4240 ಹಾಸಿಗೆ ಸಿದ್ಧ ಮಾಡಿಕೊಂಡ ರೈಲ್ವೇ ಇಲಾಖೆ : ಹಾಸಿಗೆಗಳ ಅಗತ್ಯವಿಲ್ಲ ಎಂದು ನಿರ್ಲಕ್ಷಿಸಿದ್ದ ಸರಕಾರ
ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಬೆಂಬಲವಾಗಿ ರೈಲ್ವೆ ಇಲಾಖೆಯೂ ಸಹ ಕೈ ಜೋಡಿಸಿದ್ದು, ರೈಲ್ವೆ ಬೋಗಿಗಳನ್ನು ಇದೀಗ ಮತ್ತೇ ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಲಾಗುತ್ತಿದೆ.
ನೈರುತ್ಯ ರೈಲ್ವೆಯು 4,240 ಹಾಸಿಗೆ ಸಾಮರ್ಥ್ಯದ ಐಸೊಲೇಷನ್ ರೈಲು ಬೋಗಿಗಳನ್ನು ಸಿದ್ಧ ಮಾಡಿಕೊಂಡಿದೆ. ಈ ಪೈಕಿ ಬೆಂಗಳೂರಿನ ಕೆಎಸ್‌ಆರ್ ಹಾಗೂ ಯಶವಂತಪುರ, ಮೈಸೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಪೂರೈಸಲೂ ಸಜ್ಜಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಐಸೊಲೇಷನ್ ವಾರ್ಡ್ ಮಾದರಿಯಲ್ಲಿ ಈ ಬೋಗಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನೈರುತ್ಯ ರೈಲ್ವೆಯ ಮೂರು ವಿಭಾಗಗಳಿಗೆ ಇವುಗಳನ್ನು ಹಂಚಲಾಗಿದ್ದು, ಸೇವೆಗೆ ಸಿದ್ಧವಾಗಿವೆ. ‘ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣ ಹೊಂದಿರುವ, ಗಂಭೀರ ಸ್ಥಿತಿಯಲ್ಲಿಲ್ಲದ ರೋಗಿಗಳಿಗೆ ಈ ಹಾಸಿಗೆಗಳನ್ನು ಮೀಸಲಿಡಲಾಗುತ್ತಿದೆ.
ಇದನ್ನೂ ಓದಿ : ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ – ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ – ಸೋಂಕಿತರ ಸಮಸ್ಯೆ ಕೇಳೋರು ಯಾರು?
ಪ್ರಮುಖವಾಗಿ ಸೌಥ್ ವೆಸ್ಟರ್ನ್ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಕಳೆದ ವರ್ಷ 312 ರೈಲ್ವೆ ಕೋಚ್ಗಳನ್ನು ಪರಿವರ್ತನೆ ಮಾಡಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ 96 ಕೋಚ್ಗಳನ್ನು ಐಸೋಲೇಶನ್ಗಳಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಣದ ಹಿನ್ನೆಲೆಯಲ್ಲಿ ಯಾವುದೇ ಐಸೋಲೇಶನ್ ಕೋಚ್ ಚಿಕಿತ್ಸೆಗೆ ಬಳಕೆಯಾಗಿರಲಿಲ್ಲ. ಆದರೆ ಇದೀಗ ಕೊರೊನಾ ಎರಡನೇ ಅಲೆಯು ಮತ್ತೇ ಅಪ್ಪಳಿಸಿದ್ದು, ರೈಲ್ವೆ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಮತ್ತೇ 280 ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ತಯಾರು ಮಾಡಿದೆ. ಒಂದು ಕೋಚ್ನಲ್ಲಿ 16 ಜನರಿಗೆ ಚಿಕಿತ್ಸೆ ಎಂಬಂತೆ ಇಲ್ಲಿ ಐಸೋಲೇಶನ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದರು.
‘ಕಳೆದ ವರ್ಷ 320 ಬೋಗಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿತ್ತು. ರಾಜ್ಯಸರ್ಕಾರದಿಂದ ಯಾವುದೇ ಬೇಡಿಕೆ ಬಂದಿರಲಿಲ್ಲ. ಈಗ 250ಕ್ಕೂ ಹೆಚ್ಚು ಬೋಗಿ ಸಿದ್ಧ ಇವೆ. ಅಗತ್ಯಬಿದ್ದರೆ ಮತ್ತಷ್ಟು ಬೋಗಿಗಳನ್ನು ಕೋವಿಡ್‌ಗಾಗಿ ಪರಿವರ್ತಿಸಲಾಗುವುದು’ ಎಂದು ಅವರು ತಿಳಿಸಿದರು.
ಐಸೋಲೇಶನ್ ಬೋಗಿಯಲ್ಲಿ ಏನಿದೆ? : ಒಂದು ಬೋಗಿಯಲ್ಲಿ 16 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಆಕ್ಸಿಜನ್ ಸಿಲಿಂಡರ್ ಅಳವಡಿಸಲು ಜಾಗವಿದೆ. ಥರ್ಮಲ್ ಸ್ಕ್ಯಾನರ್, ಜೈವಿಕ ಶೌಚಾಲಯ, ಕಸದ ಬುಟ್ಟಿ ಇಡಲಾಗಿದೆ. ವೈದ್ಯರು ಮತ್ತು ಶುಶ್ರೂಷಕರು ಪಿಪಿಇ ಕಿಟ್ ಬದಲಿಸಿಕೊಳ್ಳಲು ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗಿದೆ. ಎಲ್ಲ ಬೋಗಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಇದನ್ನೂ ಓದಿ : ಲಾಕ್ಡೌನ್ ಜಾರಿ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ?
ಅಂಕಿ-ಅಂಶ
97: ಹುಬ್ಬಳ್ಳಿ
95: ಮೈಸೂರು
73: ಬೆಂಗಳೂರು
265: ಮೂರು ವಿಭಾಗಗಳಲ್ಲಿನ ಕೋವಿಡ್ ವಾರ್ಡ್ ಬೋಗಿಗಳು
ಒಟ್ಟು ಲಭ್ಯವಿರುವ ಹಾಸಿಗೆಗಳ ಸಂಖ್ಯೆ : 4240
ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಬೇಡಿಕೆ ಹೋಗಿರದ ಕಾರಣ ಈ ಸೌಲಭ್ಯವು ಬಳಕೆಯಾಗದೇ ಉಳಿದಿದೆ. ‘ಸಾಮಾನ್ಯ ಹಾಸಿಗೆಗಳ ಅಗತ್ಯ ಸದ್ಯಕ್ಕಿಲ್ಲ. ಹೀಗಾಗಿ, ಯಾವುದೇ ಬೇಡಿಕೆ ಸಲ್ಲಿಸಿರಲಿಲ್ಲ. ನಮಗೆ ತುರ್ತಾಗಿ ಬೇಕಾಗಿರುವುದು ವೈದ್ಯಕೀಯ ಆಮ್ಲಜನಕ ಸಹಿತ ಹಾಸಿಗೆಗಳು. ನಾಲ್ಕು ನಿಲ್ದಾಣಗಳಲ್ಲಿ ಇಂತಹ ಹಾಸಿಗೆಗಳನ್ನು ಒದಗಿಸಿದರೂ ಸಾಕಷ್ಟು ಸಹಾಯವಾಗುತ್ತದೆ. ಈ ಬಗ್ಗೆ ಮಾಹಿತಿ ಇರಲಿಲ್ಲ. ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಬೇಡಿಕೆ ಸಲ್ಲಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ಈಗಾಗಲೇ ದೇಶ ಹಾಗೂ ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ನುಗ್ಗಿ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೊರೊನಾ ರೋಗಿಗಳಿಗೆ ಬೆಡ್ ಸಿಗದೆ ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿವೆ. ಈ ಮಧ್ಯೆ ಬೆಡ್ ಸಮಸ್ಯೆ ನೀಗಿಸಲು ಮತ್ತೊಮ್ಮೆ ಕಳೆದ ವರ್ಷದಂತೆ ಸೌತ್ ವೆಸ್ಟರ್ನ್ ರೈಲ್ವೆ ಪಣ ತೊಟ್ಟಿದೆ. ಆದರೆ ಸರಕಾರ ಈ ಸೌಲಭ್ಯವನ್ನು ನಿರ್ಲಕ್ಷಿಸಿದ್ದು ಸರಿಯಾದ ಕ್ರಮವಲ್ಲ, ಸಚಿವರಗಳು ಈ ಕುರಿತು ರೈಲ್ವೇ ಇಲಾಖೆಯ ಜೊತೆ ಮೊದಲೆ ಮಾತನಾಡಿದ್ದರೆ ಜನರ ಜೀವ ಉಳಿಯುತ್ತಿತ್ತು. ಈಗ ರೈಲ್ವೇ ಇಲಾಖೆಯೆ ಬೆಡ್ ಕೊಡಲು ಮುಂದೆ ಬಂದಿದೆ ಸರಕಾರ ಇನ್ನಾದರೂ ಆ ಸೌಲಭ್ಯ ಬಳಸಿಕೊಂಡ ಜನರ ಜೀವ ಉಳಿಸಲಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.