ಬೆಂಗಳೂರು : ಚಿಗುರುಗಳು ಮತ್ತು ಸಹಯಾನ ಕೆರೆಕೋಣದ ಸಹಯೋಗದಲ್ಲಿ ನಡೆಸಿಕೊಡುವ ಪ್ರೀತಿ ಪದಗಳಲಿ ವಿಠ್ಠಲ ಮೇಷ್ಟ್ರು ಕಾರ್ಯಕ್ರಮದ ಮೂರನೇ ತಿಂಗಳ ಮಾತುಕತೆ ಕಾರ್ಯಕ್ರಮ 2021ರ ಆಗಸ್ಟ್ 28ರಂದು ನಡೆಯಿತು. “ಕೃಷಿ ಕಾಯ್ದೆಗಳು ಮತ್ತು ದೆಹಲಿ ಹೋರಾಟದ ಅನುಭವಗಳು” ಎಂಬ ವಿಷಯದ ಕುರಿತು ಮಾತುಕತೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ, “ಕೃಷಿ ಕಾಯ್ದೆಗಳು ಮತ್ತು ಕೃಷಿಯ ಸಮಸ್ಯೆಗಳ ಕುರಿತು ಮಾತನಾಡುತ್ತ ಈ ದೇಶದಲ್ಲಿ ಸಮಸ್ಯೆ ಇರುವುದು ನೆಲದ ಹಂಚುವಿಕೆಯಲ್ಲಿ, ಸರ್ಕಾರಗಳು ಈ ಮಸೂದೆಗಳ ಮೂಲಕ ಭೂಮಿಯನ್ನು ಬಡವರಿಗೆ ಹಂಚುವ ಬದಲಾಗಿ ವ್ಯಾಪಾರೀಕರಣಕ್ಕೆ ಅನುವಾಗುವಂತೆ ಶ್ರೀಮಂತರಿಗೆ ನೀಡಲು ಹವಣಿಸುತ್ತಿವೆ” ಇದೇ ರೀತಿ ಮುಂದುವರೆದರೆ ಭಾರತದ ಬೆಳವಣಿಗೆ ಸಮಾಜಮುಖಿಯಾಗಿ ಚಲಿಸುವುದರ ಬದಲು ಬಂಡವಾಳಶಾಹಿಗಳ ಪರವಾಗಿ ಚಲಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷಿ ಕಾಯ್ದೆಗಳು ಉದ್ಧೇಶಪೂರ್ವಕವಾಗಿ ಜನಾಭಿಪ್ರಾಯ ಪಡೆಯದೇ ಅಪ್ರಜಾಸತ್ತಾತ್ಮಕವಾಗಿ ರೂಪಿಸಿ ಪ್ರಜೆಗಳನ್ನು ಬಂಡವಾಳಶಾಹಿಗಳಿಗೆ ಮಾರುವ ಪ್ರಕ್ರಿಯೆಯಾಗಿದೆ ಎಂದರು. ಕೃಷಿ ಕಾಯ್ದೆಗಳಿಂದ ಮುಂದೆ ಉಂಟಾಗಬಹುದಾದ ಸಮಸ್ಯೆಗಳನ್ನು ತಿಳಿಸುತ್ತ ಖಾಸಗಿಯವರು ತಮಗೆ ಬೇಕಾದಂತೆ ಬೆಳೆಗಳನ್ನು ಬೆಳೆಸಲು ಒಪ್ಪಂದ ಮಾಡಿಕೊಳ್ಳುವ ಮೂಲಕ ಭೂಮಿಯನ್ನು ಬಂಜರು ಮಾಡಲಾಗುತ್ತದೆ, ಆರಂಭದಲ್ಲಿ ಇದು ಲಾಭದಾಯಕವಾಗಿದೆ ಅನ್ನಿಸಿದರೂ ಸಹ ಮುಂದಿನ ದಿನಗಳಲ್ಲಿ ಭೂಮಿಯ ಹಕ್ಕನ್ನು ರೈತ ಕಳೆದುಕೊಳ್ಳುತ್ತಾನೆ ಮತ್ತು ಈ ಕಾಯ್ದೆಗಳು ನ್ಯಾಯಾಂಗವನ್ನು ರೈತರಿಂದ ದೂರಗೊಳಿಸುವ ಮೂಲಕ ರೈತರಿಗೆ ಅನ್ಯಾಯವಾದರೆ ನ್ಯಾಯ ದೊರೆಯದಂತೆ ಮಾಡುತ್ತವೆ ಎಂದರು. ರೈತರ ಈ ಹೋರಾಟವನ್ನು ಹಲವಾರು ಸುಳ್ಳುಗಳ ಮೂಲಕ ಹತ್ತಿಕ್ಕುವ ಹುನ್ನಾರ ನಡೆಯಿತು. ಆದರೂ ಸಹ ರೈತರು ಸಶಕ್ತವಾಗಿ ಹೋರಾಟ ಮುಂದುವರಿಸಿದ್ದಲ್ಲದೇ ಸಮರ್ಥವಾಗಿ ಪರ್ಯಾಯ ಮಾದ್ಯಮವನ್ನು ಕಟ್ಟಿಕೊಳ್ಳುವ ಮೂಲಕ ಜಗತ್ತಿನ ಗಮನ ಸೆಳೆಯಲು ಯಶಸ್ವಿಯಾದರು ಎಂದು ಹೋರಾಟದ ಚಿತ್ರಣವನ್ನು ಕಟ್ಟಿಕೊಟ್ಟರು.
ಪಂಚವಾರ್ಷಿಕ ಯೋಜನೆಯ ಮೂಲಕ ಆರೋಗ್ಯ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವನ್ನು ಕಟ್ಟಿದ್ದ ನೆಹರುರವರ ಭಾವಚಿತ್ರವನ್ನು ತೆಗೆದು ಸಾವರ್ಕರ್ ಭಾವಚಿತ್ರ ಹಾಕಿರುವುದಕ್ಕೆ ಬಿಳಿಮಲೆ ಆಕ್ಷೇಪ ವ್ಯಕ್ತಪಡಿಸಿದರು. ಹೊಸ ತಲೆಮಾರಿಗೆ ಸುಳ್ಳುಗಳನ್ನು ಹಂಚಿ ಅವರನ್ನು ಅಂದಕಾರದಲ್ಲಿಡುತ್ತಿರುವ ಸಂದರ್ಭದಲ್ಲಿ ವಿಟ್ಠಲ ಭಂಡಾರಿಯರವರು ಇಂಥಹ ದೌರ್ಬಲ್ಯಗಳನ್ನು ಮೀರಿ ಜನಪರ ಚಳುವಳಿಗಳನ್ನು ಕಟ್ಟಿದ್ದು ನಮ್ಮೆಲ್ಲರಿಗೂ ಮಾದರಿ ಎಂದರು.
ಇದನ್ನೂ ಓದಿ : ‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹೆಚ್. ಆರ್ ನವೀನ್ ಕುಮಾರ್‌ರವರು ಮಾತನಾಡಿ, ವಿಠ್ಠಲ ಭಂಡಾರಿಯವರ ಹಸಿವಿನ ಹಾಡುಪಾಡು ಕೃತಿಯನ್ನು ಓದಿದರೆ ಕರ್ನಾಟಕದ ಒಂದು ಭಾಗದ ಹೋರಾಟದ ಚಿತ್ರಣ ಸಿಗುತ್ತದೆ ಎಂದರು. ಮುಂದುವರೆದು ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ನೀಡಲು ಬೇಕಾದ ಪೂರಕ ಕಾನೂನು ರಚಿಸುವ ಅಗತ್ಯತೆಯನ್ನು ವಿವರಿಸಿದರು. ಇನ್ನುಮುಂದೆ ಏ.ಪಿ.ಎಂ.ಸಿ ಗಳು ಇಲ್ಲ ಎನ್ನುವುದಾದರೆ, ಸರ್ಕಾರ ರೈತರ ಬೆಳೆಗಳನ್ನು ಖರೀದಿಸುವುದಿಲ್ಲ ಎನ್ನುವುದಾದರೆ ಮುಂದೆ ಪಡಿತರ ವ್ಯವಸ್ಥೆ ಕುಸಿಯುವುದರ ಮೂಲಕ ರೈತರಿಗಷ್ಟೇ ಅಲ್ಲದೇ ಇಡೀ ದೇಶದ ಆಹಾರ ಭದ್ರತೆಗೆ ಈ ಕಾಯ್ದೆಗಳು ಮಾರಕವಾಗುವ ಲಕ್ಷಣವಿದೆ ಎನ್ನುವ ಅಭಿಪ್ರಾಯ ತಿಳಿಸಿದರು. ಜೊತೆಗೆ ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ಚಳುವಳಿಯು ಇಡೀ ದೇಶದ ಚಳುವಳಿಯಾಗಿಸುವ ಮುಲಕ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಸಾದ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು,
ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಸುರೇಶ್ ಎಸ್ ಗುತ್ತೀಕರ್‌ರವರು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಜನರ ಹಿತಾಸಕ್ತಿಯ ಸಲುವಾಗಿ ದೇಶದ ಉಪೇಕ್ಷಿತ ಬಹುಸಂಖ್ಯಾತರ ಹಿತಾಸಕ್ತಿಗಳು ಬಲಿಕೊಡುವಂತಾಗಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬಂಡವಾಳಶಾಹಿಗಳ ಹಿಡಿತಕ್ಕೆ ಸಿಕ್ಕರೆ ಕೃಷಿ ತನ್ನ ಸ್ಥಳೀಯತೆಯನ್ನು ಕಳೆದುಕೊಳ್ಳುತ್ತದೆ, ರೈತರಿಗೆ ಮತ್ತು ಗ್ರಾಹಕರ ನಡುವೆ ಅಗಾದ ಅಂತರ ಸೃಷ್ಟಿಯಾಗುತ್ತದೆ. ಇಂತಹ ಕಾಯ್ದೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನು ತರಬಹುದು, ರೈತರ ಬದುಕನ್ನು ವಿನಾಶಕ್ಕೆ ಕೊಂಡೊಯ್ಯಬಹುದು, ಸಂವಿದಾನದ ಆಶಯದಂತೆ ಕಾಯ್ದೆಗಳು ಸಂಪತ್ತು ಮತ್ತು ಸಂಪನ್ಮೂಲದ ಸಾದನಗಳು ಕೇಂದ್ರೀಕೃತವಾಗಬಾರದು ಎಂದರು. ಜೊತೆಗೆ ವಿಠ್ಠಲ ಭಂಡಾರಿಯವರೊಟ್ಟಿನ ತಮ್ಮ ನೆನಪುಗಳನ್ನು ಹಂಚಿಕೊಂಡು ಅವರು ಹಮ್ಮಿಕೊಂಡ ಕಾರ್ಯಕ್ರಮಗಳು ಮುಂದುವರೆಯುತ್ತಿರುವ ಕುರಿತು ಸಮಾದಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಎ ಆರ್ ವಾಸವಿಯವರು ಮಾತನಾಡಿ ಸ್ವಾಮಿನಾಥನ್ ವರದಿಯನ್ನು ಉಲ್ಲೇಖಿಸಿ ಸ್ವಾಮಿನಾಥನ್ ವರದಿಯಲ್ಲಿ ರೈತರ ರಚನಾತ್ಮಕ ಸಮಸ್ಯೆಗಳು, ಹೈಬ್ರೀಡೈಜೇಷನ್, ಗ್ರೀನ್ ರೆವಲ್ಯೂಷನ್‌ಗಳ ಬಗ್ಗೆ ಉಲ್ಲೇಖಿಸದಿರುವ ಕುರಿತು ತಿಳಿಸಿ ಈ ವಿಷಯದ ಕುರಿತಾಗಿ ಇನ್ನೊಮ್ಮೆ ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.
ಸಿಐಟಿಯು ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಿ. ಆರ್ ಶಾನುಭಾಗ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಿಠ್ಠಲ ಭಂಡಾರಿಯವರ ಜೊತೆ ಸೇರಿ ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯಾದ್ಯಂತ ನಡೆಸಿದ ರೈತ ಚಳುವಳಿಗಳ ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ಅಖಿಲ ಭಾರತ ಕಿಸಾನ್ ಸಭಾದ ಹೋರಾಟಗಳು ಹೇಗೆ ಉತ್ತರ ಕನ್ನಡದ ರೈತ ಚಳುವಳಿಗಳಿಗೆ ಸ್ಪೂರ್ತಿಯಾದವು ಮತ್ತು ಯಾವ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದವು ಎಂಬುದನ್ನು ತಿಳಿಸಿದರು. ಈ ರೈತ ಚಳುವಳಿಯು ದೇಶದ ಸ್ವಾವಲಂಬನೆಯ ಚಳುವಳಿಯಾಗುವ ಲಕ್ಷಣವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಾರಿ ಪೂರ್ಣಿಮಾ ಭಟ್ ರವರು ಮಾತನಾಡಿ ಕೃಷಿ ಕಾನೂನು ರೂಪಿಸಿದಾಗ ವಿಠ್ಠಲ ಭಂಡಾರಿಯವರು ವಿದ್ಯಾರ್ಥಿಗಳೊಟ್ಟಿಗೆ ಈ ಕಾನೂನುಗಳ ಕುರಿತಾಗಿ ಚರ್ಚಿಸಿ ಅರಿವು ಮೂಡಿಸಿದ್ದನ್ನು, ಜಿಲ್ಲೆಯ ರೈತ ಹೋರಾಟಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಮಾಡಿದ್ದನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ಭಾಗದ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಡಾ. ಕೆ.ಆರ್ ದುರ್ಗಾದಾಸ್, ಕೆ.ಎಸ್ ವಿಮಲಾ, ಸುರೇಂದ್ರ ರಾವ್, ಮೀನಾಕ್ಷಿ ಸುಂದರಂ, ನಾಗರಾಜ್ ಹುಡೇದ್, ಶಾಂತಾರಾಮ್ ನಾಯ್ಕ, ಹರೀಶ ನಾಯ್ಕ, ಡಿ ಸ್ಯಾಮ್ಸನ್, ನಾಗಪ್ಪ ನಾಯ್ಕ, ಯಮುನಾ ಗಾಂವ್ಕರ್, ಹಾಗೂ ವಿಠ್ಠಲ ಭಂಡಾರಿಯವರ ಅನೇಕ ವಿದ್ಯಾರ್ಥಿಗಳು, ಸಹವರ್ತಿಗಳು ಉಪಸ್ತಿತರಿದ್ದರು.
ವರದಿ : ಹರೀಶ್ ಐಗೋಡ್