ʻಒಂದು ರಾಷ್ಟ್ರ-ಒಂದು ಪಡಿತರʼ ಜುಲೈ 31ರವರೆಗೆ ರೂಪಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿʼ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ.

ಕೋವಿಡ್‌ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ಮತ್ತೆ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಮತ್ತಿತರ ಸೌಲಭ್ಯಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಮೂವರು ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಹರ್ಷ್ ಮಂದರ್ ಮತ್ತು ಜಗದೀಪ್ ಓಕರ್  ಅರ್ಜಿ ಸಲ್ಲಿಸಿದ್ದರು.

ಇದನ್ನು ಓದಿ: ಕೋವಿಡ್‌ ಬಿಕ್ಕಟ್ಟು: ದೇಶದಲ್ಲಿ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು ನಿರ್ದೇಶನಗಳನ್ನು ನೀಡಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ (ಎನ್‌ಐಸಿ) ಸಮಾಲೋಚಿಸಿ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ನೋಂದಣಿಗಾಗಿ ಅಂತರ್ಜಾಲ ತಾಣವೊಂದನ್ನು ರೂಪಿಸುವಂತೆಯೂ ಸೂಚಿಸಿತು. ಇದನ್ನೂ ಸಹ ಜುಲೈ 31, 2021ರ ಒಳಗೆ ಪೂರೈಸುವಂತೆ ನ್ಯಾಯಾಲಯವು ನಿರ್ದೇಶಿಸಿತು.

ಆಯಾ ರಾಜ್ಯಗಳಲ್ಲಿ ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿ ಇರುವವರೆಗೂ ವಲಸೆ ಕಾರ್ಮಿಕರ ನಡುವೆ ಉಚಿತವಾಗಿ ವಿತರಿಸಲು ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ. ಇದೇ ವೇಳೆ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಅನುಕೂಲವಾಗು ವಂತೆ ‌ಕೇಂದ್ರ ಸರ್ಕಾರ ರಾಜ್ಯ ಸರಕಾರಗಳಿಗೆ ಪಡಿತರವನ್ನೂ ಪೂರೈಸುವಂತೆಯೂ ಸೂಚಿಸಿದೆ.

ಕಾರ್ಮಿಕರು ಕೆಲಸಕ್ಕಾಗಿ ವಲಸೆ ಹೋಗಿರುವ ಹೊರ ರಾಜ್ಯಗಳಲ್ಲಿ ಕೆಲಸ ಮಾಡುವ ಸ್ಥಳದಲ್ಲೇ ಉಚಿತ ಪಡಿತರ ಪಡೆಯಬಹುದು. ಇಲ್ಲಿ ಪಡಿತರ ಚೀಟಿ ನೋಂದಣಿ ಮಾಡಿಸದಿದ್ದರೂ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಪೀಠ ತಿಳಿಸಿದೆ.

ಪೀಠಕ್ಕೆ ಮಾಹಿತಿ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ರಾಷ್ಟ್ರೀಯ ಮಾಹಿತಿ ಕೇಂದ್ರವು ಯೋಜನೆಯನ್ನು ಕೈಗೆತ್ತಿಕೊಂಡಿದ್ದು ದತ್ತಾಂಶ ಸಿದ್ಧಪಡಿಸಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯಾವಕಾಶ ಅಗತ್ಯವಿದೆ ಎಂದರು.

ಅರ್ಜಿಯ ವಿಚಾರಣೆ ತೀರ್ಪು ನ್ಯಾಯಪೀಠ ಜೂನ್ 11ಕ್ಕೆ ಕಾಯ್ದಿರಿಸಿತ್ತು.

Donate Janashakthi Media

Leave a Reply

Your email address will not be published. Required fields are marked *