ಆಧುನಿಕ ಭಾರತ ನಿರ್ಮಾಣದ ಬುನಾದಿ ತತ್ವಗಳನ್ನು ದುರ್ಬಲಗೊಳಿಸಿದ ಆರ್ಥಿಕ ಉದಾರೀಕರಣದ ಮೂರು ದಶಕಗಳು

ಪ್ರೊ. ಪ್ರಭಾತ್ ಪಟ್ನಾಯಕ್ 

ಭಾರತದಲ್ಲಿ ಉದಾರೀಕರಣ ನೀತಿಗಳ ಶಿಲ್ಪಿ ಎಂದೆನಿಸಿರುವ ಮನಮೋಹನ ಸಿಂಗ್ ಅವರೇ “ಪ್ರತಿಯೊಬ್ಬ ಭಾರತೀಯನಿಗೂ ಒಂದು ಘನತೆಯ ಮತ್ತು ಆರೋಗ್ಯಕರ ಜೀವನ ಕಲ್ಪಿಸುವ ಬಗ್ಗೆ ಆದ್ಯತೆ ನೀಡಬೇಕು” ಎಂದು ವಿಷಾದದಿಂದ ಹೇಳಿದ್ದಾರೆ. ಸ್ವತಃ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಅದನ್ನು ಏಕೆ ಕಾರ್ಯಗತಗೊಳಿಸಲಿಲ್ಲವೋ! ನವ ಉದಾರವಾದೀ ಸುಧಾರಣೆಗಳ ಆರಂಭದಿಂದಲೂ, ಕೇವಲ ಅಸಮಾನತೆಯಷ್ಟೇ ಅಲ್ಲ, ಸೇವಿಸುವ ಆಹಾರದ ಕ್ಯಾಲೊರಿ ಲಭ್ಯತೆಯ ಪ್ರಮಾಣದಂತಹ ಬಹಳ ಮೂಲಭೂತ ಅಂಶದ ಪ್ರಕಾರವೂ ಬಡತನದ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ನವ ಉದಾರವಾದವು ಜಿಡಿಪಿ ಬೆಳವಣಿಗೆಯ ದರವನ್ನು ಹೆಚ್ಚಿಸಿರಬಹುದು, ಆದರೆ, ಅದು ದುಡಿಯುವ ಜನರ ಪರಿಸ್ಥಿತಿಗಳನ್ನು ಹದಗೆಡಿಸಿದೆ ಮತ್ತು ಆಧುನಿಕ ಭಾರತ ರಾಷ್ಟ್ರ ನಿರ್ಮಾಣದ ಆದರ್ಶಪ್ರಾಯ ತತ್ವಗಳನ್ನು ದುರ್ಬಲಗೊಳಿಸಿದೆ ಎಂಬ ಅಂಶವನ್ನು ಉದಾರೀಕರಣದ ಸಮರ್ಥಕರು ಕಡೆಗಣಿಸುತ್ತಾರೆ.

ಭಾರತದಲ್ಲಿ 1991ರಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡು ಈಗ ಮೂವತ್ತು ವರ್ಷಗಳು ಕಳೆದಿವೆ. ಕೆಲವು ನೀತಿಗಳನ್ನು 1985ಕ್ಕೂ ಮೊದಲೇ ಅಳವಡಿಸಿಕೊಳ್ಳಲಾಗಿತ್ತು ಎಂದೂ ಹೇಳುತ್ತಾರೆ. ಈ ನೀತಿಗಳು ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ವ್ಯಾಪಕವಾಗಿ ಪ್ರಕಟವಾಗಿವೆ. ಮನಮೋಹನ್ ಸಿಂಗ್ ಮುಂತಾದ ಉದಾರೀಕರಣಕಾರರು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಈ ನೀತಿಗಳನ್ನು ಶ್ಲಾಘಿಸಿದ್ದಾರೆ ಮತ್ತು ಉದಾರೀಕರಣದ ಪ್ರಯೋಜನಗಳ ಹಂಚಿಕೆ ಅಸಮಾನವಾಗಿವೆ ಎಂದು ಗೋಳಾಡಿದ್ದಾರೆ. ಸ್ವತಃ ಈ ನೀತಿಗಳ ಶಿಲ್ಪಿ ಎಂದೇ ಕರೆಯಲಾದ ಮನಮೋಹನ ಸಿಂಗ್ ಅವರೇ ವಿಷಾದಿಸಿದ್ದಾರೆ. ಇತ್ತೀಚೆಗೆ ಅವರು “ಪ್ರತಿಯೊಬ್ಬ ಭಾರತೀಯನಿಗೂ ಒಂದು ಘನತೆಯ ಮತ್ತು ಆರೋಗ್ಯಕರ ಜೀವನ ಕಲ್ಪಿಸುವ ಬಗ್ಗೆ ಆದ್ಯತೆ ನೀಡಬೇಕು” ಎಂದು ಹೇಳಿದ್ದಾರೆ. ಸ್ವತಃ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಅದನ್ನು ಏಕೆ ಕಾರ್ಯಗತಗೊಳಿಸಲಿಲ್ಲವೋ ಎಂಬುದು ಆಶ್ಚರ್ಯವೇ ಸರಿ.

ಆದಾಯ ಮತ್ತು ಸಂಪತ್ತಿನ ಅಸಮಾನತೆಯನ್ನು ದೇಶದಲ್ಲಿ ಹೆಚ್ಚಿಸಿದರೂ ಸಹ, ಉದಾರೀಕರಣವು ಭಾರತದ ಜಿಡಿಪಿಯ ಬೆಳವಣಿಯನ್ನು ಬಹಳವಾಗಿ ಹೆಚ್ಚಿಸಿತು ಮತ್ತು ಆ ಮೂಲಕ ಬಹುತೇಕ ಭಾರತೀಯರ ಜೀವನವನ್ನು ಸುಧಾರಿಸಿತು ಮತ್ತು ಅವರಲ್ಲಿ ಅಪಾರ ಮಂದಿಯನ್ನು ಸಂಪೂರ್ಣ ಬಡತನದಿಂದ ಮೇಲೆತ್ತಿದೆ ಎಂಬ ಅಭಿಪ್ರಾಯವನ್ನು ಉದಾರೀಕರಣದ ಸಮರ್ಥಕರು ಮಾತ್ರವಲ್ಲ, ಎಡಪಂಥದ ಕೆಲವರನ್ನೂ ಒಳಗೊಂಡಂತೆ ಅದರ ಟೀಕಾಕಾರರೂ ಸಹ ಸಾಮಾನ್ಯವಾಗಿ ಒಪ್ಪುತ್ತಾರೆ. ಅವರಲ್ಲಿ ಕಾಣುವ ಒಂದು ವ್ಯತ್ಯಾಸವೆಂದರೆ, ಬೆಳವಣಿಗೆಗೆ ಎದುರಾಗಿ ಅಸಮಾನತೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂಬುದು ಮಾತ್ರ ಎಂದು ತೋರುತ್ತದೆ.

ಅರ್ಥವ್ಯವಸ್ಥೆಯಲ್ಲಿ ಬೆಳವಣಿಗೆ ದರವನ್ನು ಹೆಚ್ಚಿಸಿದರೆ ಅಸಮಾನತೆಗಳು ಕಾಣೆಯಾಗುತ್ತವೆ ಎಂದು ಉದಾರವಾದಿಗಳು ವಾದಿಸುತ್ತಾರೆ. ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಎಷ್ಟು ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ನಿರ್ಧರಿಸುವ ಬಂಡವಾಳಶಾಹಿಗಳ “ಮೃಗೀಯ ಹುಮ್ಮಸ್ಸನ್ನು” ಪ್ರೋತ್ಸಾಹಿಸಬೇಕಾಗುತ್ತದೆ ಎಂಬುದಾಗಿ ಉದಾರವಾದದ ಸಮರ್ಥಕರು ಹೇಳುತ್ತಾರೆ. ಬಂಡವಾಳಶಾಹಿಗಳ “ಮೃಗೀಯ ಹುಮ್ಮಸ್ಸನ್ನು” ಪ್ರೋತ್ಸಾಹಿಸುವ ಕೆಲಸವನ್ನು ನಿಖರವಾಗಿ ಮಾಡುತ್ತಿರುವುದಾಗಿ ಮೋದಿ ಸರ್ಕಾರ ಹೇಳಿಕೊಳ್ಳುತ್ತದೆ. ಈ ಅಂಶಗಳ ಬಗ್ಗೆ ವಿಭಿನ್ನ ನಿಲುವು ಹೊಂದಿಲ್ಲದಿದ್ದರೂ, ಅವುಗಳಲ್ಲಿ ಕೆಲವು ಕ್ರಮಗಳನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿರುವುದು ವಿಚಿತ್ರವಾಗಿದೆ. ಒಟ್ಟಾರೆಯಾಗಿ, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ನವ ಉದಾರ ನೀತಿಗಳ ಬಗ್ಗೆ ವ್ಯಾಪಕ “ಒಮ್ಮತ”ವಿದೆ ಎಂಬ ಬ್ರೆಟನ್‌ವುಡ್ಸ್ ಸಂಸ್ಥೆಗಳ ಅಭಿಪ್ರಾಯವು ಕಳೆದ ಮೂರು ದಶಕಗಳಲ್ಲಿ ಈ ನೀತಿಗಳು ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳ ಮೌಲ್ಯಮಾಪನಕ್ಕೂ ವಿಸ್ತರಿಸುತ್ತದೆ ಎಂದು ತೋರುತ್ತದೆ.

ಈ ಗ್ರಹಿಕೆಯು ಕನಿಷ್ಠ ಎರಡು ಕಾರಣಗಳಿಂದಾಗಿ ತಪ್ಪಾಗಿದೆ. ಮೊದಲನೆಯದಾಗಿ, ಈ ಗ್ರಹಿಕೆಯು ಅರ್ಥವ್ಯವಸ್ಥೆಯಲ್ಲಿನ ಬಂಡವಾಳಶಾಹಿ ವಲಯವನ್ನು ಅರ್ಥವ್ಯವಸ್ಥೆಯ ಉಳಿದ ಭಾಗಗಳಿಂದ ಬೇರ್ಪಟ್ಟ ಒಂದು ಸ್ವಸಂಪೂರ್ಣ ವಲಯವೆಂದು ಪರಿಗಣಿಸುತ್ತದೆ. ತನ್ನ ಸುತ್ತಮುತ್ತಲಿನ ಪರಿಸರದ ಮೇಲೆ ಬಂಡವಾಳಶಾಹಿ ವಲಯವು ಬೀರುವ ಒಂದು ಮುಖ್ಯ ಪರಿಣಾಮವೆಂದರೆ, ಅದರಿಂದ ಹೆಚ್ಚು ಹೆಚ್ಚು ಶ್ರಮಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದರೆ, ಈ ಬಗ್ಗೆ ಅದು ಸಾಕಷ್ಟು ಸಾಧನೆ ಮಾಡಿಲ್ಲ ಎಂಬ ಗೋಳಾಟವೂ ಇದೆ. ವಾಸ್ತವದಲ್ಲಿ, ಬಂಡವಾಳಶಾಹಿ ವಲಯದ ಒಳಗೂ ಸಹ ಬಂಡವಾಳದ ಸಂಚಯವು ಅದರ ಹೊರಗಿನ ಪ್ರಪಂಚದ ಮೇಲೆ ಅನೇಕ ರೀತಿಯಲ್ಲಿ ಆಘಾತಮಾಡುತ್ತದೆ. ತನ್ನ ಹೊರಗಿನ ಪ್ರಪಂಚದಿಂದ ಕಾರ್ಮಿಕರನ್ನು ಸೆಳೆಯುವ ಕ್ರಮವು ಬೃಹತ್ ಸಂಖ್ಯೆಯ ಶ್ರಮಜೀವಿಗಳು ಲಭ್ಯವಿರುವ ಅರ್ಥವ್ಯವಸ್ಥೆಯಲ್ಲಿ ಒಂದು ಒಳ್ಳೆಯ ಅಂಶವೇ ಆಗಿದ್ದರೂ ಸಹ, ಭೂಮಿ, ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ನುಂಗುತ್ತದೆ. (ಉದಾಹರಣೆಗೆ, ತಮ್ಮ ‘ಮೃಗೀಯ ಹುಮ್ಮಸ್ಸ’ನ್ನು ಹೆಚ್ಚಿಸಿಕೊಳ್ಳಲು ಬಂಡವಾಳಗಾರರಿಗೆ ಒದಗಿಸುವ ಸಬ್ಸಿಡಿಗಳು ಅದರ ಕಾರ್ಯಸಾಧ್ಯತೆಗೆ ಸಾಂಪ್ರದಾಯಿಕವಾಗಿ ಕೊಡುಗೆ ನೀಡಿದ ರೈತ ಕೃಷಿಗೆ ಒದಗಿಸುತ್ತಿದ್ದ ಸಬ್ಸಿಡಿಗಳ ವೆಚ್ಚದಲ್ಲಿ ಬರುತ್ತವೆ). ಅಷ್ಟೇ ಅಲ್ಲದೆ, ಬಂಡವಾಳಶಾಹಿ ವಲಯವು ತನ್ನ ಬೆಳವಣಿಗೆಗಾಗಿ ಸಾಂಪ್ರದಾಯಿಕ ವಲಯಗಳ ಬೇಡಿಕೆಯನ್ನೂ ಕಬಳಿಸುತ್ತದೆ.

ಹಾಗಾಗಿ, ಬಂಡವಾಳದ ಸಂಚಯವು, ತನ್ನ ಸುತ್ತಮುತ್ತಲಿನ ಕಿರು ಉತ್ಪಾದನಾ ಚಟುವಟಿಕೆಗಳನ್ನು ದುರ್ಬಲಗೊಳಿಸುತ್ತದೆ (ಈ ಪ್ರಕ್ರಿಯೆಯನ್ನು”ಬಂಡವಾಳದ ‘ಆದಿಮ ಸಂಚಯ’ ಎಂದು ಮಾರ್ಕ್ಸ್ ಕರೆದಿದ್ದರು). ಮಾತ್ರವಲ್ಲ, ಕೆಲಸವಿಲ್ಲದ ಜನರಿಗೆ ಉದ್ಯೋಗಗಳೂ ಒದಗುವುದಿಲ್ಲ. ಆದರೆ, ಸಂಚಯಗೊಂಡ ಬಂಡವಾಳಕ್ಕೆ ಅನುಗುಣವಾಗಿ ಉದ್ಯೋಗಗಳು ಲಭ್ಯವಾಗುತ್ತವೆ, ಮತ್ತು ಆ ಮೂಲಕ ನಿರುದ್ಯೋಗವನ್ನು ಮತ್ತು ಬಡತನವನ್ನು ಕಡಿಮೆ ಮಾಡಬಹುದು ಎಂಬುದಾಗಿ ಸಾಂಪ್ರದಾಯಿಕ ಬೂರ್ಜ್ವಾ ಅರ್ಥಶಾಸ್ತ್ರವು ಹೇಳುತ್ತದೆ (ಒಂದು ವೇಳೆ ಹಾಗಾಗದಿದ್ದರೆ, ಇನ್ನೂ ತ್ವರಿತವಾದ ಬಂಡವಾಳ ಸಂಚಯವೇ ಅದಕ್ಕೆ ರಾಮಬಾಣ!). ಬೂರ್ಜ್ವಾ ಅರ್ಥಶಾಸ್ತ್ರವು ಹೇಳುವುದಕ್ಕೆ ವ್ಯತಿರಿಕ್ತವಾಗಿ, ಕೆಲಸವಿಲ್ಲದವರಿಗೆ ಉದ್ಯೋಗಗಳೂ ಲಭ್ಯವಾಗಲಿಲ್ಲ ಮತ್ತು ಕಿರು ಉತ್ಪಾದನಾ ಚಟುವಟಿಕೆಗಳು ದುರ್ಬಲಗೊಳ್ಳುವುದೂ ತಪ್ಪಲಿಲ್ಲ. ಅಂದರೆ, ನಿರುದ್ಯೋಗ ಮತ್ತು ಬಡತನದ ಹೆಚ್ಚಳ. ಹಾಗಾಗಿ, ಬಂಡವಾಳ ಸಂಚಯದ ದರ ಹೆಚ್ಚಿದರೆ, ನಿರುದ್ಯೋಗ ಮತ್ತು ಬಡತನಗಳು ನಿವಾರಣೆಯಾಗುವುದರ ಬದಲು ಇನ್ನಷ್ಟು ಹೆಚ್ಚುತ್ತವೆ.

ವಾಸ್ತವವಾಗಿ ಆಗಿರುವುದು ಇದೇ ಎಂಬುದನ್ನು ಸ್ವತಃ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಹಿಂದಿನ ನಿಯಂತ್ರಣ ನೀತಿವ್ಯವಸ್ಥೆಯ ಅವಧಿಯಲ್ಲಿ ನೀಡಲಾದ ಎಲ್ಲಾ ರಕ್ಷಣೆಯನ್ನೂ ನವ ಉದಾರ ಆಡಳಿತದಲ್ಲಿ ಕಳಚಿ ಹಾಕಿದ ಪರಿಣಾಮವಾಗಿ ರೈತ ಕೃಷಿ ದುರ್ಬಲಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರೈತ ಕೃಷಿಯ ಲಾಭದಾಯಕತೆಯ ಕುಸಿತದಲ್ಲಿ ಈ ಅಂಶವು ಕಾಣ ಬರುತ್ತದೆ. ಜನಗಣತಿಯ ಅಂಕಿ ಅಂಶಗಳ ಪ್ರಕಾರ, 1991 ಮತ್ತು 2011ರ ಜನಗಣತಿಗಳ ನಡುವಿನ ಅವಧಿಯಲ್ಲಿ, “ಕೃಷಿಕರ” ಸಂಖ್ಯೆಯು ಒಂದೂವರೆ ಕೋಟಿಯಷ್ಟು ಇಳಿದಿರುವ ವಿದ್ಯಮಾನದಲ್ಲೂ ಈ ಅಂಶವು ಸ್ಪಷ್ಟವಾಗಿದೆ. ಮತ್ತು, ಕಳೆದ ಮೂರು ದಶಕಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ರೈತರ ಆತ್ಮಹತ್ಯೆಯ ನೋವಿನ ಅಂಶದಿಂದಲೂ ಸ್ಪಷ್ಟವಾಗಿದೆ.

ನವ ಉದಾರವಾದೀ ಸುಧಾರಣೆಗಳ ಆರಂಭದಿಂದಲೂ, ಕೇವಲ ಅಸಮಾನತೆಯಷ್ಟೇ ಅಲ್ಲ, ಸೇವಿಸುವ ಆಹಾರದ ಕ್ಯಾಲೊರಿ ಲಭ್ಯತೆಯ ಪ್ರಮಾಣದಂತಹ ಬಹಳ ಮೂಲಭೂತ ಅಂಶದ ಪ್ರಕಾರವೂ ಬಡತನದ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ.  ಗ್ರಾಮೀಣ ಭಾರತದಲ್ಲಿ ತಲಾ ದೈನಿಕ 2200 ಕ್ಯಾಲೊರಿಗಳಿಗಿಂತ ಕಡಿಮೆ ಕ್ಯಾಲೊರಿ ಆಹಾರ ಸೇವಿಸುವ ವ್ಯಕ್ತಿಗಳ ಸಂಖ್ಯೆಯು (ಗ್ರಾಮೀಣ ಬಡತನದ ಅಧಿಕೃತ ಮಾನದಂಡ), 1993-94 ರಲ್ಲಿ ಶೇ.58 ರಿಂದ 2011-12 ರಲ್ಲಿ ಶೇ.68ಕ್ಕೆ ಏರಿದೆ (ಈ ಎರಡೂ ವರ್ಷಗಳೂ ಎನ್‌ಎಸ್‌ಎಸ್ ನ ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಯ ವರ್ಷಗಳು). ನಗರ ಭಾರತದಲ್ಲಿ ತಲಾ ದೈನಿಕ 2100 ಕ್ಯಾಲೊರಿಗಳಿಗಿಂತ ಕಡಿಮೆ ಕ್ಯಾಲೊರಿ ಆಹಾರ ಸೇವಿಸುವ ವ್ಯಕ್ತಿಗಳ ಸಂಖ್ಯೆಯು (ನಗರ ಬಡತನದ ಅಧಿಕೃತ ಮಾನದಂಡ), 1993-94 ರಲ್ಲಿ ಶೇ.57 ರಿಂದ 2011-12 ರಲ್ಲಿ ಶೇ.65ಕ್ಕೆ ಏರಿದೆ .

2011-12ರ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 2017-18ರ ಎನ್‌ಎಸ್‌ಎಸ್ ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳು ಎಷ್ಟು ಮಟ್ಟಿಗೆ ಚಕಿತಗೊಳಿಸುವಂತಿದ್ದವು ಎಂದರೆ, ಮೋದಿ ಸರ್ಕಾರವು ಅವುಗಳನ್ನು ಬಚ್ಚಿಟ್ಟಿತು ಮತ್ತು ಇಂತಹ ಸಮೀಕ್ಷೆಗಳನ್ನು ನಿಲ್ಲಿಸಲು ನಿರ್ಧರಿಸಿತು. ಈ ಸಮೀಕ್ಷೆಯ ವರದಿಯನ್ನು ಬಚ್ಚಿಡುವ ಮೊದಲೇ ಕೆಲವು ಅಂಕಿ ಅಂಶಗಳು ಸೋರಿಕೆಯಾಗಿದ್ದವು. ಸೋರಿಕೆಯಾದ ಅಂಕಿ ಅಂಶಗಳ ಪ್ರಕಾರ, 2011-12 ಮತ್ತು 2017-18ರ ನಡುವೆ, ಗ್ರಾಮೀಣ ಭಾರತದಲ್ಲಿ ತಲಾ ಬಳಕೆ ವೆಚ್ಚವು ನೈಜವಾಗಿ ಶೇಕಡಾ ಒಂಬತ್ತರಷ್ಟು ಕುಸಿಯಿತು. ಪ್ರಮುಖ ಬೆಳೆ ವೈಫಲ್ಯದಂತಹ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಈ ರೀತಿಯ ಒಂದು ಕುಸಿತವು ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವತ್ತೂ ಸಂಭವಿಸಿರಲಿಲ್ಲ.

ವಾಸ್ತವವಾಗಿ, ನವ ಉದಾರವಾದದಡಿಯಲ್ಲಿ ರೈತ ಕೃಷಿಯ ಮೇಲಿನ ಹಲ್ಲೆಯು ನಿರಂತರವಾಗಿ ತೀವ್ರಗೊಳ್ಳುತ್ತಿದೆ. ಈ ಹಲ್ಲೆಯ ಇತ್ತೀಚಿನ ಅಭಿವ್ಯಕ್ತಿಯು ಎಷ್ಟು ಹಾನಿಕಾರಕವಾಗಿದೆ ಎಂದರೆ, ದೊಡ್ಡ ದೊಡ್ಡ ಬಂಡವಾಳಗಾರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶ ಹೊಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಿಂದ ರೈತರು ದೆಹಲಿಯ ಗಡಿಯಲ್ಲಿ ಸತತವಾಗಿ ಎಂಟು ತಿಂಗಳುಗಳಿಂದಲೂ ಪ್ರತಿಭಟಿಸುತ್ತಿದ್ದಾರೆ.

ಬಂಡವಾಳಶಾಹಿಗಳ “ಮೃಗೀಯ ಹುಮ್ಮಸ್ಸನ್ನು” ಪ್ರೋತ್ಸಾಹಿಸುವ ಕೆಲಸವನ್ನು ನಿಖರವಾಗಿ ಮಾಡುತ್ತಿರುವುದಾಗಿ ಮೋದಿ ಸರ್ಕಾರ ಹೇಳಿಕೊಳ್ಳುತ್ತದೆ. ಈ ಅಂಶಗಳ ಬಗ್ಗೆ ವಿಭಿನ್ನ ನಿಲುವು ಹೊಂದಿಲ್ಲದಿದ್ದರೂ, ಅವುಗಳಲ್ಲಿ ಕೆಲವು ಕ್ರಮಗಳನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿರುವುದು ವಿಚಿತ್ರವಾಗಿದೆ. ಒಟ್ಟಾರೆಯಾಗಿ, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ನವ ಉದಾರ ನೀತಿಗಳ ಬಗ್ಗೆ ವ್ಯಾಪಕ “ಒಮ್ಮತ”ವಿದೆ ಎಂಬ ಬ್ರೆಟನ್‌ವುಡ್ಸ್ ಸಂಸ್ಥೆಗಳ ಅಭಿಪ್ರಾಯವು ಕಳೆದ ಮೂರು ದಶಕಗಳಲ್ಲಿ ಈ ನೀತಿಗಳು ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳ ಮೌಲ್ಯಮಾಪನಕ್ಕೂ ವಿಸ್ತರಿಸುತ್ತದೆ ಎಂದು ತೋರುತ್ತದೆ.

ನವ ಉದಾರವಾದಿ ಗ್ರಹಿಕೆಯ ಎರಡನೇ ದೋಷಕ್ಕೆ ಈಗ ಹೋಗುವಾ. ಬಂಡವಾಳಗಾರರ ಹೂಡಿಕೆಯು ಕೇವಲ “ಮೃಗೀಯ ಹುಮ್ಮಸ್ಸು” ಎಂದು ಕರೆಯಲ್ಪಡುವ ಕೆಲವು ಅಸ್ಪಷ್ಟ ಅಂಶಗಳ ಮೇಲೆ ಅವಲಂಬಿತವಾಗಿಲ್ಲ. ಅದು ಮಾರುಕಟ್ಟೆಗಳಲ್ಲಿನ ನಿರೀಕ್ಷಿತ ಬೆಳವಣಿಗೆಯ ಸ್ಪಷ್ಟ ಲೆಕ್ಕಾಚಾರಗಳ ಮೇಲೆ ನಿಂತಿದೆ. ಈ ಲೆಕ್ಕಾಚಾರಗಳು ಬಂಡವಾಳಗಾರರ ಆಶಾವಾದ ಅಥವಾ ನಿರಾಶಾವಾದವನ್ನೂ ಅವಲಂಬಿಸಿರಬಹುದು (ಇದನ್ನೇ “ಮೃಗೀಯ ಹುಮ್ಮಸ್ಸು” ಎಂದು ಕರೆಯಲಾಗಿದೆ) ಎಂಬುದೂ ನಿಜವೇ. ಆದರೆ, ಮಾರುಕಟ್ಟೆಯಲ್ಲಿ ಬೆಳವಣಿಗೆ ಇಲ್ಲದಿದ್ದರೆ ಅಥವಾ ಬೆಳವಣಿಗೆಯು ನಿಧಾನಗೊಂಡರೆ, ಎಷ್ಟೇ ಸಬ್ಸಿಡಿಗಳನ್ನು ನೀಡಿದರೂ ಸಹ ಹೂಡಿಕೆಯು ಕುಂಠಿತವಾಗುತ್ತದೆ.

ನವ ಉದಾರವಾದವು, ಭಾರತವೂ ಸೇರಿದಂತೆ ಎಲ್ಲೆಡೆಯೂ ಆದಾಯಗಳ ಅಸಮತೆಗಳನ್ನು ಹೆಚ್ಚಿಸಿದೆ. ಪಿಕೆಟ್ಟಿ ಮತ್ತು ಚಾನ್ಸಲ್ ಅವರ ಪ್ರಕಾರ, ಭಾರತದ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಜನಸಂಖ್ಯೆಯ ಮೇಲ್ತುದಿಯ ಶೇಕಡ ಒಂದರಷ್ಟು ಜನರ ಪಾಲು 1982 ರಲ್ಲಿ ಕೇವಲ ಶೇ.6 ರಷ್ಟಿತ್ತು. 2013-14 ರ ವೇಳೆಗೆ ಶೇ. 22 ಕ್ಕೆ ಏರಿತು (ಸುಮಾರು ಒಂದು ಶತಮಾನದಲ್ಲೇ ಗರಿಷ್ಠ ಹೆಚ್ಚಳ). ದುಡಿಯುವ ಜನರು ಶ್ರೀಮಂತರಂತಲ್ಲದೆ, ತಮ್ಮ ಆದಾಯದ ಹೆಚ್ಚು ಭಾಗವನ್ನು ಬಳಸಿಕೊಳ್ಳುವುದರಿಂದ, ವಿಸ್ತಾರಗೊಳ್ಳುವ ಆದಾಯಗಳ ಅಸಮತೆಯು ವರಮಾನಗಳು ದುಡಿಯುವವರಿಂದ ಶ್ರೀಮಂತರತ್ತ ಹೊರಳುತ್ತವೆ ಎಂಬುದನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ ಬಳಕೆಯು ಕಡಿತಗೊಂಡು ಒಟ್ಟು ಬೇಡಿಕೆಯನ್ನು ತಗ್ಗುತ್ತದೆ. ಹಾಗಾಗಿ, ಹೂಡಿಕೆಯೂ ತಗ್ಗುತ್ತದೆ ಮತ್ತು ಬೆಳವಣಿಗೆಯ ದರವೂ ಇಳಿಯುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರವಾದವು ಒಂದು ಸ್ಥಗಿತತೆಯ ಪ್ರವೃತ್ತಿಯಿಂದ ನರಳುತ್ತಿದೆ. ಬಂಡವಾಳಶಾಹಿ ಜಗತ್ತಿನ ಈ ಪ್ರವೃತ್ತಿಯನ್ನು ಅಮೇರಿಕಾದ ಅರ್ಥವ್ಯವಸ್ಥೆಯಲ್ಲಿ “ಗುಳ್ಳೆಗಳ”ನ್ನು ಎಬ್ಬಿಸುವ ಮೂಲಕ ನಿಯಂತ್ರಿಸಲಾಯಿತು. ಮೊದಲು 1990ರ ದಶಕದ “ಡಾಟ್ ಕಾಮ್ ಗುಳ್ಳೆ” ಮತ್ತು ನಂತರ ಈ ಶತಮಾನದ ಮೊದಲ ದಶಕದಲ್ಲಿ ಎಬ್ಬಿಸಿದ “ವಸತಿ ಗುಳ್ಳೆ”ಗಳು ಬಂಡವಾಳಶಾಹಿ ಜಗತ್ತಿನ ಈ ಪ್ರವೃತ್ತಿಯನ್ನು ಅಂಕೆಯಲ್ಲಿಟ್ಟವು. 2008ರಲ್ಲಿ “ವಸತಿ ಗುಳ್ಳೆ”ಗಳು ಒಡೆದ ನಂತರ, ಜಾಗತಿಕ ಅರ್ಥವ್ಯವಸ್ಥೆಯು ದೀರ್ಘಕಾಲದ ಬಿಕ್ಕಟ್ಟಿಗೆ ಜಾರಿತು. ನವ ಉದಾರವಾದದಡಿಯಲ್ಲಿ ಈ ಬಿಕ್ಕಟ್ಟಿಗೆ ಪರಿಹಾರವಿಲ್ಲ (“ಬೇಡಿಕೆ ನಿರ್ವಹಣೆಯಲ್ಲಿ” ಪ್ರಭುತ್ವದ ಹಸ್ತಕ್ಷೇಪದ ಬಗ್ಗೆ ನವ ಉದಾರವಾದವು ಹುಬ್ಬುಗಂಟಿಕ್ಕುತ್ತದೆ).

ನವ ಉದಾರವಾದದ ಬಿಕ್ಕಟ್ಟು ಭಾರತದ ಅರ್ಥವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಕೊರೊನಾ ಸಾಂಕ್ರಾಮಿಕವು ಹರಡುವ ಮುನ್ನವೇ 2019ರಲ್ಲಿ ನಿರುದ್ಯೋಗ ದರವು 45 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟದಲ್ಲಿತ್ತು. ಈ ಬಿಕ್ಕಟ್ಟು ಜನರ ಮೇಲೆ ಎರಡು ರೀತಿಯ ಪರಿಣಾಮಗಳನ್ನು ಬೀರಿದೆ: ಒಂದು, ನವ ಉದಾರವಾದದ ಅನುಸರಣೆಯಿಂದಾಗಿ, ಕೊರೊನಾ ಸಾಂಕ್ರಾಮಿಕವು ಹರಡುವ ಮೊದಲೇ, ನೊಂದಿದ್ದ ದುಡಿಯುವ ಜನರ ಜೀವನ ಮಟ್ಟವು ಬಹಳವಾಗಿ ಕುಸಿದಿದೆ. ಉದ್ಯೋಗ ಮತ್ತು ಬಳಕೆಯಲ್ಲಿ ಕಂಡುಬಂದ ಇತ್ತೀಚಿನ ತೀವ್ರ ಕುಸಿತವು ಈ ಅಂಶವನ್ನು ಒತ್ತಿ ಹೇಳುತ್ತದೆ.

ವ್ಯಂಗ್ಯಚಿತ್ರ ಕೃಪೆ: ಮಂಜುಲ್

ಎರಡನೆಯದಾಗಿ, ಈ ಬಿಕ್ಕಟ್ಟು ಮೋದಿ ಸರ್ಕಾರವನ್ನು ಪೋಷಿಸುವ ದೊಡ್ಡ ಬಂಡವಾಳ ಮತ್ತು ಫ್ಯಾಸಿಸ್ಟ್ ತೆರನ ಹಿಂದುತ್ವ ಗುಂಪುಗಳ ನಡುವಿನ ಮೈತ್ರಿಯನ್ನು ಗಟ್ಟಿಗೊಳಿಸಲು ಕಾರಣವಾಗಿದೆ. ಇಂತಹ ಮೈತ್ರಿಗಳು ಭಾರತಕ್ಕೆ ಮಾತ್ರ ನಿರ್ದಿಷ್ಟವಲ್ಲ. ಬಿಕ್ಕಟ್ಟಿನ ಅವಧಿಗಳಲ್ಲಿ, ದೊಡ್ಡ ಬಂಡವಾಳವು ಫ್ಯಾಸಿಸ್ಟ್ ತೆರನ ಗುಂಪುಗಳು ರಾಜಕೀಯ ಪ್ರಾಬಲ್ಯ ಹೊಂದುವುದನ್ನು ಉತ್ತೇಜಿಸುತ್ತದೆ ಮತ್ತು ಹಣಕಾಸನ್ನೂ ಒದಗಿಸುತ್ತದೆ. ಇಂತಹ ಗುಂಪುಗಳೊಂದಿಗೆ ಮೈತ್ರಿಯನ್ನೂ ಏರ್ಪಡಿಸಿಕೊಳ್ಳುತ್ತದೆ. ಆರ್ಥಿಕ ಸಂಕಟಗಳಿಂದ ಜನರ ಗಮನವನ್ನು ವಿಚಲಿತಗೊಳಿಸುವ ಸಲುವಾಗಿ, ಅವರನ್ನು “ಅನ್ಯ”ರ ನಿಂದನೆಯಲ್ಲಿ ತೊಡಗಿಸಿ, ಕಥನದ ದಿಕ್ಕನ್ನು ಬದಲಾಯಿಸುತ್ತದೆ. ಅಧಿಕಾರದಲ್ಲಿರುವ ಈ ಗುಂಪುಗಳು ದೊಡ್ಡ ಬಂಡವಾಳದ ಆಜ್ಞೆಗಳನ್ನು ಪಾಲಿಸುತ್ತವೆಯಾದರೂ, ಬಿಕ್ಕಟ್ಟಿಗೆ ಆರ್ಥಿಕ ಪರಿಹಾರ ಒದಗಿಸುವ ಮಾರ್ಗದ ಮೂಲಕವಲ್ಲದೆ, ಜನರ ಗಮನವನ್ನು ಆರ್ಥಿಕ ವಲಯದಿಂದ ಸಂಪೂರ್ಣವಾಗಿ ಬೇರೆಡೆಗೆ ತಿರುಗಿಸುವ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಪಡೆಯುತ್ತವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಹೆಚ್ಚು ಬೆಳವಣಿಗೆಯನ್ನು ಸಾಧಿಸಿದ್ದ ಕಾಲದಲ್ಲೂ ದುಡಿಯುವ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ ನವ ಉದಾರವಾದವು ಬಿಕ್ಕಟ್ಟಿಗೆ ಹೊರಳುತ್ತಿರುವ ಸನ್ನಿವೇಶದಲ್ಲಿ ಅವರ ಮೇಲೆ ಹೇರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಯಂತಹ ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾದ ಒಂದು ಏರ್ಪಾಟನ್ನು ಆರಂಭಿಸಿದೆ.

ನವ ಉದಾರವಾದವು ಜಿಡಿಪಿ ಬೆಳವಣಿಗೆಯ ದರವನ್ನು ಹೆಚ್ಚಿಸಿರಬಹುದು, ಆದರೆ, ಅದು ದುಡಿಯುವ ಜನರ ಪರಿಸ್ಥಿತಿಗಳನ್ನು ಹದಗೆಡಿಸಿದೆ ಮತ್ತು ಆಧುನಿಕ ಭಾರತ ರಾಷ್ಟ್ರ ನಿರ್ಮಾಣದ ಬುನಾದಿ ತತ್ವಗಳನ್ನು ದುರ್ಬಲಗೊಳಿಸಿದೆ ಎಂಬ ಅಂಶವನ್ನು ಉದಾರೀಕರಣದ ಭಕ್ತರು ಕಡೆಗಣಿಸುತ್ತಾರೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *