ಭೋಪಾಲ್: ಮಧ್ಯಪ್ರದೇಶದಲ್ಲಿ ಕಿರಿಯ ವೈದ್ಯರು ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಮೇ 31ರಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಗೌರವ ಧನವನ್ನು ಹೆಚ್ಚಿಸಬೇಕು ಮತ್ತು ತಮಗೆ ಅಥವಾ ತಮ್ಮ ಕುಟುಂಬಸ್ಥರಿಗೆ ಕೊರೊನಾ ವೈರಸ್ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ನೀಡಬೇಕು ಮುಂತಾದ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಕಿರಿಯ ವೈದ್ಯರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವಾಗಿ ತಿಳಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರುಗಳು ಪ್ರತಿಭಟನೆಯನ್ನು ಕೈಬಿಟುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೀಡಿತ್ತು. ಮುಂದಿನ 24 ಗಂಟೆಗಳಲ್ಲಿ ಕರ್ತವ್ಯಕ್ಕೆ ಮರಳುವಂತೆ ತಿಳಿಸಿತ್ತು. ಈ ಸಂದರ್ಭದಲ್ಲಿ ನಾಲ್ಕಕ್ಕಿಂತ ಹೆಚ್ಚು ದಿನಗಳ ಪ್ರತಿಭಟನೆ ಕಾನೂನು ಬಾಹಿರ ಎಂದು ಹೈಕೋರ್ಟ್ ಉಲ್ಲೇಖಿಸಿದೆ.
ಇದನ್ನು ಓದಿ: ರಿಯಲ್ ವಾರಿಯರ್ಸ್ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ
ಆದರೆ ಪ್ರತಿಭಟನೆ ಮುಂದುವರೆಸುವುದಾಗಿ ನಿರ್ಧರಿಸಿದ ಸುಮಾರು 3000ದಷ್ಟು ಕಿರಿಯ ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಪ್ರತಿಭಟನಾ ನಿರತ ವೈದ್ಯರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ತವ್ಯದಲ್ಲಿದ್ದ ಸುಮಾರು 3 ಸಾವಿರ ಕಿರಿಯ ವೈದ್ಯರು ಗುರುವಾರ ತಮ್ಮ ಹುದ್ದೆಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗಳನ್ನು ಆಯಾ ಕಾಲೇಜುಗಳ ಡೀನ್ಗೆ ಸಲ್ಲಿಸಿದ್ದಾರೆ ಎಂದು ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘದ (ಎಂಪಿಜೆಡಿಎ) ಅಧ್ಯಕ್ಷ ಡಾ.ಅರವಿಂದ ಮೀನಾ ತಿಳಿಸಿದ್ದಾರೆ.
ಇದನ್ನು ಓದಿ: ಕೇರಳ: ಕೋವಿಡ್ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘದ(ಎಂಪಿಜೆಡಿಎ) ಅಧ್ಯಕ್ಷ ಡಾ. ಅರವಿಂದ ಮೀನಾ “ಮೂರನೇ ವರ್ಷದ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ತಮ್ಮ ದಾಖಲಾತಿಯನ್ನು ರದ್ದುಗೊಳಿಸಿದೆ. ಹೀಗಾಗಿ ಈ ಕಿರಿಯ ವೈದ್ಯರು ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಎಂಪಿಜೆಡಿಎ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ” ಎಂದಿದ್ದಾರೆ. ಮೆಡಿಕಲ್ ಆಫಿಸರ್ಸ್ ಅಸೋಸಿಯೇಶನ್ ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಸಂಘ ಕೂಡ ಈ ಹೋರಾಟಕ್ಕೆ ಕೈಜೋಡಿಸುತ್ತದೆ ಎಂದು ಡಾ. ಅರವಿಂದ ಮೀನಾ ಹೇಳಿಕೆ ನೀಡಿದ್ದಾರೆ.