“ಸರಕಾರದ ಅಸಮರ್ಪಕ ಬೆಂಬಲದ ಹೊರತಾಗಿಯೂ ಅದ್ಭುತ ಪ್ರದರ್ಶನ”
ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ಭಾರತೀಯ ತಂಡ 19 ಪದಕಗಳನ್ನು ಗೆದ್ದುಕೊಂಡು ಅಭೂತಪೂರ್ವ ಪ್ರದರ್ಶನ ನೀಡಿದೆ, ದೇಶಕ್ಕೆ ಕೀರ್ತಿ ತಂದಿದೆ. ಅವರು ಮುಕ್ತ ಪ್ರಶಂಸೆಗೆ, ಮಾನ್ಯತೆಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆ(ಎನ್.ಪಿ.ಆರ್.ಡಿ.) ಅವರನ್ನು ಅಭಿನಂದಿಸಿದೆ.
ವಿಕಲಾಂಗರ ಕ್ರೀಡಾಕ್ಷೇತ್ರದಲ್ಲಿನ ಶೋಚನೀಯ ಸ್ಥಿತಿಯನ್ನು ನೋಡಿದಾಗ ನಮ್ಮ ಈ ಕ್ರೀಡಾಪಟುಗಳ ಯಶಸ್ಸು ಮತ್ತಷ್ಟು ಮಹತ್ವ ಪಡೆಯುತ್ತದೆ ಎಂದಿರುವ ಎನ್.ಪಿ.ಆರ್.ಡಿ. ಇವರಲ್ಲಿ ಹೆಚ್ಚಿನವರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು, ಎಲ್ಲ ರೀತಿಯ ಅಡ್ಡಿ-ಆತಂಕಗಳ ವಿರುದ್ಧ, ನಿಂದೆ-ತಾರತಮ್ಯಗಳ ವಿರುದ್ಧ ಹೋರಾಟ ನಡೆಸಬೇಕಾಗಿ ಬಂದಿದೆ ಎಂಬ ಸಂಗತಿಯನ್ನೂ ಅವರ ಸಾಧನೆಗಳನ್ನು ಮೆಚ್ಚಿಕೊಳ್ಳುವಾಗ ಗಮನಿಸಬೇಕಾಗುತ್ತದೆ ಎಂದಿದೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್ – ಭಾರತಕ್ಕೆ 17 ಪದಕಗಳು: 4 ಚಿನ್ನ 7 ಬೆಳ್ಳಿ 6 ಕಂಚು
ಅವರು ಕಳಪೆ ಮಟ್ಟದ ಕ್ರೀಡಾ ಮೂಲರಚನೆಗಳು, ವಿಕಲಾಂಗರ ಕ್ರೀಡಾಚಟುವಟಿಕೆಗಳಿಗೆ ಸಾರ್ವಜನಿಕ ಹಣ ನೀಡಿಕೆಯಲ್ಲಿ ಅತ್ಯಂತ ಅಸಮರ್ಪಕತೆ ಮತ್ತು ಈ ಕ್ರೀಡಾ ಸಂಸ್ಥೆಗಳ ಮೇಲೆ ರಾಜಕೀಯ-ಅಧಿಕಾರಶಾಹಿಯ ಮಾರಕ ಹಿಡಿತದ ವಿರುದ್ಧ ಸಮರವನ್ನೇ ನಡೆಸಬೇಕಾಗಿ ಬಂದಿತ್ತು. ಇದು ಸಾಲದೆಂಬಂತೆ ಕಾರ್ಪೊರೇಟ್ ವಲಯದಿಂದ ಮಾತ್ರವೇ ಅಲ್ಲ, ಸರಕಾರ ಮತ್ತು ಕ್ರೀಡಾ ಸಂಸ್ಥೆಗಳಿಂದಲೂ ಅತ್ಯಂತ ಅಸರ್ಪಕ ಬೆಂಬಲದ ಪರಿಣಾಮಗಳನ್ನೂ ಅವರು ಎದುರಿಸಬೇಕಾಗಿದೆ ಎಂದು ಎನ್.ಪಿ.ಆರ್.ಡಿ. ನೆನಪಿಸಿದೆ.
ದುರದೃಷ್ಟವಶಾತ್, ತಪ್ಪು ವರ್ಗೀಕರಣದಿಂದಾಗಿ ಒಬ್ಬ ಪದಕ ವಿಜೇತರನ್ನು ಅನರ್ಹಗೊಳಿಸಲಾಗಿದೆ. ಇಂತಹ ಅಸಡ್ಡೆ ಅಕ್ಷಮ್ಯ. ಹಿಂದೊಂದು ಸಂದರ್ಭದಲ್ಲಿ ಒಬ್ಬ ಮಹಿಳಾ ಕ್ರೀಡಾಪಟು ಆಗಸ್ಟ್ 2021ರಲ್ಲಿ ಪೋಲಂಡಿನ ಲುಬ್ಲಿನ್ನಲ್ಲಿ 4ನೇ ವಿಶ್ವ ಕಿವುಡರ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಮದ್ರಾಸ್ ಹೈಕೋರ್ಟಿನಿಂದ ಆದೇಶವನ್ನು ಪಡೆಯಬೇಕಾಗಿ ಬಂದಿತ್ತು.
ಇದನ್ನು ಓದಿ: ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
ಭಾರತದ ಪ್ಯಾರಾಲಿಂಪಿಕ್ ಸಮಿತಿ ಹಲವು ಕಾರಣಗಳಿಗಾಗಿ ಅಂತರ್ರಾಷ್ಟ್ರೀಯ ಸಂಸ್ಥೆಯಿಂದ ಅಮಾನತು ಕ್ರಮವನ್ನು ಎದುರಿಸಬೇಕಾಗಿ ಬಂದಿತ್ತು ಎಂಬುದನ್ನೂ ಎನ್.ಪಿ.ಆರ್.ಡಿ. ನೆನಪಿಸಿದೆ. ಟೋಕಿಯೋ ಕ್ರೀಡಾ ಸಮಾವೇಶದ ಮೊದಲು ನಡೆಯಬೇಕಾದ ರಾಷ್ಟ್ರೀಯ ಕ್ರೀಡಾ ಸಮಾವೇಶದ ನಿರ್ವಹಣೆಯೂ ಆರೋಪಗ್ರಸ್ತವಾಗಿತ್ತು. ಇದರಿಂದಾಗಿ ಕೊನೆಗಳಿಗೆಯಲ್ಲಿ ಅದು ಚೆನ್ನೈ ಬದಲು ಬೆಂಗಳೂರಿನಲ್ಲಿ ನಡೆಯಿತು.
ಈ ಕ್ರೀಡಾಸಂಸ್ಥೆಗಳ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ಅವನ್ನು ಆಮೂಲಾಗ್ರವಾಗಿ ಸರಿಪಡಿಸಬೇಕಾಗಿದೆ, ಅವುಗಳ ನಿರ್ವಹಣೆಯಲ್ಲಿ ಪ್ರಜಾಪ್ರಭುತ್ವ ನಡವಳಿಕೆಗಳನ್ನು ತರಬೇಕಾಗಿದೆ, ರಾಜಕೀಯ ಕೃಪಾಪೋಷಣೆಯಿಂದ ಅವನ್ನು ಮುಕ್ತಗೊಳಿಸಬೇಕಾಗಿದೆ ಎಂದಿರುವ ಎನ್.ಪಿ.ಆರ್.ಡಿ., ದೇಶದಲ್ಲಿ ವಿಕಲಾಂಗರ ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಸಮಗ್ರ ಮಾರ್ಗನಿರ್ದೇಶನಗಳನ್ನು ಮತ್ತು ಜಾರಿ ಆದೇಶಗಳನ್ನು ವಿಶ್ವಸಂಸ್ಥೆಯ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಅಧಿನಿರ್ಣಯ(ಯು.ಎನ್.ಸಿ.ಆರ್.ಪಿ.ಡಿ.) ಮತ್ತು ವಿಕಲಾಂಗತೆಯ ವ್ಯಕ್ತಿಗಳ ಹಕ್ಕುಗಳ ಕಾಯ್ದೆಗೆ ಅನುಗುಣವಾಗಿ ರೂಪಿಸಿ ಕೊಡುವ ಅಗತ್ಯವಿದೆ, ಇದಕ್ಕೆ ಬೆಂಬಲವಾಗಿ ಇತರ ಕ್ರೀಡೆಗಳಿಗೆ ಸಮಾನವಾಗಿ ಹಣಕಾಸು ಒದಗಿಸಬೇಕಾಗಿದೆ ಎಂದು ಎನ್.ಪಿ.ಆರ್.ಡಿ. ಆಗ್ರಹಿಸಿದೆ.