ಜಿ-7 ದೇಶಗಳ ಮೇಜಿನಿಂದ ಒಂದು ತುಣುಕು ರೊಟ್ಟಿ

ಪ್ರೊ.ಪ್ರಭಾತ್ ಪಟ್ನಾಯಕ್

ಜಿ-7 ದೇಶಗಳುಅಭಿವೃದ್ಧಿಶೀಲದೇಶಗಳಿಗೆ ದಾನ ಮಾಡುವುದಾಗಿ ಹೇಳಿರುವ 100 ಕೋಟಿ ಡೋಸುಗಳು ದೇಶಗಳ ಲಸಿಕೆಗಳ ಅಗತ್ಯಕ್ಕೆ ಹೋಲಿಸಿದರೆ, ಕೇವಲ ಶೇಕಡಾ 10ರಷ್ಟಾಗುತ್ತದೆ. ಇದು ಅವು ಕೂಡಿಟ್ಟುಕೊಂಡಿರುವ ಹೆಚ್ಚುವರಿ ಲಸಿಕೆಗಳ ಕಾಲಂಶದಷ್ಟೇ, ಅವುಗಳ ಜಿಡಿಪಿಯಲ್ಲಿ ಹೆಚ್ಚೆಂದರೆ 0.05ಶೇ.ದಷ್ಟು ಮಾತ್ರ. ಅಂದರೆ ಅವುಗಳ ಭೋಜನದ ಮೇಜಿನಿಂದ ಎಸೆದ ಒಂದು ತುಣುಕು ರೊಟ್ಟಿ! ಇದರ ಬದಲು ಅವು ಪೇಟೆಂಟ್ಮನ್ನಾಕ್ಕೆ ಒಪ್ಪಿದ್ದರೆಅಭಿವೃದ್ಧಿಶೀಲದೇಶಗಳಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು. ಆದರೆ ಅದನ್ನು ಮಾಡಲಿಲ್ಲ. ಔಷಧಿ ಕಾರ್ಪೊರೇಟ್ಗಳ ಲಾಭಕೋರತನವನ್ನು ಎಷ್ಟು ಬೇಗ ಕೊನೆಗಾಣಿಸಬಹುದು ಎಂಬುದರ ಬಗ್ಗೆ ಒಂದು ಕನಿಷ್ಠ ಒಪ್ಪಂದಕ್ಕೆ ಬರಲು ಕೂಡ ಜಿ-7 ಸಭೆಯು ಪ್ರಯತ್ನಿಸಲಿಲ್ಲ.

ವಿಶ್ವದ ಎಲ್ಲ “ಅಭಿವೃದ್ಧಿಶೀಲ” ದೇಶಗಳಿಗೆ ಒಟ್ಟು ಒಂದು ನೂರು ಕೋಟಿ ಡೋಸ್ ಕೋವಿಡ್-ವಿರೋಧಿ ಲಸಿಕೆಗಳನ್ನು ದಾನ ಮಾಡುವುದಾಗಿ ಇತ್ತೀಚೆಗೆ ಮುಕ್ತಾಯಗೊಂಡ ಜಿ-7 ದೇಶಗಳ ಸಭೆಯು ಭರವಸೆ ನೀಡಿದೆ. ಅಮೆರಿಕಾ 50 ಕೋಟಿ ಡೋಸ್‌ಗಳನ್ನು, ಬ್ರಿಟನ್ 10 ಕೋಟಿ  ಮತ್ತು ಇಟಲಿ, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳು ಉಳಿದ ಭಾಗವನ್ನು ಕೊಡುವುದಾಗಿ ಭರವಸೆ ನೀಡಿವೆ.

“ಒಂದು ನೂರು ಕೋಟಿ ಡೋಸ್‌ಗಳು” ಎಂದು ಹೇಳಿದಾಕ್ಷಣ ಅದು ನಿಜಕ್ಕೂ ಬಹಳ ದೊಡ್ಡ ಕೊಡುಗೆಯೇ ಎನಿಸುತ್ತದೆ. ಆದರೆ, ವಿಶ್ವದ ಉಳಿದ ದೇಶಗಳ ಜನರ ಅಗತ್ಯಗಳಿಗೆ (ಪ್ರತಿ ವ್ಯಕ್ತಿಗೆ ಎರಡು ಡೋಸ್‌ಗಳ ಲೆಕ್ಕದಲ್ಲಿ) ಹೋಲಿಸಿದರೆ ಮತ್ತು ಮುಂದುವರಿದ ಬಂಡವಾಳಶಾಹಿ ದೇಶಗಳು ತಮ್ಮ ತಮ್ಮ ದೇಶಗಳ ಪ್ರತಿ ವ್ಯಕ್ತಿಗೆ ಎರಡು ಡೋಸ್‌ಗಳ ಲೆಕ್ಕದಲ್ಲಿ ಎಲ್ಲರಿಗೂ ಬೇಕಾಗುವ ಲಸಿಕೆಗಳ ಒಟ್ಟು ಮೊತ್ತಕ್ಕಿಂತಲೂ ಅಧಿಕವಾಗಿ ಇಟ್ಟುಕೊಂಡಿರುವ ಲಸಿಕೆಗಳ ಅಗಾಧ ದಾಸ್ತಾನು ಸಂಗ್ರಹಕ್ಕೆ ಹೋಲಿಸಿದರೆ, “ಒಂದು ನೂರು ಕೋಟಿ ಡೋಸ್‌ಗಳು” ವಿಶ್ವದ ಉಳಿದ ದೇಶಗಳ ಜನರ ಅಗತ್ಯಗಳಿಗೆ ಅತ್ಯಲ್ಪವೇ. ಈ ಕಾರಣದಿಂದಾಗಿಯೇ ಹಲವಾರು ಅಂತರರಾಷ್ಟ್ರೀಯ ನಾಗರಿಕ ಸಮಾಜ ಸಂಘಟನೆಗಳು ಜಿ-7 ಘೋಷಣೆಯನ್ನು “ಸಾರ್ವಜನಿಕ ಪ್ರಚಾರದ ಕಸರತ್ತು” ಎಂದು ಟೀಕಿಸಿವೆ.

ವಿಶ್ವದಲ್ಲಿ 680 ಕೋಟಿಯಷ್ಟು ಮಂದಿ ಈವರೆಗೂ ಲಸಿಕೆ ಪಡೆದಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಎರಡು ಬಾರಿ ಲಸಿಕೆ ಹಾಕಲು ಒಟ್ಟು 1360 ಕೋಟಿ ಡೋಸ್‌ಗಳ ಅಗತ್ಯವಿದೆ. ಹಾಗಾಗಿ, ಜಿ-7 ದೇಶಗಳ ಭರವಸೆಯ ಒಂದು ನೂರು ಕೋಟಿ ಡೋಸ್‌ಗಳು ವಿಶ್ವದ ಲಸಿಕೆ ಪಡೆಯದ ಜನರ ಅವಶ್ಯಕತೆಯ ಕೇವಲ 7.4% ಭಾಗ ಆಗುತ್ತದೆ. ಅಗತ್ಯವಿರುವ ಒಟ್ಟು 1360 ಕೋಟಿ ಡೋಸ್‌ಗಳಲ್ಲಿ, “ಅಭಿವೃದ್ಧಿಶೀಲ” ದೇಶಗಳ ಅಗತ್ಯವನ್ನು ನಾವು 1,000 ಕೋಟಿ ಡೋಸ್‌ಗಳು ಎಂದೇ ಭಾವಿಸಿಕೊಂಡರೂ ಸಹ, ಜಿ-7 ದೇಶಗಳು ನೀಡಿರುವ ಭರವಸೆಯು, ಲಸಿಕೆಗಳ ಅಗತ್ಯಕ್ಕೆ ಹೋಲಿಸಿದರೆ, ಕೇವಲ ಶೇಕಡಾ 10ರಷ್ಟಾಗುತ್ತದೆ.

ಮುಂದುವರಿದ ಬಂಡವಾಳಶಾಹಿ ದೇಶಗಳು ಲಸಿಕೆಗಳನ್ನು ಗಣನೀಯ ಪ್ರಮಾಣದಲ್ಲಿ ಖರೀದಿಸಿ ಅವುಗಳನ್ನು ಕೂಡಿಟ್ಟುಕೊಂಡಿವೆ. ಈ ಸಂಗ್ರಹಕ್ಕೆ ಹೋಲಿಸಿದರೆ, ದಾನ ಮಾಡಲು ಉದ್ದೇಶಿಸಿರುವ ಲಸಿಕೆಗಳ ಸಂಖ್ಯೆಯು ಬಹಳ ಕಡಿಮೆಯೇ. ಬ್ರಿಟನನ್ನು ಉದಾಹರಣೆಯಾಗಿ ನೋಡೋಣ. 6.8 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬ್ರಿಟನ್, 50 ಕೋಟಿ ಡೋಸ್ ಲಸಿಕೆಗಳನ್ನು ಖರೀದಿಸಿ ಇಟ್ಟುಕೊಂಡಿದೆ. ಅದರ ಇಡೀ ಜನಸಂಖ್ಯೆಯ ಅಗತ್ಯಗಳನ್ನು ಅದು ಖರೀದಿಸಿರುವ ದಾಸ್ತಾನಿನಿಂದಲೇ ಪೂರೈಸಲಾಗುತ್ತದೆ ಎಂದು ಭಾವಿಸಿದರೂ ಸಹ, 50 – 2×6.8, ಅಂದರೆ  ಇನ್ನೂ 36.4 ಕೋಟಿ ಡೋಸ್‌ಗಳ ಹೆಚ್ಚುವರಿ ದಾಸ್ತಾನು ಉಳಿಯುತ್ತದೆ. ಬ್ರಿಟನ್, ಕೇವಲ 10 ಕೋಟಿ ಡೋಸ್ ಅಥವಾ ಕೇವಲ 27% ಲಸಿಕೆಗಳನ್ನು ದಾನ ಮಾಡಲು ಉದ್ದೇಶಿಸಿದೆ. ಉಳಿದ 73% ಲಸಿಕೆಗಳನ್ನು ಉಳಿಸಿಟ್ಟುಕೊಳ್ಳಲು ಅದು ಏಕೆ ಬಯಸುತ್ತದೆ ಎಂಬುದು ಸ್ಪಷ್ಟವಿಲ್ಲ. ಸಾಂಕ್ರಾಮಿಕವು ಒಂದು ವೇಳೆ ಮುಂದುವರಿದದ್ದೇ ಆದರೆ, ಇನ್ನೊಂದು ಸುತ್ತಿನ ಬಳಕೆಗೆ ಲಸಿಕೆಗಳು ಅಗತ್ಯವಾಗಬಹುದು. ಇದೇ ಲಸಿಕೆಗಳು ಮುಂದಿನ ದಿನಗಳಲ್ಲೂ ವೈರಸ್ ವಿರುದ್ಧ ಇಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಭಾವಿಸಿ, ಮತ್ತು ವಿಶ್ವದ ಉಳಿದ ದೇಶಗಳಿಗೆ ದಾನ ಮಾಡಲು ಉದ್ದೇಶಿಸಿರುವ ಡೋಸ್‌ಗಳನ್ನು ಬದಿಗಿರಿಸಿದ ನಂತರವೂ ಉಳಿಯುವ ಲಸಿಕೆಗಳಲ್ಲಿ, ಬ್ರಿಟನ್ನಿನ ಇಡೀ ಜನಸಂಖ್ಯೆಗೆ ಹೊಸದಾಗಿ ಎರಡು ಬಾರಿ ಲಸಿಕೆ ಹಾಕಿದರೂ ಸಹ, ಲಸಿಕೆಗಳು ಇನ್ನೂ ಉಳಿಯುತ್ತವೆ! ಅಮೆರಿಕಾ, ಇಟಲಿ, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳೂ ಸಹ ಸುಮಾರಾಗಿ ಇದೇ ರೀತಿಯಲ್ಲಿ ಲಸಿಕೆಗಳನ್ನು ಕೂಡಿಟ್ಟುಕೊಂಡಿವೆ.

  • ಆಕ್ಸ್‌ಫಾಮ್ ಪ್ರಕಾರ, ಪೇಟೆಂಟ್ಮನ್ನಾ ಮಾಡಿದರೆ, ಕೇವಲ $6.5 ಬಿಲಿಯನ್ ವೆಚ್ಚದಲ್ಲಿ ವಿಶ್ವದಕೆಳ ಮತ್ತು ಮಧ್ಯಮ ಆದಾಯದ ದೇಶಗಳಇಡೀ ಜನಸಂಖ್ಯೆಗೆ ಲಸಿಕೆ ಹಾಕಬಹುದು. ಮತ್ತೊಂದೆಡೆ, ಪೇಟೆಂಟ್ಮನ್ನಾ ಮಾಡದಿದ್ದರೆ, ವೆಚ್ಚ $80 ಬಿಲಿಯನ್ ವರೆಗೂ ತಗಲುತ್ತದೆ. ಅಂದರೆ, $74ಬಿಲಿಯನ್ ಲಸಿಕೆ ಉತ್ಪಾದಿಸುವ ಕಂಪನಿಗಳ ಜೇಬಿಗೆ ಇಳಿಯುತ್ತದೆ. ಪೇಟೆಂಟ್ರಕ್ಷಣೆಯಡಿಯ ಬೆಲೆಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಭಾಗವು ಪೇಟೆಂಟ್ ಹೊಂದಿರುವವರ ಜೇಬಿಗೆ ಇಳಿಯುತ್ತದೆ. ಇಂತಹ ಲಾಭಕೋರತನವನ್ನು ಬೂರ್ಜ್ವಾ ಸರ್ಕಾರಗಳು ರಕ್ಷಿಸುತ್ತಿವೆ.

ಜಿ-7 ದೇಶಗಳು ದಾನ ಕೊಡುವುದಾಗಿ ಹೇಳಿರುವ ಲಸಿಕೆಗಳು ಉದ್ದೇಶಿತ ದೇಶಗಳಿಗೆ ತಲುಪುವ ಹೊತ್ತಿಗೆ, ಕಡಿಮೆ ಎಂದರೂ, ಮುಂದಿನ ವರ್ಷದ ಮಧ್ಯಭಾಗದವರೆಗೂ ಸಮಯ ಹಿಡಿಯುತ್ತದೆ. ಕೊರೊನಾ ಎರಡನೇ ಅಲೆಯ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಜನರಿಗೆ ಈ ಲಸಿಕೆಗಳು ಸದ್ಯಕ್ಕಂತೂ ಲಭ್ಯವಾಗುವುದಿಲ್ಲ. ಲಸಿಕೆಗಳು ಈ ದೇಶಗಳನ್ನು ತಲುಪಿ ಅವು ಜನರಿಗೆ ಲಭ್ಯವಾಗುವ ಹೊತ್ತಿಗೆ ಲಕ್ಷಾಂತರ ಜನರು ಕೊರೊನಾಗೆ ಬಲಿಯಾಗಿರುತ್ತಾರೆ.

ಅಭಿವೃದ್ಧಿಶೀಲ ದೇಶಗಳ ಅಗತ್ಯಕ್ಕೆ ಹೋಲಿಸಿದರೆ, ಜಿ-7 ದೇಶಗಳ ಉದ್ದೇಶಿತ ಲಸಿಕೆಗಳ ದೇಣಿಗೆಯು ಚಿಕ್ಕದೇ ಇರಬಹುದು, ಆದರೆ, ಅದರ ಹಣ-ಮೌಲ್ಯವು ಸಾಕಷ್ಟು ಗಣನೀಯವೇ ಎಂಬ ಒಂದು ಅಭಿಪ್ರಾಯವಿದೆ. ಈ ಅಭಿಪ್ರಾಯವು ಆಧಾರರಹಿತವಾದದ್ದೇ ಸರಿ. ಲಸಿಕೆಗಳ ಬೆಲೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಜಿ-7 ದೇಶಗಳು ಯಾವ ಲಸಿಕೆಗಳನ್ನು ದೇಣಿಗೆಯಾಗಿ ಕೊಡುತ್ತವೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಕಂಪೆನಿಯು ಯೂರೋಪಿಯನ್ ದೇಶಗಳಿಗೆ ಮಾರುವ ತನ್ನ ಲಸಿಕೆಗಳ ಬೆಲೆಯನ್ನು ಪ್ರತಿ ಡೋಸ್‌ಗೆ $3 ಎಂದು ನಿಗದಿಪಡಿಸಿದೆ. ಆದರೆ, ಇತರ ಲಸಿಕೆಗಳು ಅದಕ್ಕಿಂತಲೂ ಹೆಚ್ಚು ದುಬಾರಿಯಾಗಿವೆ. 50 ಕೋಟಿ ಡೋಸ್ ಫೈಜರ್ ಲಸಿಕೆಗಳನ್ನು ದಾನ ಮಾಡಲು ಅಮೆರಿಕಾ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ ಲಸಿಕೆಯನ್ನು ಈ ಮೊದಲು ತನ್ನ ಜನರಿಗೆ ಒದಗಿಸಲು ಪ್ರತಿ ಡೋಸ್‌ಗೆ $19.5ರಂತೆ ಖರೀದಿಸಿರುವುದರಿಂದ, ಅದರ ಬೆಲೆಯನ್ನು $20 ಎಂದು ಭಾವಿಸಿದರೆ, ಅಮೆರಿಕಾದ ಒಟ್ಟು ಕೊಡುಗೆಯು $10 ಬಿಲಿಯನ್ ಮೌಲ್ಯದ್ದಾಗಿರುತ್ತದೆ, ಅಂದರೆ ಅದರ ಜಿಡಿಪಿಯ ಶೇಕಡಾ 0.05ಕ್ಕಿಂತಲೂ ಕಡಿಮೆ ಮೌಲ್ಯದ್ದಾಗಿರುತ್ತದೆ. ಹಾಗಾಗಿ, ಯಾವ ರೀತಿಯಲ್ಲಿ ನೋಡಿದರೂ, ಜಿ-7 ದೇಶಗಳ ದೇಣಿಗೆಯು ಅವರ ಭೋಜನದ ಮೇಜಿನಿಂದ ಎಸೆದ ರೊಟ್ಟಿಯ ಒಂದು ತುಣುಕು, ಅಷ್ಟೇ.

ಲಸಿಕೆಗಳ ಮೇಲಿನ ಪೇಟೆಂಟ್-ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವ ಪ್ರಶ್ನೆಯನ್ನು ಜಿ-7 ದೇಶಗಳು ಚರ್ಚಿಸಲಿಲ್ಲ ಎಂಬುದನ್ನು ಅವರ ಕೊಡುಗೆಯನ್ನು ಪ್ರಶಂಸಿಸುವ ಹಳಸಲು ಮಾತುಗಳ ಮೂಲಕ ಮರೆಮಾಚಲಾಗುತ್ತಿದೆ. ಪೇಟೆಂಟ್-ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವ ಕ್ರಮವನ್ನು ಅಮೆರಿಕಾ ಮತ್ತು ಫ್ರಾನ್ಸ್ ಮಾತ್ರ ಒಪ್ಪಿಕೊಂಡಿವೆ. ಪೇಟೆಂಟ್-ಮನ್ನಾ ವಿಷಯವನ್ನು ಜಿ-7 ದೇಶಗಳು ಚರ್ಚಿಸಿದ್ದರೆ ಮತ್ತು ಅನುಮೋದಿಸಿದ್ದರೆ, ಈ ವೇಳೆಗೆ ಅದು ಲಸಿಕೆಗಳ ಉತ್ಪಾದನೆಯನ್ನು ಬಹು ಮಟ್ಟಿಗೆ ಹೆಚ್ಚಿಸುತ್ತಿತ್ತು ಮತ್ತು ಈ ಕ್ರಮವು ಬಡ ದೇಶಗಳಿಗೆ ನೂರು ಕೋಟಿ (ಒಂದು ಬಿಲಿಯನ್) ಡೋಸ್‌ಗಳ ದೇಣಿಗೆಗಿಂತ ಹೆಚ್ಚು ಉಪಯುಕ್ತವಾಗುತ್ತಿತ್ತು.

ವಾಸ್ತವವಾಗಿ, ಪೇಟೆಂಟ್-ಹಕ್ಕುಗಳ ಬಗ್ಗೆ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳ ಮಾತಿರಲಿ, ಈ ಜಿ-7 ಶೃಂಗಸಭೆಯ ಆತಿಥ್ಯ ವಹಿಸಿದ್ದ ಮತ್ತು ಸಾರ್ವತ್ರಿಕ ಲಸಿಕೆಯ ಅಗತ್ಯದ ಬಗ್ಗೆ ಭಾರಿ ಸದ್ದು ಮಾಡಿದ್ದ ಬ್ರಿಟನ್ ಕೂಡ ಲಸಿಕೆಗಳ ಮೇಲೆ ತಾತ್ಕಾಲಿಕ ಪೇಟೆಂಟ್-ಮನ್ನಾ ಕ್ರಮವನ್ನು ಒಪ್ಪಿಲ್ಲ. ಈ ವಿದ್ಯಮಾನವು, ಬೂರ್ಜ್ವಾ ಹಿತಾಸಕ್ತಿಗಳ ರಕ್ಷಣೆಗಾಗಿ ಬೂರ್ಜ್ವಾ ಸರ್ಕಾರಗಳು ಎಷ್ಟು ಬಲವಾದ ಬದ್ಧತೆಯನ್ನು ಹೊಂದಿವೆ ಎಂಬುದನ್ನು ಮತ್ತು ಲಸಿಕೆಗಳ ಕೊರತೆಯನ್ನು ಶಾಶ್ವತಗೊಳಿಸುವಲ್ಲಿ ಮತ್ತು ಅದನ್ನು ಲಾಭದಾಯಕವಾಗಿ ಬಳಸಿಕೊಳ್ಳುವಂಥಹ ಹಿತಕರ ವಾತಾವರಣವನ್ನು ಸೃಷ್ಟಿಸುವಲ್ಲಿ ಬೂರ್ಜ್ವಾ ಹಿತಾಸಕ್ತಿಗಳು ಎಷ್ಟು ಸಕ್ರಿಯವಾಗಿವೆ ಎಂಬುದು ಈ ಸನ್ನಿವೇಶದಲ್ಲಿ ಕಾಣಸಿಗುತ್ತವೆ.

ಈ ಮಾತಿಗೆ ಉದಾಹರಣೆಯಾಗಿ ಮಾಡೆರ್ನಾ ಎಂಬ ಔಷಧ ಕಂಪೆನಿಯ ಒಂದೇ ಒಂದು ಪ್ರಕರಣವನ್ನು ಗಮನಿಸಿದರೆ ಸಾಕು. ಕೋವಿಡ್ ವಿರುದ್ಧ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಈ ಕಂಪೆನಿಯು ಅಮೆರಿಕಾ ಸರ್ಕಾರದಿಂದ $6 ಬಿಲಿಯನ್ ಹಣ ಪಡೆದಿದೆ. ಈ ಆರ್ಥಿಕ ಸಹಾಯಕ್ಕೆ ಪ್ರತಿಯಾಗಿ ಅದು ಅಮೆರಿಕಾ ಸರ್ಕಾರಕ್ಕೆ ಮಾರುವ ಪ್ರತಿ ಡೋಸ್ ಲಸಿಕೆಯ ಬೆಲೆಯನ್ನು $15 ಎಂದು ನಿಗದಿಪಡಿಸಿದೆ. ಮಾಡೆರ್ನಾ ಲಸಿಕೆಯ ಬೆಲೆಯು ಆಸ್ಟ್ರಾಜೆನೆಕಾ ಲಸಿಕೆಯ ಬೆಲೆ($3-4)ಗಿಂತ ಹೆಚ್ಚು ದುಬಾರಿಯಾಗಿದ್ದರೂ ಸಹ, ಫೈಜರ್ ನಿಗದಿಪಡಿಸಿರುವ $19.50ಕ್ಕಿಂತ ಅಗ್ಗವಾಗಿದೆ. ಕೇವಲ ವಾದದ ಸಲುವಾಗಿ, ಮಾಡೆರ್ನಾ ನಿಗದಿಪಡಿಸಿರುವ ಅದರ ಲಸಿಕೆಯ ಬೆಲೆಯನ್ನು ಪರಿಶೀಲಿಸೋಣ. ಲಸಿಕೆಯನ್ನು ಸಂಶೋಧಿಸಿ ಅದನ್ನು ಅಭಿವೃದ್ಧಿಪಡಿಸಲು ತಗುಲಿದ ವೆಚ್ಚವನ್ನು ಬದಿಗಿಟ್ಟು, ಅದರ ಉತ್ಪಾದನಾ ವೆಚ್ಚ ಮತ್ತು ಅದರೊಂದಿಗೆ ಒಂದು ಸಾಧಾರಣ ಮಟ್ಟದ ಲಾಭಾಂಶವೂ ಸೇರಿದಂತೆ ಲಸಿಕೆಯ ಬೆಲೆಯನ್ನು $15 ಎಂದು ಭಾವಿಸೋಣ, ಅಮೆರಿಕಾ ಸರ್ಕಾರವು ಲಸಿಕೆಯ ಸಂಶೋಧನೆಗಾಗಿ $6 ಬಿಲಿಯನ್ ಹಣವನ್ನು ಖರ್ಚು ಮಾಡಿರುವುದರಿಂದ ಅದನ್ನು ಲಸಿಕೆಯ ಬೆಲೆಯ ಮೂಲಕ ಪಡೆದುಕೊಳ್ಳುವ ಅವಶ್ಯಕತೆ ಇಲ್ಲಿ ಉದ್ಭವವಾಗುವುದಿಲ್ಲ. ಹಾಗಾಗಿ, ಮಾಡೆರ್ನಾ ಇತರ ಖರೀದಿದಾರರಿಗೆ $15ಕ್ಕಿಂತ ಹೆಚ್ಚು ಬೆಲೆ (ಅದಕ್ಕೆ ಇನ್ನೂ ಸ್ವಲ್ಪ ಲಾಭ ಸೇರಿಸಿದರೂ ಅಡ್ಡಿಯಿಲ್ಲ) ವಿಧಿಸಲು ಕಾರಣವೇ ಇಲ್ಲ. ಆದರೆ, ಲಸಿಕೆಗಳ ಬೆಲೆಯನ್ನು, ಮಾಡೆರ್ನಾ ಕಂಪೆನಿಯ ಸಿಇಒ ಸ್ಟಿಫಾನ್ ಬಾನ್ಸೆಲ್, ಲಸಿಕೆಗಳ ಆರ್ಡರ್ ಎಷ್ಟು ದೊಡ್ಡದು ಎಂಬುದನ್ನು ಅವಲಂಬಿಸಿ, $25 ಮತ್ತು $37 ರ ನಡುವೆ ನಿಗದಿಪಡಿಸುವ ಒಂದು ಸಂಖ್ಯೆಯು ಅದರ “ನ್ಯಾಯೋಚಿತ ಬೆಲೆ” ಎಂದು ಹೇಳಿದ್ದಾರೆ!

ಹಿಂದಿನ ವರ್ಷದ ಮಾರ್ಚ್‌ನಿಂದ ಈ ವರ್ಷದ ಏಪ್ರಿಲ್ ಅಂತ್ಯದ ನಡುವೆ ಮಾಡೆರ್ನಾ ಕಂಪೆನಿಯ ಷೇರುಗಳ ಬೆಲೆ ಆರು ಪಟ್ಟು ಹೆಚ್ಚಾಗಿದೆ ಮತ್ತು ಅದರ ಸಿಇಒ ಸರಿ ಸುಮಾರು ಇದೇ ಅವಧಿಯಲ್ಲಿ $5.5 ಬಿಲಿಯನ್ ಸಂಪತ್ತನ್ನು ಗಳಿಸಿಕೊಂಡಿದ್ದಾರೆ. ಲಸಿಕೆಗಳ ಕೊರತೆಯ ಲಾಭ ಪಡೆದಿರುವುದು ಮಾಡೆರ್ನಾ ಕಂಪೆನಿ ಒಂದೇ ಅಲ್ಲಾ. ಉಳಿದ ಕಂಪೆನಿಗಳೂ ಸಹ ಸೊಂಪಾಗಿ ಹಣ ಮಾಡಿಕೊಂಡಿವೆ.

ಈ ಕಂಪೆನಿಗಳು ಎಷ್ಟು ಅಗಾಧ ಪ್ರಮಾಣದ ಲಾಭ ಮಾಡಿಕೊಂಡಿವೆ ಎಂಬುದನ್ನು ಆಕ್ಸ್‌ಫಾಮ್ ಸಂಸ್ಥೆಯು ಅಂದಾಜು ಮಾಡಿದೆ. ಅಂಕಿ-ಅಂಶಗಳ ಗೋಜಿಗೆ ಹೋಗುವ ಬದಲು, ಆಕ್ಸ್‌ಫಾಮ್ ಒದಗಿಸಿರುವ ವಿವರಣೆಯ ಒಂದು ತುಣುಕು ಈ ಕಂಪೆನಿಗಳ ಲಾಭದಾಯಕತೆಯ ಪ್ರಮಾಣವನ್ನು ತೋರಿಸುತ್ತದೆ. ಆಕ್ಸ್‌ಫಾಮ್ ಪ್ರಕಾರ, ಪೇಟೆಂಟ್-ಮನ್ನಾ ಮಾಡಿದರೆ, ಕೇವಲ $6.5 ಬಿಲಿಯನ್ ವೆಚ್ಚದಲ್ಲಿ ವಿಶ್ವದ “ಕೆಳ ಮತ್ತು ಮಧ್ಯಮ ಆದಾಯದ ದೇಶಗಳ” ಇಡೀ ಜನಸಂಖ್ಯೆಗೆ ಲಸಿಕೆ ಹಾಕಬಹುದು. ಮತ್ತೊಂದೆಡೆ, ಪೇಟೆಂಟ್-ಮನ್ನಾ ಮಾಡದಿದ್ದರೆ, ಸದರಿ ವೆಚ್ಚವು $80 ಬಿಲಿಯನ್ ವರೆಗೂ ತಗಲುತ್ತದೆ. ಅಂದರೆ, ಈ ದೇಶಗಳ ಇಡೀ ಜನಸಂಖ್ಯೆಗೆ ಲಸಿಕೆ ಹಾಕಲು ತಗಲುವ $80 ಬಿಲಿಯನ್ ವೆಚ್ಚದಲ್ಲಿ, $74 ಬಿಲಿಯನ್ ಲಾಭವು ಲಸಿಕೆ ಉತ್ಪಾದಿಸುವ ಕಂಪನಿಗಳ ಜೇಬಿಗೆ ಸಲೀಸಾಗಿ ಇಳಿಯುತ್ತದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪೇಟೆಂಟ್-ರಕ್ಷಣೆಯಡಿಯ ಬೆಲೆಗಳಲ್ಲಿ ಈ ದೇಶಗಳ ಜನಸಂಖ್ಯೆಗೆ ಲಸಿಕೆ ಹಾಕುವ ವೆಚ್ಚದ ಶೇಕಡಾ 90ಕ್ಕಿಂತ ಹೆಚ್ಚು ಭಾಗವು ಪೇಟೆಂಟ್ ಹೊಂದಿರುವವರ ಜೇಬಿಗೆ ಇಳಿಯುತ್ತದೆ.

ಇಂತಹ ಲಾಭಕೋರತನವನ್ನು ಬೂರ್ಜ್ವಾ ಸರ್ಕಾರಗಳು ರಕ್ಷಿಸುತ್ತಿವೆ. ತಾತ್ಕಾಲಿಕವಾಗಿ ಪೇಟೆಂಟ್-ಮನ್ನಾಗೆ ಒಪ್ಪಿದ ಸರ್ಕಾರಗಳು, ಕೆಲವು ತಿಂಗಳುಗಳ ನಂತರ ಈ ಲಾಭಕೋರತನ ಕೊನೆಗೊಳ್ಳಬೇಕೆಂದು ಬಯಸುತ್ತವೆ. ಈ ಅವಧಿಯು, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಒಪ್ಪಂದಕ್ಕೆ ಬರಲು ಅಗತ್ಯವಿರುವ ಸಮಯವಾಗಿರುತ್ತದೆ. ಪೇಟೆಂಟ್-ಮನ್ನಾವನ್ನು ವಿರೋಧಿಸುವವರು ಈ ಲಾಭಕೋರತನ ಮುಂದುವರಿಯುವುದನ್ನು ಬಯಸುತ್ತಾರೆ. ಈ ಎರಡೂ ನಿಲುವುಗಳ ಬಗ್ಗೆ ಚರ್ಚಿಸಲು ಮತ್ತು ಇಂತಹ ಲಾಭಕೋರತನವನ್ನು ಎಷ್ಟು ಬೇಗ ಕೊನೆಗಾಣಿಸಬಹುದು ಎಂಬುದರ ಬಗ್ಗೆ ಒಂದು ಕನಿಷ್ಠ ಒಪ್ಪಂದಕ್ಕೆ ಬರಲು ಜಿ-7 ಸಭೆಯು ಪ್ರಯತ್ನಿಸಲಿಲ್ಲ. ಮತ್ತು, ಪೇಟೆಂಟ್-ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡಲು ಒಪ್ಪಿದ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳೂ ಸಹ, ಪೇಟೆಂಟ್-ಮನ್ನಾ ವಿರೋಧವನ್ನು ಕೈಬಿಡುವಂತೆ ತಮ್ಮ ಮೊಂಡು ಸಹೋದ್ಯೋಗಿಗಳ ಮನವೊಲಿಸುವ ಪ್ರಯತ್ನ ಮಾಡಲಿಲ್ಲ ಎಂದು ವರದಿಗಳು ತಿಳಿಸುತ್ತವೆ.

ಪೇಟೆಂಟ್-ಮನ್ನಾ ಕ್ರಮವು ಕೇವಲ ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾತ್ರ ಮುಖ್ಯವಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ, ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವುದೇ ಅದರ ಪ್ರಾಮುಖ್ಯತೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಇತ್ತೀಚಿನ ಒಂದು ವಿದ್ಯಮಾನವೆಂದರೆ, ಜೂನ್ 9ರಂದು ನಡೆದ ವಿಶ್ವ ವ್ಯಾಪಾರ ಸಂಸ್ಥೆಯ ಸಭೆಯಲ್ಲಿ, ಸದಸ್ಯ ದೇಶಗಳು ಅಂತಿಮವಾಗಿ “ಒಪ್ಪಂದದ ಕರಡು ಸಿದ್ಧಪಡಿಸುವುದನ್ನು” ಬೆಂಬಲಿಸಿದವು ಮತ್ತು “ಈ ಚರ್ಚೆಯ ತುರ್ತಿನ ಬಗ್ಗೆ ಒಪ್ಪಿದವು”!

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *