ನವದೆಹಲಿ: ಸಾಮಾಜಿಕ ಮಾಧ್ಯಮಗಳು ಹಾಗೂ ವೆಬ್ಪೋರ್ಟಲ್ಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಕೆಲಸಗಳು ವ್ಯಾಪಕವಾಗಿ ಮಾಡಲಾಗುತ್ತಿದೆ. ಪ್ರತಿಷ್ಠಿತ ಕೆಲವು ಮಾಧ್ಯಮಗಳ ಚಾನೆಲ್ಗಳಲ್ಲಿ ತಾವು ಬಿತ್ತರಿಸುವ ಸುದ್ದಿಗಳಿಗೂ ಕೋಮು ಬಣ್ಣ ಬಳಿಯುತ್ತಿವೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
“ಸುದ್ದಿಗಳನ್ನು ಒಂದು ಕೋಮುವಾದಿ ನಿಲುವಿನಲ್ಲಿ ವರದಿ ಮಾಡುವುದು ಕೂಡ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ. ಈ ರೀತಿ ಎಲ್ಲಾ ವಿಚಾರದಲ್ಲೂ ಕೋಮುವಾದ ಸೃಷ್ಟಿಸುವುದು ಭಾರತ ದೇಶಕ್ಕೆ ಕೆಟ್ಟ ಹೆಸರು ತರಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಜಮಿಯಾತ್ ಉಲೇಮಾ–ಐ–ಹಿಂದ್ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಇದನ್ನು ಓದಿ: ರದ್ದಾದ ಸೆಕ್ಷನ್ 66ಎ ಪ್ರಕರಣದಡಿ 1000 ಹೆಚ್ಚು ಮಂದಿ ಬಂಧನ: ಕೇಂದ್ರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಆರಂಭದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ಕೂಟ ಸೇರಿದ್ದ ವಿಷಯ ಹಾಗೂ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು.
ಇದೇ ಸಂದರ್ಭದಲ್ಲಿ ʻʻವೆಬ್ ಮಾಧ್ಯಮಗಳು ಯಾರು ಪ್ರಭಾವಶಾಲಿಗಳೋ ಅವರ ಪರವಾಗಿ ಇರುತ್ತಾರೆ. ನ್ಯಾಯಾಧೀಶರ ವಿರುದ್ದವೂ ಮನ ಬಂದಂತೆ ಬರೆಯುತ್ತಾರೆ. ಸಂಸ್ಥೆಗಳ ವಿರುದ್ದ ಮನಬಂದಂತೆ ಬರೆಯುತ್ತಾರೆ. ಯಾವುದೇ ಆಧಾರವಿಲ್ಲದಿದ್ದರೂ ತಮ್ಮ ಊಹೆಯನ್ನು ಬರೆಯುತ್ತಾರೆ. ವೆಬ್ ಪೋರ್ಟ್ಲ್ಗಳು ಪ್ರಭಾವಶಾಲಿ ಮನುಷ್ಯರ ಬಗ್ಗೆ ಹೆಚ್ಚು ಚಿಂತೆ ಹೊಂದಿದೆಯೇ ಹೊರತು ನ್ಯಾಯಾಧೀಶರುಗಳು, ಸಂಸ್ಥೆಗಳು, ಜನ ಸಾಮಾನ್ಯರ ಬಗ್ಗೆ ಅಲ್ಲ. ಇದು ನಮ್ಮ ಅನುಭವದ ಮಾತು” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದ್ದಾರೆ.
ಇದನ್ನು ಓದಿ: ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು
‘ಸಾಮಾಜಿಕ ಮಾಧ್ಯಮಗಳಲ್ಲಿ ಕಪೋಲಕಲ್ಪಿತ ಸುಳ್ಳು ಸುದ್ದಿಗಳನ್ನು ತಿರುಚಿ ಬರೆಯಲಾಗುತ್ತಿದೆ. ಇಂಥ ಕೃತ್ಯಗಳಿಗೆ ಉತ್ತರದಾಯಿತ್ವವೇ ಇರುವುದಿಲ್ಲ. ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಆರಂಭಿಸಬಹುದಾಗಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಐಟಿ ಕಾಯ್ದೆಗೆ ಸಂಬಂಧಿಸಿ ವಿವಿಧ ಹೈಕೋರ್ಟ್ಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರವು ಮನವಿ ಮಾಡಿದೆ.