ಮೋದಿ ಸರಕಾರದ ಕೃಪೆಯಿಂದ ಬಡತನ ಹೆಚ್ಚುತ್ತಿದೆ: ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್‌

ಬೆಂಗಳೂರು: ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿದಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇಟ್‌ ಅವರು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ʻʻ ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರ್ಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆʼʼ ಎಂದು ಆರೋಪಿಸಿದರು.

ಇದನ್ನು ಓದಿ: ಮೇಕೆದಾಟು ಯೋಜನೆ ಭೂಮಿಪೂಜೆ ಏರ್ಪಡಿಸಿ-ಸರಕಾರದ ಜತೆ ನಾವಿದ್ದೇವೆ: ಡಿ.ಕೆ. ಶಿವಕುಮಾರ್

ಯುಪಿಎ ಸರಕಾರದ ಅವಧಿಯಲ್ಲಿ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ, ಬಿಜೆಪಿ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು ₹1.25 ಲಕ್ಷ ಕೋಟಿ ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ ಎಂದು ಹೇಳಿದರು.

ದೇಶದ ಪ್ರಧಾನಿ ನರೇಂದ್ರಮೋದಿ ಸರಕಾರದ ಆಡಳಿತ ವೈಖರಿಯ ಬಗ್ಗೆ ಉಲ್ಲೇಖಿಸಿದ ಸುಪ್ರಿಯಾ ಶ್ರೀನೇಟ್‌ ʻʻಇಂಧನಗಳ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ಭಾರತೀಯರು ಅತಿ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ₹109 ಆಗಿದೆ. ಡೀಸೆಲ್ ₹90 ಕ್ಕೂ ಹೆಚ್ಚಾಗಿದೆ. ಅಡುಗೆ ಅನಿಲ ₹834 ಆಗಿದೆ. ಈ ಬೆಲೆ ಏರಿಕೆ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಆಗಿಲ್ಲ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 5  ಅಮೆರಿಕನ್ ಡಾಲರ್ ಆಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇದರ ಬೆಲೆ 125 ಡಾಲರ್ ಆಗಿತ್ತು. ಆಗ ಪೆಟ್ರೋಲ್ ₹65 ಹಾಗೂ ಡೀಸೆಲ್ ₹44 ಇತ್ತುʼʼ ಎಂದು ಆರೋಪ ಮಾಡಿದರು.

ಹಣದುಬ್ಬರ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ. ಈ ಕೆಲವು ಅಂಶಗಳನ್ನು ಗಮಸಿವುದಾದರೆ, ಗ್ರಾಹಕ ದರ ಸೂಚ್ಯಂಕ(ಸಿಪಿಐ) ಹಣದುಬ್ಬರ: ಮೇ ನಲ್ಲಿ 5.91% ರಿಂದ ಜೂನ್ ಗೆ 6.37%ರಷ್ಟು ಹೆಚ್ಚಳ. ಮೂಲ ಹಣದುಬ್ಬರ: 5.5% ರಿಂದ 5.8%ಕ್ಕೆ ಏರಿಕೆ, ಆಹಾರ ಹಣದುಬ್ಬರ: 5.58% ತಲುಪಿದೆ. ಬೇಳೆಗಳ ಹಣದುಬ್ಬರ: 10.01% ರಷ್ಟಾಗಿದೆ. ಹಣ್ಣುಗಳ ಹಣದುಬ್ಬರ: 11.82% ರಷ್ಟಾಗಿದೆ. ಸಾರಿಗೆ ಹಣದುಬ್ಬರ: 11.56% ರಷ್ಟಾಗಿದೆ. ಇಂಧನ ಹಣದುಬ್ಬರ: 12.68%ರಷ್ಟಾಗಿದೆ. ತೈಲ ಹಣದುಬ್ಬರ: 34.78%ರಷ್ಟಾಗಿದೆ.

ಇದೆಲ್ಲದರ ನಡುವೆ ಜನ ಸಾಮಾನ್ಯರು ತಿನ್ನುವುದಾದರೂ ಏನು? ಈ ಪರಿಸ್ಥಿತಿಯಲ್ಲಿ ವಿದ್ಯುತ್, ಇಂಧನದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು.

ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ ಎಂದ ಸುಪ್ರೀಯಾ ಶ್ರೀನೇಟ್‌ ಅವರು ʻʻ ಕಳೆದ ಮೂರು ತಿಂಗಳಲ್ಲಿ ಅಡುಗೆ ಎಣ್ಣೆ, ಬೇಳೆ, ಸೋಪು, ಟೀ, ಕಾಫಿಗಳ ಬೆಲೆ ಶೇ.42ರಷ್ಟು ಏರಿಕೆಯಾಗಿದೆ. 2021ರ ಮಾರ್ಚ್ ನಿಂದ ಏಪ್ರಿಲ್ ವರೆಗೆ… ಅಡುಗೆ ಎಣ್ಣೆ 12-42% ಹೆಚ್ಚಳವಾಗಿದೆ. ಈ ಸಮಯದಲ್ಲಿ ರೈತರ ಸ್ಥಿತಿ ಊಹಿಸಿಕೊಳ್ಳಿ. ಅವರು ಪ್ರತಿ ಲೀಟರ್ ಅಡುಗೆ ಎಣ್ಣೆಗೆ 14 ಕೆ.ಜಿ.ಯಷ್ಟು ಗೋಧಿ ಮಾರಬೇಕಿದೆ. ಒಂದು ತಿಂಗಳಿಗೆ ಬೇಕಾದ ಅಡುಗೆ ಎಣ್ಣೆಗೆ ಕ್ವಿಂಟಲ್ ನಷ್ಟು ಗೋಧಿ ಮಾರಬೇಕು. ರೈತರ ಬೆಳೆಗೆ ಸಿಗುತ್ತಿರುವ ಬೆಲೆ ಹಾಗೂ ಅವರ ಜೀವನ ವೆಚ್ಚದ ನಡುವಣ ವ್ಯತ್ಯಾಸ ಹೆಚ್ಚಾಗಿದ್ದು, ಇದು ಮಹಾಪರಾಧ. ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರ ರೂಪಾಯಿ ಮೌಲ್ಯ ಕುಸಿದರೂ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸಿದೆ. ಇದರಿಂದ ಅಡುಗೆ ಎಣ್ಣೆ, ಬೇಳೆ ಹಾಗೂ ಗೃಹಬಳಕೆ ವಸ್ತುವಿನ ಬೆಲೆ ಹೆಚ್ಚಿಸಿದೆʼʼ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *