ಬೆಂಗಳೂರು: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುತ್ತಿರುವ ಧನ ಸಹಾಯವನ್ನು ಏರಿಕೆ ಮಾಡಿರುವ ತೀರ್ಮಾನವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ಸ್ವಾಗತಿಸಿದೆ.
ಕಟ್ಟಡ ಕಾರ್ಮಿಕ ಸಂಘಗಳು ಧನ ಸಹಾಯದ ಹೆಚ್ಚಳಕ್ಕಾಗಿ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಪರಿಷ್ಕೃತ ಹೆಚ್ಚಳವನ್ನು ಕೂಡಲೇ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪುವಂತೆ ಮಂಡಳಿಯು ಅಗತ್ಯ ಕ್ರಮವಹಿಸಬೇಕೆಂದು ಸಿಡಬ್ಲ್ಯೂಎಫ್‌ಐ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ವಿಪ್ರೋ ಕಾರ್ಮಿಕರು ಮರು ನೇಮಕ: ವಜಾ ಅವಧಿಯ ಎಲ್ಲಾ ಸೌಲಭ್ಯ ಒದಗಿಸಲು ಕಾರ್ಮಿಕ ನ್ಯಾಯಾಲಯ ತೀರ್ಪು
ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ ಸಭೆಯನ್ನು ನಡೆಸಿ ಕಾರ್ಮಿಕರ ಧನ ಸಹಾಯ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರಗಳು ತೆಗೆದುಕೊಂಡಿವೆ.
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೀಡುವ ಧನ ಸಹಾಯ ಹೆಚ್ಚಳದ ವಿವರ ಹೀಗಿವೆ:
ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು 2000 ದಿಂದ 3000 ರೂಪಾಯಿ ವರೆಗೆ, ಕುಟುಂಬ ಪಿಂಚಣಿಯನ್ನು 1000 ದಿಂದ 2000 ರೂಪಾಯಿಗೆ, ಹೆರಿಗೆ ಸೌಲಭ್ಯಗಳನ್ನು 20,000 ದಿಂದ 25,000 ರೂಪಾಯಿಗಳಿಗೆ, ಹೆಣ್ಣು ಮಗುವಿಗೆ ನೀಡಲಾಗುತ್ತಿದ್ದ 30,000 ರೂಪಾಯಿಯನ್ನು 35,000 ರೂಪಾಯಿಗಳಿಗೆ, ಶಿಕ್ಷಣ ಸಹಾಯಧನವನ್ನು ನರ್ಸರಿ ವಾರ್ಷಿಕ ಸಹಾಯ ಧನವನ್ನು 3000 ದಿಂದ 5000 ರೂಪಾಯಿಗಳಿಗೆ, ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ 3 ರಿಂದ 5 ಸಾವಿರಗಳಿಗೆ, 5 ರಿಂದ 8 ನೇ ತರಗತಿಯ ಮಕ್ಕಳಿಗೆ 5 ಸಾವಿರದಿಂದ 8 ಸಾವಿರ, 9 ರಿಂದ 10 ನೇ ತರಗತಿಯ ಮಕ್ಕಳಿಗೆ 10 ರಿಂದ 12 ಸಾವಿರ, ಪ್ರಥಮ ಪಿಯುಸಿ ಮಕ್ಕಳಿಗೆ 10,000 ದಿಂದ 15,000, ಐಟಿಐ ಮಕ್ಕಳಿಗೆ 12,000 ದಿಂದ 20,000, ಪದವಿ ವಿಧ್ಯಾರ್ಥಿಗಳಿಗೆ 15,000 ದಿಂದ 25,000 ರೂಪಾಯಿವರೆಗೆ ಹೆಚ್ಚಿಸಲು ನಿರ್ಧರಿಸಿದೆ.
ಅದೇ ರೀತಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25,000 ರಿಂದ 40,000 ಸಾವಿರಕ್ಕೆ ಡಿಪ್ಲೊಮಾ ವಿಧ್ಯಾರ್ಥಿಗಳಿಗೆ 15,000 ರಿಂದ 20,000 ಸಾವಿರ, ಎಮ್.ಬಿ.ಬಿ.ಎಸ್ ವಿಧ್ಯಾರ್ಥಿಗಳಿಗೆ 30 ಸಾವಿರದಿಂದ 50 ಸಾವಿರ ಎಮ್.ಡಿ ವಿಧ್ಯಾರ್ಥಿಗಳಿಗೆ 45 ರಿಂದ 70 ಸಾವಿರ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ 25 ರಿಂದ 50 ಸಾವಿರಗಳಷ್ಟು ಸಹಾಯ ಧನವನ್ನು ಹೆಚ್ಚಿಸಲಾಗಿದೆ.
ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚದಲ್ಲಿ ಮಂಡಳಿ ಭರಿಸಲಿದೆ, ಪ್ಯಾರಾ ಮೆಡಿಕಲ್, ಬಿ.ಎಡ್ ಕೋರ್ಸ್‌ಗಳನ್ನು ಹೊಸದಾಗಿ ಸೇರಿಸಲಾಗಿದೆ, ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 30,000 ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಸಹಾಯ ಧನವನ್ನು ನೀಡಲು ನಿರ್ಧರಿಸಿದೆ ಕಲ್ಯಾಣ ಮಂಡಳಿಯು ನಿರ್ಧರಿಸಿದೆ.
ಇದನ್ನು ಓದಿ: ಬಲಪಂಥೀಯ ರಾಜಕಾರಣವೇ ಹೆಸರಿನ ರಾಜಕಾರಣ
ಇದಲ್ಲದೆ, ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10,000 ದಿಂದ 20,000 ರೂಪಾಯಿಗಳಿಗೆ, ವಿವಾಹ ಸಹಾಯಧನವನ್ನು 50 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲಾ ನೂತನ ಪರಿಷ್ಕೃತ ಸಹಾಯ ಧನವನ್ನು ಇಂದಿನಿಂದಲೇ ಜಾರಿಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾಕಷ್ಟು ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿದ್ದಾರೆ
ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಮಿಕರು ಈ ಸೌಲಭ್ಯ ಸಹಾಯವನ್ನು ಪಡೆಯಲ್ಲಿದ್ದಾರೆ ಮಂಡಳಿಯ ವತಿಯಿಂದ ಅಗಸ್ಟ್ ತಿಂಗಳ ಅಂತ್ಯದೊಳಗಾಗಿ ವಿಶೇಷ ಅದಾಲತ್ ನಡೆಸಿ ಸಹಾಯ ಧನವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲರ ಅರ್ಜಿಯನ್ನು ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದನ್ನು ಸಿಡಬ್ಲ್ಯೂಎಫ್‌ಐ ಫೆಡರೇಶನ್ ಸ್ವಾಗತಿಸಿದೆ.
ಆದರೆ, ಕಲ್ಯಾಣ ಮಂಡಳಿಯು ಕೊವೀಡ್ ಪರಿಹಾರವಾಗಿ 10 ಸಾವಿರ ರೂಪಾಯಿ ಪ್ರಕಟಿಸಬೇಕು ಎನ್ನುವುದು ಕಾರ್ಮಿಕರ ಪ್ರಮುಖ ಬೇಡಿಕೆಯಾಗಿತ್ತು. ಮನೆ ಸಹಾಯಧನವನ್ನು ಕಲ್ಯಾಣ ಮಂಡಳಿ ಆರಂಭವಾದ ದಿನದಿಂದಲೂ ಒಬ್ಬ ಕಾರ್ಮಿಕನಿಗೂ ನೀಡಿಲ್ಲ. ಹೀಗಾಗಿ 5 ಲಕ್ಷ ಮನೆ ಸಹಾಯಧನಕ್ಕಾಗಿ ಸಾವಿರಾರು ಕಾರ್ಮಿಕರು ಜಾತಕಪಕ್ಷಿಯಂತೆ ಕಾಯುತ್ತಾ ಕೊನೆಗೆ ನಿವೃತ್ತಿಯಾಗುತ್ತಿದ್ದಾರೆ. ಇದಲ್ಲದೆ ವೈದ್ಯಕೀಯ ಪರಿಹಾರ ನೀಡುವ ಅವೈಜ್ಞಾನಿಕ ವಿಧಾನ ಕೈ ಬಿಟ್ಟು ಕಾರ್ಮಿಕರು ಚಿಕಿತ್ಸೆಗಾಗಿ ಖರ್ಚು ಮಾಡಿದ ಸಂಪೂರ್ಣ ವೆಚ್ಚವನ್ನು ಪಾವತಿಸಲು ಕ್ರಮವಹಿಸಬೇಕು ಮತ್ತು ಅಲ್ಲದೆ ಮಂಡಳಿಯಲ್ಲಿ ನಡೆಯುತ್ತಿರುವ ಸಾವಿರಾರು ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚಲು ಕ್ರಮ ವಹಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳ ಕುರಿತು ಮಂಡಳಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಿಯಾದುದ್ದಲ್ಲ ಎಂದು ಸಂಘಟನೆಯೂ ಆರೋಪಿಸಿದೆ.
ಕಾರ್ಮಿಕ ಕಲ್ಯಾಣ ಮಂಡಳಿ ಕೈಗೊಂಡ ಹಲವು ಕ್ರಮಗಳನ್ನು ಸ್ವಾಗತಿಸುತ್ತಲೇ, ತಂತ್ರಾಂಶ ಅಳವಡಿಕೆ, ಟೂಲ್ ಕಿಟ್, ಕ್ಯಾಲೆಂಡರ್ ಮುದ್ರಣ, ಆಹಾರ ಕಿಟ್, ವಲಸೆ ಕಾರ್ಮಿಕರಿಗೆ ವಸತಿ ನಿರ್ಮಾಣ, ಅಂಬ್ಯೂಲೆನ್ಸ್ ಖರೀದಿ ಮೊದಲಾದ ಕ್ರಮಗಳ ಕುರಿತು ತನಿಖೆ ನಡೆಸಬೇಕೆಂಬುದು ಸಿಡಬ್ಲ್ಯೂಎಫ್‌ಐ ಸಂಘಟನೆಯು ಆಗ್ರಹಿಸಿದೆ.
ರಾಜ್ಯದ ಇತರೆ ಕಟ್ಟಡ ಕಾರ್ಮಿಕ ಸಂಘಗಳ ಜೊತೆ ಸೇರಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಸಂಘಟನೆಯು ಇದೇ ಜುಲೈ 12 ರಂದು ಕಲ್ಯಾಣ ಮಂಡಳಿ ಮುಂದೆ ಮತ್ತು ರಾಜ್ಯದ್ಯಂತ ಚಳವಳಿ ನಡೆಸಲು ನಿರ್ಧರಿಸಿದೆ.