ಉಪಚುನಾವಣೆ: ಪ್ರಚಾರದಲ್ಲಿ ಭಾಗಿಯಾದ ನಾಯಕರಿಗೆ ಕೋವಿಡ್‌ ದೃಢ

ಬೆಂಗಳೂರು: ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗ ಮಾರ್ಚ್‌ 16ರಂದು ಮತದಾನ ಪ್ರಕ್ರಿಯೆಗಳ ವಿವರಗಳನ್ನು ಘೋಷಣೆ ಮಾಡಿತ್ತು.

ಈ ಕ್ಷೇತ್ರಗಳಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳ ರಾಜ್ಯ ರಾಷ್ಟ್ರೀಯ ನಾಯಕರಿಂದ ಆರಂಭವಾದ ಚುನಾವಣಾ ಭರಾಟೆಯಿಂದ ಕ್ಷೇತ್ರಗಳಲ್ಲಿ ಬಿರುಸಿನಿಂದ ಸಂಚಲನ ಮೂಡಿಸಿತು. ಆದರೆ ಉಪಚುನಾವಣೆ ಪ್ರಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿ(ಎಸ್‌) ಪಕ್ಷದ ನಾಯಕರು ರಾಜ್ಯ ಸರಕಾರ ಹೊರಡಿಸಿದ ಕೋವಿಡ್‌ ನಿಯಮಗಳು ಅನ್ವಯವಾಗಿಲ್ಲ ಎಂಬುದು ಬೆಳಕಿಗೆ ಬರುತ್ತಿದೆ.

ಇದನ್ನು ಓದಿ: ಸಿಎಂ ಯಡಿಯೂರಪ್ಪರವರಿಗೆ ಕೋವಿಡ್‌ ಪಾಸಿಟಿವ್‌: ಆಸ್ಪತ್ರೆಗೆ ದಾಖಲು

ಪ್ರಚಾರದಲ್ಲಿ ಭಾಗಿಯಾದ ನಾಯಕರುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನೆನ್ನೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರಿಗೆ ಕೋವಿಡ್‌ ದೃಢಗೊಂಡಿತ್ತು. ಅಲ್ಲದೆ ಜೆಡಿ(ಎಸ್‌) ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಡಿಗೆ ಸಿಬ್ಬಂದಿ ಹಾಗೂ ಚಾಲಕನಿಗು ಸೋಂಕು ದೃಢಪಟ್ಟಿದೆ.

ಮಸ್ಕಿ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಅವರಿಗೂ ಕೋವಿಡ್‌ ದೃಢಗೊಂಡಿದ್ದರಿಂದ ಅವರು ಸಹ ಆರೈಕೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಉಪಚುನಾವಣೆ: ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿ ಬಿಜೆಪಿ-ಕಾಂಗ್ರೆಸ್‌

ಏಪ್ರಿಲ್‌ 14ರ ಸಂಜೆ ಅಲ್ಪಪ್ರಮಾಣದ ಜ್ವರ ಕಾಣಿಸಿದ್ದರಿಂದ ಬೆಳಗಾವಿಯಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿಗಳು ಮರುದಿನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಳಿನ್‌ ಕುಮಾರ್‌ ಕಟೀಲ್‌, ಹಾಗೂ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಕೋವಿಡ್ ಆತಂಕ ಎದುರಾಗಿದೆ.

ಅಲ್ಲದೆ ಶಾಸಕರಾದ ನರಸಿಂಹ ನಾಯಕ ರಾಜುಗೌಡ ಎ.ಕೃಷ್ಣಪ್ಪ, ಪ್ರೀತಮ್‌ ಗೌಡ ಸೇರಿದಂತೆ ಅವರ ಸಂಪರ್ಕದಲ್ಲಿದ್ದ ಹಲವರಿಗೆ ಕೋವಿಡ್‌ ಪಾಸಿಟಿವ್‌ ಆಗಿ ಆರೈಕೆ ಪಡೆದುಕೊಳ್ಳುತ್ತಿದ್ದಾರೆ.

ಕುಮಾರಸ್ವಾಮಿಗೆ ಸಿಗದ ಹಾಸಿಗೆ

ಕೋವಿಡ್‌ ದೃಢಗೊಂಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಲು ಬೆಡ್ ಸಿಗದೇ ಪರದಾಡಿದ ಘಟನೆ ನಡೆದಿದೆ. ಆರೋಗ್ಯ ವ್ಯತ್ಯಯವಾಗಿದ್ದರಿಂದಾಗಿ ಬೆಂಗಳೂರಿಗೆ ವಾಪಾಸ್ ಆದವರು ಮನೆಗೆ ಹೋಗದೇ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು. ಶನಿವಾರ ಬೆಳಿಗ್ಗೆ ಆರೋಗ್ಯ ತಪಾಸಣೆಗೆ ಒಳಗಾದಾಗ ಕೋವಿಡ್ ದೃಢ ಪಟ್ಟಿದೆ. ವೈದ್ಯರನ್ನು ಸಂಪರ್ಕಿಸಿದಾಗ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು.

ಆಸ್ಪತ್ರೆ ಸಂಪರ್ಕಿಸಿದಾಗ ಬೆಡ್ ಲಭ್ಯವಿಲ್ಲ ಎಂಬ ಮಾಹಿತಿ ಬಂದ ಬಳಿಕ ಸಚಿವ ಡಾ. ಕೆ.ಸುಧಾಕರ್‌ ಅವರ ಮಧ್ಯಪ್ರವೇಶದಿಂದ ಖಾಸಗಿ ಆಸ್ಪತ್ರೆಯೊಂದಿಗೆ ಮಾತನಾಡಿ ಬೆಡ್‌ ವ್ಯವಸ್ಥೆ ಮಾಡಿರುವುದಾಗಿ ಮಾಹಿತಿ ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *