ಶಿಕ್ಷಕರನ್ನು ಕೋವಿಡ್ ವಾರಿಯರ್ಸ್‌ಗಳೆಂದು ಪರಿಗಣಿಸಿ ವಿಮಾ ಸೌಲಭ್ಯ ನೀಡಿ : ರಾಷ್ಟ್ರೀಯ ಮಾನವ ಹಕ್ಕು ಆಯೋಗ

ದೆಹಲಿ: ಕೊವಿಡ್​ ಕರ್ತವ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಎಂದು ಪರಿಗಣಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇಂದು (ಜೂನ್ 19) ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ, ಕೊವಿಡ್​ ಸಂದರ್ಭದಲ್ಲಿ ಕಾರ್ಯೋನ್ಮುಖರಾಗಿದ್ದು ತೊಂದರೆಗೆ ಒಳಪಡುವ ಶಿಕ್ಷಕರಿಗೆ ಶೀಘ್ರವೇ ಸೂಕ್ತ ವಿಮೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇತರೆ ಕೊರೊನಾ ವಾರಿಯರ್ಸ್​ಗೆ ಸಿಗುವಂತೆಯೇ ಎಲ್ಲಾ ಸೌಲಭ್ಯಗಳು ಯಾವುದೇ ತಾರತಮ್ಯವಿಲ್ಲದೇ ದೊರಕಬೇಕು. ಕೊರೊನಾದಿಂದ ಮೃತರಾಗುವ ಶಿಕ್ಷಕರಿಗೂ ಪರಿಹಾರ ದೊರಕಿಸಿಕೊಡಬೇಕು ಎಂದು ಆಯೋಗ ಸೂಚನೆ ನೀಡಿದೆ.

ಈ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಸರ್ವೋಚ್ಛ ನ್ಯಾಯಾಲಯದ ವಕೀಲ ರಾಧಾಕೃಷ್ಣ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಆಯೋಗ, ಸದರಿ ನಿರ್ದೇಶನವನ್ನು ನೀಡಿದೆ.

ಒಡಿಶಾದ ಗಂಜಮ್​ ಜಿಲ್ಲೆಯಲ್ಲಿ ಕೊವಿಡ್​ ಕರ್ತವ್ಯ ನಿರತ ಶಿಕ್ಷಕ ಸಿಮಂಚಲ್​ ಸತ್ಪತಿ ಎನ್ನುವವರು ಜುಲೈ 3, 2020ರಲ್ಲಿ ಮೃತಪಟ್ಟಿದ್ದು, ಇಲ್ಲಿಯ ತನಕ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಲಭಿಸಿಲ್ಲ. ಶಿಕ್ಷಕ ಸಿಮಂಚಲ್​ ಸತ್ಪತಿ (27 ವರ್ಷ) ನಿಧನ ನಂತರ ಅವರ ತಂದೆ ರಾಜ್​ಕಿಶೋರ್ ಸತ್ಪತಿ ಹಾಗೂ ತಾಯಿ ಸುಲೋಚನಾ ಸತ್ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇಶದಲ್ಲಿ ಇಂತಹ ಹಲವು ಘಟನೆಗಳಿವೆ ಎಂದು ಉದಾಹರಣೆ ನೀಡಿದ ಅರ್ಜಿದಾರರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.

ದೇಶದ ವಿವಿಧೆಡೆ ಈ ತೆರನಾದ ಹಲವು ದುರ್ಘಟನೆಗಳು ನಡೆದಿವೆ. ಅಲ್ಲದೇ, ಬೇರೆ ಬೇರೆ ಕಡೆ ನಡೆದ ಚುನಾವಣೆಗಳಲ್ಲೂ ಶಿಕ್ಷಕರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಉತ್ತರ ಪ್ರದೇಶವೊಂದರಲ್ಲೇ ಪಂಚಾಯತಿ ಚುನಾವಣೆ ಸಂದರ್ಭ ನೂರಾರು ಶಿಕ್ಷಕರು ಸೋಂಕಿಗೆ ತುತ್ತಾಗಿ ಕಷ್ಟ ಅನುಭವಿಸಿದರು. ಮೇಲಾಗಿ, ಶಿಕ್ಷಕರಿಗೆ ಬೋಧನೆಯ ಹೊರತಾಗಿ ಸಾಕಷ್ಟು ಜವಾಬ್ದಾರಿ ನೀಡುವುದರಿಂದ ಅವರು ಮನೆಮನೆಗೆ ತೆರಳಿ ಕರ್ತವ್ಯ ನಿರ್ವಹಿಸುವ ಸ್ಥಿತಿಯೂ ಇದೆ. ಕೊರೊನಾ ಸಂದರ್ಭದಲ್ಲಿ ಶಿಕ್ಷಕರು ಅಪಾಯದ ಸುಳಿಯಲ್ಲೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೊರೊನಾ ಫ್ರಂಟ್​ ಲೈನ್ ವಾರಿಯರ್ಸ್​ ಎಂದು ಪರಿಗಣಿಸಬೇಕು ಎಂದು ಮಾನವ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದರು.

ಯುನೆಸ್ಕೋ ಹಾಗೂ ಕೆಲ ರಾಜ್ಯಗಳ ಸಾಂವಿಧಾನಿಕ ಸಂಸ್ಥೆಗಳು ಶಿಕ್ಷಕರನ್ನು ಆದ್ಯತೆಯ ಮೇರೆಗೆ ಗುರುತಿಸಿವೆ. ಆದರೆ, ಇದು ಎಲ್ಲಾ ಶಿಕ್ಷಕರಿಗೂ ಅನ್ವಯಿಸಬೇಕು. ಅವರಿಗೆ ವೈದ್ಯಕೀಯ ಸೌಲಭ್ಯಗಳು ಸಿಗಬೇಕು. ಹೆಚ್ಚಿನ ಕಡೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿರುವವರೇ ಇಡೀ ಮನೆಗೆ ಆಧಾರವಾಗಿರುತ್ತಾರೆ. ಆದ್ದರಿಂದ ಅವರಿಗೆ ಎಲ್ಲಾ ರೀತಿಯ ಸುರಕ್ಷತೆಗಳನ್ನು ಒದಗಿಸುವ ಅವಶ್ಯಕತೆ ಇದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನು ಮೌಲ್ಯಯುತ ವಿಚಾರ ಎಂದು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೊವಿಡ್​ ಕರ್ತವ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಎಂದು ಪರಿಗಣಿಸಲು ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ, ತೊಂದರೆಗೀಡಾಗಿರುವ ಶಿಕ್ಷಕರು ದೂರು ನೀಡಿದ ಎಂಟು ವಾರಗಳೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ತಿಳಿಸಿದೆ.

 

Donate Janashakthi Media

3 thoughts on “ಶಿಕ್ಷಕರನ್ನು ಕೋವಿಡ್ ವಾರಿಯರ್ಸ್‌ಗಳೆಂದು ಪರಿಗಣಿಸಿ ವಿಮಾ ಸೌಲಭ್ಯ ನೀಡಿ : ರಾಷ್ಟ್ರೀಯ ಮಾನವ ಹಕ್ಕು ಆಯೋಗ

  1. In COVID19 situation this year, if the teacher/ Lecturerer is terminated unnecessarily during this year, being in a permanent position, with out any reason, what is the remedy/remedial action for that person?

    Requesting you to kindly help and highlight or bring this to the notice of U.G.C. or Higher Education Minister.

    Regards.

  2. In COVID19 situation this year, if the teacher/ Lecturerer being in a permanent position, is terminated unnecessarily without any reason, what is the remedy/remedial action for that person?

    Requesting you to kindly help and highlight or bring this to the notice of U.G.C. or Higher Education Minister.

    Regards.

Leave a Reply

Your email address will not be published. Required fields are marked *