ಹರಿದ್ವಾರ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಪರಿಣಾಮ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದೆ.
ಇಂದು ನದಿಯಲ್ಲಿ ಸ್ನಾನಕ್ಕಾಗಿ ಸಾವಿರಾರು ಮಂದಿ ಹರಿದ್ವಾರಕ್ಕೆ ಆಗಮಿಸಿದ್ದು, ಸಾಮಾಜಿಕ ಅಂತರ ಮತ್ತು ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಕುಂಭ ಸ್ನಾನಕ್ಕಾಗಿ ಬಂದ ಭಕ್ತರಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವುದೂ ಕಷ್ಟವಾಗಿದೆ. ನಿಯಮ ಉಲ್ಲಂಘಟನೆ ಮಾಡುವವರ ವಿರುದ್ಧ ದಂಡ ವಿಧಿಸಲೂ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಇದನ್ನು ಓದಿ: ಜನ ಸಹಕರಿಸದಿದ್ದರೆ ಲಾಕ್ಡೌನ್ ಅನಿವಾರ್ಯ – ಯಡಿಯೂರಪ್ಪ
ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ನಾವು ನಿರಂತರವಾಗಿ ಜನರಲ್ಲಿ ವಿನಂತಿಸುತ್ತಿದ್ದೇವೆ. ಉಲ್ಲಂಘನೆ ಸ್ಪಷ್ಟವಾಗಿದ್ದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಆದರೆ ಭಾರೀ ಜನಸ್ತೋಮದಿಂದಾಗಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಘಾಟ್ ನಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಹರಿದ್ವಾರ ಕುಂಭ ಮೇಳದಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಎಎನ್ಐ ಸುದ್ದಿಸಂಸ್ಥೆಗೆ ವರದಿ ವಿವರಿಸಿದ್ದಾರೆ.
ದೇಶದಲ್ಲಿ ಕೊವಿಡ್ ಸೋಂಕಿತರ ಪ್ರಕರಣಗಳು ಸುಮಾರು 1.3 ಕೋಟಿಗಿಂತಲೂ ಹೆಚ್ಚಾಗಿದ್ದು, ಎರಡನೇ ಅಲೆಯನ್ನು ನಿಯಂತ್ರಿಸಲು ಹರಸಾಹಸ ಪಡಲಾಗುತ್ತಿದೆ. ಒಂದು ವೇಳೆ ನಾವು ಘಾಟ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕಾಲ್ತುಳಿತ ಸಂಭವಿಸಬಹುದು ಎಂದು ಪೊಲೀಸ್ ಅಧಿಕಾರಿ ಗುಂಜ್ಯಾಲ್ ಹೇಳಿದರು.
ಹರಿದ್ವಾರದ ಹರ್ ಕೀ ಪೌರಿಯಲ್ಲಿ ಗಂಗಾಸ್ನಾನಕ್ಕಾಗಿ ಸಾವಿರಾರು ಮಂದಿ ಬಂದು ಸೇರಿದ್ದಾರೆ. ಬೆಳಗ್ಗೆ 7 ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶವಿದ್ದು, ನಂತರ ಅಖಾರ (ಸಾಧುಗಳಿಗೆ)ಗಳಿಗೆ ಪ್ರವೇಶವಿರುತ್ತದೆ. ಹರಿದ್ವಾರದಲ್ಲಿ 12, 14 ಮತ್ತು 27ಕ್ಕೆ ಶಾಹೀ ಸ್ನಾನ ನಡೆಯಲಿದ್ದು ಮಾರ್ಚ್ 11ರ ಮಹಾಶಿವರಾತ್ರಿಯಂದು ಸುಮಾರು 32 ಲಕ್ಷ ಭಕ್ತರು ಆಗಮಿಸಿದ್ದರು.
ಇದನ್ನು ಓದಿ: ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?
ಕೋವಿಡ್ ತಡೆಗಟ್ಟಲು ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳು, ಪ್ರವಾಸಿಗರು 72 ಗಂಟೆಗಳಿಗೂ ಮೊದಲು ಕೋವಿಡ್-19 ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ತರಬೇಕು ಎಂದು ಉತ್ತರಾಖಂಡ್ ಹೈಕೋರ್ಟ್ ಮೊದಲೇ ಆದೇಶ ನೀಡಿತ್ತು.
ಮಾಸ್ಕ್ ಧರಿಸದವರ ಪತ್ತೆಗಾಗಿ ಎಐ ಕ್ಯಾಮೆರಾ
ಕುಂಭ ಮೇಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಹಿಸುತ್ತಿದ್ದು ಮಾಸ್ಕ್ ಧರಿಸದೇ ಇದ್ದವರನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ(AI)ಯ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದರು.
ಮೇಳದ ಪ್ರದೇಶದಲ್ಲಿ 350 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇವುಗಳಲ್ಲಿ ನೂರು ಕ್ಯಾಮೆರಾಗಳು ಸೆನ್ಸರ್ ಅಲರ್ಟ್ ಇರುವವುಗಳಾಗಿವೆ. ಮಾಸ್ಕ್ ಧರಿಸದೇ ಇರುವ ಜನರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದೊಡನೆ ಇದು ಅಲರ್ಟ್ ಮಾಡುತ್ತದೆ. ಹರ್ ಕೀ ಪೌರಿ, ಸುಭಾಷ್ ಘಾಟ್, ಬ್ರಹ್ಮಕುಂಡ್, ಮಾಳವಿಯಾ ದ್ವೀಪ್ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುತ್ತಿದ್ದು ಇಲ್ಲಿ ಎಐ ಕ್ಯಾಮೆರಾಗಳನ್ನು ಲಗತ್ತಿಸಲಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಯಾವುದೇ ವಸ್ತು 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಂಡು ಬಂದರೆ ಅದನ್ನು ಸೆರೆ ಹಿಡಿದು ನಿಗಾ ವಹಿಸಲು, ವಾಹನಗಳ ಸಂಖ್ಯೆ ಎಣಿಸಲು ಕ್ಯಾಮೆರಾಗಳನ್ನು ಬಳಸಲಾಗಿದೆ.
12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳವರೆಗೂ ನಡೆಯುತ್ತದೆ. ಆದರೆ ಈ ಬಾರಿ ಏಪ್ರಿಲ್ 1 ರಿಂದ 30ರವರೆಗೆ ಕುಂಭಮೇಳ ನಡೆಸಲು ಅನುಮತಿ ನೀಡಲಾಗಿದೆ.
ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಘೋಷಿಸಿವೆ. ಉತ್ತರಾಖಂಡದಲ್ಲಿ ಕಳೆದ 24 ಗಂಟೆಗಳಲ್ಲಿ 6241 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು 3 ಮಂದಿ ಸಾವಿಗೀಡಾಗಿದ್ದಾರೆ.