ಗೋಡೆಗಳ ಒಡೆಯೋಣ… ಕಲಿಕೆಯ ಹಾದಿ ವಿಶಾಲ-ಅನಂತ ಕಾಣ….

ನಾಲ್ಕು ತರದ ಬೀಜವೋ, ಕಡ್ಡಿಯೋ, ಬೇರೋ ನೆಟ್ಟು ಮಕ್ಕಳು-ಮೊಳಕೆ, ಚಿಗುರು, ಹೂವು-ದುಂಬಿ, ಕಾಯಿ-ಹಣ್ಣು ಕಂಡರೆ ಶಾಲೆಯ ಅಂಗಳದಲ್ಲಿ… ಕಲಿಕೆಯಾಗಲಾರದೇ ??
ಚಿತ್ರ ಮೂಲ : ‘ The better India’

  • ಈಗ ಶಾಲಾ ಕಲಿಕೆಯನ್ನು ತರಗತಿ ಕೋಣೆಯ ಆಚೆ ಕೊಂಡೊಯ್ಯುವ ಅನಿವಾರ್ಯತೆ ಉಂಟಾಗಿದೆ.
  • ಮಗುವು ಸ್ವತಃ ಕಲಿಯ ಬಲ್ಲದು ಎಂಬ ಮೂಲ ತತ್ವದ ಆಧಾರದಲ್ಲಿಯೇ ಮಗುವಿಗೆ ಕಲಿಕೆಯ ಅನುಭವಗಳನ್ನು ಒದಗಿಸಲು ಚಿಂತಿಸಬೇಕಿದೆ.

ಉದಯ ಗಾಂವಕಾರ

ಮನುಷ್ಯನ ಅಗತ್ಯಗಳನ್ನು ಯಂತ್ರಗಳು ಪೂರೈಸುವ ಹೊಸಬಗೆಯ ಕ್ರಮಗಳು ಹುಟ್ಟಿಕೊಂಡ ಬೆನ್ನಲ್ಲೇ ಕಾರ್ಖಾನೆ ಸಂಸ್ಕೃತಿಗೆ ಕೆಲಸಗಾರರನ್ನು ಸಜ್ಜುಗೊಳಿಸುವ ತುರ್ತು ಉಂಟಾಯಿತು. ಇದರಿಂದಾಗಿ ಕೋಣೆಯೊಂದರಲ್ಲಿ ಕೂಡಿಹಾಕಿ ʻಪಾಠʼ ಮಾಡುವ ಹೊಸ ತರಗತಿಗಳು ಹುಟ್ಟಿಕೊಂಡವು. ಹೀಗೆ, ಈವತ್ತಿನ ಫ್ಯಾಕ್ಟರಿ ಮಾದರಿಯ ತರಗತಿಗಳು ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವ ಕಾರಣಕ್ಕಾಗಿ ಹುಟ್ಟಿಕೊಂಡವು.

‘ಕೋವಿಡ್-19’ ಜಗತ್ತನ್ನು ತಲ್ಲಣಗೊಳಿಸಿದ ಈ ಹೊತ್ತಲ್ಲಿ ಶಾಲಾ ಪರಿಸರವನ್ನು ಮರುಕಟ್ಟುವ ಅಗತ್ಯ ಎದುರಾಗಿದೆ. ಒಮ್ಮೆಗೆ ಹೊಸ ಬಗೆಯ ಕಲಿಕೆಯ ಸಾಧ್ಯತೆಗಳು ಹುಟ್ಟಿಕೊಂಡು ತಕ್ಷಣವೇ ಹಳೆಯ ವ್ಯವಸ್ಥೆಯನ್ನು ಬದಲಿಸಲಾರವು. ಆದುದರಿಂದಲೇ ‘ಅನ್‌ಲೈನ್’ ತರಗತಿಗಳು ಸುಲಭದ ಪರ್ಯಾಯವೆನಿಸಿದವು. ಇದು ಹಳ್ಳಿಯ ಮಕ್ಕಳನ್ನು ತಲುಪಲಿಲ್ಲ. ಪಟ್ಟಣದ ಮಕ್ಕಳೂ ಕಿವಿಗೊಡಲಿಲ್ಲ. ಏಕೆಂದರೆ, ನೆಟ್‌ವರ್ಕ್, ಡೇಟಾಪ್ಯಾಕ್, ಸ್ಮಾರ್ಟ್ ಫೋನ್ ಇಲ್ಲದಿರುವುದಷ್ಟೇ ‘ಆನ್‌ಲೈನ್’ ಕಲಿಕೆಯ ಸಮಸ್ಯೆ ಆಗಿರಲಿಲ್ಲ. ಕಲಿಕೆಯೆಂದರೆ ಮಾಹಿತಿ ವರ್ಗಾವಣೆಯಷ್ಟೇ ಅಲ್ಲ, ಕುತೂಹಲ, ಪ್ರಶ್ನೆಗಳು, ತಾರ್ಕಿಕ ಚಿಂತನೆಗಳಿಂದ ಯೋಚನೆಗಳಲ್ಲಾಗುವ ಕ್ವಾಂಟಮ್ ಜಿಗಿತಕ್ಕೆ ಬಹು ಆಯಾಮದ ಒಡನಾಟ ಅವಶ್ಯಕ.

ಈಗ ಶಾಲಾ ಕಲಿಕೆಯನ್ನು ತರಗತಿ ಕೋಣೆಯ ಆಚೆ ಕೊಂಡೊಯ್ಯುವ ಅನಿವಾರ್ಯತೆ ಉಂಟಾಗಿದೆ. ಉತ್ತಮ ತರಗತಿಯೆಂಬುದು ಗಡಿರೇಖೆಗಳನ್ನು ಮೀರಿ ಕಲಿಕೆಯನ್ನು ಉತ್ತರೋತ್ತರವಾಗಿಸುವ ಅವಕಾಶ ಎಂಬುದನ್ನು ಶಾಲಾ ಕಲಿಕೆಯ ಕುರಿತಾದ 2005 ರ ‘ಪಠ್ಯಕ್ರಮ ನೆಲೆಗಟ್ಟು’ ಚರ್ಚಿಸುತ್ತದೆ. ಮಗುವು ಸ್ವತಃ ಕಲಿಯಬಲ್ಲದು ಎಂಬ ಮೂಲತತ್ವದ ಆಧಾರದಲ್ಲಿಯೇ ಮಗುವಿಗೆ ಕಲಿಕೆಯ ಅನುಭವಗಳನ್ನು ಒದಗಿಸಲು ಚಿಂತಿಸಬೇಕಿದೆ. ಆಲಿಸುವಿಕೆ, ಮಾತನಾಡುವುದು, ಓದು, ಬರೆಹದಂತಹ ಮೂಲ ಭಾಷಾಕೌಶಲಗಳು, ಗಣಿತದ ಮೂಲಕ್ರಿಯೆಗಳು, ವೀಕ್ಷಣೆ, ವಿಶ್ಲೇಷಣೆಯಂತಹ ಯೋಚನಾ ಕೌಶಲಗಳ ಸಹಾಯದಿಂದ ಮಗು ಸ್ವತಃ ಜ್ಞಾನಸೃಷ್ಟಿಯಲ್ಲಿ ತೊಡಗಬಲ್ಲದು. ಕಲಿಯುವುದನ್ನು ಕಲಿಯುವ ದಾರಿಗಳನ್ನು ಮಕ್ಕಳೆದುರು ತೆರೆದಿಡುವುದು ನಮ್ಮ ಕೆಲಸ. ಸ್ವಕಲಿಕೆಗೆ ಸಹಾಯವಾಗುವ ಮೂಲಕೌಶಲಗಳನ್ನು ಕಲಿಯಲು ಮಗುವಿಗೆ ದೊಡ್ಡವರ ಸಹಾಯವೂ ಬೇಕು. ಸ್ವಕಲಿಕೆಗೆ ಸಂಪರ್ಕ ತಂತ್ರಜ್ಞಾನದ ಸಹಾಯವೂ ಬೇಕು. ಆದರೆ, ತಂತ್ರಜ್ಞಾನವನ್ನೇ ಅವಲಂಬಿಸಿಕೊಳ್ಳಲು ಸಾಧ್ಯವಿಲ್ಲ. ಪಠ್ಯಪುಸ್ತಕಗಳನ್ನು ಸ್ವಕಲಿಕೆಯ ಸಾಮಗ್ರಿಯಾಗಿ ನಾವಿನ್ನೂ ರೂಪಿಸಿಲ್ಲದ ಕಾರಣ ಸ್ವತಃ ಕಲಿಯಲು ಸಹಾಯ ಮಾಡುವ ಸಾಮಗ್ರಿಗಳನ್ನು ವಿನ್ಯಾಸಗೊಳಿಸಬೇಕಿದೆ. ಈಗಾಗಲೆ, ಅನೇಕ ಶಿಕ್ಷಕರು ಉತ್ತಮವಾದ ಸ್ವಕಲಿಕೆಯ ಸಾಮಗ್ರಿಗಳನ್ನು ರೂಪಿಸಿದ್ದಾರೆ. ಇವೆಲ್ಲವೂ ಆಯಾ ತರಗತಿ, ವಿಷಯ, ಅಧ್ಯಾಯವಾಗಿ ವಿಘಟಿಸಲ್ಪಟ್ಟಿರುವುದರಿಂದ ಅಂತಹ ಸಾಮಗ್ರಿಗಳಿಗೆ ಅನೇಕ ಮಿತಿಗಳಿವೆ.  ಬೇರೆ ಬೇರೆ ವಯೋಮಾನದ ಮಕ್ಕಳೊಂದಿಗೂ ಒಡನಾಡುವ ಅವಕಾಶವಿರುವಂತೆ ಮತ್ತು ಜ್ಞಾನವು ಸೀಮಾತೀತವಾಗಿರುತ್ತದೆ ಎಂಬ ತಿಳಿವಿನಲ್ಲಿ ಕಲಿಕೆಯ ಸಾಮಗ್ರಿಗಳನ್ನು ರೂಪಿಸುವುದು ಅವಶ್ಯಕ.

ಇದು ಪರೀಕ್ಷೆಗಳನ್ನು ಪಳಗಿಸುವ ಸಮಯ

ಕಲಿಕೆಯ ಪರಿಸರವನ್ನು ವಿನ್ಯಾಸಗೊಳಿಸುವಲ್ಲಿ ಪರೀಕ್ಷೆಗಳು ಬೀರುವ ಪ್ರಭಾವ ದೊಡ್ಡದು. ಪರೀಕ್ಷೆ ನಡೆದಿದೆಯೋ ಇಲ್ಲವೋ ಎಂಬಲ್ಲಿಂದ ಕಲಿಕೆಯ ಅನುಭವಗಳನ್ನು ಒದಗಿಸಲಾಗಿದೆಯೋ ಇಲ್ಲವೋ ಎಂಬಲ್ಲಿಗೆ ಚರ್ಚೆಯ ಮಗ್ಗಲು ಬದಲಾಯಿಸಲು ಇದು ಸಕಾಲ. 1938ರ ಜಾಕಿರ್‌ಹುಸೇನ್ ಸಮಿತಿಯೇ ಪರೀಕ್ಷೆಗಳನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯ ಶಾಪವೆಂದು ಕರೆದಿತ್ತು. ಪರೀಕ್ಷೆಗಳಿಗೆ ಅವಶ್ಯಕತೆಗಿಂತ ಹೆಚ್ಚು ಬೆಲೆ ನೀಡುತ್ತಿರುವುದರಿಂದಾಗಿ ಇಡೀ ವ್ಯವಸ್ಥೆ ಕೊಳೆಯುತ್ತಿದೆ ಎಂದು ಸಮಿತಿ ಆರೋಪಿಸಿತ್ತು.

ನಮ್ಮದು ಪರೀಕ್ಷೆಗಳನ್ನು ತಲೆಯ ಮೇಲೆ ಹೊತ್ತುಕೊಂಡಿರುವ ಸಮಾಜ. ಎಲ್ಲರೂ ಉತ್ತೀರ್ಣರಾದರೆ, ಜಾಣರಿಗೆ ಅನ್ಯಾಯವೆಂತಲೂ, ಪರೀಕ್ಷೆಯಿಲ್ಲದೆ ಉತ್ತೀರ್ಣರಾಗುವುದು ಅನೈತಿಕವೆಂತಲೂ ಅನೇಕರು ಅಭಿಪ್ರಾಯಪಡುತ್ತಾರೆ. ಕಲಿಯುವುದು ಪರೀಕ್ಷೆಗಾಗಿ ಎಂಬ ಸಾಮಾನ್ಯ ನಂಬಿಕೆಯಿಂದ ಸೃಷ್ಟಿಯಾದ ಯೋಚನೆಗಳಿವು. ನಮಗೆ ಮೌಲ್ಯಮಾಪನ ಎಂದರೆ ಎಂದರೆ ಲಿಖಿತ ಪರೀಕ್ಷೆ ಮಾತ್ರ. ಅದರಲ್ಲೂ ಬೋರ್ಡ್ ಪರೀಕ್ಷೆಗಳು ಮಾತ್ರ ವಿಶ್ವಾಸಾರ್ಹ ಎಂಬುದು ಸಾಮಾನ್ಯ ಗ್ರಹಿಕೆ. ಇಂತಹ ಪರೀಕ್ಷೆಗಳನ್ನು ದಾಟುವ, ಪರೀಕ್ಷೆಗಳನ್ನು ಮಣಿಸುವ, ಪರೀಕ್ಷೆಗಳನ್ನು ಜಯಿಸಿ ವಿಜಯೋತ್ಸಾಹವನ್ನು ಸಂಭ್ರಮಿಸುವ ಪ್ರಯತ್ನದಲ್ಲಿ ಕಲಿಕೆಯು ಸತ್ವ ಕಳೆದುಕೊಳ್ಳುತ್ತಾ ಹೋಗಿ ಬಾಯಿಪಾಠವೇ ಸರ್ವಸ್ವವಾಗಿ ಬಿಟ್ಟಿದೆ.

ಪರೀಕ್ಷೆಗಳು ಉಂಟುಮಾಡಿರುವ ಹಾನಿಯ ಬಗ್ಗೆ ಚರ್ಚೆ ಶುರುವಾದದ್ದು ಇಂದು ನಿನ್ನೆಯಲ್ಲ. ಆದರೆ, ಪರೀಕ್ಷೆಗಳನ್ನು ಪಳಗಿಸಿ ಕಲಿಕೆಯ ದಾರಿಗೆ ಅವುಗಳನ್ನು ತರಲು ಸಾಧ್ಯವಾಗದಿರುವ ಹಿಂದೆ ಸಂಕೀರ್ಣವಾದ ಕಾರಣಗಳಿವೆ. ಜನಾಭಿಪ್ರಾಯವನ್ನು ರೂಪಿಸುವಲ್ಲಿ ಪ್ರಭಾವಿಯಾಗಿರುವ ಹಿತಾಸಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತವೆ. ಸಂಕಲನಾತ್ಮಕವಾದ ಬೋರ್ಡ್ ಪರೀಕ್ಷೆಗಳು ಅರ್ಥಪೂರ್ಣ ಕಲಿಕೆಯನ್ನು ಬೆಂಬಲಿಸುವುದಿಲ್ಲ. ಬದಲಾಗಿ, ಪುನರಾವರ್ತನೆ, ಬಾಯಿಪಾಠ, ಸರಣಿ ಪರೀಕ್ಷೆಗಳ ಒತ್ತಡ ಮತ್ತಿತ್ಯಾದಿ ಮಕ್ಕಳ ಕಲಿಕೆಯ ಸಮಯವನ್ನು ವಿವೇಚನೆಯಿಲ್ಲದೆ ಹಾಳು ಮಾಡುತ್ತವೆ. ಬೆನ್ನು ಬೀಳುವ ಪಾಲಕರ ನಿರಂತರ ಕಣ್ಗಾವಲಿನಲ್ಲಿರುವ ಬಾಯಿಪಾಠ ಮಾಡುವ ವಿದ್ಯಾರ್ಥಿಯೇ ಜಾಣ ವಿದ್ಯಾರ್ಥಿಯೆಂದು ತೀರ್ಮಾನಿಸುವ ವ್ಯವಸ್ಥೆಯನ್ನು ಈ ವರ್ಗ ಪೋಷಿಸುತ್ತದೆ. ಇಂದು ಶಾಲೆಗೆ ಪ್ರಯೋಗಾಲಯ ಬೇಕಿಲ್ಲ, ವಾಚನಾಲಯ ಬೇಕಿಲ್ಲ, ಪ್ರತಿಭಾ ಪ್ರದರ್ಶನಕ್ಕೆ ಸಭಾಂಗಣ ಬೇಕಿಲ್ಲ, ಆಟವಾಡಲು ಕ್ರೀಡಾಂಗಣ ಬೇಕಿಲ್ಲ, ಶಾಲೆಯಲ್ಲೊಂದು ಕೈತೋಟವೋ ದೃಕ್-ಶ್ರವಣ ಕೋಣೆಯೋ ಇರಬೇಕಿಲ್ಲ. ಶಾಲೆಗೂ ಕೋಚಿಂಗ್ ಸೆಂಟರಿಗೂ ವ್ಯತ್ಯಾಸವೇ ಇಲ್ಲದಂತಾಗಿರಲು ಈ ಬಗೆಯ ಪರೀಕ್ಷೆಗಳೇ ಕಾರಣ. ಈಗ ಬದಲಾದ ಪರಿಸ್ಥಿತಿಯಲ್ಲಿದ್ದೇವೆ. ಬಹುಶಃ ಮತ್ತೆಂದೂ ಹಿಂದಿನ ಸ್ಥಿತಿಗೆ ಸಂಪೂರ್ಣವಾಗಿ ಹಿಂದಿರುಗಲಾರೆವು ಅನಿಸುತ್ತಿದೆ. ಶಾಲೆಯಲ್ಲಿರಬೇಕಿದ್ದ ವಾಚಾನಾಲಯ, ಪ್ರಯೋಗಾಲಯ, ಕೈತೋಟ ಎಲ್ಲವೂ ಶಾಲೆಯ ಹೊರಗಿದೆ. ಇನ್ನೂ ಚೆನ್ನಾಗಿದೆ. ಇಲ್ಲಿ ಪುಸ್ತಕಗಳು ಮುದ್ರಿತ ರೂಪದಲ್ಲಷ್ಟೇ ಅಲ್ಲ, ಓದಬೇಕಾದ ಮನುಷ್ಯರ ರೂಪದಲ್ಲಿ, ಸಂಸ್ಥೆಗಳ ರೂಪದಲ್ಲಿಯೂ ಇವೆ. ಕೇಳಲೇಬೇಕಾದ ಕತೆಗಳಿವೆ. ಪ್ರಕೃತಿಯೇ ದೊಡ್ಡ ಮತ್ತು ಎಲ್ಲ ಸೌಕರ್ಯಗಳಿರುವ ಪ್ರಯೋಗಾಲಯವಾಗಿದೆ.

ಕುಡಿಕೆ-ಮಡಿಕೆ-ಹೂಕುಂಡಗಳೊಳಗೆ ಕಲೆ–ವಿಜ್ಞಾನ-ಸಮಾಜ-ಗಣಿತ
ಎಲ್ಲವೂ ಅಡಗಿದೆಯಲ್ಲವೇ…? ಚಿತ್ರ ಮೂಲ: ‘Rome for kidʼ

ಅನುಭವ ಕೇಂದ್ರಿತ ಕಲಿಕೆಯ ಮಾರ್ಗಗಳನ್ನು ಹುಡುಕಬೇಕೆಂದರೆ ಪರೀಕ್ಷಾ ಸುಧಾರಣೆಗಳು ಮೊದಲು ನಡೆಯಬೇಕು. ಕಲಿಕೆ ಮತ್ತು ಮೌಲ್ಯಮಾಪನಗಳೆರಡೂ ಬೇರೆಬೇರೆಯಾಗಿ ಸಾಗುವುದಿಲ್ಲವೆಂದು ‘ಎನ್.ಸಿ.ಎಫ್.-2005’ ಸ್ಪಷ್ಟಪಡಿಸುತ್ತದೆ.

ಸ್ವಕಲಿಕೆಯ ಮಾರ್ಗಗಳು ಅರ್ಥಪೂರ್ಣವಾದ ಪ್ರತಿಫಲನಗಳನ್ನು ನೀಡುತ್ತಾ ಹೋದಾಗ ಅದೇ ಮೌಲ್ಯಮಾಪನವಾಗುತ್ತದೆ.

ಶಿಕ್ಷಕ ಸಮುದಾಯದ ಪ್ರಯತ್ನಗಳು

ಕೋವಿಡೋತ್ತರ ಪರಿಸ್ಥಿತಿಗೆ ತಕ್ಕಂತೆ ಕಲಿಕೆಯ ಪರಿಸರವನ್ನು ಮರು ರೂಪಿಸುವ ಕಾರ್ಯದಲ್ಲಿ ಶಿಕ್ಷಕರು ತೊಡಗಿದ್ದಾರೆ. ನೂರಾರು, ಸಾವಿರಾರು ದಾರಿಗಳನ್ನು ಪರಿಶೋಧಿಸುತ್ತಾ, ಉತ್ತಮವಾದುದನ್ನು ಅಳವಡಿಸಿಕೊಳ್ಳುತ್ತಾ, ಮತ್ತೆ ತಮ್ಮ ದಾರಿಯನ್ನು ಮೌಲ್ಯಮಾಪನಕ್ಕೊಳಪಡಿಸುತ್ತಾ ಅನೇಕ ಶಿಕ್ಷಕರು ಮಧ್ಯಂತರ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ವಿಕಾಸವೆನ್ನುವುದು ನಿರಂತರ ಪ್ರಕ್ರಿಯೆ. ಪುಟ್ಟ ಊರಿನ ಪುಟ್ಟಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಲ್ಪಾಹಳ್ಳಿಕೇರಿ ಈಗಲೂ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಭೇಟಿ ಮಾಡಬಲ್ಲರು. ಸೋಮು ಕುದರಿಹಾಳರವರು ಮಕ್ಕಳಿಗೆ ಅರ್ಥಪೂರ್ಣ ಕಲಿಕಾ ಪರಿಸರವನ್ನು ಒದಗಿಸುವ ಸಲುವಾಗಿಯೇ ವಾಟ್ಸಾಪ್‌ನಂತಹ ಮೆಸೇಜಿಂಗ್ ಕಿರು ತಂತ್ರಾಂಶದ ಸಹಾಯ ಪಡೆಯುತ್ತಾರೆ. ವೀರಣ್ಣ ಮಡಿವಾಳರ ತಮ್ಮ ಶಾಲೆಯಲ್ಲಿ ಸುಸಜ್ಜಿತ ಮಲ್ಟಿ ಮೀಡಿಯಾ ಸೌಕರ್ಯಗಳನ್ನು ಅಳವಡಿಸಿದ್ದಾರೆ. ಪುಟ್ಟ ಗುಂಪಿನಲ್ಲಿ ಮಕ್ಕಳು ಶಾಲೆಗೆ ಹಾಜರಾಗಲು ಸಾಧ್ಯವಾದರೆ ಅತ್ಯುತ್ತಮವಾದ ವರ್ಚುವಲ್ ಅನುಭವಗಳ ಬೆಂಬಲದೊಂದಿಗೆ ಒಡನಾಟದ ಕಲಿಕೆಯನ್ನು ಸಮೃದ್ಧಗೊಳಿಸುವ ಇಚ್ಛೆ ಹೊಂದಿದ್ದಾರೆ. ಅರವಿಂದ ಕುಡ್ಲ ಕರ್ನಾಟಕದ ಗಡಿಭಾಗದ ಶಾಲೆಯಲ್ಲಿದ್ದಾರೆ. ತಮ್ಮ ಗೆಳೆಯರೊಂದಿಗೆ ರೂಪಿಸಿದ ಸ್ವಕಲಿಕೆಯ ಹಾಳೆಗಳನ್ನು ನೀಡುವ ಮೂಲಕ ತಮ್ಮದೇ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಚಿಕ್ಕಮಗಳೂರಿನ ಫೌಜಿಯಾರವರು ತಮ್ಮ ಎಲ್ಲ ಮಕ್ಕಳೂ ಮೊಬೈಲ್ ಮೂಲಕ ಅಂತರ್ಜಾಲಕ್ಕೆ ಸೇರಿಕೊಂಡಿರುವುದನ್ನು ಖಾತರಿಪಡಿಸಿಕೊಂಡಿದ್ದಾರೆ. ಆ ಪುಟ್ಟ ಮಕ್ಕಳ ಪಾಲಕರು ಮತ್ತು ಹಿರಿಯರ ಸಹಾಯದಿಂದ ಓದು, ಬರೆಹ, ಸರಳಗಣಿತದಂತಹ ಮೂಲಸಾಕ್ಷರತೆಗೆ ಮಕ್ಕಳು ತೆರೆದುಕೊಳ್ಳುವಂತೆ ಮಾಡುತ್ತಿದ್ದಾರೆ.

ಸುರೇಶ ಮರಕಾಲ ಧ್ವನಿಮುದ್ರಿಕೆಗಳ ಮೂಲಕ ಕಲಿಕೆಯ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ರಾಜೇಶ್ವರಿ ಮತ್ತು ಸಚಿನ್ ಹೀರೇಮಠ್ ದಂಪತಿಗಳು ಹಿರಿಯ ವಿದ್ಯಾರ್ಥಿಗಳನ್ನು ‘ಆನ್‌ಲೈನ್’ ಕಲಿಕಾ ವೇದಿಕೆಗಳ ಮೂಲಕ ಸಂಪರ್ಕಿಸಿ ಸುಗಮಕಾರರ ಒಂದು ನೆಟ್‌ವರ್ಕನ್ನೇ ರೂಪಿಸಿದ್ದಾರೆ. ಕರಾವಳಿಯ ಆನಂದ ತೊಪ್ಪಲು ಎರೆಡೆರಡು ಮೊಬೈಲ್‌ಗಳ ಮೂಲಕ ಕಾನ್ಫರೆನ್ಸ್ ಕಾಲ್‌ ಗಳನ್ನು ಮಾಡಿ ಏಕಕಾಲದಲ್ಲಿ ಹತ್ತಾರು ಮಕ್ಕಳೊಡನೆ ಮಾತನಾಡುತ್ತಾರೆ. ಇವು ತಕ್ಷಣ ನೆನಪಿಗೆ ಬಂದಿರುವ ಕೆಲವು ಉದಾಹರಣೆಗಳಷ್ಟೇ.

ಇಂತಹ ಲಕ್ಷಾಂತರ ಶಿಕ್ಷಕರ ಪ್ರಯತ್ನಗಳನ್ನು ಆಲಿಸಬೇಕಿದೆ. ಅವರ ಬೆಂಬಲಕ್ಕೆ ನಿಲ್ಲಬೇಕಿದೆ.

ಮಗು ಸ್ವತಃ ಕಲಿಯ ಬಲ್ಲದು

ಮಗುವು ಸ್ವತಂತ್ರ ಕಲಿಕಾರ್ಥಿಯೂ ಹೌದು, ಅದೇ ಕಾಲಕ್ಕೆ ಸಾಮಾಜಿಕ ಒಡನಾಟವು ಮಗುವಿನ ಕಲಿಕೆಯನ್ನು ಪ್ರಭಾವಿಸುವುದೂ ಹೌದು. ಮಗುವು ತನ್ನ ಸುತ್ತಲಿನ ಜಗತ್ತಿನೊಡನೆ ಒಡನಾಡುತ್ತಾ ಕೇಳುವ ಪ್ರಶ್ನೆಗಳು, ಪಡೆಯುವ ಅನುಭವಗಳು ಹೇಗಿರಬೇಕು ಎಂಬುದನ್ನು ಪೂರ್ವ ನಿರ್ಧರಿಸಿರುವ ಮತ್ತು ನಿರೀಕ್ಷೆಯ ಗೆರೆಗಳನ್ನು ದಾಟಲು ಸ್ವಾತಂತ್ರ‍್ಯವೂ ಇರುವ ಸ್ವಕಲಿಕೆಯ ಸಾಮಗ್ರಿಗಳನ್ನು ರೂಪಿಸುವುದು ಈಗ ಎದುರಾಗಿರುವ ಸವಾಲು. ಈ ಸವಾಲನ್ನು ಎದುರಿಸದೆ ಬೇರೆ ದಾರಿಯಿಲ್ಲ.

ಸ್ವಕಲಿಕಾ ಸಾಮಗ್ರಿಗಳು ಬಹುಮಟ್ಟಿಗೆ ಮಗುವಿನ ಸ್ವತಂತ್ರ ಕಲಿಕೆಗೆ ಸಹಾಯ ಮಾಡಬಲ್ಲ ನಿರ್ದೇಶನಗಳ ಪಠ್ಯರೂಪಗಳಾಗಿರುತ್ತವೆ. ಆದರೆ, ಭೌತಿಕ ಸಾಮಗ್ರಿಗಳು, ಪುಸ್ತಕಗಳು, ಕಿರು ತಂತ್ರಾಂಶಗಳು, ಆಟಿಕೆಗಳು, ಪ್ರಯೋಗದ ಉಪಕರಣಗಳು ಕೂಡಾ ಸ್ವಕಲಿಕೆಯ ಸಾಮಗ್ರಿಗಳೇ ಆಗಿರುತ್ತವೆ. ಉಪಯುಕ್ತತೆ ಮತ್ತು ಸಾಧ್ಯತೆಗಳೆರಡನ್ನೂ ಲೆಕ್ಕಹಾಕಿ ಇಂತಹ ಸಾಮಗ್ರಿಗಳನ್ನು ವಿನ್ಯಾಸಗೊಳಿಸಬೇಕಿದೆ. ಮಗುವಿನ ಕಲಿಕೆಗೆ ಯಾವ ಹಂತದಲ್ಲಿ ದೊಡ್ಡವರ ಸಹಾಯ ಅಗತ್ಯ, ಕಲಿಕೆಯ ಮೌಲ್ಯಮಾಪನ, ಕಲಿಕೆಯ ಮರುಪುಷ್ಟಿ ಮುಂತಾದ ಅವಶ್ಯಕತೆಗಳನ್ನು ಗುರುತಿಸಿಕೊಂಡು ಇಂತಹ ಕಲಿಕಾ ಸಾಧ್ಯತೆಗಳನ್ನು ಕಾರ್ಯರೂಪಕ್ಕೆ ತರಬಹುದು. ಶಿಕ್ಷಕರು ಮಗುವಿನ ಜೊತೆ ಹೇಗೆ ಸಂಪರ್ಕದಲ್ಲಿರುತ್ತಾರೆ ಎಂಬುದನ್ನೂ ಯೋಚಿಸಬೇಕು.

ಮಗುವು ಮನೆಗೆ ಅಥವಾ ತನ್ನ ಪುಟ್ಟ ಭೌಗೋಳಿಕ ವ್ಯಾಪ್ತಿಯ ಕಂಟೇನಮೆಂಟ್ ಪ್ರದೇಶಕ್ಕೆ ಸೀಮಿತವಾಗಬೇಕಾಗಬಹುದು. ಆದುದರಿಂದ, ಆ ಭೌಗೋಳಿಕ ವ್ಯಾಪ್ತಿಯೇ ಮಗುವಿನ ಕಲಿಕಾ ಪರಿಸರವಾಗಿರುತ್ತದೆ. ಅಲ್ಲಿ ತನ್ನದೇ ವಯೋಮಾನದ ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಸಾಧ್ಯವಾಗದಿರಬಹುದು. ಆದುದರಿಂದ ಒಡನಾಟದ ಕಲಿಕೆಯು ಬೇರೆಬೇರೆ ವಯೋಮಾನದ ವಿದ್ಯಾರ್ಥಿಗಳೊಂದಿಗೆ ಸಾಧ್ಯವಾಗುವಂತೆ ಕಲಿಕೆಯ ಪರಿಸರವನ್ನ ವಿನ್ಯಾಸಗೊಳಿಸಬೇಕಿದೆ. ಮಗುವು ಸ್ವತಃ ಕಲಿಯುವ ಸುಖ ಮತ್ತು ಪ್ರೇರಣೆಯನ್ನು ಹೊಂದಬೇಕಾದಲ್ಲಿ ಸ್ವಕಲಿಕೆಯ ಕೌಶಲಗಳಾದ ಭಾಷಾ ಕೌಶಲಗಳು, ಸರಳ ಗಣಿತ ಕಲಿಕೆ ಅವಶ್ಯಕ. ಇದಕ್ಕೆ ದೊಡ್ಡವರ ಸಹಾಯ ಲಭ್ಯವಾಗಬೇಕು. ಕೆಲವು ಸಂಕೀರ್ಣ ಪರಿಕಲ್ಪನೆಗಳನ್ನು ತನ್ನ ಸೀಮಿತ ಒಡನಾಟದಲ್ಲಿ ಕಲಿಯಲು ಮಗುವಿಗೆ ಸಾಧ್ಯವಾಗದಿರಬಹುದು. ಆಗ, ಧ್ವನಿ ಮತ್ತು ದೃಶ್ಯ ಸಾಮಗ್ರಿಗಳನ್ನು ಒದಗಿಸಬೇಕಾಗುತ್ತದೆ. ಕೆಲವನ್ನು ಶಿಕ್ಷಕರ ನೇರ ಸಹಾಯದಿಂದಲೇ ಕಲಿಯ ಬೇಕಾಗಬಹುದು. ಪಾರಂಪರಿಕ ಜ್ಞಾನದ ಮರುಶೋಧನೆ, ಕೃಷಿ, ಕಸುಬುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಚಟುವಟಿಕೆಗಳಲ್ಲಿಯೂ ಮಗು ತೊಡಗುವಂತೆ ಸಮನ್ವಯಗೊಳಿಸಬೇಕಿದೆ. ಸ್ಥಳ ಮತ್ತು ಸಂದರ್ಭಗಳಿಗೆ ಸಂವೇದಿಯಾದ ಸೂಕ್ಷ್ಮ ಯೋಜನೆಯನ್ನು ರೂಪಿಸಿಕೊಂಡರಷ್ಟೇ ಇವೆಲ್ಲ ಸಾಧ್ಯವಾಗಬಹುದು.

ಹೀಗೆ ವಿಕಾಸಗೊಳ್ಳಬಹುದಾದ ಕಲಿಯುವ ಪದ್ಧತಿಯು ಕೋವಿಡ್ ಕಾಲಕ್ಕಾಗಿ ಮಾತ್ರ ರೂಪುಗೊಂಡಿರುವ ಮಾದರಿಯಾಗದೆ ಕಲಿಕಾ ಪರಿಸರವನ್ನು ಮರುವಿನ್ಯಾಗೊಳಿಸುವ ದೀರ್ಘ ಪ್ರಕ್ರಿಯೆಯ ಭಾಗವಾಗಬಹುದು. ಯಾವುದಕ್ಕೂ ಪ್ರಕ್ರಿಯೆ ಆರಂಭವಾಗಬೇಕಷ್ಟೆ!

ಬಾನಂಗಳದ ವಿಸ್ಮಯ ಲೋಕ – ‘ಆಕಾಶ ನೋಡಲು ನೂಕುನುಗ್ಗಲಾಗಲಿ’ ಚಿತ್ರ ಮೂಲ: ‘ParentCercle’

Donate Janashakthi Media

Leave a Reply

Your email address will not be published. Required fields are marked *