ಡಾ.ರಾಜ್‌ ಹುಟ್ಟುಹಬ್ಬ ವಿಶೇಷ : ಜನಮಾನಸದಲ್ಲಿ ಹಸಿರಾಗಿ ಉಳಿಯುವ ಅಣ್ಣಾವ್ರು

ನಟಸಾರ್ವಭೌಮ, ವರನಟ,  ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಖ್ಯಾತಿ ಪಡೆದ ಡಾ. ರಾಜಕುಮಾರ್. ತೆರೆಯ ಮೇಲೆಯೂ ಮತ್ತು ತೆರೆಯ ಹಿಂದೆಯೂ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿದ ಮತ್ತು ಬೆಳೆಸಿದ ನಾಯಕ ಎಂದು ರಾಜ್ ರನ್ನು ಗುರುತಿಸಿದರೆ ಅದು ಬಹುಷಃ ತಪ್ಪಾಗಲಾರದು. ರಾಜಕುಮಾರ್ ಬಗ್ಗೆ ವಿಶೇಷವಾಗಿ ಹೇಳುವ ಪ್ರಮೇಯ ವಿಲ್ಲ ಏಕೆಂದರೆ ಅವರು ಎಲ್ಲರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಹೋಗಿದ್ದಾರೆ. ಇಂದು ಅವರ ಹುಟ್ಟುಹಬ್ಬ ಅವರ ಕುರಿತು ಕೆಲವು ಮಾಹಿತಿಗಳನ್ನು ತಿಳಿಯೋಣ.

ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ.

ರಾಜಕುಮಾರ್ ನಾಯಕ ನಟರಾಗಿ ಚಿತ್ರರಂಗ ಪ್ರವೇಶಿಸಿದ್ದು 1954 ರಲ್ಲಿ, ‘ಬೇಡರ ಕಣ್ಣಪ್ಪ’ ಅವರ ಮೊದಲ ಚಿತ್ರ. ಆದಾಗಲೇ ಅವರು ಬಾಲನಟನಾಗಿ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿದ್ದು ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ. ಆಗಲೇ ಕನ್ನಡಕ್ಕೊಬ್ಬ ಹೀರೋ ಸಿಕ್ಕ ಅಂತ ಜನ ಮಾತನಾಡಿದರು. ಅದು ‘ರಾಜಕುಮಾರ್’ ಸಿನಿ ಬದುಕಿನ ಮಹತ್ತರ ತಿರುವು.

ಕನ್ನಡ ಚಿತ್ರರಂಗಕ್ಕೆ ದಾಖಲೆ ಎನ್ನುವ ಹಾಗೆ ರಾಜಕುಮಾರ್ ನಾಯಕ ನಟರಾಗಿ 100 ಚಿತ್ರಗಳನ್ನು ಪೂರೈಸಿದ್ದು ಅವರ ಬದುಕಿನ ಇನ್ನೊಂದು ಮೈಲುಗಲ್ಲು. ಆಗಲೇ ಅವರಿಗೆ ‘ನಟಸಾರ್ವಭೌಮ’ ಬಿರುದು ಬಂತು. ಅದಕ್ಕೂ ಮುನ್ನ ಅವರನ್ನು ‘ವರನಟ’ ಅಂತಲೂ ಅಭಿಮಾನಿಗಳು ಕರೆಯುತ್ತಿದ್ದರು. ಆದರೆ ನಟ ಸಾರ್ವಭೌಮ ಅಂತ ಬಿರುದು ಸಿಕ್ಕಿದ್ದು ಹೀರೋ ಆಗಿ ನೂರು ಚಿತ್ರಗಳನ್ನು ಪೂರೈಸಿದ ನಂತರ. ಆ ಹೊತ್ತಿನ ಸಂದರ್ಭವೇ ವಿಶೇಷವಾಗಿತ್ತು. ಯಾಕೆಂದರೆ ಅಲ್ಲಿವರೆಗೂ ಕನ್ನಡದ ಯಾವುದೇ ನಟನೂ ಹೀರೋ ಆಗಿ ನೂರು ಸಿನಿಮಾ ಪೂರೈಸಿರಲಿಲ್ಲ. ಆ ದಾಖಲೆ ರಾಜಕುಮಾರ್ ಅವರಿಂದ ಸಾಧ್ಯವಾಯಿತು. ‘ಭಾಗ್ಯದ ಬಾಗಿಲು’ ರಾಜ್ ಅಭಿನಯದ ನೂರನೇ ಚಿತ್ರ. ಈ ಚಿತ್ರ ತೆರೆ ಕಂಡಾಗ ಮೈಸೂರಿನಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಹಾಗೆಯೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸಮಾರಂಭ ನಡೆಯಿತು. ಅಭಿಮಾನಿಗಳು ಅವರಿಗೆ ‘ನಟ ಸಾರ್ವಭೌಮ’ ಬಿರುದು ನೀಡಿ ಸನ್ಮಾನಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಬಿರುದು ಸನ್ಮಾನ ಸಮಾರಂಭ ಅವರೊಳಗಿನ ಸಮಾಜಮುಖಿ ಗುಣದ ಅನಾವರಣಕ್ಕೆ ವೇದಿಕೆ ಆಯಿತು. ಅವರ ಆಸಕ್ತಿಯಂತೆ ‘ರಾಜ ಕುಮಾರ್ ಶಿಕ್ಷಣ ಸಮಿತಿ’ ಆಸ್ಥಿತ್ವಕ್ಕೆ ಬಂತು. ಅದಕ್ಕೆ ಸಿವಿಎಲ್ ಶಾಸ್ತ್ರಿ ಅಧ್ಯಕ್ಷರಾದರು. ರಾಜಕುಮಾರ್ ಮೊದಲ ಬಾರಿಗೆ 10 ಸಾವಿರ ದೇಣಿಗೆ ಇಟ್ಟು, ಸಮಿತಿಗೆ ಚಾಲನೆ ಕೊಟ್ಟರು. ಅಲ್ಲಿ ತನಕ ನಟರಾಗಿದ್ದ ರಾಜಕುಮಾರ್, ಅಲ್ಲಿಂದ ಸಮಾಜಮುಖಿಯಾದರು.

ರಾಜ್ ಕುಮಾರ್ ಬದುಕಿನ ಮಹತ್ವದ ಘಟ್ಟಗಳಲ್ಲಿ ದಾದಾ ಫಾಲ್ಕೆ ಪ್ರಶಸ್ತಿ ಪುರಸ್ಕಾರವೂ ಒಂದು. ಕನ್ನಡಕ್ಕೆ ಈಗಲೂ ಅವರೊಬ್ಬರೇ ಫಾಲ್ಕೆ ಪ್ರಶಸ್ತಿ ಪುರಸ್ಕೃತರು. ಅದಕ್ಕೂ ಮುಂಚೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂತು. ಈ ಪ್ರಶಸ್ತಿ ಬಂದಾಗ ರಾಜಕುಮಾರ್ ಅವರ ನಿಜವಾದ ವ್ಯಕ್ತಿತ್ವ ಹೊರ ರಾಜ್ಯದವರಿಗೂ ಗೊತ್ತಾಯಿತು.

ವಿಶೇಷವಾಗಿ ಹಿಂದಿ ಚಿತ್ರರಂಗದಿಂದಲೂ ರಾಜ ಕುಮಾರ್ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿತು. ಧರ್ಮೇಂದ್ರ, ಸಂಜೀವ್ ಕುಮಾರ್ ಸೇರಿದಂತೆ ಹಲವು ಹಿರಿಯ ನಟರು ಬೆಂಗಳೂರಿಗೆ ಬಂದು ರಾಜ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಿದರು. ದಕ್ಷಿಣ ಭಾರತ ಚಿತ್ರರಂಗ ಕೂಡ ಅವರನ್ನು ಗೌರವಿಸಿ ಕೊಂಡಾಡಿತು. ಅಲ್ಲಿ ತನಕ ಕನ್ನಡಕ್ಕಷ್ಟೇ ಎನ್ನುವಂತಿದ್ದ ರಾಜಕುಮಾರ್ ಅವರ ಕೀರ್ತಿ ಹೊರ ರಾಜ್ಯದಲ್ಲೂ ಪ್ರಜ್ವಲಿಸಿತು. ಭಾರತೀಯ ಚಿತ್ರರಂಗದಲ್ಲೇ ರಾಜ ಕುಮಾರ್ ಅಪರೂಪದ ನಟರಾಗಿ ಕಾಣಿಸಿಕೊಂಡಿದ್ದು, ಕನ್ನಡ ಚಿತ್ರೋದ್ಯಮವೇ ಹೆಮ್ಮೆ ಪಡುವಂತಾಯಿತು.

ನಟರಾಗಿ ಗುರುತಿಸಿಕೊಂಡ ರಾಜ ಕುಮಾರ್, ಗಾಯಕರಾಗಿದ್ದು ಕೂಡ ಅವರ ಸಿನಿ ಬದುಕಿನ ಇನ್ನೊಂದು ಮಹತ್ತರ ತಿರುವು. ಅವರು ಪೂರ್ಣ ಪ್ರಮಾಣದಲ್ಲಿ ಗಾಯಕರಾಗಿ ಹಾಡಿದ್ದು ‘ಸಂಪತ್ತಿಗೆ ಸವಾಲ್’ ಚಿತ್ರದ ಎಮ್ಮೆ ನಿನಗೆ ಸಾಟಿ ಇಲ್ಲ.. ಹಾಡು. ಅಲ್ಲಿ ತನಕ ಅವರೊಳಗಿನ ಗಾಯಕ ಎಲೆಮರೆಯ ಕಾಯಿ ಅಂತೆಯೇ ಇದ್ದ. ಸಂಪತ್ತಿಗೆ ಸವಾಲ್ ಚಿತ್ರದ ಎಮ್ಮೆ… ಹಾಡಿನ ಮೂಲಕ ಅವರು ಗಾಯಕರಾಗಿಯೂ ಹೊರ ಹೊಮ್ಮಿದ್ದು ವಿಶೇಷ. ಆ ಸಂದರ್ಭವೂ ತುಂಬಾ ಆಕಸ್ಮಿಕ. ಹೆಸರಾಂತ ಗಾಯಕ ಪಿ.ಬಿ. ಶ್ರೀನಿವಾಸ್ ಆ ಹಾಡು ಹಾಡಬೇಕಿತ್ತು.

ಗೋಕಾಕ್ ಚಳವಳಿಯ ಪ್ರವೇಶ ರಾಜ ಕುಮಾರ್ ಬದುಕಿನ ಮತ್ತೊಂದು ಮೈಲುಗಲ್ಲು. ಹೋರಾಟದಿಂದ ಗೋಕಾಕ್ ವರದಿ ಅನುಷ್ಟಾನಕ್ಕೆ ಬರಲಿಲ್ಲ. ಕೋರ್ಟ್‌ನಲ್ಲಿ ಅದು ಬಿದ್ದು ಹೋಗಿದ್ದು ಒಂದೆಡೆಯಾದರೆ, ರಾಜ ಕುಮಾರ್ ಪ್ರವೇಶದಿಂದ ಗೋಕಾಕ್ ಚಳವಳಿಯ ಸ್ವರೂಪ ಬದಲಾಯಿತು. ಅವರ ಊರೂರು ಪ್ರವಾಸ ಕನ್ನಡದ ಅಲೆ ಎಬ್ಬಿಸಿತು.

ಇಡೀ ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗುವಂತಾಯಿತು. ಹಳ್ಳಿಯ ಜನರನ್ನು ರಾಜ ಕುಮಾರ್ ಅವರು ಹತ್ತಿರದಿಂದ ಕಂಡು, ಅವರ ಪ್ರೀತಿ ಕಾಣುವಂತಾಯಿತು. ರಾಜ ಕುಮಾರ್ ಅವರ ಮಾನವೀಯ ಮನಸ್ಸು ಅನಾವರಣಕ್ಕೂ ಕಾರಣವಾಯಿತು. ಅಲ್ಲಿಂದಲೇ ಪ್ರವಾಹ ಪೀಡಿತರ ಪರವಾಗಿ ಪ್ರವಾಸ ಮಾಡಿ, ದೇಣಿಗೆ ಸಂಗ್ರಹಿಸಿ, ಸರ್ಕಾರಕ್ಕೆ ನೀಡುವವೆರೆಗೂ ಅವರನ್ನು ನೆಲ, ಜಲ ಪರವಾದ ಹೋರಾಟಗಾರರನ್ನಾಗಿ ಮಾಡಲು ಆ ಚಳವಳಿ ನಾಂದಿ ಹಾಡಿತು. ಈಗಲೂ ಗೋಕಾಕ್ ಚಳುವಳಿ ಎಂದರೆ ತಕ್ಷಣ ನೆನಪಾಗುವುದು ಡಾ. ರಾಜ್ ಕುಮಾರ್ ಅವರ ಹೆಸರು.

1978 ರ ಬೈ-ಎಲೆಕ್ಷನ್ ನಲ್ಲಿ ರಾಜಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂದು ಹೀಗೆ ಗುಲ್ಲು ಎದ್ದಿತ್ತು. ಒಂದು ವೇಳೆ ರಾಜ್ ಸ್ಪರ್ಧಿಸಿದ್ದರೆ ಅವರು ಗೆಲ್ಲುವ ಎಲ್ಲ ಸಾಧ್ಯತೆಗಳು ಇದ್ದವು ಆದರೆ ರಾಜ್ ರಾಜಕೀಯದ ಹಾದಿ ತುಳಿಯಲಿಲ್ಲ. ತಮ್ಮ ಜನ ಪ್ರೀತಿಯನ್ನು ರಾಜಕೀಯ ದಾಳವಾಗಿ ಬಳಸಲು ಅವರಿಗೆ ಇಷ್ಟ ಇರಲಿಲ್ಲ ಹಾಗೂ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಹೇಳಿಕೊಳ್ಳುವಂತಹ ಆಸಕ್ತಿಯೂ ಇರಲಿಲ್ಲ.

ರಾಜ್ ಅವರ ಪ್ರತಿ ಒಂದು ಸಿನೆಮಾ ದಲ್ಲೂ ಒಂದು ಸಮಾಜ ಮುಖಿಯಾದ ಒಂದು ಮೆಸೇಜ್ ಇರುತಿತ್ತು. ಬಂಗಾರದ ಮನುಷ್ಯ ಎಂಬ ಚಿತ್ರ ಇದಕ್ಕೆ ಒಂದು ಒಳ್ಳೆ ಉದಾಹರಣೆ ಎಂದು ಹೇಳಬಹುದು. ರಾಜ್ ಅವರ ಅಭಿನಯ ಮತ್ತು ಆದರ್ಶ ಪ್ರಾಯವಾದ ಪಾತ್ರಗಳು ಜನರ ಜನಮಾನಸದಲ್ಲಿ ಹಸಿರಾಗಿ ಉಳಿದಿವೆ.

ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ಚಿತ್ರಕಲಾ ಶಿಕ್ಷಕ ನರಸಿಂಹಾಚಾರ್ ರಾಜ್ ಅಭಿನಯದ 205 ಚಿತ್ರಗಳ ಶೀರ್ಷಕ ಪೋಸ್ಟರ್ ಗಳನ್ನು ರಚಿಸುವ ಮೂಲಕ ಡಾ. ರಾಜ್ ರವರ ಹುಟ್ಟುಹಬ್ಬಕ್ಕೆ ಕಲಾಗೌರವ ಸಲ್ಲಿಸಿದ್ದಾರೆ. ನರಸಿಂಹಹಾಚಾರ್ ರವರು ಸಂತೆಕಸಲಗೆರೆ ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರು ಕಲಾವಿದರಿಗೂ ಜನಶಕ್ತಿ ಮೀಡಿಯಾ ಈ ವೀಡಿಯೊ ವನ್ನು ಸಮರ್ಪಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *