ಬೆಂಗಳೂರು: ಕರ್ನಾಟಕದಲ್ಲಿ ತೆರವಾಗಿದ್ದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆಗೆ ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಮತದಾನ ನಡೆಯಲಿದೆ. ಈ ಚುನಾವಣೆ ರಾಜ್ಯದ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಪ್ರತಿಷ್ಟೆಯ ಕ್ಷೇತ್ರವಾಗಳು ಇವಾಗಿದೆ.
ಸಂಸದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಹಾಗೂ ಬಸವಕಲ್ಯಾಣ ವಿಧಾನಸಭೆ ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಮತ್ತು ಅಪರೇಷನ್ ಕಮಲದಿಂದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದ ಪ್ರತಾಪ್ ಗೌಡ ರಾಜೀನಾಮೆಯಿಂದಾಗಿ ಈ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಹಾಗೂ ಬಿಜೆಪಿಯಿಂದ ಸತತ ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದೆ.
ಕ್ಷೇತ್ರದಲ್ಲಿ ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಬಿಜೆಪಿ ಪಕ್ಷವು ದಿವಂಗತ ಸುರೇಶ್ ಅಂಗಡಿಯವರ ಪತ್ನಿ ಎಂ.ಎಸ್.ಮಂಗಳಾ ಅಂಗಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಮತ್ತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದೆ.
ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನ ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಅತ್ಯಂತ ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಿತ್ತು. ಅದರಲ್ಲೂ ಅಂಗಡಿ ಕುಟುಂಬಕ್ಕೆ ಜನ ಅನುಕಂಪದ ಆಧಾರದ ಮೇಲೆ ಮತ ನೀಡುತ್ತಾರೆ ಎಂದು ಲೆಕ್ಕಾಚಾರ ಹಾಕಿತ್ತು. ಆದ್ರೆ ಕಾಂಗ್ರೆಸ್ನಿಂದ ಸತೀಶ್ ಅಖಾಡಕ್ಕೆ ಇಳಿದ ಬಳಿಕ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಸತೀಶ್ ಜಾರಕಿಹೋಳಿ ಕೂಡ ಪ್ರಭಾವಿ ವ್ಯಕ್ತಿ, ಜೊತೆಗೆ ರಾಜಕೀಯ ಹಿಡಿತ ಹೊಂದಿದ್ದಾರೆ. ಬೇರೆ ಯಾವುದೆ ವಿಚಾರಗಳನ್ನ ಪ್ರಸ್ತಾಪಿಸದೆ ನೇರವಾಗಿ ಬೆಲೆ ಏರಿಕೆಯನ್ನೆ ಪ್ರಮುಖ ಅಸ್ತ್ರವಾಗಿಸಿಕೊಂಡಕೊಂಡ ಹಿನ್ನಲೆ ಜನ ಕಾಂಗ್ರೆಸ್ನತ್ತ ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ. ಸದ್ಯ ಬೆಲೆ ಏರಿಕೆಗೆ ಬಿಜೆಪಿ ಯಾವುದೆ ಉತ್ತರ ನೀಡುತ್ತಿಲ್ಲ. ಹಾಗಾಗಿ ಬೆಲೆ ಏರಿಕೆ ಅಸ್ತ್ರ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಪಡೆಯುವಲ್ಲಿ ಸಾಕಷ್ಟು ಹೆಸರುಗಳು ಕೇಳಿ ಬಂದಿತ್ತಾದರೂ, ಅಂತಿಮವಾಗಿ ಅನುಕಂಪದ ಅಸ್ತ್ರ ಬಳಸುವುದು ಅನಿವಾರ್ಯವೆನಿಸಿತು.
ಉಪ ಚುನಾವಣೆ ರಾಜ್ಯದ ದಿಕ್ಕನ್ನೇ ಬದಲಿಸಬಹುದೆಂದು ಕಾಂಗ್ರೆಸ್ ಪಕ್ಷವು ರಾಜ್ಯ ಸರ್ಕಾರದ ವೈಫಲ್ಯಗಳನ್ನೆ ಮುಂದಿಟ್ಟುಕೊಂಡಿರುವ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡಿತ್ತು. ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನ ಮಾಡದೆ ನೇರ ಬೆಲೆ ಏರಿಕೆ ವಿಚಾರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಪ್ರಚಾರ ನಡೆಸುತ್ತಿದೆ. ಮೋದಿ ಸರ್ಕಾರ ಬರುವ ಮುನ್ನ ತೈಲ ಬೆಲೆ, ರಸಗೊಬ್ಬರ, ದಿನಬಳಕೆಯ ವಸ್ತುಗಳಿಗೆ ಇದ್ದ ರೇಟ್, ಹಾಗೂ ಮೋದಿ ಸರ್ಕಾರ ಬಂದ ಏಳೇ ವರ್ಷಗಳಲ್ಲಿ ದುಪ್ಪಟ್ಟು ಆಗಿರುವ ಪ್ರಮುಖ ವಿಚಾರವನ್ನೆ ಇಡೀ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಬಳಸಿಕೊಂಡಿದೆ.
ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆ ಬೆಳಗಾವಿ ಲೋಕಸಭೆಯು ಕಾಂಗ್ರೆಸ್ ಬಾರಿ 10 ಬಾರಿ ಗೆದ್ದಿದೆ. ಎನ್ಸಿಜಿ ಮತ್ತು ಜನತಾದಳ ತಲಾ ಒಂದು ಹಾಗೂ ಬಿಜೆಪಿ 5 ಬಾರಿ ಗೆದ್ದಿದೆ. 2004ರಿಂದ ಸುರೇಶ ಅಂಗಡಿ ಸಂಸದರಾಗಿ ಆಯ್ಕೆಯಾಗುತ್ತಿದ್ದರು.
ವಿಧಾನಸಭಾ ಕ್ಷೇತ್ರಗಳು: ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಗೋಕಾಕ, ಅರಭಾವಿ, ಸವದತ್ತಿ–ಯಲ್ಲಮ್ಮ, ರಾಮದುರ್ಗ, ಬೈಲಹೊಂಗಲ.
2019ರಲ್ಲಿ ರಾಜ್ಯದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರಧಾರಿ ಪ್ರಭಾವಿ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ವಿಧಾನಸಭಾ ಕ್ಷೇತ್ರವೂ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಆರು ಶಾಸಕರಿದ್ದಾರೆ.
ಕ್ಷೇತ್ರದಲ್ಲಿ ಪುರುಷರು 9,11,025, ಮಹಿಳೆಯರು 9,02,455, ಇತರೆ: 58 ಸೇರಿ ಒಟ್ಟು 18,13,538 ಮತದಾರರಿದ್ದಾರೆ. ವೀರಶೈವ ಲಿಂಗಾಯತ, ಮರಾಠ, ಕುರುಬರು ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ. ಒಟ್ಟು ಮತಗಟ್ಟೆಗಳ ಪೈಕಿ 587 ಅತಿಸೂಕ್ಷ್ಮ ಮತ್ತು 118 ಸೂಕ್ಷ್ಮ ಎಂದು ಗುರುತಿಸಲಾಗಿದೆ. ಸೂಕ್ಷ್ಮವಲ್ಲದ ಮತಗಟ್ಟೆಗಳಿಗೆ ಒಟ್ಟು 200 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದ್ದು, 159 ವಿಡಿಯೋ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಒಟ್ಟು 132 ಎಎಸ್ಐ, 72 ಸಿಐಎಸ್ಎಫ್ ಸಿಬ್ಬಂದಿ, 977 ಹೆಡ್ ಕಾನ್ಸ್ಟೆಬಲ್ಗಳು, 1,406 ಪೊಲೀಸ್ ಕಾನ್ಸ್ಟೆಬಲ್ಗಳು ಮತ್ತು 905 ಗೃಹರಕ್ಷಕರನ್ನು ನಿಯೋಜಿಸಲಾಗಿದೆ.
ಬಸವಕಲ್ಯಾಣ ವಿಧಾನಸಭೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಅಂತಿಮ ಹಂತದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕರಾಗಿದ್ದಾರೆ. ಕ್ಷೇತ್ರವನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷಕ್ಕಾದರೆ, 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿ ಪಕ್ಷ 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿ ಅಧಿಕಾರ ಹಿಡಿದ ಬಿಜೆಪಿಗೆ ಬಸವಕಲ್ಯಾಣದಲ್ಲಿಯೂ ತನ್ನ ಪ್ರಭಾವವನ್ನು ಸ್ಥಾಪಿಸಬೇಕೆಂಬ ಪ್ರಯತ್ನದಲ್ಲಿದೆ ಮತ್ತೊಂದು ಕಡೆಯಲ್ಲಿ ತನ್ನ ಒಂದು ಕಾಲದ ಬಲಾಢ್ಯ ಕ್ಷೇತ್ರವನ್ನು ಮರಳಿ ಗಳಿಸಬೇಕು ಎಂಬ ಪ್ರಯತ್ನದಲ್ಲಿ ಜೆಡಿಎಸ್ ಪಕ್ಷ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಜೆಡಿಎಸ್ ಪಕ್ಷದ ಪ್ರಾಬಲ್ಯ ಹೊಂದಿದ್ದ ಕ್ಷೇತ್ರವಾಗಿತ್ತು. 1983 ರಿಂದ 2004 ರ ವರೆಗೆ ಒಟ್ಟು ಸತತ ಆರು ಬಾರಿ ಜೆಡಿಎಸ್ ಪಕ್ಷದ ಆಯ್ಕೆಯಾಗಿತ್ತು. ಜೆಡಿಎಸ್ ಸತತವಾಗಿ ಜಯಗಳಿಸುತ್ತಾ ಬಂದಿತ್ತು. 1957ರಿಂದ 14 ವಿಧಾನಸಬಾ ಚುನಾವಣೆ ನಡೆದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಐದು ಬಾರಿ ಜಯಗಳಿಸಿದೆ. 2008ರ ಸಂದರ್ಭದಲ್ಲಿ ಬಿಜೆಪಿ ಒಮ್ಮೆ ಜಯಗಳಿಸಿದೆ.
ಕಾಂಗ್ರೆಸ್ನಿಂದ ದಿವಂಗತ ಬಿ. ನಾರಾಯಣ ರಾವ್ ಅವರ ಪತ್ನಿ ಮಾಲಾ. ಬಿ ನಾರಾಯಣ ರಾವ್(ಮಲ್ಲಮ್ಮ), ಬಿಜೆಪಿಯಿಂದ ಶರಣು ಸಲಗಾರ, ಜೆಡಿಎಸ್ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಹಾಗೂ ಪಕ್ಷೇತರ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕಣದಲ್ಲಿದ್ದಾರೆ. ಮಲ್ಲಿಕಾರ್ಜುನ ಖೂಬಾ ಮಾಜಿ ಶಾಸಕರು.
2018ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು, ಮರಾಠರು, ಕುರುಬರು ಮತ್ತು ಮುಸ್ಲಿಮರು ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅಲ್ಪಸಂಖ್ಯಾತ ಮತಗಳು ಹಾಗೂ ಒಟ್ಟಾರೆ ಅಹಿಂದ ಮತಗಳು ಪಡೆದ ಕಾಂಗ್ರೆಸ್ನ ಬಿ.ನಾರಾಯಣರಾವ್ ಗೆಲುವು ಸಾಧಿಸಿದ್ದರು. ಬರೀ ಲಿಂಗಾಯತ-ಮರಾಠಾ ಸಮುದಾಯವರು ಶಾಸಕರಾಗುತ್ತಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗವಾದ ಕೋಲಿ ಸಮುದಾಯದ ಬಿ.ನಾರಾಯಣರಾವ್ 2018ರಲ್ಲಿ ಆಯ್ಕೆಗೊಂಡರು. ಅವರು 35 ವರ್ಷಗಳ ನಂತರ ಕಾಂಗ್ರೆಸ್ಗೆ ಮತ್ತೆ ಮರುಜೀವ ನೀಡಿದರು.
ಬಿಜೆಪಿಗೆ ಬಂಡಾಯ ಅಭ್ಯರ್ಥಿಯ ತಲೆನೋವು: ಇನ್ನು ಬಿಜೆಪಿಗೆ ಈ ಕ್ಷೇತ್ರದಲ್ಲಿ ಬಂಡಾಯ ತಲೆನೋವಾಗಿ ಪರಿಣಮಿಸಿದೆ. ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಖೂಬಾ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಖೂಬಾಗೆ ಟೆಕೆಟ್ ಸಿಗದ ಕಾರಣ ಪಕ್ಷೇತರ ಸ್ಪರ್ಧೆಯಲ್ಲಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಹೊರಗಿನ ವ್ಯಕ್ತಿ ಎಂದು ಖೂಬಾ ಪ್ರಚಾರ ನಡೆಸುತ್ತಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.38 ಲಕ್ಷ ಮತದಾರರು ಇದ್ದಾರೆ. 1,24,530 ಪುರುಷರು ಹಾಗೂ 1,14,325 ಮಹಿಳೆಯರು ಸೇರಿ ಒಟ್ಟು 2,38,855 ಮತದಾರರು ಇದ್ದಾರೆ.
ಮಸ್ಕಿ ವಿಧಾನಸಭೆ
‘ಆಪರೇಷನ್ ಕಮಲ’ದ ಭಾಗವಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ 17 ಜನ ಶಾಸಕರು ಪಕ್ಷಾಂತರದಿಂದ 2019ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾಗಿದ್ದ ಪ್ರತಾಪ್ಗೌಡ ಪಾಟೀಲ್ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅವರ ರಾಜೀನಾಮೆಯಿಂದಾಗಿ ಉಪಚುನಾವಣೆ ಎದುರಾಗಿದೆ.
ಒಟ್ಟು ಎಂಟು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ನ ಬಸನಗೌಡ ತುರುವಿಹಾಳ ಕಣದಲ್ಲಿದ್ದಾರೆ. ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಅಭ್ಯರ್ಥಿ. ಈಗ ಇವರಿಬ್ಬರೂ ಪಕ್ಷ ಬದಲಿಸಿದ್ದಾರೆ. ಕ್ಷೇತ್ರದಲ್ಲಿ ಈಬಾರಿ ಪಕ್ಷದ ಪ್ರತಿಷ್ಠೆ ಮುನ್ನೆಲೆಗೆ ಬಂದಿದೆ.
2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ ಮತದಾನದ ಸಂದರ್ಭದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರತಾಪಗೌಡ ಪಾಟೀಲ ಅವರ ಪುತ್ರಿ ಅಮೆರಿಕದಲ್ಲಿದ್ದರೂ ಅವರ ಹೆಸರಿನಲ್ಲಿ ಮತದಾನವಾಗಿದೆ. ಮರಣ ಹೊಂದಿದವರ ಹೆಸರಿನಲ್ಲಿ ಮತದಾನವಾಗಿದ್ದು, ಅಕ್ರಮ ನಡೆದಿದೆ ಎಂದು ದೂರು ನೀಡಲಾಗಿತ್ತು. ಹೀಗಾಗಿ ಈ ಕ್ಷೇತ್ರದ ಉಪ ಚುನಾವಣೆ ವಿಳಂಬವಾಗಿ ನಡೆಯುತ್ತಿದೆ.
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವುದು ಬಹಳಷ್ಟು ಸುದ್ದಿಯಾಗಿದ್ದ ಕ್ಷೇತ್ರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು.
ಮಹಿಳಾ ಮತದಾರರೇ ನಿರ್ಣಾಯಕ: ಕ್ಷೇತ್ರದ ಒಟ್ಟು ಮತದಾರರು: 2,06,988, ಮಹಿಳಾ ಮತದಾರರು: 1,04,941. ಪುರುಷ ಮತದಾರರು: 1,01,234. ಇತರೆ ಮತದಾರರು: 28.
ಏಪ್ರಿಲ್ 17ಕ್ಕೆ ಮತದಾನವಾಗಿ ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ.
ವರದಿ: ವಿನೋದ ಶ್ರೀರಾಮಪುರ