಫಾರಸು ಮಾಡಿತ್ತು. ಈಗ ಈ ಒಂಬತ್ತು ವ್ಯಕ್ತಿಗಳನ್ನು ನ್ಯಾಯಾಧೀಶರುಗಳಾಗಿ ನೇಮಿಸಲಾಗಿದೆ. ಆದರೆ, ಕೊಲಿಜಿಯಂ ಶಿಫಾರಸು ಮಾಡಿದ್ದ ಒಂಬತ್ತು ಹೆಸರುಗಳಲ್ಲಿ ತ್ರಿಪುರಾ ಹೈ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಖಿಲ್ ಖುರೇಷಿ ಅವರ ಹೆಸರನ್ನು ಕೈ ಬಿಟ್ಟಿದ್ದು ಎದ್ದು ಕಾಣುವ ಅಂಶವಾಗಿದೆ. ಹೈಕೋರ್ಟ್  ನ್ಯಾಯಾಧೀಶರುಗಳ ಪೈಕಿ ಖುರೇಷಿಯವರು ಸೇವಾಹಿರಿತನದಲ್ಲಿ ಎರಡನೇ ಸ್ಥಾನದಲ್ಲಿದ್ದರು. ಈ ಹಿಂದೆಯೂ ಖುರೇಷಿಯವರನ್ನು ಮಧ್ಯಪ್ರದೇಶ ಹೈಕೋರ್ಟಿನ  ಮುಖ್ಯ ನ್ಯಾಯಾಧೀಶರಾಗಿ ಮಾಡಬೇಕೆಂಬ ಸರ್ವೋನ್ನತ ನ್ಯಾಯಾಲಯದ ಶಿಫಾರಸನ್ನು ಸರ್ಕಾರ ಒಪ್ಪಿರಲಿಲ್ಲ. ಅದರ ಬದಲು ಅತಿ ಸಣ್ಣ ಹೈಕೋರ್ಟುಗಳಲ್ಲಿ ಒಂದಾದ ತ್ರಿಪುರಾ ಹೈಕೋರ್ಟಿಗೆ ಮುಖ್ಯ ನ್ಯಾಯಾಧೀಶರಾಗಿ ನೇಮಿಸಿತ್ತು. ಅವರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೊಳಿಸಬೇಕೆಂಬ ವಿಚಾರದಲ್ಲಿ ಕೊಲಿಜಿಯಂ ಶರಣಾಗಿದೆ. ಅವರ ಹೆಸರನ್ನು ಶಿಫಾರಸು ಮಾಡದಿರುವುದೇ ಸೂಕ್ತ ಎಂದು ಅದು ಯೋಚಿಸಿದಂತಿದೆ.

ಅಧಿಕಾರಸ್ಥರ ಎದುರು ಸತ್ಯವನ್ನು ನುಡಿಯುವ ಪ್ರಜೆಗಳ ಹಕ್ಕು ಮತ್ತು ಕರ್ತವ್ಯವನ್ನು ಪ್ರತಿಪಾದಿಸುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಸಂರಚನೆಯಲ್ಲಿ ಪ್ರಬಲವಾದ ಸಾರ್ವಜನಿಕ ಸಂಸ್ಥೆಗಳು, ಅಧಿಕಾರದಲ್ಲಿರುವವರ ಪ್ರಜಾತಾಂತ್ರಿಕ ಜವಾಬುದಾರಿಕೆ, ಅಧಿಕಾರಸ್ಥರ ಒತ್ತಡಗಳಿಗೆ ಸಿಲುಕದ ಸ್ವತಂತ್ರ ನ್ಯಾಯಾಂಗ ಇದ್ದೇ ಇದೆ.

‘ಸತ್ಯ’ವನ್ನು ಆಧರಿಸಿರುವ ಈ ಗಾಢವಾದ ಪ್ರಜಾಸತ್ತಾತ್ಮಕ ಕಣ್ಣೋಟವು ತದ್ವಿರುದ್ಧವಾದ ಪ್ರವೃತ್ತಿಗಳಿಗೆ ಎದುರಾಗಿ ನಿಲ್ಲುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಇಡೀ ಉನ್ನತ ನ್ಯಾಯಾಂಗವನ್ನು ವ್ಯಾಪಿಸುತ್ತದೆ ಎಂದು ಆಶಿಸೋಣ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *