ಕಾಡ್ಗಿಚ್ಚಿನಂತೆ ಕೋವಿಡ್-19 ಹಬ್ಬುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕದ ತೀವ್ರತೆಯನ್ನು ತಗ್ಗಿಸುವ ಸಾಮರ್ಥ್ಯವು ಲಸಿಕೆಗಳಿಗೆ ಮಾತ್ರ ಇರುವುದರಿಂದಾಗಿ ಲಸಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಲಸಿಕೆಗಳ ಲಭ್ಯತೆ ಕಡಿಮೆಯಾಗಿದೆ, ಏಕೆ? ಇದೊಂದು ನಿಗೂಢ ವಿದ್ಯಮಾನವೇ ಸರಿ. ಈ ವಿದ್ಯಮಾನದ ಬಗ್ಗೆ ಆತಂಕಗೊಳ್ಳುವುದರ ಬದಲು, ಸಾಂಕ್ರಾಮಿಕ ರೋಗವು ಜನರ ಮೇಲೆ ಬೀರಬಹುದಾದ ಒಟ್ಟು ಪರಿಣಾಮದ ಬಗ್ಗೆ ಮತ್ತು ಇಡೀ ಜನಸಂಖ್ಯೆಗೆ ಆದಷ್ಟು ಬೇಗ ಲಸಿಕೆ ಹಾಕುವ ತುರ್ತಿನ ಬಗ್ಗೆ ಕಾಳಜಿ ವಹಿಸುವುದರ ಬದಲು, ಮೋದಿ ಸರ್ಕಾರವು ದಿವ್ಯ ಮೌನ ತಾಳಿತು. ಮೇ ತಿಂಗಳಲ್ಲಿ ಕನಿಷ್ಠ 8.5 ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಲಾಗಿದೆ ಎಂದು ಸಲೀಸಾಗಿ ಊಹಿಸಬಹುದು. ಆದ್ದರಿಂದ, ಉದ್ಭವಿಸುವ ಪ್ರಶ್ನೆ ಎಂದರೆ ಉಳಿದ ಲಸಿಕೆಗಳು ಕಾಣದಂತೆ ಮಾಯವಾಗಿ ಎಲ್ಲಿಗೆ ಹೋದವು? ಚಮತ್ಕಾರ ಇರುವುದು ಇಲ್ಲಿಯೇ. ಮೋದಿ ಸರಕಾರ ಮೇ ತಿಂಗಳಿಂದ ಅನುಸರಿಸಿದ (ಈಗ ಬದಲಿಸಿರುವ) ಖಾಸಗಿಯವರಿಗೆ 25% ದ್ವಂದ್ವ ಬೆಲೆಗಳಲ್ಲಿ ಕೊಡುವ ಬುದ್ಧಿಹೀನ ನೀತಿ ಮತ್ತು ಕಡ್ಡಾಯ ಲೈಸೆನ್ಸಿಂಗ್ ಅಧಿಕಾರವನ್ನು ಬಳಸಲು ನಿರಾಕರಿಸುವ ನಿಲುವು – ಪ್ರೊ.ಪ್ರಭಾತ್ ಪಟ್ನಾಯಕ್
ಕೋವಿಡ್-19 ಎರಡನೆಯ ಅಲೆಯ ಎಚ್ಚರಿಕೆಯನ್ನು ಸರ್ಕಾರವು ಕಡೆಗಣಿಸಿದ ಪರಿಣಾಮವಾಗಿ ಚಿಕಿತ್ಸೆ ಲಭ್ಯವಾಗದ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಲಸಿಕೆ ಮಾತ್ರ ಮೂರನೆಯ ಅಲೆಯ ತೀವ್ರತೆಯನ್ನು ತಗ್ಗಿಸಬಲ್ಲದು. ಹಾಗಾಗಿ, ಎಲ್ಲರಿಗೂ ಲಸಿಕೆ ಹಾಕದ ಹೊರತು ಯಾರಿಗೂ ಉಳಿಗಾಲವಿಲ್ಲ ಎಂಬ ಮುನ್ನೆಚ್ಚರಿಕೆಯ ಪಾಠವನ್ನು ಜಗತ್ತು ಅನುಭವದಿಂದ ಕಲಿತುಕೊಂಡಿದೆ. ಆದರೆ, ವಿಶ್ವ ಗುರು ಮತ್ತು ಜಗತ್ತಿನ ಔಷಧಾಲಯ ಎಂದು ಹೇಳಿಕೊಳ್ಳುವ ದೇಶದಲ್ಲೇ ಲಸಿಕೆಗಳ ಕೊರತೆ ಉಂಟಾಗಿದೆ. ಲಸಿಕೆ ಉತ್ಪಾದನೆಗೆ ಸಮಯ ಹಿಡಿಯುವುದರ ಜೊತೆಗೆ, 18-44 ವಯೋಮಾನದವರಿಗೂ ಲಸಿಕೆ ಆರಂಭಿಸಿರುವುದರಿಂದ ಲಸಿಕೆಯ ಬೇಡಿಕೆಯಲ್ಲಿ ಹಠಾತ್ ಏರಿಕೆಯಾಗಿದೆ ಎಂಬ ಅನಿಸಿಕೆ ಪ್ರಚಲಿತವಿದೆ. ಆದರೆ, ಈ ಅನಿಸಿಕೆ ತಪ್ಪಾಗಿದೆ. ಅತಿ ಹೆಚ್ಚು ಸಂಖ್ಯೆಯ ಜನರು ಈಗ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು ಕಾತರದಲ್ಲಿದ್ದಾರೆ, ನಿಜ. ಆದರೆ, ಹಿಂದಿನ ಎಪ್ರಿಲ್ ತಿಂಗಳಿಗೆ ಹೋಲಿಸಿದರೆ ಮತ್ತು ದೇಶದಲ್ಲಿ ಉತ್ಪಾದನೆಯಾದ ಲಸಿಕೆಗಳ ಸಂಖ್ಯೆಗೆ ಹೋಲಿಸಿದರೆ ಮೇ ತಿಂಗಳಲ್ಲಿ ಲಭ್ಯವಾದ ಲಸಿಕೆಗಳ ಸಂಖ್ಯೆಯು ತೀಕ್ಷ್ಣವಾಗಿ ಮತ್ತು ಆಶ್ಚರ್ಯಕರವಾಗಿ ಕುಸಿದಿದೆ. ಲಸಿಕೆಗಳಿಗೆ ಉಂಟಾದ ಹೆಚ್ಚುವರಿ ಬೇಡಿಕೆಯು ಎಲ್ಲರೂ ಊಹಿಸುವಂತೆ ಬೇಡಿಕೆಯ ಕಡೆಯಿಂದ ಉದ್ಭವಿಸಿರುವುದು ಮಾತ್ರವಲ್ಲ, ಪೂರೈಕೆಯ ಬದಿಯಿಂದಲೂ ಉದ್ಭವಿಸಿದೆ. ದಿಗ್ಭ್ರಮೆಗೊಳಿಸುವ ಮತ್ತು ನಿಗೂಢವಾಗಿ ಕಾಣುವ ಈ ವಿದ್ಯಮಾನವನ್ನು ಸ್ಪಷ್ಟಪಡಿಸಬೇಕಾದ ಸರ್ಕಾರವು ಲಸಿಕೆಗಳ ಉತ್ಪಾದನೆ ಮತ್ತು ದಾಸ್ತಾನಿಗೆ ಸಂಬಂಧಿಸಿದ ಮಾಹಿತಿಯನ್ನೇ ಒದಗಿಸಿಲ್ಲ.
ಇದನ್ನು ಓದಿ: ಉಚಿತ ಭಾಷಣದ ಖಚಿತ ಅನುಮಾನಗಳು! ಮೋದಿ ಯೂ ಟರ್ನ್ ಹೊಡೆದದ್ದು ಯಾಕೆ?!
2021ರ ಏಪ್ರಿಲ್ನಲ್ಲಿ ಒಟ್ಟು 8.5 ಕೋಟಿ ಡೋಸ್ (6.5 ಕೋಟಿ ಕೋವಿಶೀಲ್ಡ್ ಮತ್ತು 2 ಕೋಟಿ ಕೊವಾಕ್ಸಿನ್) ಲಸಿಕೆಗಳ ಉತ್ಪಾದನೆಯಾಗಿದೆ. ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯ ಬಗ್ಗೆ ಮಾಹಿತಿ ಲಭ್ಯವಿಲ್ಲವಾದರೂ, ಕೊವಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ತನ್ನ ಉತ್ಪಾದನೆಯನ್ನು ಮೇ ತಿಂಗಳಲ್ಲಿ ಮೂರು ಕೋಟಿ ಡೋಸ್ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿತ್ತು. ಅಂದರೆ, ಮೇ ತಿಂಗಳಲ್ಲಿ ಕನಿಷ್ಠ 9.5 ಕೋಟಿ ಡೋಸ್ ಲಸಿಕೆಗಳು ಉತ್ಪಾನೆಯಾಗಿವೆ ಎಂದಾಗುತ್ತದೆ.
ಎಪ್ರಿಲ್ ವರೆಗೆ ಬಳಕೆ ಮಾಡಿಕೊಂಡು ಉಳಿದ ದಾಸ್ತಾನು ಮತ್ತು ಉತ್ಪಾದನೆಯಾದ ಲಸಿಕೆಗಳನ್ನು ಬಳಸಿಕೊಂಡು ಎಪ್ರಿಲ್ ತಿಂಗಳಿನಲ್ಲಿ ಒಂಬತ್ತು ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿತ್ತು. ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಮೇ ತಿಂಗಳಲ್ಲಿ, ನೀಡಿದ ಲಸಿಕೆ ಡೋಸ್ಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಮೇ ತಿಂಗಳಲ್ಲಿ, ಬಹುತೇಕ, ದಿನಕ್ಕೆ ಸರಾಸರಿ ಹದಿನೈದು ಲಕ್ಷ ಡೋಸ್ ಲಸಿಕೆ ನೀಡಲಾಗಿದೆ (ದಿ ಹಿಂದೂ, ಮೇ 30). ಮೇ 24 ರ ನಂತರ ಚುರುಕುಗೊಂಡ ಈ ಕಾರ್ಯವು ಕೊನೆಯ ವಾರದಲ್ಲಿ ಸರಾಸರಿ ಮೂವತ್ತು ಲಕ್ಷ ದೈನಂದಿನ ಡೋಸ್ವರೆಗೆ ತಲುಪಲಾಗಿದೆ ಎಂದು ಭಾವಿಸಿದರೂ ಸಹ, ತಿಂಗಳ ಒಟ್ಟು ಡೋಸ್ಗಳ ಸಂಖ್ಯೆಯು 5.7 ಕೋಟಿಯಷ್ಟಾಗುತ್ತದೆ. ಏಪ್ರಿಲ್ಗೆ ಹೋಲಿಸಿದರೆ, ಮೇ ತಿಂಗಳಲ್ಲಿ ನೀಡಲಾದ ಲಸಿಕೆಗಳಲ್ಲಿ 3.3 ಕೋಟಿಗಳ ಕುಸಿತ ಕಂಡುಬರುತ್ತದೆ. ಅಷ್ಟೇ ಅಲ್ಲ, ಮೇ ತಿಂಗಳಲ್ಲಿ ನೀಡಲಾದ ಡೋಸ್ಗಳ ಸಂಖ್ಯೆಯು ಉತ್ಪಾದನೆಗಿಂತ ಕನಿಷ್ಠ 3.8 ಕೋಟಿ ಕಡಿಮೆ ಇರುವುದು ಕಂಡುಬರುತ್ತದೆ.
ಕಾಡ್ಗಿಚ್ಚಿನಂತೆ ಕೋವಿಡ್-19 ಹಬ್ಬುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕದ ತೀವ್ರತೆಯನ್ನು ತಗ್ಗಿಸುವ ಸಾಮರ್ಥ್ಯವು ಲಸಿಕೆಗಳಿಗೆ ಮಾತ್ರ ಇರುವುದರಿಂದಾಗಿ ಲಸಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಲಸಿಕೆಗಳ ಲಭ್ಯತೆ ಕಡಿಮೆಯಾಗಿದೆ, ಏಕೆ? ಇದೊಂದು ನಿಗೂಢ ವಿದ್ಯಮಾನವೇ ಸರಿ. ಅದುವರೆಗೆ ಉತ್ಪಾದನೆಯಾದ ಲಸಿಕೆಗಳನ್ನು ಹಾಗೂ ಅದುವರೆಗೂ ಬಳಕೆಯಾಗಿ ಉಳಿದ ಸಂಗ್ರಹದ ಒಟ್ಟು ಒಂಬತ್ತು ಕೋಟಿ ಡೋಸ್ ಲಸಿಕೆಗಳನ್ನು ಎಪ್ರಿಲ್ ತಿಂಗಳಿನಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು ಮತ್ತು ಮೇ ತಿಂಗಳಿನಲ್ಲಿ ಇಂತಹ ಅನುಕೂಲದ ಪರಿಸ್ಥಿತಿ ಇರಲಿಲ್ಲ ಎಂಬ ವಾದವನ್ನು ಒಪ್ಪಲಾಗದು. ಏಕೆಂದರೆ, ಮೇ ತಿಂಗಳಿನಲ್ಲಿ ನೀಡಲಾದ ಡೋಸ್ಗಳ ಸಂಖ್ಯೆಯು ತಿಂಗಳ ಉತ್ಪಾದನಾ ಸಾಮರ್ಥ್ಯಕ್ಕಿಂತಲೂ ಕಡಿಮೆ ಇದೆ. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮೇ ತಿಂಗಳ ದಾಸ್ತಾನು ಶೂನ್ಯವೇ ಇದ್ದರೂ ಸಹ, ಏಪ್ರಿಲ್ನಲ್ಲಿ ನೀಡಿದ 9 ಕೋಟಿ ಡೋಸ್ಗಿಂತಲೂ ಹೆಚ್ಚು (ಅಂದರೆ, ಸುಮಾರು 9.5 ಕೋಟಿ ಡೋಸ್ಗಳನ್ನು) ಲಸಿಕೆಗಳನ್ನು ಮೇ ತಿಂಗಳಲ್ಲಿ ನೀಡಬೇಕಾಗಿತ್ತು. ತನ್ನ ಉತ್ಪಾದನೆಯನ್ನು ಮೇ ತಿಂಗಳಲ್ಲಿ ಮೂರು ಕೋಟಿ ಡೋಸ್ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದ ಭಾರತ್ ಬಯೋಟೆಕ್ ಒಂದು ವೇಳೆ ಕೊವಾಕ್ಸಿನ್ ಉತ್ಪಾನೆಯನ್ನು ಯೋಜಿಸಿದಂತೆ ಮೇ ತಿಂಗಳಲ್ಲಿ ಹೆಚ್ಚಿಸದಿದ್ದರೂ ಸಹ ಮತ್ತು ಉತ್ಪಾದನೆಯು ಏಪ್ರಿಲ್ ಮಟ್ಟದಲ್ಲೇ (8.5 ಕೋಟಿ) ಇತ್ತು ಎಂದುಕೊಂಡರೂ ಸಹ, ಮೇ ತಿಂಗಳಲ್ಲಿ ನೀಡಲಾದ 5.7 ಕೋಟಿ ಡೋಸ್ಗಳ ಸಂಖ್ಯೆಯು ಯಾವ ರೀತಿಯಲ್ಲಿ ನೋಡಿದರೂ ಸಹ, ಬಹಳ ಕಡಿಮೆಯೇ.
ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ
ಈ ವಿದ್ಯಮಾನದ ಬಗ್ಗೆ ಆತಂಕ/ಕಸಿವಿಸಿಗೊಳ್ಳುವುದರ ಬದಲು, ಸಾಂಕ್ರಾಮಿಕ ರೋಗವು ಜನರ ಮೇಲೆ ಬೀರಬಹುದಾದ ಒಟ್ಟು ಪರಿಣಾಮದ ಬಗ್ಗೆ ಮತ್ತು ಇಡೀ ಜನಸಂಖ್ಯೆಗೆ ಆದಷ್ಟು ಬೇಗ ಲಸಿಕೆ ಹಾಕುವ ತುರ್ತಿನ ಬಗ್ಗೆ ಕಾಳಜಿ ವಹಿಸುವುದರ ಬದಲು, ಮೋದಿ ಸರ್ಕಾರವು ದಿವ್ಯ ಮೌನ ತಾಳಿತು. ನೀತಿ ಆಯೋಗದ ಸದಸ್ಯ ವಿನೋದ್ ಪಾಲ್ ಅವರಂತಹ ಸರ್ಕಾರಿ ವಕ್ತಾರರು ಲಸಿಕಾ ಬಿಕ್ಕಟ್ಟಿಗೆ ರಾಜ್ಯ ಸರ್ಕಾರಗಳನ್ನು, ಸಂಪೂರ್ಣ ಕಾನೂನುಬಾಹಿರವಾಗಿ ದೂಷಿಸುವುದು ಅನಿರೀಕ್ಷಿತವೇನಲ್ಲ. ಆದರೆ ಅವರು ಮೇ ತಿಂಗಳಲ್ಲಿ ನೀಡಿದ ಲಸಿಕೆಗಳ ಸಂಖ್ಯೆ ಕಡಿಮೆಯಾದುದರ ಬಗ್ಗೆ ಲಸಿಕೆ ನೀಡಿಕೆಯಲ್ಲಿನ ಅಲಭ್ಯತೆಯ ಬಗ್ಗೆ ಜಾಣ ಮೌನ ವಹಿಸಿದ್ದಾರೆ.
ಸರ್ಕಾರವು ಜಾಣ ಮೌನ ತಳೆದ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಒಂದು ಕುಂಟು ನೆಪವನ್ನು ವಿವರಣೆಯಾಗಿ ನೀಡಿತು: ಉತ್ಪಾದನೆ ಮತ್ತು ಪೂರೈಕೆಯ ನಡುವೆ ನುಸುಳುವ ಸುಮಾರು ನಾಲ್ಕು ತಿಂಗಳುಗಳ ಕಾರ್ಯ-ವಿಳಂಬವು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದಿತು. ಅದರ ಈ ವಿವರಣೆಯು ಒಂದು ಕುಂಟು ನೆಪವಲ್ಲದೆ ಬೇರೇನೂ ಅಲ್ಲ. ಏಕೆಂದರೆ, ಉತ್ಪಾದನೆಯ ಆರಂಭದಲ್ಲಿ ಉತ್ಪನ್ನವು ಮಾರುಕಟ್ಟೆಯನ್ನು ತಲುಪಿ ಮಾರಾಟಕ್ಕೆ ಲಭ್ಯವಾಗುವಲ್ಲಿ ಸ್ವಲ್ಪ ಸಮಯ ಹಿಡಿಯುತ್ತದೆ, ಹೌದು. ಆದರೆ, ಒಮ್ಮೆ ಉತ್ಪಾದನೆ ಆರಂಭವಾಗಿ ಉತ್ಪನ್ನವು ಮಾರುಕಟ್ಟೆಯನ್ನು ತಲುಪುವ ಕ್ರಿಯೆ ಆರಂಭವಾದ ನಂತರ, ವಿಳಂಬಕ್ಕೆ ಆಸ್ಪದವೇ ಇಲ್ಲ. ಒಂದು ವೇಳೆ ಉತ್ಪಾದನೆಯಲ್ಲಿ ಹೆಚ್ಚಳವಾದರೆ, ಆ ಹೆಚ್ಚಳವು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಸಮಯ ಹಿಡಿಯುತ್ತದೆ, ನಿಜ. ಆದರೆ, ಹಳೆಯ ಉತ್ಪಾದನೆಯು ಯಾವುದೇ ಅಡಚಣೆಯಿಲ್ಲದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲೇಬೇಕು. ಆದ್ದರಿಂದ, ಮೇ ತಿಂಗಳಲ್ಲಿ ಬಳಕೆಗೆ ಲಭ್ಯವಾದ ಲಸಿಕೆಗಳ ಸಂಖ್ಯೆಯು ಏಪ್ರಿಲ್ನಲ್ಲಿ ಉತ್ಪಾದನೆಯಾದ ಲಸಿಕೆಗಳ ಸಂಖ್ಯೆಗಿಂತ ಬಹಳ ಕಡಿಮೆ ಇದ್ದ ಅಂಶವು, ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಕಾರ್ಯ-ವಿಳಂಬ ಪ್ರಕ್ರಿಯೆಗೂ ಮತ್ತು ಲಸಿಕೆಗಳ ಕೊರತೆಗೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?
ಒಂದು ನಿರ್ದಿಷ್ಟ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ಸಂಸ್ಥೆಯು, ಬೆಲೆಗಳನ್ನು ಹೆಚ್ಚಿಸುವ ಅವಕಾಶವಿಲ್ಲದ ಹೊರತು, ಉದ್ದೇಶಪೂರ್ವಕವಾಗಿ ಆ ಸಾಮರ್ಥ್ಯವನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಅಂತಹ ಯಾವುದೇ ಸಾಧ್ಯತೆಗಳಿಲ್ಲ, ಏಕೆಂದರೆ, ಲಸಿಕೆ ಉತ್ಪಾದಕರಿಗೆ ದೊರೆಯುವ ಬೆಲೆಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ. (ಈ ಬೆಲೆಗಳ ನಿಗದಿಯು ಅನ್ಯಾಯದಿಂದ ಕೂಡಿದೆ ಎಂಬುದು ಬೇರೆ ಮಾತು). ಅದೇ ರೀತಿಯಲ್ಲಿ, ಒಂದು ನಿರ್ದಿಷ್ಟ ಪ್ರಮಾಣದ ಲಸಿಕೆಗಳನ್ನು ಉತ್ಪಾದಿಸಿದ ಯಾವುದೇ ಸಂಸ್ಥೆಯು ಅವುಗಳನ್ನು ಮಾರಾಟಮಾಡುವ ಬದಲು ಸುಮ್ಮನೇ ದಾಸ್ತಾನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಆದ್ದರಿಂದ, ಮೇ ತಿಂಗಳಲ್ಲಿ ಕನಿಷ್ಠ 8.5 ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಲಾಗಿದೆ ಎಂದು ಸಲೀಸಾಗಿ ಊಹಿಸಬಹುದು. ಆದ್ದರಿಂದ, ಉದ್ಭವಿಸುವ ಒಂದು ಪ್ರಶ್ನೆ ಎಂದರೆ: ಮೇ ತಿಂಗಳಿನಲ್ಲಿ ಕೇವಲ 5.7 ಕೋಟಿ ಡೋಸ್ಗಳನ್ನು ಮಾತ್ರ ನೀಡಿರುವಾಗ (ಸ್ವಲ್ಪ ಹೆಚ್ಚೇ ಇರಬಹುದು ಅಥವಾ ಸ್ವಲ್ಪ ಕಡಿಮೆಯೂ ಇರಬಹುದು), ಉಳಿದ ಲಸಿಕೆಗಳು ಕಾಣದಂತೆ ಮಾಯವಾಗಿ ಎಲ್ಲಿಗೆ ಹೋದವು?
ದೇಶದಲ್ಲಿ ಉತ್ಪಾದನೆಯಾದ ಮತ್ತು ಪೂರೈಕೆಯಾದ ಲಸಿಕೆಗಳ ಪ್ರಮಾಣದ ಬಗ್ಗೆ ಒಂದು ಸರಿಯಾದ ಲೆಕ್ಕ ಪರಿಶೋಧನೆಯ ಅಗತ್ಯವಿದ್ದು, ಈ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಿಎಜಿ ಅವರನ್ನು ಕೋರುವಂತೆ ಕೆಲವು ವಿರೋಧ ಪಕ್ಷಗಳು ಆಗ್ರಹಿಸಿವೆ. ಸಿಎಜಿ ಅವರ ಪರಿಶೋಧನೆಯ ನಂತರ, ಅದರ ಆಧಾರದ ಮೇಲೆ ಮಾತ್ರ ಈ ಪ್ರಶ್ನೆಗೆ ಉತ್ತರವನ್ನು ಕೊಡಬಹುದು. ಅಲ್ಲಿಯವರೆಗೂ ಕೊಡುವ ಉತ್ತರವು ಒಂದು ಊಹೆಯ ಸ್ವರೂಪದ್ದಾಗಿರುತ್ತದೆ. ಅಂತಹ ಒಂದು ಊಹೆಯು ಈ ಕೆಳಗಿನಂತಿದೆ.
ಕೇಂದ್ರ ಸರ್ಕಾರವು ಲಸಿಕೆಗಳ ಬೆಲೆಗಳನ್ನು ಮತ್ತು ವಿತರಣೆಯನ್ನು ನಿಗದಿಪಡಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಅನುಕ್ರಮವಾಗಿ 50%, 25% ಮತ್ತು 25% ಅನುಪಾತದಲ್ಲಿ ಲಸಿಕೆಗಳನ್ನು ಪಡೆಯುತ್ತವೆ. ಅದೇ ರೀತಿಯಲ್ಲಿ, ಕೋವಿಷೀಲ್ಡ್ ಲಸಿಕೆಗಳ ಮಾರಾಟದ ಬೆಲೆಗಳನ್ನು ಅನುಕ್ರಮವಾಗಿ, 150ರೂ, 300ರೂ ಮತ್ತು 600ರೂ ಗಳೆಂದೂ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಾರಾಟದ ಬೆಲೆಗಳನ್ನು ಅನುಕ್ರಮವಾಗಿ 150 ರೂ., 400 ರೂ. ಮತ್ತು 1200 ರೂ.ಗಳೆಂದು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೀಸಲಾದ ಅರ್ಧ ಭಾಗವನ್ನು ವಾಸ್ತವವಾಗಿ ಖಾಸಗಿ ಆಸ್ಪತ್ರೆಗಳಿಗೇ ಮಾರಾಟ ಮಾಡಲಾಗಿದೆ. ಏಕೆಂದರೆ, ರಾಜ್ಯ ಸರ್ಕಾರಗಳಿಗೆ ನಿಗದಿಪಡಿಸಿದ ಮಾರಾಟದ ಬೆಲೆಗಳಿಗಿಂತ ಎರಡು ಪಟ್ಟು ಹೆಚ್ಚು ದರಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿರುವುದರಿಂದ, ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಲಸಿಕೆ ಮಾರಿದಾಗ ಯದ್ವಾ-ತದ್ವಾ ಲಾಭ ಸಿಗುತ್ತದೆ. ಹಾಗಾಗಿ, ರಾಜ್ಯ ಸರ್ಕಾರಗಳಿಗೆ ನಿಗದಿಪಡಿಸಿದ ಭಾಗದ ಲಸಿಕೆಗಳು ಸರ್ರನೆ ಖಾಸಗಿ ಆಸ್ಪತ್ರೆಗಳಿಗೆ ಜಾರಿವೆ. ರಾಜ್ಯ ಸರ್ಕಾರದ ವತಿಯಿಂದ ಲಸಿಕೆ ದೊರಕದ ಪರಿಸ್ಥಿತಿಯಲ್ಲಿ ಜನರು ಹೆಚ್ಚು ಹಣ ತೆತ್ತು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಹಾಕಿಸಿಕೊಂಡರು. ಮೇಲಾಗಿ, ಖಾಸಗಿ ಆಸ್ಪತ್ರೆಗಳು ನೀಡಿದ ಡೋಸ್ಗಳ ಸಂಖ್ಯೆಯು ಲಸಿಕೆ ಕಾರ್ಯಕ್ರಮದ ಅಂಕಿಅಂಶಗಳಲ್ಲಿ ಯಥಾವತ್ತಾಗಿ ಬಿಂಬಿತವಾಗುವುದಿಲ್ಲ, ಏಕೆಂದರೆ, ಈ ಸಂಬಂಧವಾಗಿ ಖಾಸಗಿ ಆಸ್ಪತ್ರೆಗಳು ಸಲ್ಲಿಸುವ ವರದಿಯ ಏರ್ಪಾಟು ಉತ್ತಮವಾಗಿಲ್ಲ. ಈ ಕಾರಣದಿಂದಲೂ ಲಸಿಕೆಗಳ ಕೊರತೆ ಕಂಡುಬಂದಿರಬಹುದು. ಅದೇನೇ ಇರಲಿ, ಈ ವಿದ್ಯಮಾನವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾಣದಂತೆ ಮಾಯವಾದ ಲಸಿಕೆಗಳಲ್ಲಿ ಕೊನೆಯ ಪಕ್ಷ ಒಂದು ಭಾಗವು ಖಾಸಗಿ ಆಸ್ಪತ್ರೆಗಳಿಗೆ ಹೋಗಿರುವ ಅಂಶವು ಅಂಕಿಅಂಶಗಳನ್ನು ಸಂಗ್ರಹಿಸುವ ಏರ್ಪಾಟಿನ ದೋಷದಿಂದಾಗಿ ನಿಖರವಾಗಿ ದಾಖಲಾಗಿಲ್ಲ.
ಇಂತಹ ಒಂದು ಊಹೆಯ ಮೂಲಕ ಕಾಣೆಯಾದ ಲಸಿಕೆಗಳ ವ್ಯತ್ಯಾಸವನ್ನು ಪೂರ್ಣವಾಗಿ ವಿವರಿಸಲಾಗದು. ಅದರ ಒಂದು ಭಾಗವನ್ನಾದರೂ ಲೆಕ್ಕಹಾಕಬಹುದು. ವ್ಯತ್ಯಾಸ ಎಷ್ಟೇ ಇರಲಿ, ಅದರ ಪರಿಣಾಮಗಳು ಮಾತ್ರ ಗಂಭೀರವಾಗಿವೆ. ಲಸಿಕೆ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣಗೊಳಿಸಲಾಗಿದೆ ಎಂಬುದನ್ನು ಅದು ಸೂಚಿಸುತ್ತದೆ. ಇಂತಹ ಕ್ರಮದಿಂದಾಗಿ ಜನರಿಗೆ ಸಿಗಬಹುದಾದ ಸರ್ಕಾರದ ಉಚಿತ ಲಸಿಕೆ ಸೌಲಭ್ಯ ತಪ್ಪಿ ಹೋಗುತ್ತದೆ. ಪರಿಣಾಮವಾಗಿ ಜನರು ಸುಖಾ ಸುಮ್ಮನೇ ಅತಿ ಹೆಚ್ಚು ಹಣ ಕೊಟ್ಟು ಲಸಿಕೆಯನ್ನು ಪಡೆಯಬೇಕಾಗುತ್ತದೆ.
ಇದನ್ನು ಓದಿ: ಕೋವಿಡ್ ಲಸಿಕೆಯ ಪೂರೈಕೆಯಲ್ಲೂ ‘ಉದಾರೀಕರಣ’ದ ಗೀಳು!!
ಒಟ್ಟು ಉತ್ಪಾದನೆಯಲ್ಲಿ, ನಿಗದಿಪಡಿಸಿದ್ದ ಅರ್ಧದಷ್ಟು ಲಸಿಕೆಗಳನ್ನು 150ರೂ ದರದಲ್ಲಿ ಪಡೆಯುವ ಕೇಂದ್ರ ಸರ್ಕಾರವು ಈ ಲಸಿಕೆಗಳನ್ನು 45ಕ್ಕಿಂತ ಹೆಚ್ಚು ವಯೋಮಾನದವರಿಗೆ ಮತ್ತು ಸೇವಾ ಕಾರ್ಯದಲ್ಲಿ ತೊಡಗಿದ ಆದ್ಯತಾ ವಲಯಗಳ ವ್ಯಕ್ತಿಗಳಿಗೆ ನೀಡಿತ್ತು ಎಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. 18 ರಿಂದ 44 ವಯೋಮಾನದವರಿಗೆ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಬೇಕಾಗಿತ್ತು. ಹಾಗಾಗಿ, ಲಸಿಕೆಗಳನ್ನು ಪಡೆಯಲು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಸ್ಪರ್ಧೆಗೆ ಇಳಿಯುವಂತಾಯಿತು. ಚಮತ್ಕಾರ ಇರುವುದು ಇಲ್ಲಿಯೇ. ಕೋವಿಶೀಲ್ಡ್ ಲಸಿಕೆಗಳ ಮಾರಾಟದ ದರಗಳನ್ನು ರಾಜ್ಯ ಸರ್ಕಾರಗಳಿಗೆ 400 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ ಎಂದು ನಿಗದಿಯಾಗಿದ್ದರೆ, ಕೊವಾಕ್ಸಿನ್ ಲಸಿಕೆಗಳ ಮಾರಾಟದ ದರಗಳನ್ನು ರಾಜ್ಯ ಸರ್ಕಾರಗಳಿಗೆ 600 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1200 ರೂ ಗಳೆಂದು ನಿಗದಿಪಡಿಸಲಾಗಿತ್ತು. ಹಾಗಾಗಿ, ರಾಜ್ಯ ಸರ್ಕಾರಗಳು ಕೋವಿಶೀಲ್ಡ್ ಲಸಿಕೆಗೆ 400ರೂ ಮತ್ತು ಕೊವಾಕ್ಸಿನ್ ಲಸಿಕೆಗೆ 600ರೂ ಗಳನ್ನೂ ಕೊಡಬೇಕಿದ್ದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಗೆ 600ರೂ ಗಳನ್ನೂ ಮತ್ತು ಕೊವಾಕ್ಸಿನ್ ಲಸಿಕೆಗೆ 1200ರೂ ಗಳನ್ನೂ ಕೊಡಬೇಕಿದ್ದ ವಿಚಿತ್ರ ಪರಿಸ್ಥಿತಿ ಇದೆ. ಹಲವು ಹತ್ತು ರಾಜ್ಯ ಸರ್ಕಾರಗಳು ಮತ್ತು ಸಾವಿರಾರು ಖಾಸಗಿ ಆಸ್ಪತ್ರೆಗಳು, ಯಾರಿಗೆ ಎಷ್ಟು ಲಸಿಕೆಗಳು ಎಂಬುದನ್ನು ಕಾನೂನುಬದ್ಧವಾಗಿ ನಿಗದಿಪಡಿಸದಿರುವ ಸಂದರ್ಭದಲ್ಲಿ, ಒಂದು ನಿರ್ದಿಷ್ಟ ಸಂಖ್ಯೆಯ ಲಸಿಕೆಗಳನ್ನು ಬೇರೆ ಬೇರೆ ದರಗಳಲ್ಲಿ ಪಡೆಯಲು ಕಿತ್ತಾಡುವಂತಹ ವಾತಾವರಣವನ್ನು ಕೇಂದ್ರ ಸರ್ಕಾರವು ನಿರ್ಮಿಸಿರುವ ಕ್ರಮವು ತರ್ಕಹೀನವಾದದ್ದು. ಆದಾಗ್ಯೂ, ಅದುವೇ ಕೇಂದ್ರ ಸರ್ಕಾರದ ನೀತಿ. ಇದಕ್ಕಿಂತಲೂ ಹೆಚ್ಚು ಬುದ್ಧಿಹೀನ ನೀತಿಯನ್ನು ಊಹಿಸುವುದೂ ಕಷ್ಟವೇ. ಹಾಗಾಗಿ, ಈ ನೀತಿಯು, ಸ್ವಾಭಾವಿಕವಾಗಿ, ಕಡಿಮೆ ಬೆಲೆ ಪಾವತಿಸುವ ಗಿರಾಕಿಯನ್ನು ಹಿಂದಕ್ಕೆ ತಳ್ಳಿ, ಹೆಚ್ಚಿನ ಬೆಲೆ ಪಾವತಿಸುವ ಗಿರಾಕಿಗೆ ಲಸಿಕೆಗಳನ್ನು ಪೂರೈಸುವಲ್ಲಿ ಪರಿಣಮಿಸಿದೆ. ಕೇಂದ್ರ ಸರ್ಕಾರದ ಈ ಬುದ್ಧಿಹೀನತೆಗೆ ಜನರೇ ಬಲಿಪಶುಗಳಾಗಿದ್ದಾರೆ.
ಇದನ್ನು ಓದಿ: ಕೋವಿಡ್ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು
ಮಾಯವಾದ ಲಸಿಕೆಗಳು ಖಾಸಗಿ ಆಸ್ಪತ್ರೆಗಳತ್ತ ತಿರುಗಿವೆ ಎಂಬ ವಿವರಣೆಯೂ ಸಹ ಲಸಿಕೆಗಳು ಕಾಣೆಯಾದ ರಹಸ್ಯವನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ. ಈ ಎರಡೂ ಸಂಸ್ಥೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಾಗಿ ಮಾಡಿರುವ ಘೋಷಣೆಗಳು ಬಹುಶಃ ಅತಿಶಯದಿಂದ ಕೂಡಿವೆ. ಇಂತಹ ಸಂದರ್ಭದಲ್ಲಿ ಕಡ್ಡಾಯ ಲೈಸೆನ್ಸ್ ಕ್ರಮದ ಮೂಲಕ ಲಸಿಕೆಗಳ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸುವ ಅಗತ್ಯವಿದೆ. ಆದರೆ, ನೀತಿ ಆಯೋಗವು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಕಡ್ಡಾಯ ಲೈಸೆನ್ಸ್ ಕ್ರಮವನ್ನು ತಳ್ಳಿಹಾಕಿರುವ ಅಂಶವು ಗಮನಾರ್ಹವಾಗಿದೆ. ಕೋವಿಡ್-19 ಲಸಿಕೆಗಳ ಮೇಲಿನ ಪೇಟೆಂಟ್ ಹಕ್ಕುಗಳನ್ನು ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಳಿಸಬೇಕೆಂದು ಬಯಸುವ ಮೋದಿ ಸರ್ಕಾರವು ತನ್ನದೇ ದೇಶದಲ್ಲಿ ಕಡ್ಡಾಯ ಲೈಸೆನ್ಸ್ ಮೂಲಕ ಲಸಿಕೆಗಳ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸುವ ಕ್ರಮವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಕ್ರಮವು ಊಹೆ, ಬುದ್ಧಿಶಕ್ತಿ ಮತ್ತು ತರ್ಕಗಳಿಗೆ ನಿಲುಕುವುದಿಲ್ಲ. ಅದೇನೇ ಇರಲಿ, ಜಾಗತಿಕ ಮಟ್ಟದಲ್ಲಿ ಪೇಟೆಂಟ್ ಹಕ್ಕುಗಳನ್ನು ಸ್ಥಗಿತಗೊಳಿಸುವ ಮಾತುಕತೆಗಳಿಗೆ ಬಹಳ ಸಮಯ ಹಿಡಿಯುತ್ತದೆ. ಏತನ್ಮಧ್ಯೆ ಪೇಟೆಂಟ್ ಹಕ್ಕುಗಳನ್ನು ಅಮಾನತಿನಲ್ಲಿ ಇಡುವಂತೆ ಒತ್ತಾಯಿಸಲು ಮೋದಿ ಸರ್ಕಾರವು ಬಳಸುವ ಅದೇ ತರ್ಕವನ್ನು ಕಡ್ಡಾಯ ಲೈಸೆನ್ಸ್ ನೀಡಲೂ ಸಹ ಬಳಸಬಹುದು. ಆದರೆ, ಮೋದಿ ಸರ್ಕಾರದ ನೀತಿಗಳ ಅಂತರಂಗವೇ ಬೇರೆ, ಬಹಿರಂಗವೇ ಬೇರೆ.
ಅನು: ಕೆ.ಎಂ.ನಾಗರಾಜ್