ಡಾ. ಗುಂಡ್ಮಿ ಭಾಸ್ಕರ ಮಯ್ಯರ ಕ್ಲಾಸು ಇನ್ನಿಲ್ಲ!

ವಾಸುದೇವ ಉಚ್ಚಿಲ್

ಮೇ 6, 2021ರಂದು ನಿಧನರಾದ ಡಾ. ಗುಂಡ್ಮಿ ಭಾಸ್ಕರ ಮಯ್ಯ ಅವರು 1977 ರಿಂದ ನನ್ನ ಗೆಳೆಯರಾಗಿದ್ದಾರೆ. ಅವರು ಕುಂದಾಪುರ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕನಾಗಿ ಸೇರಿಕೊಂಡ ಕಾಲದಲ್ಲೇ, ಅದೇ ಆಡಳಿತದ ಉಡುಪಿಯ ಕಾಲೇಜೊಂದರಲ್ಲಿ ನಾನೂ ಉಪನ್ಯಾಸಕನಾಗಿ ಸೇರಿಕೊಂಡಿದ್ದೆ.

1970ರ ದಶಕದ ಭಾಷಾ ಅಧ್ಯಾಪಕರಿಗೆ ಆ ವೇಳೆಗೆ ಕನ್ನಡದಲ್ಲಿ ಪ್ರಚಲಿತವಿದ್ದ ನವ್ಯ ಸಾಹಿತ್ಯದ, ಲೋಹಿಯಾ ಚಿಂತನೆಯ, ಕಾರಂತರ ವಿಚಾರಧಾರೆಯ ಪರಿಚಯವಿತ್ತು. ಭಾಸ್ಕರ ಮಯ್ಯರ ಗೆಳೆತನದಲ್ಲಿ ಹೆಚ್ಚೆಚ್ಚು ವಿಚಾರವಾದವನ್ನು ನಾವು ಬೆಳೆಸಿಕೊಂಡೆವು. ಅವರು ಮತ್ತು ಆ ದಿನಗಳ ಇತರ ಸಾಹಿತ್ಯಕ ಗೆಳೆಯರಿಂದ ನಾವೂ ಮಾರ್ಕ್ಸ್‌ವಾದದ ಬಗೆಗೂ ಆಕರ್ಷಿತರಾಗಿ ಅದನ್ನೂ ಅಧ್ಯಯನ ಮಾಡಿದೆವು.

ಇದನ್ನು ಓದಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೈಚಾರಿಕ ಸಾಹಿತಿ ಡಾ. ಭಾಸ್ಕರ್ ಮಯ್ಯ ನಿಧನ

ಅಲ್ಲಿಂದ ಸಾಗಿದ ಜೀವನ ಪಯಣದಲ್ಲಿ ಜಿ. ಭಾಸ್ಕರ ಮಯ್ಯರು ಪ್ರಬುದ್ಧ ವಿದ್ವಾಂಸರಾಗಿ ಬೆಳೆದುದನ್ನು, ನಮ್ಮೆಲ್ಲರನ್ನು ಪ್ರಭಾವಿಸಿ ಬೆಳೆಸಿದ್ದನ್ನು ನಾವು ಅನುಭವಿಸಿದ್ದೇವೆ. ಬಹುಶಃ ಅವರ ವ್ಯಕ್ತಿತ್ವವನ್ನು ವಿಚಾರವಾದಿ, ವಿದ್ವಾಂಸ, ಲೇಖಕ, ಮಾರ್ಕ್ಸ್‌ವಾದಿ ಹಾಗೂ Activist ಆಗಿ ಪರಿಚಯಿಸಬಹುದಾಗಿದೆ.

ಉಡುಪಿ ತಾಲೂಕಿನ ಗುಂಡ್ಮಿ ಎಂಬ ಹಳ್ಳಿಯವರಾದ ಇವರು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಎಸ್‌ಸಿ. ವಿದ್ಯಾಭ್ಯಾಸ ಮಾಡುವಾಗಲೇ ಹಿಂದಿ, ಸಂಸ್ಕೃತ, ಕನ್ನಡ ಭಾಷೆಗಳ ಸಾಹಿತ್ಯದ ಅಧ್ಯಯನಕ್ಕೆ ತೊಡಗಿದ್ದರು. ವಿಚಾರವಾದಿ (Rational) ನೆಲೆಯಲ್ಲಿ ಆರಂಭಗೊಂಡ ಅವರ ವೈಚಾರಿಕತೆ, ಅವರು ಯಾವ ಭಾಷೆ, ಶಿಸ್ತುಗಳನ್ನು ಅಧ್ಯಯನ ಮಾಡಿದರೂ, ವಸ್ತುನಿಷ್ಠವಾದ ಅರಿವಿಗೆ ಎಡೆಮಾಡಿಕೊಟ್ಟಿತು. ಒಂದೇ ಸಮನೆ ಓದುವ ಹಸಿವು ಅವರನ್ನು ಹಲವು ಶಾಸ್ತ್ರಗಳ ಆಳವಾದ ಅಧ್ಯಯನದ ಕಡೆಗೆ ಸಾಗಿಸಿತು. ಅವರು ಕಾಲೇಜು ಅಧ್ಯಾಪಕರಾದ ಮೇಲೂ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಬೇರೆ ಬೇರೆ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದರು. ಪದವಿಗಾಗಿ ತಾನು ಓದುವುದಲ್ಲ, ತಾನು ಜ್ಞಾನ ಸಂಪಾದನೆಗಾಗಿ ಓದುತ್ತಿದ್ದೇನೆ ಎಂದು ಅವರು ನಮ್ಮಲ್ಲಿ ಹೇಳಿದ್ದುಂಟು. ಈ ಓದಿನ ಹಸಿವಿನಿಂದಾಗಿಯೇ ಅವರು ಹಿಂದಿ, ಸಂಸ್ಕೃತ, ತತ್ವಶಾಸ್ತ್ರ, ಜೈನಾಲಜಿ, ಪಾಕೃತ, ಇಂಗ್ಲೀಷ್‌ಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಮೊದಲೇ ಗಳಿಸಿದ್ದ ಬಿ.ಎಸ್.ಸಿ ಮತ್ತು ಬಿ.ಎಡ್ ಪದವಿಗಳೊಂದಿಗೆ ಕನ್ನಡ ಮತ್ತು Human Right ನಲ್ಲೂ ಡಿಪ್ಲೋಮಾ ಪದವಿ ಪಡೆದರು. ಮೈಸೂರು ವಿ.ವಿ.ಯಿಂದ ಹಿಂದಿಯಲ್ಲಿ ಪಿ.ಹೆಚ್.ಡಿ ಪಡೆದರು. ಈ ವಿಸ್ತಾರವಾದ ಓದು ಅಧ್ಯಯನದಿಂದಾಗಿ ಅವರಿಗೆ ಪ್ರಾಚೀನ, ಪೌರಾತ್ಯ, ಪಶ್ಚಿಮದ ತತ್ತ್ವಶಾಸ್ತ್ರ ಹಾಗೂ ಇತರ ಜ್ಞಾನಶಿಸ್ತುಗಳಲ್ಲಿ ಆಳವಾದ ಪಾಂಡಿತ್ಯ ಒದಗಿತು. ಕನ್ನಡದಲ್ಲಿ ಅವರು ಬರೆದ 32 ಪುಸ್ತಕಗಳಲ್ಲಿ ಹಾಗೂ ಹಿಂದಿಯಲ್ಲಿ ಬರೆದ 20 ಪುಸ್ತಕಗಳಲ್ಲಿ ಅವರ ವಿದ್ದತ್ತಿನ ಆಳವನ್ನು ನಾವು ಗುರುತಿಸಬಹುದು. ಮತ್ತು ಆ ಆಳವನ್ನು ತಲುಪಲು ಅವರು ಬೆಳಕಾಗಿ ಬಳಸಿದ ಮಾರ್ಕ್ಸ್‌ವಾದದ ಪ್ರಭೆಯನ್ನು ನಾವು ಗುರುತಿಸಬಹುದು.

ಇದನ್ನು ಓದಿ: ಜನಪರ ಚಳುವಳಿಯ ವಿಠಲ ಭಂಡಾರಿಯವರಿಗೆ ಸಾಂಸ್ಕೃತಿಕ ರಂಗದ ನುಡಿನಮನ

ಭಾಸ್ಕರ ಮಯ್ಯರ ಚಿಂತನೆ ಹಾಗೂ ಬರವಣಿಗೆಗಳ ಮೇಲೆ ಹಿಂದಿ ಭಾಷೆಯ ಬರಹಗಾರರಲ್ಲಿ ರಾಹುಲ್ ಸಾಂಕೃತ್ಯಾಯನ, ಡಾ. ರಾಮವಿಲಾಸ ಶರ್ಮ, ಮುಕ್ತಿಬೋಧಾ ಅಲ್ಲದೆ ಕ್ನನಡದ ಲೇಖಕರಾದ ಶಂ.ಭಾ.ಜೋಶಿ ಮತ್ತು ಶಿವರಾಮ ಕಾರಂತರ ಪ್ರಭಾವವನ್ನು ಕಾಣಬಹುದು.

ಅವರ ಕೃತಿಗಳಲ್ಲಿ ಸ್ವತಂತ್ರ ಚಿಂತನೆ ಹಾಗೂ ವಿಮರ್ಶೆಗಳಲ್ಲದೆ, ಹಿಂದಿಯಿಂದ ಅನುವಾದಿಸಲ್ಪಟ್ಟ ಕೃತಿಗಳು ಸಾಕಷ್ಟಿವೆ. ‘ಜ್ಯೋತಿಷ್ಯ ವೈಜ್ಞಾನಿಕವೇ?’ (ಹಲವು ಲೇಖಕರು) ‘ಧರ್ಮದರ್ಶನ ಸದಾಚಾರ’ (ಸಾಂಕ್ಯತ್ಯಾಯನ), ಧರ್ಮದರ್ಶನದ ವರ್ಗ ಇತಿಹಾಸ (ಗೋರಾ, ಸಾಂಕೃತ್ಯಾಯನ), ಮಾರ್ಕ್ಸ್‌ವಾದ ಮತ್ತು ಸೌಂದರ್ಯ ಶಾಸ್ತ್ರ (ಇ.ಎಂ.ಎಸ್), ಮಾರ್ಕ್ಸ್‌ವಾದಿ ದರ್ಶನ (ಹರ್‌ಕಿಶನ್ ಸಿಂಗ್ ಸುರ್ಜೀತ್) ಹರಿಶಂಕರ ಪರಸಾಯಿ ಅವರ ಆಯ್ದ ಕತೆಗಳ 2 ಸಂಕಲನಗಳು, ಖ್ಯಾತ ಹಿಂದಿ ಸಂಪಾದಕರಾದ ಕನ್ನಡಿಗ ನಾರಾಯಣ ದತ್ತ, 1857 ರ ದಂಗೆಯನ್ನು ಸ್ವತಃ ಕಂಡ ವಿಷ್ಣುಭಟ್ ಗೋಡ್ಸೆಯ `ನನ್ನ ಪ್ರವಾಸ’, ಭಾರತೀಯ ಭಾಷಾ ಕುಟುಂಬಗಳು (ರಾಮವಿಲಾಸ ಶರ್ಮ), ಈಚೆಗೆ ಅನುವಾದಿಸಿರುವ `ಡಾ. ರಾಮವಿಲಾಸ ಶರ್ಮ – ವ್ಯಕ್ತಿ ಚಿತ್ರ’ – ಇತರ ಅನುವಾದಿತ ಕೃತಿಗಳಲ್ಲಿ ಮುಖ್ಯವಾಗಿರುವವು.

`ಋಗ್ವೇದ ಮತ್ತು ಜನಸಂಸ್ಕೃತಿ’, `ವಾದ ಪ್ರತಿವಾದ ಮತ್ತು ಸಂವಾದ’, `ವಿಮರ್ಶೆಯ ಪರಾಮರ್ಶೆ ಮತ್ತು ಪರಾಮರ್ಶೆಯ ವಿಮರ್ಶೆ’, ‘ಜೈನ ದರ್ಶನ್ ಏಕ್ ಅವಲೋಕನ್’, ‘ಶಂಬಾ:ವ್ಯಕ್ತಿತ್ವ ಔರ್ ಕೃತಿತ್ವ’, ‘ರಾಹುಲ ಸಾಂಕೃತ್ಯಾಯನ’ (ವ್ಯಕ್ತಿಚಿತ್ರ),  ‘ಅಜನಬೀಪನ್ :ಏಕ್ ಸೈದ್ಧಾಂತಿಕ್ ಅನುಶೀಲನ್’, ‘ಮಾರ್ಕ್ಸ್‌ವಾದಿ ವರ್ಗದೃಷ್ಠಿ’,  ‘ನಿಕಷಕೊಡ್ಡಿದ ನಿರ್ಣಯಗಳು’ – ಈ ಕೃತಿಗಳಲ್ಲಿ ಮಾರ್ಕ್ಸ್‌ವಾದಿ ದೃಷ್ಟಿಕೋನದಲ್ಲಿ ಮಾಡಿದ ಪ್ರಬುದ್ಧ ವಿಶ್ಲೇಷಣೆಯನ್ನು ಗುರುತಿಸಬಹುದಾಗಿದೆ.

ಜಾಗತೀಕರಣವನ್ನು ವಿಶ್ಲೇಷಿಸಿ ಮಾಡಿದ ಬರಹಗಳು `ಸಾಮ್ರಾಜ್ಯಶಾಹಿಯ ದವಡೆಯಲ್ಲಿ ಭಾರತ’, `ಜಾಗತೀಕರಣದ ನಾಗಪಾಶ’, `ಬಹುರಾಷ್ಟ್ರೀಯ ಆರ್ಥಿಕತೆಯ ಪರಿಣಾಮಗಳು’ ಪುಸ್ತಕಗಳಲ್ಲಿ ಮೂಡಿಬಂದಿದೆ.

`ಅಜನಬೀಪನ್’ ಈ ಕೃತಿ `ಪರಕೀಯತೆ’ (Alienation) ಯನ್ನು ಪಾಶ್ಚಾತ್ಯ, ಪೌರಾತ್ಯ ತತ್ವಶಾಸ್ತ್ರ , ರಾಜಕೀಯಶಾಸ್ತ್ರ, ಸಮಾಜಶಾಸ್ತ್ರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅತ್ಯಪೂರ್ವ ಕೃತಿಯಾಗಿದೆ. 2002 ರಲ್ಲಿ ಈ ಕೃತಿಗೆ ಪ್ರಾಪ್ತವಾದ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಅಂದಿನ ಪ್ರಧಾನಿಗಳ ಕೈಗಳಿಂದಲೇ ಭಾಸ್ಕರ ಮಯ್ಯರು ಸ್ವೀಕರಿಸಿದರು. ಅವರಿಗೆ ಪ್ರಾಪ್ತವಾದ ಇನ್ನೊಂದು ಪ್ರಶಸ್ತಿಯೆಂದರೆ 2016ರಲ್ಲಿ ಬೆಂಗಳೂರು ವಿಚಾರವಾದಿ ಸಂಘವು ಪ್ರಧಾನಿಸಿದ ‘ಕರ್ನಾಟಕ ಮಹಾವಿಚಾರ ರತ್ನ’ ಪುರಸ್ಕಾರ.

ಭಾಸ್ಕರ ಮಯ್ಯರು ಒಬ್ಬ Activist ಕೂಡಾ. 1970-80 ರ ದಶಕದಲ್ಲಿ ಕುಂದಾಪುರದಲ್ಲಿ ಅವರು ವಿಚಾರವಾದಿ ಸಂಘ ರಚಿಸಿಕೊಂಡು, ವಿದ್ಯಾರ್ಥಿಗಳನ್ನು ಒಡಗೂಡಿಸಿ ಹೋಟೆಲುಗಳಲ್ಲಿ ಠಾಣೆ ಊರುವ ಜ್ಯೋತಿಷಿಗಳಿಗೆ ಸವಾಲು ಎಸೆದಿದ್ದಾರೆ. ಭಾರೀ ಯಜ್ಞವೊಂದನ್ನು ವಿರೋಧಿಸಿ, ಜಾತಿ ಸಮುದಾಯವೊಂದರ ಆಕ್ರೋಶಕ್ಕೂ ಕಾರಣರಾಗಿದ್ದರು. ಬಳಿಕ ಉಡುಪಿಯಲ್ಲಿ ರಚನೆಗೊಂಡ ವಿಚಾರವಾದಿ ಸಂಘದ ಅಧ್ಯಕ್ಷರಾಗಿ 2-3 ವರ್ಷಗಳ ಕಾಲ ತಿಂಗಳಿಗೊಂದು ಕಾರ್ಯಕ್ರಮ ರೂಪಿಸಿದ್ದರು. ತಮ್ಮ ಊರಿನ ಸಾಣೆಕಲ್ಲು ಕಾರ್ಮಿಕರ ಸಂಘಟನೆ ಮಾಡಿ ಹೋರಾಟಕ್ಕೆ ಮಾರ್ಗದರ್ಶನ ನೀಡಿದ್ದರು. 20 ನಿವೇಶನ ರಹಿತ ದಲಿತ ಕುಟುಂಬಗಳನ್ನು ಸರ್ಕಾರಿ ಜಾಗವೊಂದರಲ್ಲಿ ಕುಳ್ಳಿರಿಸಿ ಅವರಿಂದ ಹೋರಾಟ ಮಾಡಿಸಿ ಅಲ್ಲಿನ ಭೂಮಾಲಿಕರ ವಿರೋಧವನ್ನು ಎದುರಿಸಿಯೂ, ಬಡ ದಲಿತರಿಗೆ ನಿವೇಶನ ಸಿಗುವಂತೆ ಮಾಡಿದ್ದರು. ಆ ಜಾಗದಲ್ಲಿ ಆ ಕುಟುಂಬಗಳು ಇವತ್ತಿಗೂ ಉತ್ತಮ ಮನೆಗಳಲ್ಲಿ ವಾಸವಾಗಿವೆ.

ಶೈಕ್ಷಣಿಕ ವಲಯಗಳಲ್ಲೂ ಅವರು ತಮ್ಮ ಪುರೋಗಾಮಿ ಚಟುವಟಿಕೆಗಳಿಂದಾಗಿ ಆಡಳಿತ ಮಂಡಳಿಯವರಿಂದ, ಪ್ರತಿಗಾಮಿ ಸಹೋದ್ಯೋಗಿಗಳಿಂದ ವಿರೋಧ ಎದುರಿಸಿದ್ದಿದೆ. ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ, ಅಧ್ಯಕ್ಷರಾಗಿ, ಹಿಂದಿ ಪಠ್ಯಕ್ರಮವನ್ನು ತೀವ್ರ ಪರಿಷ್ಕರಣೆಗೆ ಒಳಪಡಿಸಿದಾಗ, ಅದರಲ್ಲೂ ವ್ಯಾಕರಣ ಅಧ್ಯಯನದಲ್ಲಿ ಅಪ್ರಯೋಜಕ ಹಳೆಯ ಅಭ್ಯಾಸ ಕ್ರಮವನ್ನು ಕೈಬಿಟ್ಟು ಅಧ್ಯಯನದಲ್ಲಿ Functinal Grammer ನ್ನು ಚಾಲ್ತಿಗೆ ತಂದಾಗ, ಹಿಂದೀ ಉಪನ್ಯಾಸಕರೇ ಅದನ್ನು ವಿರೋಧಿಸಿದ್ದರೂ, ಅವರು ಬದಲಾವಣೆಯನ್ನು ಕೈಬಿಡಲಿಲ್ಲ. ಹಿಂದಿ ಉಪಪಠ್ಯದಲ್ಲಿ ಪ್ರಾದೇಶಿಕ ಕನ್ನಡ ಭಾಷೆಯ ಕೃತಿಗಳನ್ನು – ಹಿಂದಿಯಲ್ಲಿ ಅನುವಾದಗೊಂಡುದನ್ನು ಸಿಲೆಬಸ್‌ನಲ್ಲಿ ಅಳವಡಿಸಿದಾಗಲೂ ವಿರೋಧ ಬಂತು. ಅದರಲ್ಲೂ ಯು.ಆರ್.ಅನಂತಮೂರ್ತಿಯವರ `ಸಂಸ್ಕಾರ’ ದ ಅನುವಾದ ಕೃತಿಗೆ ವಿರೋಧ ಬಂದರೂ, ಅದನ್ನು ಪಠ್ಯಕ್ರಮದಲ್ಲಿ ಅವರು ಕೈಬಿಡದೆ ಗೆಲ್ಲಿಸಿಬಿಟ್ಟರು. ಹರಿಶಂಕರ ಪರಸಾಯಿ ಅವರ ವಿಡಂಬನ ಕೃತಿಗಳನ್ನು ಪ್ರತಿಗಾಮಿ ಶಿಕ್ಷಕರ ವಿರೋಧದ ನಡುವೆಯೂ, ವಿದ್ಯಾರ್ಥಿಗಳು ಓದುವಂತೆ ಮಾಡಿದರು.

ಎಸ್.ಎಫ್.ಐ ವಿದ್ಯಾರ್ಥಿ ಚಳುವಳಿ, ಸಮುದಾಯ ಸಂಘಟನೆ, ಡಿವೈಎಫ್‌ಐ ಯುವ ಸಂಘಟನೆ, 1970-80 ರಲ್ಲಿ ಕುಂದಾಪುರದಲ್ಲಿ ಮೂಡಿ ಬರುವಲ್ಲಿ ಜಿ. ಭಾಸ್ಕರ ಮಯ್ಯರು ವಿದ್ಯಾರ್ಥಿ, ಯುವಜನರಿಗೆ ಕೊಟ್ಟ ಮಾರ್ಗದರ್ಶನವೂ ಕಾರಣವಾಗಿದೆ. ದ.ಕ. ಜಿಲ್ಲೆಯಲ್ಲಿ ಬಂಡಾಯ ಹಾಗೂ ಸಮುದಾಯ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿಯೂ ಅವರ ಪಾತ್ರವಿದೆ. ಅವರು ಹಲವು ಪ್ರಗತಿಪರ ಸಂಘಟನೆಗಳ ತರಬೇತಿ ಶಿಬಿರಗಳಲ್ಲಿ ಕ್ಲಾಸು ಮಾಡಲು ಅತ್ಯಂತ ಹೆಚ್ಚು ಬೇಡಿಕೆಯಲ್ಲಿದ್ದ ಮಾಸ್ತರು. ಆದರೆ ಅವರ ಕ್ಲಾಸು ಇನ್ನು ಇರುವುದಿಲ್ಲ.

ದ್ವಂದ್ವಮಾನ ಭೌತವಾದವೇ ನಿಜವಾದ ವಿಚಾರವಾದ ಮತ್ತು ಮಾನವೀಯತೆಯ ಶಿಖರ ಎಂದು ಜಿ. ಭಾಸ್ಕರ್ ಮಯ್ಯ ಅವರು ಬರಹವೊಂದರಲ್ಲಿ ನಿರೂಪಿಸಿದ್ದಾರೆ.  ಇಂಥ ಅಪೂರ್ವ ವಿದ್ವಾಂಸರು ಹಾಗೂ ಹೋರಾಟಗಾರನನ್ನು ಕೋವಿಡ್ ಬಲಿತೆಗೆದುಕೊಂಡಿರುವ ಈ ಸನ್ನಿವೇಶದಲ್ಲಿ ಕನ್ನಡ ಸಾಂಸ್ಕೃತಿಕ ವಲಯದವರನ್ನು ಗುರುತಿಸಿ ಗೌರವಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *