ಗುರುರಾಜ ದೇಸಾಯಿ
ದೇಶಾದ್ಯಂತ ಭಾರೀ ಪ್ರಮಾಣದ ನಿರುದ್ಯೋಗದ ಸಮಸ್ಯೆ ಇರುವಾಗಲೇ, ಕೈಗಾರಿಕೆಗಳಲ್ಲಿ ವಿಶೇಷವಾಗಿ ತಂತ್ರಜ್ಞಾನದ ಜಾಗದಲ್ಲಿ ಅತಿಯಾದ ಯಾಂತ್ರೀಕರಣದ ಕಾರಣದಿಂದಾಗಿ ದೇಶೀಯ ಸಾಫ್ಟ್ವೇರ್ ಉದ್ಯಮಗಳಲ್ಲಿ 2022ರ ವೇಳೆಗೆ 30 ಲಕ್ಷ ಉದ್ಯೋಗ ಕಡಿತ ಆಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ಅಂದುಕೊಳ್ಳುವುದಕ್ಕಿಂತ ಹೆಚ್ಚಿನ ವೇಗದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಆಟೋಮೆಷನ್ ನಡೆಯುತ್ತಿದೆ. ಅದರಲ್ಲೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರೀ ಹೊಡೆತ ಬೀಳಬಹುದು. ದೇಶೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ 1.60 ಕೋಟಿಗೂ ಹೆಚ್ಚು ಸಿಬ್ಬಂದಿ ಇದ್ದು, ಅದರಲ್ಲಿ 30 ಲಕ್ಷ ಮಂದಿಯನ್ನು 2022ರ ಹೊತ್ತಿಗೆ ಕೆಲಸದಿಂದ ತೆಗೆಯಲು ಸಿದ್ಧತೆ ನಡೆಸಿವೆ. ಹೀಗೆ ಮಾಡುವುದರಿಂದ ವಾರ್ಷಿಕವಾಗಿ 10,000 ಕೋಟಿ ಅಮೆರಿಕನ್ ಡಾಲರ್ ಅನ್ನು ವೇತನ ರೂಪದಲ್ಲಿ, ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 7.40 ಲಕ್ಷ ಕೋಟಿ ಉಳಿತಾಯ ಆಗುತ್ತದೆ ಎಂದು ವರದಿಗಳು ತಿಳಿಸಿವೆ. ದೇಶೀಯ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 1.6 ಕೋಟಿಯಷ್ಟು ಮಂದಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 90 ಲಕ್ಷ ಮಂದಿ ಕಡಿಮೆ- ಕೌಶಲ ಸೇವೆಗಳು ಹಾಗೂ ಬಿಪಿಎ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾಸ್ಕಾಂ ಹೇಳಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದ ನಿರುದ್ಯೋಗ ದಿನ
ಕಡಿಮೆ ಕೌಶಲ ಸೇವೆಯ ಮತ್ತು ಬಿಪಿಒ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 90 ಲಕ್ಷ ಮಂದಿಯಲ್ಲಿ ಶೇ 30ರಷ್ಟು ಅಥವಾ 30 ಲಕ್ಷದಷ್ಟು ಮಂದಿ 2022ರ ಹೊತ್ತಿಗೆ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ರೊಬೋಟ್ ಪ್ರೊಸೆಸ್ ಆಟೋಮೆಷನ್ ಅಥವಾ ಆರ್ಪಿಎ ಕಾರಣಕ್ಕೆ ಹೀಗಾಗಲಿದೆ. 7 ಲಕ್ಷ ಹುದ್ದೆಗಳು ಆರ್ಪಿಎನಿಂದ ಭರ್ತಿ ಆಗುತ್ತವೆ. ಮತ್ತು ಇತರ ಹುದ್ದೆಗಳು ಏನಿವೆ, ಅವು ತಾಂತ್ರಿಕ ಮೇಲ್ದರ್ಜೆಯಿಂದ ಹಾಗೂ ಸ್ಥಳೀಯ ಐ.ಟಿ.ಗಳಲ್ಲಿ ಕೌಶಲ ಹೆಚ್ಚುವುದರಿಂದ ಹೋಗುತ್ತವೆ. ಅಂದ ಹಾಗೆ ಆರ್ಪಿಎಯಿಂದ ಅಮೆರಿಕದಲ್ಲಿ ಅತಿ ಕೆಟ್ಟ ಪರಿಣಾಮ ಆಗಲಿದ್ದು, ಹತ್ತಿರಹತ್ತಿರ 10 ಲಕ್ಷ ಹುದ್ದೆಗಳು ನಷ್ಟವಾಗಲಿವೆ ಎಂದು ಬ್ಯಾಂಕ್ ಆಫ್ ಅಮೆರಿಕಾದ ವರದಿ ಬುಧವಾರ ಹೇಳಿದೆ. ಭಾರತ ಮೂಲದ ಪೂರ್ಣ ಪ್ರಮಾಣದ ಉದ್ಯೋಗಿಯ ಸರಾಸರಿ ವೆಚ್ಚ ಒಂದು ವರ್ಷಕ್ಕೆ 25,000 ಅಮೆರಿಕನ್ ಡಾಲರ್ ಆಗುತ್ತದೆ. ಅದೇ ಅಮೆರಿಕದ ಸಂಪನ್ಮೂಲಕ್ಕೆ 50 ಸಾವಿರ ಯುಎಸ್ಡಿ ಆಗುತ್ತದೆ. ಇದರಿಂದಾಗಿ ವಾರ್ಷಿಕವಾಗಿ ವೇತನ ಮತ್ತು ಇತರ ಸಂಬಂಧಿಸಿದ ವೆಚ್ಚಗಳು ಸೇರಿ 10,000 ಕೋಟಿ ಅಮೆರಿಕನ್ ಡಾಲರ್ ಮಿಗುತ್ತದೆ ಎಂದು ನಾಸ್ಕಾಂ ಹೇಳಿದೆ.
ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್ಸಿಎಲ್, ಟೆಕ್ ಮಹೀಂದ್ರಾ ಮತ್ತು ಕಾಗ್ನಿಜಂಟ್ ಸೇರಿದಂತೆ ಇತರ ಕಂಪೆನಿಗಳು 2022ರ ಹೊತ್ತಿಗೆ ಕಡಿಮೆ ಕೌಶಲದ 30 ಲಕ್ಷ ಹುದ್ದೆಗಳನ್ನು ಕಡಿಮೆ ಮಾಡುವ ಯೋಜನೆಯಲ್ಲಿವೆ. ಇದರಿಂದ 100 ಬಿಲಿಯನ್ ಯುಎಸ್ಡಿ ಉಳಿಯುವುದು ಒಂದು ಕಡೆಯಾಯಿತು. ಅದೇ ಸಮಯಕ್ಕೆ 10 ಬಿಲಿಯನ್ ಯುಎಸ್ಡಿ ಆದಾಯವನ್ನು ಐ.ಟಿ. ಕಂಪೆನಿಗಳಿಗೆ ಹೆಚ್ಚಿಸುತ್ತದೆ. ಅದು ಆರ್ಪಿಎ ಮೂಲಕವಾಗಿ. ಮತ್ತು 5 ಬಿಲಿಯನ್ ಯುಎಸ್ಡಿ ಅವಕಾಶ ಹೊಸ ಸಾಫ್ಟ್ವೇರ್ಗಳಿಂದ 2022ರ ಹೊತ್ತಿಗೆ ಬರುತ್ತದೆ. ರೊಬೋಟ್ಗಳು ದಿನದ 24 ಗಂಟೆಯೂ ಕೆಲಸ ಮಾಡಬಹುದು. ಇದರಿಂದಾಗಿ ಮನುಷ್ಯರ ವೇತನದಲ್ಲಿ 10:1 ಪ್ರಮಾಣದಲ್ಲಿ ಉಳಿತಾಯ ಆಗುತ್ತದೆ ಎಂದು ವರದಿ ಹೇಳಿದೆ. ಅಂದಹಾಗೆ ರೊಬೋಟ್ ಪ್ರೊಸೆಸ್ ಆಟೋಮೆಷನ್ ಅಂದಾಕ್ಷಣ ಭೌತಿಕವಾದ ರೊಬೋಟ್ಗಳಲ್ಲ, ಸಾಫ್ಟ್ವೇರ್ಗಳ ಅಪ್ಲಿಕೇಷನ್. ಮಾಮೂಲಿ ಹಾಗೂ ಹೆಚ್ಚಿನ ಪ್ರಮಾಣದ, ಸಿಬ್ಬಂದಿಯು ವಿವಿಧ ಕೆಲಸಗಳನ್ನು ಮಾಡಬೇಕಾದದ್ದು ಈ ಸಾಫ್ಟ್ವೇರ್ ಮಾಡುತ್ತದೆ.
ಇದನ್ನೂ ಓದಿ : ನಿರುದ್ಯೋಗ ದರ ಮತ್ತೆ ಹೆಚ್ಚಳ – ಒಂದೇ ತಿಂಗಳಲ್ಲಿ 72 ಲಕ್ಷ ಉದ್ಯೋಗಗಳಿಗೆ ಕತ್ತರಿ
ಇಷ್ಟು ದೊಡ್ಡ ಪ್ರಮಾಣದಲ್ಲಿ ಆಟೋಮೆಷನ್ ಆದರೂ ಪ್ರಮುಖ ಆರ್ಥಿಕತೆಗಳಾದ ಜರ್ಮನಿ (ಶೇ 26), ಚೀನಾ (ಶೇ 7), ಭಾರತ (ಶೇ 5), ಕೊರಿಯಾ, ಬ್ರೆಜಿಲ್, ಥಾಯ್ಲೆಂಡ್, ಮಲೇಷ್ಯಾ, ರಷ್ಯಾ ಇಲ್ಲೆಲ್ಲ ಉದ್ಯೋಗಿಗಳಿಗೆ ಕೊರತೆ ಎದುರಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಮುಂದಿನ 15 ವರ್ಷಗಳಿಗೆ ದಕ್ಷಿಣ ಆಫ್ರಿಕಾ, ಗ್ರೀಸ್, ಇಂಡೋನೇಷ್ಯಾ, ಫಿಲಿಪಿನ್ಸ್ನಲ್ಲಿ ಹೆಚ್ಚುವರಿ ಕೆಲಸಗಾರರು ಇರಲಿದ್ದಾರೆ ಎನ್ನಲಾಗಿದೆ. ಮುಂದುವರಿಯುತ್ತಿರುವ ದೇಶಗಳಾದ ಚೀನಾ ಮತ್ತು ಭಾರತದಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚು ಅಪಾಯ ಎದುರಾಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಕೀನ್ಯಾ ಮತ್ತು ಬಾಂಗ್ಲಾದೇಶ್ನಂಥ ಕಡೆಗಳಲ್ಲಿ ಶೇ 85ರಷ್ಟು ಉದ್ಯೋಗಗಳ ಮೇಲೆ ತಂತ್ರಜ್ಞಾನದ ಪ್ರಭಾವ ಆಗಲಿದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಚೀನಾದಲ್ಲಿ ಗರಿಷ್ಠ ಮಟ್ಟದ ಅಪಾಯ ಹಾಗೂ ಪರ್ಷಿಯನ್ ಗಲ್ಫ್ ಹಾಗೂ ಜಪಾನ್ನಲ್ಲಿ ಕನಿಷ್ಠ ಮಟ್ಟದ ಅಪಾಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ಕೋವಿಡ್ ನಿಂದ ಉದ್ಯೋಗ ನಷ್ಟ : ಕರ್ನಾಟಕದಲ್ಲೂ ವಿವಿಧ ಕೈಗಾರಿಕೆಗಳಲ್ಲಿ ಆಟೋಮೆಷನ್ ಅಳವಡಿಸಲು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಐಟಿ ನಗರ ಎಂದು ಕರೆಯಿಸಿಕೊಳ್ಳುವ ಬೆಂಗಳೂರು ಮತ್ತು ಮಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಲಿದೆ. ಈಗಾಗಲೆ ಕೋವಿಡ್ ಎರಡನೇ ಅಲೆಯಿಂದ ಕರ್ನಾಟಕದಲ್ಲಿ ಮೂವತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಹೇಳಿದ್ದಾರೆ. ಕೊರೊನಾದಿಂದ ಕೈಗಾರಿಕೆಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಮಾಲ್ಗಳು, ಅಂಗಡಿಗಳು ಸೇರಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಪರಿಗಣಿಸಿದರೆ ರಾಜ್ಯದಲ್ಲಿ ಈ ಪ್ರಮಾಣದ ಉದ್ಯೋಗ ನಷ್ಟ ಆಗಿದೆ ಎಂಬುದು ಸುಂದರ್ ರವರ ಅಭಿಪ್ರಾಯ.
ಕೋವಿಡ್ ಸಂಕಷ್ಟದಿಂದ ನಿರುದ್ಯೋಗ ಸಮಸ್ಯೆ ನಿವಾರಿಸಲು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತೀದ್ದಾರೆ. ಆದರೆ ಇವರನ್ನು ನಂಬೋದು ಕಷ್ಟ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. 2014 ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗಸೃಷ್ಟಿಯ ಭರವಸೆ ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಹೋಗಲಿ ಇಲ್ಲಿಯವರೆಗೆ 2 ಲಕ್ಷ ಉದ್ಯೋಗ ನೇಮಕಾತಿಯೂ ಆಗಿಲ್ಲ. ಹೀಗಿರುವಾಗ ಅಶ್ವತ್ಥ ನಾರಾಯಣ್ ರವರ ಹೇಳಿಕೆಯಲ್ಲಿ ಸತ್ಯಾಂಶ ಇದೆಯಾ ಎಂಬುದು ಪ್ರಶ್ನೆ. ಅವರು ಮಾತಿಗೆ ತಪ್ಪದಂತೆ ಉದ್ಯೋಗಸೃಷ್ಟಿ ಮಾಡಬೇಕು. ಇಲ್ಲದೆ ಹೋದಲ್ಲಿ ಅಸಂಖ್ಯಾತ ಯುವಜನ ಹಾಗೂ ಅವರನ್ನು ನಂಬಿರುವ ಕುಟುಂಬ ಬೀದಿಗೆ ಬೀಳುತ್ತವೆ ಎಂದು ಮುನೀರ್ ಕಾಟಿಪಳ್ಳ ಅಭಿಪ್ರಾಯ ಪಟ್ಟಿದ್ದಾರೆ.