ಧಾರವಾಡ: ಕೋವಿಡ್ ಕಾರಣದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯ 1, 3 ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ ಈಗ ಏಕಾಏಕಿಯಾಗಿ ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿದೆ. ಇದು ಖಂಡನೀಯ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಮಿತಿಯು ಸರಕಾರದ ಗಮನಕ್ಕೆ ತಂದಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಡಿ ಮಾಡಿ ಎಸ್ಎಫ್ಐ ಸಂಘಟನೆ ಮುಖಂಡರು ಮನವಿಯನ್ನು ಸಲ್ಲಿಸಿದ್ದಾರೆ.
ಒಂದೂವರೆ ವರ್ಷದಿಂದ ದಿಢೀರ್ ಎಂದು ಅಪ್ಪಳಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಭಾಗವಾಗಿ ಹಾಗೂ ಲಾಕ್ಡೌನ್ ಅವಧಿಯಲ್ಲಿ 2, 4 ಮತ್ತು ಆರನೇ ಸೆಮಿಸ್ಟರ್ ಆನ್ಲೈನ್ ತರಗತಿಗಳನ್ನು ನಡೆಸಲಾಯಿತು. ಇದೀಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಪದವಿ ತರಗತಿಗಳ ಸೆಮಿಸ್ಟರ್ ಪರೀಕ್ಷೆಗಳು ಬರುವ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಒಂದರ ಹಿಂದೆ ಒಂದನ್ನು ಆಯೋಜನೆ ಮಾಡಿದೆ. ಇದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ.
ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ
ಎಸ್ಎಫ್ಐ ರಾಜ್ಯ ಅಧ್ಯಕ್ಷರಾದ ಅಮರೇಶ್ ಕಡಗದ ಅವರು ʻʻಲಾಕ್ಡೌನ್ ಹಿನ್ನೆಲೆಯಲ್ಲಿ ಪದವಿ ತರಗತಿಗಳು ಆನ್ಲೈನ್ ಮೂಲಕ ನಡೆದಿದೆ. ಅದಲ್ಲದೇ 90 ದಿನಗಳು ಸಮ(2, 4, 6) ಸೆಮಿಸ್ಟರ್ ಸೆಪ್ಟಂಬರ್ 17ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಹೊಸ ವೇಳಾಪಟ್ಟಿಯಂತೆ ಸೆಪ್ಟಂಬರ್ 14ಕ್ಕೆ ಅವಧಿ ಪೂರ್ಣಗೊಳ್ಳಲಿದೆ. ಆದರೆ ಇದಕ್ಕೂ ಒಂದು ತಿಂಗಳ ಪೂರ್ವದಲ್ಲಿ ಬೆಸ(1, 3, 5) ಸಂಖ್ಯೆಯ ಪರೀಕ್ಷೆಗಳು ಆರಂಭಗೊಳ್ಳುವುದರಿಂದ ಪಾಠ ಪೂರ್ಣಗೊಳುವ ಅನುಮಾನ ಮತ್ತು ಪರೀಕ್ಷೆ ಎದುರಿಸುವ ಆತಂಕವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಹೇರಲಾಗಿದೆʼʼ ಎಂದು ಆರೋಪಿಸಿದ್ದಾರೆ.
2020ರ ಡಿಸೆಂಬರ್ನಲ್ಲಿ ಆರಂಭಗೊಂಡ ಬೆಸ ಸಂಖ್ಯೆಯ ಸೆಮಿಸ್ಟರ್ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ ಎಂದು ಸರಕಾರ ಹೇಳಿತ್ತು. ಆದರೆ ಕವಿವಿ ಮಾರ್ಚ್ ಆರಂಭದಲ್ಲೇ ತರಗತಿ ಕೊನೆಗೊಳಿಸಿತು. ಮಾರ್ಚ್ 24 ರಿಂದ ಪರೀಕ್ಷೆ ನಡೆಸುವುದಾಗಿಯೂ ಘೋಷಿಸಿತು. ನಂತರ ಮತ್ತೆ ಪರೀಕ್ಷೆಯನ್ನು ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಲಾಗಿತ್ತು. ಆದರೆ ಸಾರಿಗೆ ಸಂಸ್ಥೆಯ ಮುಷ್ಕರದಿಂದಾಗಿ ಪರೀಕ್ಷೆ ನಡೆಯಲಿಲ್ಲ. ಆದರೆ ಮೇ 5 ರಿಂದ ಸಮ ಸಂಖ್ಯೆಯ ಸೆಮಿಸ್ಟರಗಳನ್ನು ವಿಶ್ವವಿದ್ಯಾಲಯ ಆನ್ಲೈನ್ ಮೂಲಕ ತರಗತಿಗಳನ್ನು ಆರಂಭಿಸಿದನ್ನು ಈ ಹಿಂದೆಯೇ ಎಸ್ಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಎಂದು ತಿಳಿಸಿದ್ದಾರೆ.
ಜೂನ್ 21ರಂದು ನಡೆದ ವಿದ್ಯಾವಿಷಯಕ ಪರಿಷತ್ನಲ್ಲಿ ಎರಡೂ ಸೆಮಿಸ್ಟರ್ ಪರೀಕ್ಷೆಗಳನ್ನು ಸತತ ಎರಡು ತಿಂಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ ಅದಕ್ಕೆ ವಿಶ್ವವಿದ್ಯಾಲಯವು ಈ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಎಸ್ಎಫ್ಐ ಸಂಘಟನೆಯು ತಿಳಿಸಿದೆ.
ಇದನ್ನು ಓದಿ: ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಎಸ್ಎಫ್ಐ ಪ್ರತಿಭಟನೆ
ಆನ್ಲೈನ್ ತರಗತಿಗಳು ನಡೆದರೂ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳು ತರಗತಿಯಿಂದ ವಂಚಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ / ವಿಶ್ವವಿದ್ಯಾಲಯವು ಪರೀಕ್ಷೆ ನಡೆಸುವುದು ಎಷ್ಟು ಸರಿ ಈ ತಪ್ಪನ್ನು ವಿದ್ಯಾರ್ಥಿಗಳ ತಲೆ ಮೇಲೆ ಹೊರಿಸುತ್ತಿರುವುದು ತೀವ್ರ ಖಂಡನೀಯ ಎಂದು ಅಮರೇಶ್ ಕಡಗದ ಆರೋಪಿಸಿದ್ದಾರೆ.
ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಬಸವರಾಜ ಭೋವಿ ಮಾತನಾಡಿ ”ಹಳೆ ಸೆಮಿಸ್ಟರ್ ಭಾರ ವಿದ್ಯಾರ್ಥಿಗಳ ಮೇಲೆ ಬೇಡ, ಆಫ್ ಲೈನ್ ತರಗತಿ ನಂತರವೇ ಪರೀಕ್ಷೆ ನಡೆಸಬೇಕು. ಬಹಳಷ್ಟು ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಿಲ್ಲ, ವಾರ್ಷಿಕ ಪರೀಕ್ಷೆ ನಡೆಸಲು ಅವಕಾಶವಿದ್ದರೂ ಅದನ್ನು ನಡೆಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಸಿದ್ಧರಿಲ್ಲ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬೇಕು. ಪರಿಣಿತರ ಸಮಿತಿ ರಚಿಸಿ ತಜ್ಞರ ಅಭಿಪ್ರಾಯದ ಮೇಲೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದರು.
ಬೆಸ ಸಂಖ್ಯೆಯ )1,3,5) ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಬೇಕು. ಅಥವಾ ಎರಡು ಸೆಮಿಸ್ಟರ್ ಪರೀಕ್ಷೆಯನ್ನು ಕನಿಷ್ಠ ಎರಡು ತಿಂಗಳ ದೈಹಿಕ ತರಗತಿಗಳನ್ನು ನಡೆಸಿ, ವೈಜ್ಞಾನಿಕವಾಗಿ ಹೊಸ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಪರೀಕ್ಷೆ ನಡೆಸಬೇಕು.
ಕೋವಿಡ್ ಲಾಕ್ಡೌನ್ ಪರಿಣಾಮದಿಂದ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಬಹುತೇಕ ಕಾರ್ಮಿಕರ, ಬಡಜನರ ಮಕ್ಕಳು ಸಿಲುಕಿದ್ದಾರೆ ಆದರಿಂದ ಈ ಸಾಲಿನ ಪರೀಕ್ಷೆ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯನ್ನು ಕಾಪಾಡಲು ಸರಕಾರ ಮತ್ತು ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್ಎಫ್ಐ ಸಂಘಟನೆಯು ಮನವಿಯಲ್ಲಿ ತಿಳಿಸಿದೆ.