ಕೃಷಿ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಪ್ರತಿಭಟನೆ: ರೈತರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ದೇಶದ ಸ್ವಾತಂತ್ರ್ಯ ನಂತರ 74 ವರ್ಷಗಳಿಂದ ಕೃಷಿ ಮಾಡಿಕೊಂಡು 140 ಕೋಟಿ ಭಾರತೀಯರಿಗೆ ಆಹಾರ ನೀಡುತ್ತಿದ್ದೇವೆ. ಆದರೂ ನಮ್ಮ ಈ ಸೇವೆಗೆ ಪ್ರತಿಯಾಗಿ ಭಾರತ ಸರ್ಕಾರ ಮೂರು ರೈತ ವಿರೋಧಿ ಕರಾಳ ಕಾನೂನು ಹೇರಿದೆ. ಇವು ನಮ್ಮ ಕೃಷಿಯನ್ನು ಮತ್ತು ಮುಂದಿನ ಪೀಳಿಗೆಗಳನ್ನು ನಾಶಪಡಿಸುತ್ತವೆ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ʻಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿʼ ಎಂಬ ಘೋಷವಾಕ್ಯದೊಡನೆ ದೇಶವ್ಯಾಪಿಯಾಗಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿಯೂ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ವಿವಿಧ ರೈತ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಯನ್ನು ನಡೆಸಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು.

ಇದನ್ನು ಓದಿ: ಮೂರು ಕೃಷಿ ಕಾಯ್ದೆಗಳು: ಜನತೆಯ ವಿರುದ್ಧ, ಬಂಡವಾಳಿಗರ ಪರ

ಮೌರ್ಯ ಸರ್ಕಲ್​​ನಲ್ಲಿನಿಂದ ರಾಜಭವನವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಸಂಘಟಕರು ಉದ್ದೇಶಿಸಿದ್ದರು. ಆದರೆ, ರಾಜ್ಯಪಾಲರ ಭೇಟಿಗೆ ಅವಕಾಶ ಕೊಡದೆ, ಮೌರ್ಯ ಸರ್ಕಲ್​ನಲ್ಲೇ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ರೈತರ ಪ್ರತಿಭಟನೆ ಇಂದಿಗೆ ಏಳು ತಿಂಗಳು, ದೆಹಲಿ ಗಡಿಯಲ್ಲಿ ಕೃಷಿ ತಿದ್ದುಪಡಿ ಕಾನೂನುಗಳನ್ನು ರದ್ದು ಪಡಿಸುವಂತೆ ನಡೆಯುತ್ತಿರುವ ನಿರಂತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೇಶದ ಮೂಲೆಮೂಲೆಯಿಂದ ರೈತ ಸಂಘಟನೆಗಳು ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.

ನಗರದಲ್ಲಿಯೂ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ರಾಜ್ಯ ಸಂಘಟನೆ ಪ್ರತಿಭಟನೆ ಮೂಲಕ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕೊಡುವ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ರಾಜ್ಯಪಾಲರ ಭೇಟಿಗೆ ಅವಕಾಶ ಕೊಡದೆ, ಮೌರ್ಯ ಸರ್ಕಲ್​ನಲ್ಲೇ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ಬಲಪ್ರಯೋಗದಿಂದ ಬಂಧನ ಮಾಡಿದರು. ಬಡಗಲಪುರ ನಾಗೇಂದ್ರ ಹಾಗೂ ಕೋಡಿಹಳ್ಳಿ ಚಂದ್ರಶೇಖರ್, ಜಿಸಿ ಬಯ್ಯಾರೆಡ್ಡಿ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನು ಓದಿ: ನರೇಂದ್ರ ಮೋದಿ ಸರ್ವಜ್ಞರೇನಲ್ಲ ಎಂದು ತೋರಿಸುತ್ತಿದೆ ರೈತರ ಹೋರಾಟ

ಮತ್ತೊಂದು ಕಡೆಯಿಂದ ರಾಜಭವನಕ್ಕೆ ಹೊರಟಿದ್ದ ಕುರುಬೂರು ಶಾಂತಕುಮಾರ್ ನೇತೃತ್ವದ ಪ್ರತಿಭಟನಾಕಾರರನ್ನು ಪ್ಯಾಲೇಸ್‌ ರಸ್ತೆಯಲ್ಲಿರುವ ಕಾವೇರಿ ಅತಿಥಿ ಗೃಹದಲ್ಲಿಯೇ ವಶಕ್ಕೆ ಪಡೆದು ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.

ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ʻʻನಮ್ಮ ಸ್ವಾತಂತ್ರ್ಯ ಹರಣವಾಗಿದೆ. ರೈತವಿರೋಧಿ ಕಾನೂನನ್ನು ಜಾರಿಗೆ ತಂದಿರುವ ಯಡಿಯೂರಪ್ಪ ಸರ್ಕಾರ ಕೂಡಾ ರೈತ ವಿರೋಧಿಯಾಗಿದೆ. ಇದನ್ನು ವಿರೋಧಿಸಿ ರಾಜ್ಯಪಾಲರ ಬಳಿ ಮನವಿ ಮಾಡಲು ಹೋಗುತ್ತಿದ್ದೆವು. ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡದೇ ನಮ್ಮ ಪ್ರತಿಭಟನಾ ಸ್ವಾತಂತ್ರ್ಯ ಹರಣ ಮಾಡಿದೆ. ರೈತವಿರೋಧಿ ಕಾನೂನುಗಳನ್ನು ಬಲತ್ಕಾರವಾಗಿ ನಮ್ಮ ಮೇಲೆ ಹೇರುತ್ತಿದ್ದಾರೆʼ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿ 7 ತಿಂಗಳುಗಳು ಕಳೆಯುತ್ತಿವೆ. ಹೀಗಾಗಿ ಆ ದಿನವನ್ನು  ” ಕೃಷಿ ರಕ್ಷಿಸಿ – ಪ್ರಜಾಪ್ರಭುತ್ವ ಉಳಿಸಿ” ಎಂಬ ಘೋಷಾವಾಕ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮನ್ನು ಬಂಧಿಸಿರುವುದು ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದ್ದಾರೆ.

ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ʻʻಇಂದು ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ. ತುರ್ತು ಪರಿಸ್ಥಿತಿ ವಿರೋಧಿಸಿದವರೇ ಇಂದು ಆ ಪರಿಸ್ಥಿತಿ ಮತ್ತೆ ತಂದಿದ್ದಾರೆ. ಇಡೀ ದೇಶದ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದರಿಂದ ಇವು ಜನವಿರೋಧಿ, ದೇಶವಿರೋಧಿ ಕಾನೂನುಗಳು. ನ್ಯಾಯ ಕೇಳಲು ಬಂದ ನಮ್ಮನ್ನು ಜೈಲಿಗೆ ಹಾಕ್ತೇವೆ ಎನ್ನುತ್ತಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಕೃಷಿ ಕಾಯಿದೆಗಳ ವಿರುದ್ಧ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ

ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಎಲ್ಲ ರಾಜ್ಯಗಳಲ್ಲೂ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಅಖಿಲ ಭಾರತ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದರ ಭಾಗವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಯಿತು.

 

Donate Janashakthi Media

Leave a Reply

Your email address will not be published. Required fields are marked *