ಮಂಗಳೂರು: ರಾಜ್ಯ ಸರಕಾರ ದಿಢೀರ್ ಘೋಷಿಸಿದ ಕರ್ಫ್ಯೂ, ಲಾಕ್ಡೌನ್ಗಳಿಂದಾಗಿ ಖಾಸಗಿ ಬಸ್ಸು ಸಾರಿಗೆ ಪೂರ್ಣವಾಗಿ ಸ್ಥಗಿತಗೊಂಡಿದೆ. ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳು ವೇತನ ರಹಿತ ರಜೆಯಲ್ಲಿದ್ದಾರೆ. ಇದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಷ್ಟಿರುವ ಖಾಸಗಿ ಬಸ್ಸು ನೌಕರರ ಕುಟುಂಬಗಳು ಯಾವುದೇ ಆದಾಯವಿಲ್ಲದೆ ಹಸಿವಿನಿಂದ ಕಂಗೆಟ್ಟಿದೆ. ರಾಜ್ಯ ಸರಕಾರ ತಕ್ಷಣ ಖಾಸಗಿ ಬಸ್ಸು ನೌಕರರ ನೆರವಿಗೆ ಧಾವಿಸಬೇಕು, ಪಡಿತರದ ಜೊತೆಗೆ ಪ್ರತಿ ನೌಕರರ ಕುಟುಂಬಕ್ಕೆ ತಲಾ ಹತ್ತು ಸಾವಿರ ರೂಪಾಯಿ ನಗದು ಪರಿಹಾರ ಒದಗಿಸಬೇಕು ಎಂದು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘವು ಒತ್ತಾಯಿಸಿದೆ.
ಇದನ್ನು ಓದಿ: ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ
ಕೊರೊನ ಪ್ರಥಮ ಅಲೆಯ ಸಂದರ್ಭ ರಾಜ್ಯ ಸರಕಾರ ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ, ನಿರ್ಮಾಣ ಕಾರ್ಮಿಕರು, ಅಗಸರು, ಕ್ಷೌರಿಕರು ಸೇರಿದಂತೆ ಶ್ರಮಿಕರ ವಿವಿಧ ವಿಭಾಗಗಳಿಗೆ ಅಲ್ಪ ಮಟ್ಟದ ಪರಿಹಾರವನ್ನು ಘೋಷಿಸಿತ್ತು. ಆ ಸಂದರ್ಭ ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಖಾಸಗಿ ಬಸ್ಸುಗಳ ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳನ್ನು ಪರಿಹಾರ ಪ್ಯಾಕೇಜ್ ನಿಂದ ಹೊರಗಿಡಲಾಗಿತ್ತು. ಮಾಲಕರ ಕಡೆಯಿಂದಲೂ, ಸರಕಾರದ ಕಡೆಯಿಂದಲೂ ಪರಿಹಾರ ಸಿಗದೆ ಬಸ್ಸು ನೌಕರರು ಕುಟುಂಬ ನಡೆಸಲು ಪರದಾಡಿದ್ದರು.
ಲಾಕ್ಡೌನ್ ಕೊನೆಗೊಂಡ ನಂತರವೂ ಖಾಸಗಿ ಬಸ್ಸು ಸಂಚಾರ ಆರಂಭಗೊಳ್ಳಲು ಮತ್ತಷ್ಟು ವಾರಗಳು ಕಳೆದಿದ್ದವು. ಅದರಲ್ಲೂ ಪ್ರಯಾಣಿಕರ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರ ನಡೆಸಲು ಹಲವು ತಿಂಗಳುಗಳು ಬೇಕಾಯಿತು. ಅಲ್ಲಿಯವರಗೆ ಅರ್ಧದಷ್ಟು ನೌಕರರಿಗೆ ಮಾತ್ರ ದುಡಿಮೆಯ ಅವಕಾಶ, ಅರ್ಧ ವೇತನವಷ್ಟೆ ದೊರಕಿದ್ದವು. ಉಳಿದವರು ನಿರುದ್ಯೋಗಿಗಳಾಗಿದ್ದರು. ಯಾವುದೇ ಆದಾಯವಿಲ್ಲದೆ ಸಾಲದ ಬಲೆಗೆ ಬಿದ್ದಿದ್ದರು.
ಇದನ್ನು ಓದಿ: ನಿರುದ್ಯೋಗ ದರ ಮತ್ತೆ ಹೆಚ್ಚಳ – ಒಂದೇ ತಿಂಗಳಲ್ಲಿ 72 ಲಕ್ಷ ಉದ್ಯೋಗಗಳಿಗೆ ಕತ್ತರಿ
ಇದೀಗ ಮತ್ತೆ ತಿಂಗಳಿಗಿಂತ ಹೆಚ್ಚು ಕಾಲ ಖಾಸಗಿ ಬಸ್ಸುಗಳು ಸ್ಥಗಿತಗೊಂಡಿದ್ದು. ಬಸ್ಸು ನೌಕರರು ವೇತನ ರಹಿತ ರಜೆಯಲ್ಲಿ ಮನೆ ಸೇರಿದ್ದಾರೆ. ಪಿಎಫ್, ಇಎಸ್ಐ, ಬೋನಸ್, ಪಿಂಚಣಿ ಸಹಿತ ಯಾವುದೇ ಸವಲತ್ತುಗಳಿಲ್ಲದೆ ದುಡಿಯುವ, ಅಂದಂದಿನ ದುಡಿಮೆಯನ್ನೇ ಅವಲಂಬಿಸಿರುವ ಬಸ್ಸು ನೌಕರರು ಈ ದಿಢೀರ್ ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ. ಮುಂದಕ್ಕೆ ಬಸ್ಸು ಸಂಚಾರ ಮತ್ತೆ ಮೊದಲಿನಂತಾಗುವುದು, ಉದ್ಯೋಗ, ವೇತನ ದೊರಕುವುದು ಯಾವಾಗ ? ಎಂದು ತಿಳಿಯದೆ ಅತಂತ್ರರಾಗಿದ್ದಾರೆ.
ಬಹುತೇಕ ಬಾಡಿಗೆ ಮನೆಗಳಲ್ಲಿ ವಾಸ ಇರುವ ಬಸ್ಸು ನೌಕರರು, ಅವರನ್ನು ಅವಲಂಬಿಸಿದ ಕುಟುಂಬಗಳು ಇದರಿಂದಾಗಿ ಹಸಿವಿನ ದವಡೆಗೆ ಸಿಲುಕಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸು ನೌಕರರ ಸುಮಾರು ಹತ್ತು ಸಾವಿರದಷ್ಟು ಕುಟುಂಬಗಳಿವೆ. ರಾಜ್ಯ ಸರಕಾರ ತಕ್ಷಣ ಖಾಸಗಿ ಬಸ್ಸು ನೌಕರರ ಕುಟುಂಬಗಳ ರಕ್ಷಣೆಗೆ ಧಾವಿಸಬೇಕು. ಪರಿಸ್ಥಿತಿ ಸರಿಹೋಗುವವರಗೆ ಖಾಸಗಿ ಬಸ್ಸು ನೌಕರರ ಕುಟುಂಬಗಳಿಗೆ ಪಡಿತರ, ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ನಗದು ಪರಿಹಾರ ಒದಗಿಸಬೇಕು ಎಂದು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷರಾದ ಅಲ್ತಾಫ್ ಮುಡಿಪು, ಜಗದೀಶ್ ನಾಯಕ್ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.