ಸೂರ್ಯನ ಶಾಖಕ್ಕೆ ಎರಡೆಲೆ ಬಾಡಿದೆ, ಕಮಲ ಮುದುಡಿದೆ.

ತಮಿಳುನಾಡಿನಲ್ಲಿ ನಿರೀಕ್ಷೆಯಂತೆ ಸೂರ್ಯೋದಯವಾಗಿದೆ. ಸೂರ್ಯನ ಶಾಖಕ್ಕೆ ಎರಡೆಲೆ ಬಾಡಿದೆ. ಕಮಲ ಮುದುಡಿದೆ. ಜಯಲಲಿತಾ, ಕರುಣಾನಿಧಿ ಇಲ್ಲದೇ ನಡೆದ ಮೊದಲ ಚುನಾವಣೆಯಲ್ಲಿ,  ಎಐಡಿಎಂಕೆ ಸೋಲುಂಡಿದ್ದು,  ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಲ್ಲಿ ಡಿಎಂಕೆ 159 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡದಿದೆ. ಇನ್ನು ಎಐಎಡಿಎಂಕೆ 75 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೆ, ಡಿಎಂಕೆ ಜೊತೆಗೆ ಕಾಂಗ್ರೆಸ್  ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು.

ತಮಿಳುನಾಡು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಎಂ ಕರುಣಾನಿಧಿ ಮತ್ತು ಜಯಲಲಿತಾ ಈ ಇಬ್ಬರು ಇಲ್ಲದ ಮೊದಲ ಚುನಾವಣೆ ಇದಾಗಿತ್ತು. ತಮಿಳು ನಾಡಿನ ರಾಜಕರಣವೇ ಬಹಳ ವಿಚಿತ್ರ. ತಮಿಳುನಾಡು ರಾಜಯಕೀಯ ಪಕ್ಷಗಳಲ್ಲಿ ಪ್ರಾಬಲ್ಯ ಮೆರೆದವರು ಸಿನಿಮಾರಂಗದ ಘಟಾನುಘಟಿ ವ್ಯಕ್ತಿಗಳೇ. ಕೇರಳದಂತೆ ಇಲ್ಲಿಯೂ ಎಐಡಿಎಂಕೆ ಮತ್ತು ಡಿಎಂಕೆ ನಡುವೆ ಪ್ರತಿಬಾರಿಯೂ ಸ್ಪರ್ಧೆ ಏರ್ಪಡುತ್ತಿದೆ.  ಆದರೆ ಈ ಬಾರಿ ಹೊಸ ಪಕ್ಷಗಳು ಮುನ್ನಲೆಗೆ ಬರಲಿವೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮತದಾರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಡಿಎಂಕೆಗೆ ಸ್ಪಷ್ಟ ಬಹುಮತವನ್ನು ಪಡೆದು ಎಂ.ಕೆ. ಸ್ಟಾಲಿನ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ್ದಾರೆ. ತಮಿಳು ನಾಡಿನಲ್ಲಿ ಒಟ್ಟು ಐದು ರಂಗಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆ ರಂಗಗಳು ಯಾವುದೆಂದು ನೋಡೋಣ,

ಇದನ್ನೂ ಓದಿ : ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?

ನ್ಯಾಷನಲ್‌ ಡೆಮಾಕ್ರಟಿಕ್‌ ಅಲೈಯನ್ಸ್‌ ಮೈತ್ರಿಕೂಟದಲ್ಲಿ ಒಟ್ಟು 10 ಪಕ್ಷಗಳಿದ್ದವು ಎಐಎಡಿಎಂಕೆ, ಪಿಎಂಕೆ, ಬಿಜೆಪಿ, ಟಿಎಂಸಿ ಸೇರಿದಂತೆ ಇತರೆ ಸಣ್ಣ ಪುಟ್ಟ ಪಕ್ಷಗಳು ಈ ರಂಗದ ಭಾಗವಾಗಿದ್ದವು.

ಸೆಕ್ಯೂಲರ್‌ ಪ್ರೋಗ್ರಸಿವ್‌ ಅಲೈಯನ್ಸ್‌ ಮೈತ್ರಿಕೂಟದಲ್ಲಿ ಒಟ್ಟು 13 ಪಕ್ಷಗಳಿದ್ದವು ಡಿಎಂಕೆ, ಕಾಂಗ್ರೆಸ್‌, ಸಿಪಿಐ(ಎಂ) ಸಿಪಿಐ, ಎಂಡಿಎಂಕೆ, ವಿಕೆಸಿ ಕೆಎಂಡಿಕೆ, ಐಯುಎಂಎಲ್‌ ಎಂಎಂಕೆ  ಸೇರಿದಂತೆ ಇತರೆ ಪಕ್ಷಗಳು ಈ ರಂಗದ ಭಾಗವಾಗಿದ್ದವು.

ಎಎಂಎಂಕೆ ಮೈತ್ರಿಕೂಟ ದಲ್ಲಿ ಒಟ್ಟು 8 ಪಕ್ಷಗಳಿದ್ದವು ಎಎಂಎಂಕೆ, ಡಿಎಂಡಿಕೆ,  ಎಸ್‌ಡಿಪಿಐ,  ಎಐಐಎಂಐಎಂ ಸೇರಿದಂತೆ ಇತರೆ ಪಕ್ಷಗಳು. ಈ ರಂಗದ ಭಾಗವಾಗಿದ್ದವು.

ಎಂಎನ್‌ಎಂ ಮೈತ್ರಿಕೂಟದಲ್ಲಿ  ಒಟ್ಟು 5 ಪಕ್ಷಗಳಿದ್ದವು, ಎಂಎನ್‌ಎಂ,  ಐಜೆಕೆ,  ಎಐಎಸ್‌ಎಂಕೆ,  ಟಿಎಂಜೆಕೆ,  ಜೆಡಿ(ಎಸ್‌) ಈ ರಂಗದ ಭಾಗವಾಗಿದ್ದ ಪಕ್ಷಗಳು. ಸಗಾಯಂ ಮೈತ್ರಿಕೂಟ : ಎಸ್‌ಎಪಿ ಟಿಎನ್‌ವೈಪಿ ವಿಟಿಕೆ ಈ ರಂಗದ ಭಾಗವಾಗಿದ್ದ ಪಕ್ಷಗಳು.

ಈ ಬಾರಿಯ ಚುನಾವಣೆಯಲ್ಲಿ ಪಕ್ಷವಾರು ಪಡೆದ ಕ್ಷೇತ್ರಗಳು ಮತ್ತು ಮತಪ್ರಮಾಣ. ಚುನಾವಣೋತ್ತರ ಸಮೀಕ್ಷೆ ಈ ಕೆಳಗಿನಂತಿದೆ.

 

 

 

ಆರಂಭದಿಂದಲೂ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದ ಡಿಎಂಕೆಗೆ ಒಂದು ದಶಕದ ಬಳಿಕ ಅಧಿಕಾರ ಸಿಕ್ಕಿದೆ. ಆಡಳಿತ ವಿರೋಧಿ ಅಲೆ ಡಿಎಂಕೆಗೆ ಲಾಭವಾಗಿದೆ.  ದ್ರಾವಿಡ ರಾಜಕಾರಣದ ಮುಂದೆ, ಹಿಂದುತ್ವ, ರಾಷ್ಟ್ರೀಯ ರಾಜಕಾರಣ ಫಲ ಕೊಟ್ಟಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. 2016 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೂ ಸ್ಥಾನವನ್ನು ಗೆದ್ದಿರಲಿಲ್ಲ.  ಈ ಬಾರಿ ತಮಿಳುನಾಡಿನಲ್ಲಿ ಕಮಲ ಅರಳಿಸುವ ಕನಸುನ್ನು ಬಿಜೆಪಿ ಕಂಡಿತ್ತು. ನರೇಂದ್ರ ಮೋದಿ, ಅಮಿತ್‌ ಶಾ ಸಾಕಷ್ಟು ಪ್ರಚಾರವನ್ನು ನಡೆಸಿದರು. ಗೆಲ್ಲುವುದಕ್ಕಾಗಿ ಸಿನಿ ತಾರೆಯರನ್ನು, ಮಾಜಿ ಅಧಿಕಾರಿಗಳನ್ನು ಕಣಕ್ಕಿಳಿಸಿದರು.

ಚುನಾವಣೆಯಲ್ಲಿ ಅರವರಕಚ್ಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಸಿಂಗಂ ಎಂದು ಹೆಸರುವಾಸಿಯಾಗಿದ್ದ ಅಣ್ಣಾಮಲೈ ಸೋಲು ಕಂಡಿದ್ದಾರೆ. ಅಣ್ಣಾಮಲೈಗೆ ತೀವ್ರ ಸ್ಪರ್ಧೆ ನೀಡಿದ ಡಿಎಂಕೆ ಪಕ್ಷದ ಅಭ್ಯರ್ಥಿ ಎಲಂಗೋ.ಆರ್ 26,719 ಮತ ಪಡೆದು ವಿಜಯಿಯಾದರೆ, ಅಣ್ಣಾಮಲೈ 22,335 ಮತ ಪಡೆದು ಸೋಲು ಕಂಡರು.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖುಷ್ಬು ಸುಂದರ್ ಬಿಜೆಪಿ ಅಭ್ಯರ್ಥಿಯಾಗಿ ಥೌಂಸಡ್ಸ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಖುಷ್ಬು ಇಲ್ಲಿ ಸೋಲನುಭವಿಸಿದ್ದಾರೆ. ಖುಷ್ಬು ಅವರಿಗೆ ಇಲ್ಲಿ ಎರಡನೇ ಸ್ಥಾನ ಡಿಎಂಕೆ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಖುಷ್ಬು ಮೊದಲು ಕಾಂಗ್ರೆಸ್‌ನಲ್ಲಿದ್ದರು. ಅಲ್ಲಿಂದ ಬಿಜೆಪಿಗೆ ಸೇರ್ಪಡೆಯಾಗಿ ಈಗ ಸೋಲನುಭವಿಸಿದ್ದಾರೆ. ಸತತವಾಗಿ ಎರಡನೇ ಚುನಾವಣೆಯಲ್ಲೂ ಡಿಎಂಕೆಯು ಬಿಜೆಪಿಯನ್ನೇ ಗುರಿಯಾಗಿಟ್ಟು ಪ್ರಚಾರ ನಡೆಸಿದೆ. ‘ಎಐಎಡಿಎಂಕೆಗೆ ನೀಡಿದ ಪ್ರತಿ ಮತವೂ ಬಿಜೆಪಿಗೆ ಹೋಗುತ್ತದೆ’ ಎಂದು ಹೇಳುತ್ತಾ ಬಂದಿದೆ. ‘ಇದು ತಮಿಳುನಾಡು ಮತ್ತು ದೆಹಲಿ (ಕೇಂದ್ರ ಸರ್ಕಾರ) ನಡುವಿನ ಸ್ಪರ್ಧೆ. ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆ, ರಾಜ್ಯದ ಸ್ವಾಯತ್ತೆ, ಬಿಜೆಪಿ ರಿಮೋಟ್‌ ಕಂಟ್ರೋಲ್‌ನಲ್ಲಿರುವ ಎಐಎಡಿಎಂಕೆ ಸರ್ಕಾರ…’ ಮುಂತಾದ ವಿಚಾರಗಳು ಡಿಎಂಕೆ ಪ್ರಚಾರದಲ್ಲಿ ಪ್ರತಿಧ್ವನಿಸಿದ್ದವು.

ಇದನ್ನೂ ಓದಿ : ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ

ಕಮಲ್‌ ಹಾಸನ್‌ಗೆ ನಿರಾಸೆ ದೊಡ್ಡ ರಾಜಕೀಯ ಮಹಾತ್ವಾಕಾಂಕ್ಷೆಯೊಂದಿಗೆ ಸ್ವಂತ ಪಕ್ಷ ಸ್ಥಾಪಿಸಿ ಚುನಾವಣೆಗೆ ಧುಮುಕಿದ್ದ ನಟ ಕಮಲ್ ಹಾಸನ್‌ಗೆ ತೀವ್ರ ನಿರಾಸೆಯಾಗಿದೆ. ಕಮಲ್‌ರ ‘ಮಕ್ಕಳ ನಿಧಿ ಮಯಂ’ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಯಲ್ಲಿ ಗೆದ್ದಿಲ್ಲ. ಸ್ವತಃ ಕಮಲ್‌ಗೆ ತೀವ್ರ ನಿರಾಸೆಯಾಗಿದ್ದು ಕೊಯಂಬತ್ತೂರು ದಕ್ಷಿಣ ಕ್ಷೇತ್ರದದಲ್ಲಿ 1540 ಮತಗಳ ಅಂತರದಿಂದ ಸೋಲುಂಡಿದ್ದಾರೆ.

ತಮಿಳಿನ ಹಿರಿಯ ನಟಿ ಶ್ರೀಪ್ರಿಯ ಕಮಲ್ ಹಾಸನ್ ಅವರ ಮಕ್ಕಳ ನಿಧಿ ಮಯಂ ಪಕ್ಷದಿಂದ ಚೆನ್ನೈನ ಮೈಲಾಪೋರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಟ, ಗೀತರಚನೆಕಾರ ಸ್ನೇಹನ್ ಸಹ ಕಮಲ್ ಪಕ್ಷದಿಂದಲೇ ವಿರುಗಂಬಕ್ಕಮ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಟಿಟಿವಿ ದಿನಕರನ್ ಎಐಎಡಿಎಂಕೆಯ ಮಾಜಿ ನಾಯಕಿ ಶಶಿಕಲಾ ನಟರಾಜನ್ ಅವರ ಸೋದರಳಿಯ, ಟಿಟಿವಿ ದಿನಕರನ್ ತಮ್ಮದೇ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷ ಸ್ಥಾಪಿಸಿದ್ದರು. 2016ರಲ್ಲಿ ಡಾ. ರಾಧಾಕೃಷ್ಣನ್ ನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಅವರು, ಈ ಬಾರಿ ಕೋವಿಲ್‌ಪಟ್ಟಿ ಕ್ಷೇತ್ರದಲ್ಲಿ ಎಐಎಡಿಎಂಕೆಯ ಕಡಂಬೂರ್ ರಾಜು ಎದುರು ಸೋಲುಂಡಿದ್ದಾರೆ. ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಒಟ್ಟು 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಅದರಲ್ಲಿ ನಾಲ್ಕು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿವೆ, 7 ರಲ್ಲಿ ಎರಡನೇ ಸ್ಥಾನದಲ್ಲಿದ್ದರೆ, 1 ರಲ್ಲಿ ಮೂರನೇ ಸ್ಥಾನದಲ್ಲಿದ್ದು ಉತ್ತಮ ಸಾಧನೆಯನ್ನು ಮಾಡಿವೆ.

ಇದನ್ನು ಓದಿ: ವಾರ್ ರೂಂ ಸಿಬ್ಬಂದಿ ಮುಂದೆ ಮಂಡಿಯೂರಿದ ಸಂಸದ ತೇಜಸ್ವಿ‌ಸೂರ್ಯ

ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಭಾವನೆ ಅಷ್ಟಾಗಿ ಕಾಣಿಸಲಿಲ್ಲ. ಪಳನಿಸ್ವಾಮಿಯ ಬಗ್ಗೆ ಜನರಲ್ಲಿ ವೈರತ್ವ ಇಲ್ಲದಿದ್ದರೂ, ಈ ಸರ್ಕಾರದ ಹತ್ತು ವರ್ಷಗಳ ಆಡಳಿತವು ದುರ್ಬಲವಾಗಿತ್ತು ಎಂಬ ಭಾವನೆ ಇರುವುದು ಕಾಣಿಸುತ್ತಿದೆ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ‘ಎಐಎಡಿಎಂಕೆಯು ಪಳನಿಸ್ವಾಮಿ ಅವರ ಇಮೇಜ್ ಹಾಗೂ 10 ವರ್ಷಗಳ ಸಾಧನೆಯನ್ನು ಚಿತ್ರಿಸುವುದರ ಜತೆಗೆ, ಡಿಎಂಕೆಯ ‘ಕುಟುಂಬ ರಾಜಕಾರಣ’ವನ್ನೂ ಗುರಿಯಾಗಿಸಿ ಪ್ರಚಾರ ನಡೆಸಿದ್ದು ಡಿಎಂಕೆಗೆ ಲಾಭವಾಯಿತು.

ಬಿಜೆಪಿಗೆ ತಮಿಳುನಾಡಿನಲ್ಲಿ ಅಷ್ಟೊಂದು ಮನ್ನಣೆ ಇಲ್ಲದಿದ್ದರೂ, ಎಐಎಡಿಎಂಕೆಯು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಹೆಚ್ಚಿನ ಉತ್ಸಾಹ ತೋರಿಸಿತ್ತು. ಈ ಕಾರಣದಿಂದ ಈ ಪಕ್ಷದ ದೊಡ್ಡ ಪ್ರಮಾಣದ ಮತಗಳು ಪಕ್ಷದಿಂದಲೇ ಸಿಡಿದು ಸೃಷ್ಟಿಯಾಗಿರುವ ಎಎಂಎಂಕೆಗೆ ಹೋಗುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ, ಸಿಎಎ ಮತ್ತು ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದ್ದು, ವಣ್ಣಿಯಾರ್‌ ಸಮುದಾಯಕ್ಕೆ ಶೇ 10.5ರಷ್ಟು ಒಳಮೀಸಲಾತಿ ನೀಡಿದ್ದೇ ಮುಂತಾದ ವಿಚಾರಗಳೂ ಎಐಎಡಿಎಂಕೆಗೆ ಸೋಲಿಗೆ ಕಾರಣವಾದವು. ಡಿಎಂಕೆ ಆಡಳಿತರೂಢ ಪಕ್ಷವನ್ನು ಸೋಲಿಸಿದ್ದು ಹೇಗೆ? ಎಂದು ನೋಡುವುದಾದರೆ ಅದಕ್ಕೆ ಐದು ಅಂಶಗಳು ಕಾರಣವಾಗಿವೆ.

‌ಎಐಎಡಿಎಂಕೆಯೊಳಗಿನ ಭಿನ್ನಮತ : ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಭಿನ್ನಮತ ಹುಟ್ಟಿಕೊಳ್ಳುತ್ತದೆ. ಪ್ರಸ್ತುತ ಸಿಎಂ ಪಪಳನಿಸ್ವಾಆಮಿ ಹಾಗೂ ಓ. ಪನ್ನೀರ್‌ ಸೆಲ್ವಂ ಇಬ್ಬರ ನಡುವೆ ಪ್ರಾಬಲ್ಯ ಸಾಧಿಸಲು ಬಹಳ ದೀರ್ಘ ಕಾಲದಿಂದ ಜಿದ್ದಾಜಿದ್ದು ನಡೆಯುತ್ತಿದೆ. ಜಯಲಲಿತಾ ನಿಧನದ ಬಳಿಕ ಪನ್ನೀರ್‌ ಸೆಲ್ವ ಅವರನ್ನು ಸಿಎಂ ಮಾಡಲಾಯ್ತು. ಆದರೆ ಇದಾದ ಬಳಿಕ ಸಾಮರಸ್ಯ ಸೂತ್ರ ಬಳಸಿ ಅಧಿಕಾರ ಪಳನೀಸ್ವಾಮಿ ಬಳಿ ಬಂತು. ಹೀಗಿರುವಾಗ ಪಕ್ಷದ ನಾಯಕರ ನಡುವಿನ ಈ ಹಗ್ಗ ಜಗ್ಗಾಟ ಪಕ್ಷದ ಪ್ರದರ್ಶನ ಹಾಗೂ ಕಾರ್ಯಕರ್ತ ಮೇಲೂ ಬಿದ್ದಿದೆ.

ಆಡಳಿತ ವಿರೋಧಿ ಅಲೆ :  ತಮಿಳುನಾಡು ಹಾಗೂ ಕೇರಳದಂತಹ ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಗುವ ಸಂಪ್ರದಾಯವಿದೆ. ಆದರೆ ಕಳೆದ ಚುನಾವಣೆಯಲ್ಲಿ ಜಯಲಲಿತಾ ಈ ಪರಂಪರೆಯನ್ನು ಮುರಿದು ಎಐಡಿಎಂಕೆಯನ್ನು ಗೆಲುವಿನ ಹಳಿಗೆ ಮರಳಿಸಿ ಅಧಿಕಾರ ವಹಿಸಿಕೊಂಡಿದ್ದರು. 2011ರ ವಿಧಾನಸಭಾ ಚುನಾವಣೆಯ ಬಳಿಕ 2016ರ ವಿಧಾನಸಭಾ ಚುನಾವಣೆಯಲ್ಲೂ ಎಐಡಿಎಂಕೆ ಅಧಿಕಾರಕ್ಕೇರಿತು. ಪಕ್ಷ ಕಳೆದ ಹತ್ತು ವರ್ಷದಿಂದ ಅಧಿಕಾರದಲ್ಲಿದೆ. ಹೀಗಿರುವಾಗ ಸ್ವಾಭಾವಿಕವಾಗಿ ಆಡಳಿತ ವಿರೋಧಿ ಅಲೆ ಇರುವುದು ಸಹಜ.

ಪ್ರಭಾವಿ ನಾಯಕರಿಲ್ಲದಿರುವುದು :  ಜಯಲಲಿತಾರ ವ್ಯಕ್ತಿತ್ವವೇ ಬಹಳ ಆಕರ್ಷಕ. ಅವರ ನಿಧನದ ಬಳಿಕ ಎಐಡಿಎಂಕೆ ಪಕ್ಷದಲ್ಲಿ ಶೂನ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಜನಪ್ರಿಯತೆಯಿಂದ ಮತಗಳನ್ನು ಆಕರ್ಷಿಸುವ ನಾಯಕರು ಇರಲಿಲ್ಲ. ಪಳನೀಸ್ವಾಮಿ ಹಾಗೂ ಪಳನೀಸ್ವಾಮಿ ಪಕ್‌ಷದ ಹಿರಿಯ ನಾಯಕರು ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಜನಪ್ರಿಯತೆ ವಿಚಾರದಲ್ಲಿ ಅವರು ಜಯಲಲಿತಾ ಅಕ್ಕಪಕ್ಕವೂ ಸುಳಿಯಲು ಸಾಧ್ಯವಿಲ್ಲ. ಮತ್ತೊಂದೆಡೆ ಇವರಿಗೆ ಹೋಲಿಸಿದರೆ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ ಜನಪ್ರಯರಾಗಿದ್ದಾರೆ.

ಕರುಣಾನಿಧಿ ಕುಟುಂಬದ ಮೇಲೆ ಐಟಿ ದಾಳಿ : ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿನ ಜನಪ್ರಿಯ ನಾಯಕ ಎಂ. ಕರುಣಾನಿಧಿ ಕುಟುಂಬದ(ಸ್ಟಾಲಿನ್ ಮಗಳು ಹಾಗೂ ಅಳಿಯ) ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಲಿ ನಡೆಸಿದ್ದರು. ಆದಾಯ ತೆರಿಗೆ ಹಿಂದೆ ಸೂಕ್ತ ಕಾರಣವಿರಬಹುದು ಆದರೆ ಇದನ್ನು ಕೇಂದ್ರ ಸರ್ಕಾರ ಪಡೆದ ಸೇಡು ಎಂದೇ ಬಿಂಬಿಸಲಾಯ್ತು. ಅವರು ಜನರಿಗೆ ಇದನ್ನು ಮುಟ್ಟಿಸಲು ಸಫಲರಾದರು. ಇದೇ ಕಾರಣದಿಂದಾಗಿ ಅನೇಕ ಮಂದಿ ಭಾವನಾತ್ಮಕವಾಗಿ ಡಿಎಂಕೆ ಪರ ಮತ ಚಲಾಯಿಸಿದರು.

ಡಿಎಂಕೆ ಅವರ ಜನಪ್ರಿಯ ಚುನಾವಣೆಯ ಭರವಸೆ :  ಡಿಎಂಕೆ ಚುನಾವಣೆಯನ್ನು ಉತ್ತಮವಾಗಿ ನಿರ್ವಹಿಸಿದರು. ಅಲ್ಲದೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳೂ ಜನರ ಮನ ಗೆದ್ದಿವೆ. ಪಕ್ಷ ಉದ್ಯೋಗ ವಿಚಾರದಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದು, ಇದು ಯುವಜನರ ಮನ ಗೆದ್ದಿದೆ. ಅಲ್ಲದೇ ಬಸ್‌ಗಳಲ್ಲಿ ಉಚಿತ ಪಾಸ್‌ ಹಾಗೂ ಒಂದು ವರ್ಷದ ಹೆರಿಗೆ ರಜೆ ನೀಡುವ ಮೂಲಕ ಮಹಿಳೆಯರ ಒಲವು ಗಳಿಸಲು ಸಫಲರಾದರು. ರೇಷನ್ ಕಾರ್ಡ್‌ ಇದ್ದವರಿಗೆ 4000 ರೂಪಾಯಿವರೆಗಿನ ಆರ್ಥಿಕ ಸಹಾಯ ಹಾಗೂ ಎಲ್‌ಪಿಜಿ ಸಿಲಿಂಡರ್‌ ಮೇಲೆ 100 ರೂಪಾಯಿಯ ಸಬ್ಸಿಡಿ ಭರವಸೆಯೂ ತನ್ನ ಪ್ರಭಾವ ಬೀರಿದೆ. ಒಟ್ಟಾರೆ ಈ ಬಾರಿಯ ಚುನಾವಣೆ ಸೂರ್ಯನ ಶಾಖಕ್ಕೆ ಎರಡಲೆ ಮುದಡಿದರೆ, ಕಮಲ ಅರಳದೆ ನಿರಾಸೆ ಅನುಭವಿಸಿದ್ದಂತೂ ನಿಜ.

 

Donate Janashakthi Media

Leave a Reply

Your email address will not be published. Required fields are marked *