ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಕೂಡಲೇ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕೆಂದು ಕೇಂದ್ರ ಸರಕಾರಕ್ಕೆ ದೆಹಲಿ ಉಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದೆ.
“ದೆಹಲಿಯಲ್ಲಿ ಸಾಯುತ್ತಿರುವ ಜನರನ್ನು ನಾವು ಕಣ್ಣುಮುಚ್ಚಿ ನೋಡುತ್ತಿರುತ್ತೇವೆ ಎಂದು ನೀವು ಭಾವಿಸಿದ್ದೀರಾ?” ಎಂದು ಉಚ್ಚ ನ್ಯಾಯಾಲಯ ಕೇಂದ್ರ ಸರಕಾರವನ್ನು ಕೇಳಿದೆ.
ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಬಾತ್ರಾ ಆಸ್ಪತ್ರೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರದವರೆಗೆ ಅಥವಾ ಅರ್ಧ ಘಂಟೆಯವರೆಗೆ ಆದೇಶವನ್ನು ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನು ನಿರಾಕರಿಸಿದೆ.
ದೆಹಲಿಗೆ ಕೇಂದ್ರವು 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ ಮತ್ತು “ನೀವು ಅದನ್ನು ಪೂರೈಸಬೇಕು” ಎಂದು ನ್ಯಾಯಪೀಠ ಹೇಳಿದೆ.