ಭಾರತೀಯರ ಕಾನೂನುಬಾಹಿರ ಬೇಹುಗಾರಿಕೆಗೆ ಅಧಿಕಾರ ನೀಡಿದವರು ಯಾರು? ಬಿಜೆಪಿ ಸರಕಾರ ಉತ್ತರಿಸಲೇ ಬೇಕಾಗಿದೆ-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ: ಭಾರತ ಸರಕಾರ ಸೈಬರ್ ಬೇಹುಗಾರಿಕೆಯಲ್ಲಿ ಜಾಗತಿಕ ನಾಯಕನಾಗಿರುವ ಇಸ್ರೇಲಿ ಕಂಪನಿ ಎನ್‍.ಎಸ್‍.ಒ. ದಿಂದ ಪೆಗಸಸ್ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ. ತಾನು “ಪರೀಕ್ಷಿಸಲ್ಪಟ್ಟ” ಸರಕಾರಗಳೊಡನೆ ಮಾತ್ರವೇ ವ್ಯವಹಾರ ನಡೆಸುವುದು ಎಂದು ಈ ಕಂಪನಿ ಖಚಿತವಾಗಿ ಸ್ಪಷ್ಟೀಕರಣ ನೀಡಿದೆ. ದೊಡ್ಡ ಸಂಖ್ಯೆಯಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಮಾರ್ಟ್‌ಫೋನುಗಳನ್ನು ಬೇಧಿಸಲಿಕ್ಕಾಗಿ (ಹ್ಯಾಕ್‍ ಮಾಡಲಿಕ್ಕಾಗಿ) ಗುರಿಮಾಡಲಾಗಿದೆ ಎಂದು ತನಿಖೆಗಳಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ತಮ್ಮ ನಾಗರಿಕರ ಮೇಲೆ ಬೇಹುಗಾರಿಕೆಯಲ್ಲಿ ತೊಡಗಿರುವ ಮತ್ತು ಎನ್‍.ಎಸ್‍.ಒ.ದ ಗಿರಾಕಿಯಾಗಿರುವ ದೇಶಗಳಲ್ಲಿ 50,000ಕ್ಕೂ ಹೆಚ್ಚು ಉದಾಹರಣೆಗಳು ಬೆಳಕಿಗೆ ಬಂದಿವೆ. ರವಾಂಡ, ಮೊರೊಕ್ಕೋ, ಸೌದಿ ಅರೇಬಿಯ, ಯುಎಇ, ಮೆಕ್ಸಿಕೊ ಮುಂತಾದ ದೇಶಗಳೊಂದಿಗೆ ಭಾರತದ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯತ್ತ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಮನ ಸೆಳೆದಿದೆ.

ಇದನ್ನು ಓದಿ: ಏನಿದು ಪೆಗಾಸಸ್ ತಂತ್ರಾಂಶ? ಫೋನ್ ಹೇಗೆ ಹ್ಯಾಕ್ ಆಗಬಹುದು?

“ಭಾರತದಲ್ಲಿ ನೂರಾರು ಪತ್ರಕರ್ತರು, ವಿವಿಧ ಚಳುವಳಿಗಳಲ್ಲಿ ತೊಡಗಿರುವವರು, ವಿಪಕ್ಷಗಳ ರಾಜಕಾರಣಿಗಳು, ಸರಕಾರೀ ಅಧಿಕಾರಿಗಳು ಮತ್ತು ವ್ಯವಹಾರ ನಿರ್ವಾಹಕರು ಮುಂತಾದವರಿಗೆ ಸೇರಿದ ಹಲವಾರು ಫೋನುಗಳು ಗೂಢಚಾರಿಕೆ ಪಟ್ಟಿಯಲ್ಲಿದ್ದವು” ಎಂದು ವರದಿ ಹೇಳುತ್ತದೆ. ಭಾರತೀಯ ಮಾಧ್ಯಮಗಳಲ್ಲಿನ ವರದಿಗಳು ಈ ಗೂಢಚಾರಿಕೆ ತಂತ್ರಾಂಶ ಪೆಗಸಸ್‍ ನ ಬೇಹುಗಾರಿಕೆಗೆ ಗುರಿಯಾದ ಕನಿಷ್ಟ 40 ಪತ್ರಕರ್ತರನ್ನು ಹೆಸರಿಸಿವೆ.

ಎರಡು ವರ್ಷಗಳ ಹಿಂದೆ, ಈ ಅಪಾಯಕಾರೀ ಬೇಹುಗಾರಿಕೆ ತಂತ್ರಾಂಶವನ್ನು ಭಾರತದಲ್ಲಿ ಬಳಸಲಾಗುತ್ತಿದೆ ಎಂದು ವಾಟ್ಸ್ ಆಪ್‍ ಹೊರಗೆಡಹಿದಾಗ, ಸಿಪಿಐ(ಎಂ) ಇದನ್ನು ಸಂಸತ್ತಿನಲ್ಲಿ ಎತ್ತಿತ್ತು. ಇದಕ್ಕೆ ಮೋದಿ ಸರಕಾರದ ಸ್ಪಂದನೆಯಲ್ಲಿ ಅದು ಎನ್‍.ಎಸ್‍.ಒ.ದ ಸೇವೆಗಳನ್ನು ತೆಗೆದುಕೊಂಡಿಲ್ಲ ಎಂದು ಖಡಾಖಂಡಿತವಾಗಿ ಹೇಳಲಿಲ್ಲ, ಆದರೆ, “ಅಧಿಕಾರ ಬಾಹಿರ ಬೇಹುಗಾರಿಕೆ” ನಡೆಸಿಲ್ಲ ಎಂದು ಹೇಳಿಕೊಂಡಿತು.

ಯಾವ ಕಾನೂನಿನ ಅಡಿಯಲ್ಲಿ?

ಈಗ ಹೊರಬಂದ ಸಂಗತಿಗಳಿಂದ, ಈ ಸರಕಾರ ತನ್ನದೇ ನಾಗರಿಕರ ವಿರುದ್ಧ ಬೇಹುಗಾರಿಕೆಗೆ ಎನ್‍.ಎಸ್‍.ಒ. ವನ್ನು ತೊಡಗಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಎನ್‍.ಎಸ್‍.ಒ.ದೊಂದಿಗೆ ಹೇಗೆ ತೊಡಗಿಕೊಂಡಿದೆ, ಷರತ್ತುಗಳೇನು, ಇದಕ್ಕೆ ನಮ್ಮ ಎಷ್ಟು ಸಾರ್ವಜನಿಕ ನಿಧಿಯನ್ನು ತೆರಲಾಗಿದೆ ಎಂಬುದರ ಬಗ್ಗೆ ಕೇಂದ್ರ ಸರಕಾರ ಎಲ್ಲವನ್ನೂ ಸ್ಪಷ್ಟಪಡಿಸಬೇಕಾಗಿದೆ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಇದನ್ನು ಓದಿ: ‘ಪೆಗಾಸಸ್’ ಬಳಸಿ 300ಕ್ಕೂ ಹೆಚ್ಚು ಭಾರತೀಯ ಗಣ್ಯರ ಫೋನ್‌ಗಳು ಹ್ಯಾಕ್‌

ಸರಕಾರ ಸ್ಮಾರ್ಟ್‌ಫೋನುಗಳನ್ನು ಬೇಧಿಸಲು ಸೈಬರ್ ‍ಬೇಹುಗಾರಿಕೆ ತಂತ್ರಾಂಶಗಳನ್ನು ಬಳಸುವುದನ್ನು ಕೂಡ ಭಾರತೀಯ ಕಾಯ್ದೆಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಯಾವ ಕಾನೂನಿನ ಅಡಿಯಲ್ಲಿ ಸರಕಾರ ನಾಗರಿಕರ ಮೇಲೆ ಇಂತಹ ಬೇಹುಗಾರಿಕೆ  ಚಟುವಟಿಕೆಗಳನ್ನು ಕೈಗೊಂಡಿದೆ? ಸುಪ್ರಿಂ ಕೋರ್ಟ್ ‍ವಿಧಿಸಿರುವಂತೆ, ಖಾಸಗಿತ್ವದ ಹಕ್ಕು ಒಂದು ಮೂಲಭೂತ ಹಕ್ಕು, ಆದರೆ ಈ ಬಿಜೆಪಿ  ಸರಕಾರ ಖಾಸಗಿತ್ವ ಶಾಸನವನ್ನು ತರದೆ ನುಣುಚಿಕೊಳ್ಳುತ್ತಿದೆ.

“ಕನ್ನ ಹಾಕು, ನೆಡು, ಬಂಧಿಸು’ ಸೂತ್ರ

ಇದಕ್ಕೆ ಮೊದಲು ಮಾನವ ಹಕ್ಕುಗಳ ಚಳುವಳಿಕಾರರ ಸ್ಮಾರ್ಟ್‌ಫೋನುಗಳನ್ನು ಮತ್ತು ಕಂಪ್ಯೂಟರುಗಳನ್ನು ಹ್ಯಾಕ್‍ ಮಾಡಿರುವ ಉದಾಹರಣೆಗಳು ಬಯಲಿಗೆ ಬಂದಿವೆ. ಕೆಲವು ಸಾಮಗ್ರಿಗಳನ್ನು ಅವರ ಸಾಧನಗಳಲ್ಲಿ ಡಿಜಿಟಲ್‍ ರೂಪದಲ್ಲಿ ಕಳ್ಳತನದಿಂದ ಹಾಕಲಾಯಿತು, ನಂತರ ಅವನ್ನು ಅವರುಗಳನ್ನು ಕರಾಳ ಕಾಯ್ದೆಗಳ ಅಡಿಯಲ್ಲಿ ಬಂಧಿಸಲು ಬಳಸಲಾಗಿದೆ.

ಫ್ಯಾಸಿಸ್ಟ್ ತೆರನ ವಿಧಾನಗಳನ್ನು ಬಳಸಿಕೊಳ್ಳುವ ಈ ಮಟ್ಟದ ಸರ್ವಾಧಿಕಾರಶಾಹಿಯನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ. “ಕನ್ನ ಹಾಕು, ನೆಡು, ಬಂಧಿಸು’ ಎಂಬ ಈ ಬಿಜೆಪಿ ಸರಕಾರ ಬಳಸುವ ಸೂತ್ರ ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳ ಒಂದು ಉಲ್ಲಂಘನೆಯಾಗಿದೆ ಎಂದು ಖಂಡಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಿಜೆಪಿ ಕೇಂದ್ರ ಸರಕಾರ ಪೆಗಸಿಸ್‍ ಸೈಬರ್ ತಂತ್ರಾಂಶವನ್ನು ಭಾರತೀಯ ನಾಗರಿಕರ ಮೇಲೆ ಗೂಢಚಾರಿಕೆಗೆ ಒಂದು ಕಾನೂನುಬಾಹಿರ ಮತ್ತು ಅಧಿಕಾರಬಾಹಿರ ರೀತಿಯಲ್ಲಿ ಬಳಸುವ ವಿಷಯದಲ್ಲಿ ಉತ್ತರ ಕೊಡಬೇಕು ಮತ್ತು ಎಲ್ಲವನ್ನೂ ಸ್ಪಷ್ಟಗೊಳಿಸಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *