ಬಂಡಾಯ ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಅವರ ಹೆಣದ ಮೇಲೆ ಕಥಾ ಸಂಕಲನವನ್ನು ಖ್ಯಾತ ಸಂಶೋಧಕರಾದ ರಹಮತ್ ತರೀಕೆರೆಯವರು ಬಿಡುಗಡೆ ಮಾಡಿದರು.
ಬಳ್ಳಾರಿ ಜಿಲ್ಲಾ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಆನ್ ಲೈನ್ ಮೂಲಕ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡಿದ ರಹಮತ್ ತರೀಕೆರೆ ಅವರು ಮಾತನಾಡಿ ʻʻಹುಲಿಕಟ್ಟಿ ಚನ್ನಬಸಪ್ಪನವರು ಕಾವ್ಯದಿಂದ ಕಥಾಸಾಹಿತ್ಯ ಪ್ರಾಕಾರಕ್ಕೆ ಹೊರಳಿಕೊಂಡಿರುವುದು ಉತ್ತಮ ಬೆಳವಣಿಗೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಲಿಕಟ್ಟಿ ಚನ್ನಬಸಪ್ಪನವರ ಕಥೆಗಳಲ್ಲಿ ಗಮನಕ್ಕೆ ಬರುವ ಉತ್ತಮ ಅಂಶಗಳೆಂದರೆ ಕತೆಯ ನಿರೂಪಣಾ ಶೈಲಿ, ಕಥೆಯ ಪಾತ್ರಗಳಲ್ಲಿ ಮುಖ್ಯವಾಗಿ ಸ್ತ್ರೀ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ನೋವು ಮತ್ತು ಸಂಕಟಗಳು, ಕತೆಗಾರರು ಭಾಷೆಯನ್ನು ದುಡಿಸಿಕೊಳ್ಳುವ ಕ್ರಮ, ಸೊಗಸಾಗಿ ಕಥೆ ಹೆಣೆಯುವ ಪರಿಣಿತಿ, ಇಲ್ಲಿಯ ಕಥೆಗಳಲ್ಲಿ ಓದುಗನನ್ನು ಸೆಳೆಯುವ ಪ್ರಮುಖ ಅಂಶವೆಂದರೆ ಕಥೆಗಾರ ಕಥೆಯನ್ನು ನಿರೂಪಿಸುವ ಕ್ರಮ. ತಮ್ಮ ಮೊದಲ ಕಥೆಗಳಲ್ಲಿಯೇ ಕಥಗಾರರಿಗೆ ಸಹಜವಾಗಿ ನಿರೂಪಿಸುವ ಧಾಟಿ ಒಲಿದಿದೆ. ಪ್ರತಿ ಕಥೆಯಲ್ಲಿಯೂ ಲೇಖಕ ನಿರೂಪಕರಾಗಿ ಪಾತ್ರ ಪಡೆದಿದ್ದಾರೆ. ತಾನೇ ಒಂದು ಪಾತ್ರವಾಗಿ ಓದುಗರನ್ನು ಕಥೆಗಳಲ್ಲಿ ಲೀನಗೊಳಿಸಿ ಕರೆದೊಯ್ಯುತ್ತಾರೆ. ಈ ನಿರೂಪಣೆಯಷ್ಟೇ ಸೆಳೆವ ಮತ್ತೊಂದು ಅಂಶ ಭಾಷೆಯನ್ನು ದುಡಿಸಿಕೊಳ್ಳುವ ಕ್ರಮ. ಸರಳವಾದ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಸೊಗಸಾಗಿ ಕಥೆಯನ್ನು ಹೆಣೆಯುತ್ತಾರೆ. ಬರಹವೆಲ್ಲವೂ ದ್ವಂದ್ವಗಳಿಗೆ ಎಡೆಗೊಡದೆ ಸಾಮಾನ್ಯನಿಗೂ ಅರ್ಥವಾಗುವ ಮಾದರಿಯಲ್ಲಿ ಕಥೆ ಹೇಳುತ್ತಾರೆ.
ಇದನ್ನು ಓದಿ: “ಮಾತು ಮತ್ತು ಮೌನ” ಕಸ್ತೂರ ಬಾ v/s ಗಾಂಧೀ – ವಾಸ್ತವಿಕ ಅರಿವಿನ ಪುಸ್ತಕ
ಕಥೆಗಳ ವಸ್ತು ವಿಷಯವನ್ನು ಕುರಿತು ಗಮನಿಸುವುದಾದರೆ, ಇಲ್ಲಿಯ ಕಥೆಗಳಲ್ಲಿ ತೀವ್ರವಾದ ನೋವೊಂದು ಪ್ರಕಟಗೊಳ್ಳುತ್ತದೆ. ನೋವಿನ ಆ ಆರ್ದ್ರತೆಯನ್ನು ಕಥೆಯ ಪಾತ್ರಗಳು ವ್ಯಕ್ತಪಡಿಸುತ್ತವೆ. ಈ ನೋವು ಹೈದ್ರಾಬಾದ್ ಕರ್ನಾಟಕ ಭಾಗದ ಜನಜೀವನದಲ್ಲಿ ಸಮರಸಗೊಂಡಿರುವಂತದ್ದು, ಮುಖ್ಯವಾಗಿ ಸ್ತ್ರೀಕೇಂದ್ರಿತವಾದುದು. ಹೆಣ್ಣಿನ ವೇದನೆಗೆ ಧ್ವನಿಯಾಗುವ[ಹೆಂಗರುಳ ಮೂರ್ತಿಯಾಗಿ] ನಿಲ್ಕುತ್ತಾರೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಸಮಸ್ಯೆಗಳನ್ನು ಕನ್ನಡಿ ಹಿಡಿದಂತೆ ಚಿತ್ರಿಸುತ್ತಾರೆ. ತಾವೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪಡೆದ ಅನುಭವಗಳನ್ನು ಕಥೆಗಳಲ್ಲಿ ಮೂಡಿಸಲು ಪ್ರಯತ್ನಿಸುತ್ತಾರೆ.
ಲೇಖಕನ ಬಹುಮುಖ್ಯ ಶಕ್ತಿಯೆಂದರೆ ಆತ ಸಮಕಾಲೀನ ಸಮಾಜಕ್ಕೆ ಸ್ಪಂದಿಸುವ ರೀತಿ. ಇತ್ತೀಚೆಗಷ್ಡೇ ನಾವು ಕಂಡ ಪ್ರಭುತ್ವದ ನೋಟ್‌ಬ್ಯಾನ್‌ನಂತಹ ಆತುರದ ನಿರ್ಧಾರಗಳು ಜನಸಾಮಾನ್ಯರಲ್ಲಿ ಸೃಷ್ಠಿಸಿದ ಇಕ್ಕಟ್ಟುಗಳನ್ನು ಸೃಜನಾತ್ಮಕವಾಗಿ ಸೃಷ್ಠಿಸುವ ಪರಿ ವಿಶೇಷವಾದುದು. ಹೀಗೆ ಪ್ರಭುತ್ವಕ್ಕೆ ಮುಖಾಮುಖಿಯಾಗಿ ನಿಲ್ಲುವಂತಹ ಕಥೆಗಾರನ ವಾಸ್ತವ ಪ್ರಜ್ಞೆ ಆತನ ಸಾಮರ್ಥ್ಯವನ್ನು ತೋರುತ್ತದೆ. ಹೀಗೆ ಪ್ರಭುತ್ವದ ನಿರ್ಧಾರಗಳನ್ನು, ವೈಖರಿಗಳನ್ನು ವಿಮರ್ಶಿಸುವುದು ಸಾಹಿತಿಯ ಬಹುದೊಡ್ಡ ಜವಾಬ್ದಾರಿ. ಈ ಅಂಶಗಳ ಹೊರತಾಗಿಯೂ ಕಥೆಗಾರನಿಗೆ ಮಿತಿಗಳಿಲ್ಲ ಎನ್ನುವಂತಿಲ್ಲ. ಬರಹ ಮುಂದುವರಿದಂತೆ ಮಿತಿಗಳು ತಾನಾಗಿಯೇ ಹಿನ್ನೆಲೆಗೆ ಸರಿಯುತ್ತವೆ. ಆದರೆ ಉತ್ತಮ ಕಥೆಗಾರರಾಗುವ ಎಲ್ಲಾ ಅರ್ಹತೆಗಳು ಚನ್ನಬಸಪ್ಪನವರಲ್ಲಿದೆ. ಈ ಹಿಂದೆ ಕೆಲವು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವಿ ಚನ್ನಬಸಪ್ಪನವರು ಕಥೆಗಾರರಾಗಿಯೂ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ ಎಂದು ರಹಮತ್ ತರೀಕೆರೆ ಅವರು ಹೇಳಿದರು.
ಇದನ್ನು ಓದಿ: ಮಾನವ ಕುಲವನ್ನು ಶೋಷಣೆಯಿಂದ ಮುಕ್ತಿಗೊಳಿಸುವುದು ಕಾರ್ಮಿಕ ವರ್ಗದ ಜವಾಬ್ದಾರಿ – ಮೀನಾಕ್ಷಿ ಸುಂದರಂ
ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಪ್ರಾಧ್ಯಾಪಕರಾದ ಎ.ಬಿ.ರಾಮಚಂದ್ರಪ್ಪ ಅವರು ಪುಸ್ತಕದ ಕುರಿತು ಮಾತನಾಡುತ್ತಾ ಕವಿ ಹುಲಿಕಟ್ಟಿ ಚನ್ನಬಸಪ್ಪ ಅವರು ವಿದ್ಯಾರ್ಥಿ ಚಳುವಳಿಯಲ್ಲಿ ಭಾಗವಹಿಸುತ್ತಾ ಬಂದವರು. ಇವರ ಕಥಾಸಂಕಲನವಾದ ಹೆಣದಮೇಲೆ ಕೃತಿಯು 14 ಕಥೆಗಳನ್ನು ಹೊಂದಿದೆ. ಇವು ದೆವ್ವಹಿಡಿದ ಹುಡುಗಿ, ಹಣ್ಣು ಮಾರುವವಳು, ಹಸಿದಹೊಟ್ಟೆ, ಹೆಣದಮೇಲೆ, ಕಸ, ಕೆಡವಿದವರು, ಮೊದಲಬಲಿ, ನಂಬಿಕೆಟ್ಟವರು, ನಿಮ್ ದಯೆಸ್ವಾಮಿ, ಪ್ರತಿಷ್ಠೆ, ರಂಗಮ್ಮನ ಕನಸು, ಸಂಬಳ, ಸೂರ್ಯ ಚೆಲ್ಲಿದ ಬೆಳಕು, ನಂಟು ಈ ಎಲ್ಲಾ ಕಥೆಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳು ಹಾಗೂ ದುಡಿಯುವ ಜನರ ಬವಣೆಗಳ ಮುಖವಾಣಿಯಾಗಿವೆ. ಇವರು ಸಮುದಾಯ ಸಾಂಸ್ಕೃತಿಕ ಸಂಘಟನೆ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಜೊತೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಇವರು ಗ್ರಾಮೀಣ ಪರಿಸರದಲ್ಲಿ ಜೀವನ ನಡೆಸುತ್ತಾ ಇರುವುದರಿಂದ ಗ್ರಾಮೀಣ ಜನರ ದುಡಿಮೆ, ಬಡತನ, ಅನ್ಯಾಯ, ಹಸಿವು, ದಬ್ಬಾಳಿಕೆ, ರಾಜಕಾರಣ, ಸಾಮಾಜಿಕ ಅಸ್ಪೃಶ್ಯತೆ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳಲ್ಲಿ ಮಹಿಳೆಯರ ಪಾತ್ರ ಕುರಿತು, ಜೊತೆಗೆ ಶೋಷಣೆಗೆ ಒಳಗಾದವರ ಧ್ವನಿಯಾಗಿ ಕಥೆಯೂ ಮುಕ್ತಾಯವಾಗುವುದು ಅತ್ಯಂತ ಪ್ರಮುಖವಾದುದ್ದು.
ಈ ಕಥಾವಸ್ತುಗಳು ನೋಟು ಅಮಾನ್ಯೀಕರಣದಿಂದಾಗಿ ಸಾಮಾನ್ಯ ಜನರ ಜೀವನದಲ್ಲಾದ ತೊಂದರೆಗಳು, ಆರ್ಥಿಕ ಬಿಕ್ಕಟ್ಟು, ಬ್ಯಾಂಕುಗಳ ದಿವಾಳಿತನ ಹಾಗೂ ಹಣ್ಣು ಮಾರುವ ಹೆಣ್ಣು ಮಗಳ ಜೀವನಗಾಥೆ ಮತ್ತು ಸಿದ್ದಾಂತವಿಲ್ಲದ ಇಬ್ಬರೂ ಬಲಪಂಥೀಯ ರಾಜಕೀಯ ಮುಖಂಡರುಗಳ ಶಿಷ್ಯರಾಗಿ ರಾಜಕೀಯ ದ್ವೇಷಿಗಳಾಗುವ ಸ್ಥಿತಿಗಳನ್ನು ಕಥೆಗಾರರು ನೇರವಾಗಿ ಮಾರ್ಕ್ಸ್‌ವಾದಿಯ ದೃಷ್ಠಿಕೋನದಲ್ಲಿ ಕಥೆಗಳನ್ನು ಬರೆದಿದ್ದಾರೆ. ಇದರ ಜೊತೆಯಲ್ಲಿ ದೇಸೀ ವೈಚಾರಿಕತೆಯನ್ನು ಚಿಂತಿಸುವ ಅಂಶಗಳ ಜೊತೆಗೆ ಗ್ರಾಮೀಣ ಪರಿಸರ, ಹಕ್ಕಿಗಳ ಚಿಲಿಪಿಲಿ ಬಗ್ಗೆಯೂ ಚಿತ್ರಿಸಿರುವುದು ಗಮನಾರ್ಹ. ಇನ್ನಷ್ಟು ಕಥಾಸಂಕಲನಗಳು,ಕಾದಂಬರಿಗಳನ್ನು ಬರೆಯಲಿ ಎಂದರು.
ಇಂಥಹ ಪುಸ್ತಕದ ಕುರಿತು ಮಾತನಾಡಲು ಖುಷಿಯಾಗುತ್ತದೆ. ಇನ್ನೂ ಒಳ್ಳೆಯ ಕಥಾ ಸಂಕಲನಗಳು ಹೊರಬರಲಿ ಎಂದು ಹೃದಯ ಪೂರ್ವಕವಾಗಿ ಆಶಿಸುವೆ ಎಂದರು.
ಇದನ್ನು ಓದಿ: ವರ್ತಮಾನಕ್ಕೆ ಧ್ವನಿಯಾದ ರೈತ ಗೀತೆಗಳು : ಬಿಳಿಮಲೆ
ಕಥಾ ಸಂಕಲನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸಾಹಿತಿ ಹುರುಕಡ್ಲಿ ಶಿವಕುಮಾರ್ ರವರು “ಹೆಣದಮೇಲೆ” ಕಥಾಸಂಕಲನದ ಎಲ್ಲಾ ಕಥೆಗಳು ನೊಂದವರ ಪರ ಧ್ವನಿಯಾಗಿರುವುದನ್ನು ಕಾಣುತ್ತೇವೆ. ಶೋಷಕರು ಶೋಷಿತರ ಮೇಲೆ ನಡೆಸುವ ದಬ್ಬಾಳಿಕೆಯನ್ನು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ, ಸೃಜನಶೀಲ ಆಲೋಚನೆಗಳು ಈ ಕಥಾ ಸಂಕಲನದಲ್ಲಿ ಮೂಡಿ ಬಂದಿರುವುದು ಮೆಚ್ಚುವಂತದ್ದು ಅಂದರು.
ಆದಿವಾಸಿ ಹಕ್ಕುಗಳ ರಾಜ್ಯ ಮುಖಂಡರಾದ ಡಾ. ಎಸ್. ವೈ. ಗುರುಶಾಂತ್ ಅವರು ಪುಸ್ತಕದ ಕುರಿತು ಮಾತನಾಡುತ್ತಾ ಹುಲಿಕಟ್ಟಿ ಚನ್ನಬಸಪ್ಪ ಅವರ ಮೊದಲ ಕಥಾ ಸಂಕಲನವಾದ ಹೆಣದಮೇಲೆ ಕೃತಿಯು ತುಂಬಾ ಅತ್ಯುತ್ತಮ ಕಥೆಗಳ ಸಾರಾಂಶವನ್ನು ಹೊಂದಿದೆ. ಅವರ ಕ್ರಾಂತಿಗೀತೆಗಳು ಹಾಗೂ ಕಥೆಗಳನ್ನು ಗಮನಿಸಿರುವೆ. ಅದೇ ರೀತಿಯಲ್ಲಿ ವೈಚಾರಿಕ ಸೃಜನಶೀಲವುಳ್ಳ ಮೊದಲ ಕಥಾ ಸಂಕಲನವು ಮೂಡಿ ಬಂದಿರುವುದು ಸಂತೋಷದ ಸಂಗತಿ ಎಂದು ಶುಭಾಷಯಗಳನ್ನು ಕೋರುತ್ತಾ, ಇನ್ನಷ್ಟು ಕಥಾ ಸಂಕಲನಗಳನ್ನು ಹೊರತರಲಿ ಎಂದು ಆಶಿಸಿದರು.
ಸಮುದಾಯದ ಗೌರವಾಧ್ಯಕ್ಷರಾದ ಎ.ಕರುಣಾನಿಧಿಯವರು ಪುಸ್ತಕದ ಕುರಿತು ಮಾತನಾಡುತ್ತಾ 14 ಕಥೆಗಳ ಸಂಕಲನವನ್ನು ತುಂಬಾ ಸರಳವಾಗಿ ನಿರೂಪಿಸುತ್ತಾರೆ. ಹುಲಿಕಟ್ಟಿ ಚನ್ನಬಸಪ್ಪನವರು ಸಮುದಾಯ ಸಂಘಟನೆಯಲ್ಲಿ ನಿರಂತರವಾಗಿ ಸಿರುಗುಪ್ಪ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವುದರಿಂದ ಸಮಾಜವಾದ ಸಿದ್ದಾಂತಕ್ಕೆ ಬದ್ಧರಾಗಿ ತಮ್ಮ ಕಥೆಗಳನ್ನು ಬರೆದಿದ್ದಾರೆ. ಹೋರಾಟಗಳಿಗೆ ಪೂರಕವಾದ ಚಿಂತನೆಗಳ ಮೇಲೆ ಕಥಾ ಸಂಕಲನ ಮೂಡಿ ಬಂದಿದೆ. ಮುಂದೆಯೂ ಕೂಡ ಹಲವು ಕಥಾ ಸಂಕಲನಗಳನ್ನು ಹೊರತರಲಿ ಎಂದು ಅವರನ್ನು ಗೌರವಪೂರ್ವಕವಾಗಿ ಹಾರೈಸುವೆ ಎಂದರು,
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಸಮುದಾಯ ಸಂಘಟನೆಯ ಅಧ್ಯಕ್ಷರಾದ ಡಾ. ಎಂ.ಮುನಿರಾಜು ಅವರು ಹುಲಿಕಟ್ಟಿ ಚನ್ನಬಸಪ್ಪ ಅವರ ತಲೆಗಳು ಉರುಳ್ಯಾವೋ, ರಕ್ತದ ಕೋಡಿ ಹರಿದಾವೋ; ಹಾಗೂ ತೊಲಗಿದವರಿಗೆ ಮತ್ತೆ ಸ್ವಾಗತವೇ; ಎಂಬ ಕ್ರಾಂತಿಗೀತೆಗಳನ್ನು ಎಸ್.ಎಫ್.ಐ. ಸಂಘಟನೆಯಲ್ಲಿ ಹಾಡುತ್ತಾ ಸಂಘಟನೆಯನ್ನು ಕಟ್ಟಿದ ನಮಗೆ ಇವರ ಹಾಡುಗಳೇ ಸ್ಪೂರ್ತಿ. ಇದರ ಜೊತೆಗೆ ಇವರ ಕವನಗಳನ್ನು ಓದುತ್ತಾ ಬಂದೆವು. ಇವರ ಹೆಣದಮೇಲೆ ಕಥಾ ಸಂಕಲನವು ಸಹ ಸಾಮಾಜಿಕ ಸಮಸ್ಯೆಗಳು, ಜೀವವಿರೋಧಿ ಅಸ್ಪೃಷ್ಯತೆಯ ಸಂಗತಿಗಳು ಮತ್ತು ಹೆಣ್ಣಿನ ಶೋಷಣೆ, ಇದರ ಜೊತೆಗೆ ಗೋಸುಂಬೆ ರಾಜಕೀಯ ಸ್ಥಿತ್ಯಂತರಗಳನ್ನು ಹಾಗೂ ಸೈದ್ದಾಂತಿಕವಾಗಿ ಮೇಲ್ನೋಟಕ್ಕೆ ಪ್ರಗತಿಪರವಾಗಿ ಕಾಣುತ್ತಾ, ಆದರೆ ಒಳಮನಸ್ಸಿನಲ್ಲಿ ಸಮಾಜ ವಿರೋಧಿ, ಬಂಡವಾಳಶಾಹಿ ಸಿದ್ದಾಂತದ ರಾಜಕೀಯ ವಿಕೃತಿಯನ್ನು ಸರಳವಾಗಿ ಚಿತ್ರಿಸಿದ್ದಾರೆ.
ಹೆಣದಮೇಲೆ ಕಥಾ ಸಂಕಲನವು ಅತ್ಯುತ್ತಮವಾಗಿ ಮೂಡಿಬಂದಿದ್ದು, ರಾಜಕಾರಣದ ವಿಡಂಬನೆಯ ಕಥಾಸಂಕಲನವಾಗಿದ್ದು, ಇಂತಹ ಕಥೆಗಳನ್ನು ಇನ್ನಷ್ಟು ಬರೆಯಲಿ ಎಂದು ಅವರಲ್ಲಿ ಮನವಿ ಮಾಡುತ್ತೇವೆ ಅಂದರು.
ಸುರೇಶ್ ಅಂಗಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಳ್ಳಾರಿ ಸಮುದಾಯ ಸಂಘಟನೆಯ ಮುಖಂಡರಾದ ಅಂಬರೀಶ್ ಸ್ವಾಗತಿಸಿದರು. ಎ. ಕರುಣಾನಿಧಿ, ಅನುರಾಧ ಪತ್ತಾರ್, ನಾಗರಾಜ್ ಪತ್ತಾರ್ ರವರು ಹುಲಿಕಟ್ಟಿ ಚನ್ನಬಸಪ್ಪ ಅವರು ಬರೆದ ಕ್ರಾಂತಿಗೀತೆಗಳನ್ನು ಹಾಡಿದರು.