ಮತಯಂತ್ರ, ವಿವಿಪಿಎಟಿ ಮತ್ತು ಚುನಾವಣಾ ಬಾಂಡ್ ಗಳ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಬೇಕು: ಯೆಚೂರಿ

ನವ ದೆಹಲಿ : ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತ್ರಿಪಡಿಸಲು ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಪತ್ರವನ್ನು ಬರೆದಿದ್ದಾರೆ.

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಸಂದರ್ಭದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ದ ಸುತ್ತ ಮತ್ತು ಚುನಾವಣಾ ಬಾಂಡುಗಳ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಕುರಿತಂತೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮಾರ್ಚ್ 22ರಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

  1. ಇವಿಎಂ ನ ಮೂರು ಘಟಕಗಳ ಸರದಿಯನ್ನು ಮರು ರೂಪಿಸಿ, ಮತದಾನ ಘಟಕದಲ್ಲಿ ಮತದಾರರು ಚಲಾಯಿಸುವ ಆಯ್ಕೆ ಇವಿಎಂ ನ ನಿಯಂತ್ರಣ ಘಟಕಕ್ಕೆ ಹೋಗಿ ದಾಖಲೆಯಾಗಿ , ಅಲ್ಲಿಂದ ವಿವಿಪಿಎಟಿಗೆ ಹೋಗುವಂತೆ ಖಾತ್ರಿಪಡಿಸಬೇಕು
  2. ಪ್ರತಿಯೊಂದು ಮತಗಟ್ಟೆಯಲ್ಲಿ ಇವಿಎಂ ನಲ್ಲಿ ದಾಖಲಾದ ದತ್ತಾಂಶದೊಂದಿಗೆ ವಿವಿಪಿಎಟಿ ಕೊಡುವ ಮಾಹಿತಿ 100% ತಾಳೆಯಾಗಬೇಕು.
  3. ಹಣಬಲದ ಪ್ರತಿಕೂಲ ಪರಿಣಾಮವನ್ನು ನಿರ್ಮೂಲಗೊಳಿಸಬೇಕೆಂಬ ಸುಪ್ರಿಂ ಕೋರ್ಟಿನೊಂದಿಗೆ ಹಂಚಿಕೊಂಡ ಚುನಾವಣಾ ಆಯೋಗದ ಆತಂಕದ ಜಾರಿಗೆ ಒಂದು ವಿವರವಾದ ಕಾರ್ಯ ಯೋಜನೆ ಮತ್ತು ಅದರ ಜಾರಿ ಎಷ್ಟಾಗಿದೆಯೆಂಬುದರ ವರದಿ ಇವನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇವಿಎಂ ಮತ್ತು ಚುನಾವಣಾ ಬಾಂಡುಗಳ ಸುತ್ತ ಹಲವು ಪ್ರಶ್ನೆಂಗಳೆದ್ದಿದ್ದು, ಚುನಾವಣೆಗಳ ಮೇಲೆ ನಾಗರಿಕರ ಆಯೋಗ (ಸಿಸಿಇ) ಎಂಬ ಸಂಘಟನೆ ಇವಿಎಂ ಗಳ ಬಗ್ಗೆ ಒಂದು ವಿವರವಾದ ವರದಿಯನ್ನು ತಯಾರಿಸಿದೆ. ಸೈಬರ್ ಭದ್ರತೆಯೂ ಸೇರಿದಂತೆ ಈ ಕ್ಷೇತ್ರದ ಹಲವು ಪರಿಣಿತರಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಈ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ.

ಇದನ್ನು ಓದಿ : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್‌ ಯುಡಿಎಫ್‌ ನಡುವೆ ನಡೆದಿದೆ ನೇರ ಹಣಾಹಣಿ

ಈ ಎರಡೂ ಪ್ರಶ್ನೆಗಳ ಮೇಲೆ ಸುಪ್ರಿಂ ಕೋರ್ಟ್ ಸಮ್ಮುಖ ಹಲವು ಅರ್ಜಿಗಳಿವೆ. ಆದರೆ ಅವೆಲ್ಲವೂ ಸರ್ವೋಚ್ಚ ನ್ಯಾಯಾಲಯದ ಎದುರು ನೆನಗುದಿಗೆ ಬಿದ್ದಿವೆ. ವಿಶ್ವಾಸಾರ್ಹ ರೀತಿಯಲ್ಲಿ ನ್ಯಾಯುತವಾಗಿ ಚುನಾವಣಾ ಪ್ರಕ್ರಿಯನ್ನು ನಿರ್ವಹಿಸುವ ಹೊಣೆಯಿರುವ ಭಾರತದ ಚುನಾವಣಾ ಆಯೋಗದ ಸ್ಪಂದನೆ, 2019ರ ಚುನಾವಣೆಗಳ ನಂತರ, ಇರಬೇಕಾದ್ದಕ್ಕಿಂತ ಬಹಳ ಕಡಿಮೆಯಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಮತಯಂತ್ರ ಬಗ್ಗೆ ಮತದಾರರ ಮನದಲ್ಲಿ ಎದ್ದ ಸಂದೇಹಗಳನ್ನು ವಿವಾರಿಸಲೆಂದು. 2013ರಲ್ಲಿ ವಿವಿಪಿಎಟಿಯನ್ನು ಆರಂಭಿಸಲಾಯಿತು. ಆದರೆ. ಇದು ಕೂಡ ಮತದಾನ ಮತ್ತು ಮತಗಣನೆಯ ಪ್ರಕ್ರಿಯೆಯಲ್ಲಿ ಮತ್ತಷ್ಟು ದೌರ್ಬಲ್ಯಗಳನ್ನು ಸೇರಿಸಿದೆ. ತಂತ್ರಜ್ಞಾನದ ದೃಷ್ಟಿಯಿಂದ ಹೇಳುವುದಾದರೆ, ಮತ ಚಲಾವಣೆ ಘಟಕ( ಬ್ಯಾಲಟ್ ಯುನಿಟ್)ದಲ್ಲಿ ಚಲಾಯಿಸುವ ಆಯ್ಕೆ ಇವಿಎಂನ ನಿಯಂತ್ರಣ ಘಟಕದ ಮೂಲಕ ಹಾದುಹೋಗಿ ಮತದಾರರಿಗೆ ಕಾಣುವ ವಿವಿಪಿಎಟಿ ಗೆ ರವಾನಿಯಾಗುವಂತಿರಬೇಕಿತ್ತು. ಆದರೆ ಇವಿಎಂನ ಘಟಕಗಳ ಪ್ರಸಕ್ತ ಸರದಿ ಬೇರೆಯದೇ ಆಗಿದೆ. ಆದ್ದರಿಂದ ಇವಿಎಂನ ವಿವಿಧ ಘಟಕಗಳ ಸರದಿಯ ಬಗ್ಗೆ ಪುನರಾಲೋಚನೆ ಮಾಡುವ ಬಲವಾದ ಅಗತ್ಯವಿದೆ. ಇದೊಂದು ನಿರ್ಣಾಯಕ ಪ್ರಶ್ನೆ.ದುರದೃಷ್ಟವಶಾತ್, ಈ ಆತಂಕವನ್ನು ಹೇಳಿದ ನಂತರವೂ ಚುನಾವಣಾ ಆಯೋಗದಿಂದ ಏನೇನೂ ಸ್ಪಂದನೆ ಇಲ್ಲ. ಈ ಹಿನ್ನೆಲೆಯಲ್ಲಿಯೇ ವಿವಿಪಿಎಟಿಯಲ್ಲಿರುವುದನ್ನು ಇವಿಎಂನಲ್ಲಿ ದಾಖಲಾಗಿರುವ ಮತಗಳೊಡನೆ ತಾಳೆ ನೋಡಬೇಕು ಎಂಬ ಬೇಡಿಕೆ ಬಲವಾಗಿ ಎದ್ದು ಬಂದಿದೆ.ಈ ವಿಷಯದಲ್ಲೂ ತಾಳೆ ನೋಡಲು ತೆಗೆದುಕೊಳ್ಳುವ ಯಂತ್ರಗಳ ಸಂಖ್ಯೆ ಇಡೀ ಅಸೆಂಬ್ಲಿ ಚುನಾವಣಾ ಕ್ಷೇತ್ರದಲ್ಲಿ ನಿಯೋಜಿಸಿದ ಒಟ್ಟು ಮತಯಂತ್ರಗಳಿಗೆ ಹೋಲಿಸಿದರೆ ತೀರಾ ಕಡಿಮೆ ಎಂಬ ಸಂಗತಿಯತ್ತ ಯೆಚುರಿ ತಮ್ಮ ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಎರಡನೇ ಪ್ರಶ್ನೆ,ಪ್ರಚಾರಕ್ಕೆ ಹಣಕಾಸನ್ನು ಕುರಿತಾದ್ದು. ಇದೂ ಅಷ್ಟೇ ಮಹತ್ವದ್ದು. ಚುನಾವಣಾ ಬಾಂಡುಗಳನ್ನು ಆರಂಭಿಸಿರುವುದು ಕಾರ್ಪೊರೇಟ್ ನಿಧಿ ನೀಡಿಕೆಯನ್ನು ಸಂಪೂರ್ಣವಾಗಿ ಅಪಾರದರ್ಶಕಗೊಳಿಸಿದೆ ಎಂದು ಸ್ವತಃ ಚುನಾವಣಾ ಆಯೋಗವೇ ಎರಡೆರಡು ಬಾರಿ ಸುಪ್ರಿಂ ಕೋರ್ಟಿಗೆ ಹೇಳಿತ್ತು.ಆದರೂ ಚುನಾವಣಾ ಆಯೋಗ ಕೂಡ ಈ ಅಪಾರದರ್ಶಕ ಕಾರ್ಪೊರೇಟ್ ನಿಧಿ ನೀಡಿಕೆಯ ಪರಿಣಾಮ ಮತ್ತು ಅದನ್ನು ತಟ್ಸ್ಥಗೊಳಿಸಿ ಕಲಮು 324 ರ ಅಡಿಯಲ್ಲಿ ತನಗೆ ನೀಡಿರುವ ಮೂಲ ಆದೇಶವಾದ ಒಂದು ಸಮಾನ ಅವಕಾಶವನ್ನು ಖಾತ್ರಿಪಡಿಸಲು ಸದ್ಯ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಮೂರು ಆಗ್ರಹಗಳನ್ನು ಮಾಡುವುದಲ್ಲದೆ ಬೇರೆ ದಾರಿ ಉಳಿದಿಲ್ಲ ಎಂದು ಯೆಚುರಿ ಮುಖ್ಯ ಚುನಾವಣಾ ಆಯುಕ್ತರಿಗೆ ಹೇಳಿದ್ದಾರೆ.

ಸೀತಾರಾಂ ಯೆಚುರಿಯವರು ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದ ಪೂರ್ಣಪಾಟ ಹೀಗಿದೆ

ಪ್ರಿಯಶ್ರೀ ಅರೋರಾ ಜೀ,

2019ರ ಲೋಕಸಭಾ ಚುನಾವಣೆಗಳ ಅನುಭವದಿಂದಾಗಿ ಹಲವು ರಾಜಕೀಯ ಪಕ್ಷಗಳು ಮತ್ತು ಬಹಳಷ್ಟು ಮತದಾರರ ನಡುವೆಯೂ ಹಲವು ಕಳವಳಗಳು ಮೂಡಿ ಬಂದಿರುವತ್ತ ಭಾರತದ ಚುನಾವಣಾ ಆಯೋಗದ ಗಮನ ಸೆಳೆಯ ಬಯಸುತ್ತೇವೆ.

ಒಟ್ಟಾರೆಯಾಗಿ ಇವನ್ನು ಎರಡು ಕ್ಷೇತ್ರಗಳಲ್ಲಿ ಕಾಣಬಹುದು: ಒಂದು, ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ), ಜತೆಗೆ ವಿವಿಪಿಎಟಿ, ಅಂದರೆ ‘ಮತದಾರರು ತಾಳೆ ನೋಡಬಹುದಾದ ಕಾಗದ ಪರಿಶೋಧನೆ ಜಾಡು’ ಇವುಗಳ ಕಾರ್ಯನಿರ್ವಹಣೆ ಮತ್ತು ಎರಡು, ಚುನಾವಣಾ ಬಾಂಡುಗಳ ಪ್ರಭಾವ ಹಾಗೂ ಮುಕ್ತ ಮತ್ತು ನ್ಯಾಯಯುತ ಮತದಾನದಲ್ಲಿ ಹಣಬಲದ ಪಾತ್ರ.

ಈ ಎರಡೂ ಪ್ರಶ್ನೆಗಳ ಮೇಲೆ ಸುಪ್ರಿಂ ಕೋರ್ಟ್ ಸಮ್ಮುಖ ಹಲವು ಅರ್ಜಿಗಳಿವೆ.ಆದರೆ ಅವೆಲ್ಲವೂ ಸರ್ವೋಚ್ಚ ನ್ಯಾಯಾಲಯದ ಎದುರು ನೆನಗುದಿಗೆ ಬಿದ್ದಿವೆ.

ಇದನ್ನು ಓದಿ : ಕೇಂದ್ರ-ರಾಜ್ಯಗಳ ಸಂಬಂಧ: ಒಕ್ಕೂಟ ತತ್ವದ ಮೇಲೆ ಹೆಚ್ಚುತ್ತಿರುವ ದಾಳಿ

ಈ ನಡುವೆ ಚುನಾವಣೆಗಳ ಮೇಲೆ ನಾಗರಿಕರ ಆಯೋಗ (ಸಿಸಿಇ) ಎಂಬ ಸಂಘಟನೆ ಇವಿಎಂ ಗಳ ಬಗ್ಗೆ ಒಂದು ವಿವರವಾದ ವರದಿಯನ್ನು ತಯಾರಿಸಿದೆ. ಸೈಬರ್ ಭದ್ರತೆಯೂ ಸೇರಿದಂತೆ ಈ ಕ್ಷೇತ್ರದ ಹಲವು ಪರಿಣಿತರಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಈ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ.

ಒಂದು ಚುನಾವಣಾ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ವಿಶ್ವಾಸಾರ್ಹತೆ ಸುಮಾರಾಗಿ ಸಂಪೂರ್ಣವಾಗಿಯೇ ನಿಯಂತ್ರಕ ಸಂಸ್ಥೆಯ ಕ್ರಿಯೆಗಳನ್ನು ಅವಲಂಬಿಸಿದೆ.ನಮ್ಮ ಸಂದರ್ಭದಲ್ಲಿ ಆ ಸಂಸ್ಥೆಯೆಂದರೆ ಭಾರತದ ಚುನಾವಣಾ ಆಯೋಗ.ಭಾರತದ ಸಂವಿಧಾನ ತನ್ನ ಕಲಮು 324ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಆದೇಶವನ್ನು ಮತ್ತು ಬಹು ವ್ಯಾಪಕವಾದ ಅಧಿಕಾರಗಳನ್ನು ಕೊಡಮಾಡಿದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯು ಪಾರದರ್ಶಕತೆ ಮತ್ತು ಆಯೋಗ ಕೊಡುವ ವಿವರಣೆಗಳನ್ನು ದೃಢಪಡಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಅವಲಂಬಿಸಿದೆ. ಆದರೆ, ಈ ಎರಡೂ ವಿಷಯಗಳಲ್ಲಿ ಚುನಾವಣಾ ಆಯೋಗದ ಸ್ಪಂದನೆ,2019ರ ಚುನಾವಣೆಗಳ ನಂತರ, ಇರಬೇಕಾದ್ದಕ್ಕಿಂತ ಬಹಳ ಕಡಿಮೆಯಿದೆ. ಸಿಪಿಐ(ಎಂ) ಪರವಾಗಿ ನಾವು ಈ ವಿಷಯಗಳ ಮೇಲೆ ಹಲವು ಸಂದರ್ಭಗಳಲ್ಲಿ ನಿಮಗೆ ಬರೆದಿದ್ದೇವೆ.ಅವಕ್ಕೆ ಸುಮಾರಾಗಿ ಏನೂ ಸ್ಪಂದನೆ ಸಿಕ್ಕಿಲ್ಲ.

ಇದನ್ನು ಓದಿ : ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ

ಚುನಾವಣೆಗಳ ಮೇಲೆ ನಾಗರಿಕರ ಆಯೋಗದ ವರದಿಯಲ್ಲಿ ನ್ಯಾಯೋಚಿತವಾಗಿಯೇ ಎತ್ತಲಾಗಿರುವ ಪ್ರಶ್ನೆಗಳು ಮತ್ತು ವಿವಿಪಿಎಟಿಯ ಜೊತೆಗಿನ ಇವಿಎಂ ಗಳ ವಿಶ್ವಾಸಾರ್ಹತೆಯ ಮೇಲೆ ಅವು ಬೀರಬಹುದಾದದ ಪ್ರತಿಕೂಲ ಪರಿಣಾಮಗಳ ವಿವರಕ್ಕೆ ಹೋಗುವುದಿಲ್ಲ.ಆದರೆ ಚುನಾವಣೆ ನಡೆಸುವಲ್ಲಿನ ಒಂದು ಪ್ರಮುಖ ದೌರ್ಬಲ್ಯವನ್ನು ಸರಿಪಡಿಸುವುದು ಅನಿವಾರ್ಯವಾಗುತ್ತದೆ. ಇದು ವಿವಿಪಿಎಟಿಯನ್ನು 2013ರಲ್ಲಿ ಆರಂಭಿಸಿದಂದಿನಿಂದ ಎದ್ದು ಬಂದಿದೆ. ಇದನ್ನು ಆರಂಭಿಸಿದ್ದು ತಮ್ಮ ಆಶಯದ ಆಯ್ಕೆ ನಿಜವಾಗಿಯೂ ಮತಗಣನಾ ಪ್ರಕ್ರಿಯೆಯಲ್ಲಿ ದಾಖಲಾಗುತ್ತದಯೇ ಎಂದು ಮತದಾರರ ಮನದಲ್ಲಿ ಎದ್ದ ಸಂದೇಹಗಳನ್ನು ವಿವಾರಿಸಲೆಂದು.ವಿವಿಪಿಎಟಿಯಿಂದ ಹೊರಬರುವ ಕಾಗದ ಜಾಡು ಮತದಾರರ ಸಂದೇಹವನ್ನು ಪರಿಗಣಿಸುತ್ತಲೇ,ಇನ್ನೊಂದು ನಿರ್ಣಾಯಕ ಪ್ರಶ್ನೆಯನ್ನು ಎತ್ತುತ್ತದೆ.ಮತ ಚಲಾವಣೆ ಘಟಕ( ಬ್ಯಾಲಟ್ ಯುನಿಟ್)ದಲ್ಲಿ ಚಲಾಯಿಸಿದ ಆಯ್ಕೆ ನೇರವಾಗಿ ಮತದಾರ ನೋಡುವ.ವಿವಿಪಿಎಟಿಗೆ ಹೋಗುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿವೆ. ಆದರೆ ಇವಿಎಂನ ಮತಗಳನ್ನು ಲೆಕ್ಕ ಹಾಕುವ ನಿಯಂತ್ರಣ ಘಟಕ(ಕಂಟ್ರೋಲ್ ಯುನಿಟ್)ದಲ್ಲಿ ದಾಖಲಾಗುವುದು ಅದೇ ಆಯ್ಕೆಯೇ ಎಂಬುದು ತಿಳಿದಿಲ್ಲ.ತಂತ್ರಜ್ಞಾನದ ದೃಷ್ಟಿಯಿಂದ ಹೇಳುವುದಾದರೆ,ಮತ ಚಲಾವಣೆ ಘಟಕ( ಬ್ಯಾಲಟ್ ಯುನಿಟ್)ದಲ್ಲಿ ಚಲಾಯಿಸುವ ಆಯ್ಕೆ ಇವಿಎಂನ ನಿಯಂತ್ರಣ ಘಟಕದ ಮೂಲಕ ಹಾದುಹೋಗಿ ಮತದಾರರಿಗೆ ಕಾಣುವ ವಿವಿಪಿಎಟಿ ಗೆ ರವಾನಿಯಾಗುವಂತಿರಬೇಕಿತ್ತು.ಆದರೆ ಇವಿಎಂನ ಘಟಕಗಳ ಪ್ರಸಕ್ತ ಸರದಿ ಬೇರೆಯದೇ ಆಗಿದೆ.ಆದ್ದರಿಂದ ಇವಿಎಂನ ವಿವಿಧ ಘಟಕಗಳ ಸರದಿಯ ಬಗ್ಗೆ ಪುನರಾಲೋಚನೆ ಮಾಡುವ ಬಲವಾದ ಅಗತ್ಯವಿದೆ. ಇದೊಂದು ನಿರ್ಣಾಯಕ ಪ್ರಶ್ನೆ. ದುರದೃಷ್ಟವಶಾತ್,ಈ ಆತಂಕವನ್ನು ಹೇಳಿದ ನಂತರವೂ ಚುನಾವಣಾ ಆಯೋಗದಿಂದ ಏನೇನೂ ಸ್ಪಂದನೆ ಇಲ್ಲ.ಈ ಹಿನ್ನೆಲೆಯಲ್ಲಿಯೇ ವಿವಿಪಿಎಟಿಯಲ್ಲಿರುವುದನ್ನು ಇವಿಎಂನಲ್ಲಿ ದಾಖಲಾಗಿರುವ ಮತಗಳೊಡನೆ ತಾಳೆ ನೋಡಬೇಕು ಎಂಬ ಬೇಡಿಕೆ ಬಲವಾಗಿ ಎದ್ದು ಬಂದಿದೆ.ಈ ವಿಷಯದಲ್ಲೂ ತಾಳೆ ನೋಢಲು ತೆಗೆದುಕೊಳ್ಳುವ ಯಂತ್ರಗಳ ಸಂಖ್ಯೆ ಇಡೀ ಅಸೆಂಬ್ಲಿ ಚುನಾವಣಾ ಕ್ಷೇತ್ರದಲ್ಲಿ ನಿಯೋಜಿಸಿದ ಒಟ್ಟು ಮತಯಂತ್ರಗಳಿಗೆ ಹೋಲಿಸಿದರೆ ತೀರಾ ಕಡಿಮೆ.

ಇದು ಬಹಳ ಮಹತ್ವದ್ದು ಏಕೆಂದರೆ,ವಿವಿಪಿಎಟಿಯನ್ನು ಆರಂಭಿಸಿರುವುದು ಈ ವ್ಯವಸ್ಥೆಯಲ್ಲಿ ಒಂದು ನಿರ್ಣಾಯಕ ಮತ್ತು ಅನನ್ಯ ದೌರ್ಬಲ್ಯವನ್ನು ಸೇರಿಸಿದೆ. ವಿವಿಪಿಎಟಿ ಗಿಂತ ಹಿಂದಿನ ದಿನಗಳಲ್ಲಿ ಇವಿಎಂ ನ ಪರಮ ಪವಿತ್ರ ಸ್ವರೂಪವನ್ನು ಸಮರ್ಥಿಸಿಕೊಳ್ಳಲು ಆಧಾರವಾಗಿದ್ದದ್ದು ಮತಯಂತ್ರದೊಳಗಿನ ಚಿಪ್ ಗೆ ತಪಾಸಣೆಯ ಮೊದಲು ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳ ಬಗ್ಗೆ ಏನೇನೂ ತಿಳಿದಿರುವುದಿಲ್ಲ ಎಂಬುದು.ನಂತರ ನಿಜವಾದ ಮತದಾನಕ್ಕೆ ಅಣಕು ಮತ ಮತ್ತು ಅಣಕು ಸೀಲಿಂಗ್ ಮಾಡಲಾಯಿತು. ವಿವಿಪಿಎಟಿ ಇವೆಲ್ಲವನ್ನೂ ಬದಲಿಸಿತು. ಈ ಮೂಲಕ ಮತ ಚಲಾವಣೆ ಘಟಕದಲ್ಲಿ ಕಾಣುವ ಅಭ್ಯರ್ಥಿಗಳ ಹೆಸರು, ಚಿಹ್ನೆ ಮತ್ತು ಕ್ರಮಾಂಕ ಇವುಗಳ ಬಗ್ಗೆ ನಿಖರವಾದ ಮಾಹಿತಿಗಳು ಮೊದಲೇ ತಿಳಿದಿರುವಂತಾಗುತ್ತದೆ. ವಾಸ್ತವ ನಿರ್ವಹಣೆಯ ದೃಷ್ಟಿಯಲ್ಲಿ, ಮತ ಚಲಾವಣೆ ಘಟಕದಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಮತ್ತು ಕ್ರಮಾಂಕಗಳನ್ನು ಸೇರಿಸಿರುವುದು ಮತ್ತು ಖಾಸಗೀ ಏಜೆನ್ಸಿಗಳನ್ನು ಒಳಗೊಳ್ಳುವದರೊಂದಿಗೆ ವಿವಿಪಿಎಟಿ ನಿರ್ವಹಣೆ ಇವು ಪರಸ್ಪರ ತಳಕು ಹಾಕಿಕೊಂಡಿವೆ ಎಂಬುದನ್ನು ಇತರ ಸಾಕ್ಷ್ಯ ತೋರಿಸಿವೆ. ಆದ್ದರಿಂದ, ವಿವಿಪಿಎಟಿಯಲ್ಲಿ ಕೈಯಾಡಿಸಿದ್ದರೆ, ಮತ್ತು ಆನಂತರ ಅದನ್ನು ನಿಯಂತ್ರಣ ಘಟಕಕ್ಕೆ ಜೋಡಿಸಿದ್ದರೆ, ಈ ಕೈಚಳಕ ಮತ ದಾಖಲಿಸಿಕೊಳ್ಳುವಲ್ಲಿ ಬಿಂಬಿಸಲ್ಪಡುವುದು ಸಾಧ್ಯವಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಇದುವರೆಗೆ ನಮಗೆ ಯಾವುದೇ ಅಸಲಿ ಸ್ಪಂದನೆ ದೊರಕಿಲ್ಲ.

ಇದನ್ನು ಓದಿ : ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತ ಕಹಳೆ

ಎರಡನೇ ಪ್ರಶ್ನೆ,ಪ್ರಚಾರಕ್ಕೆ ಹಣಕಾಸನ್ನು ಕುರಿತಾದ್ದು.ಇದೂ ಅಷ್ಟೇ ಮಹತ್ವದ್ದು.ಚುನಾವಣಾ ಬಾಂಡುಗಳನ್ನು ಆರಂಭಿಸಿರುವುದು ಕಾರ್ಪೊರೇಟ್ ನಿಧಿ ನೀಡಿಕೆಯನ್ನು ಸಂಪೂರ್ಣವಾಗಿ ಅಪಾರದರ್ಶಕಗೊಳಿಸಿದೆ.ಇಂತಹ ಲೆಕ್ಕದಲ್ಲಿ ಬಾರದ ನಿಧಿಗಳ ಹರಿವಿನಿಂದ ಅದರ ಜಾಡಿನ ಮೇಲೆ ಲಕ್ಷ್ಯವಿಡುವುದು ತನಗೆ ಅಸಾಧ್ಯವಾಗುತ್ತದೆ ಎಂದು ಚುನಾವಣಾ ಆಯೋಗವೇ ಸರ್ವೋಚ್ಚ ನ್ಯಾಯಾಲಯದಲ್ಲಿ,ಒಂದಲ್ಲ ಎರಡು ಬಾರಿ ಸಲ್ಲಿಸಿದ್ದನ್ನು ನೆನಪಿಸ ಬಯಸುತ್ತೇವೆ.ಗೌರವಾನ್ವಿತ ಸುಪ್ರಿಂ ಕೋರ್ಟ್ ಬೇಗನೇ ಒಂದು ಇತ್ಯರ್ಥಕ್ಕೆ ಬರುವತ್ತ ಸಾಗಲಿಲ್ಲ ಎಂಬುದು ಬೇರೆ ವಿಷಯ. ಆದರೂ ಚುನಾವಣಾ ಆಯೋಗ ಈ ಅಪಾರದರ್ಶಕ ಕಾರ್ಪೊರೇಟ್ ನಿಧಿ ನೀಡಿಕೆಯ ಪರಿಣಾಮ ಮತ್ತು ಅದನ್ನು ತಟ್ಸ್ಥಗೊಳಿಸಿ ಕಲಮು 324 ರ ಅಡಿಯಲ್ಲಿ ತನಗೆ ನೀಡಿರುವ ಮೂಲ ಆದೇಶವಾದ ಒಂದು ಸಮಾನ ಅವಕಾಶವನ್ನು ಖಾತ್ರಿಪಡಿಸಲು ಸದ್ಯ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಎಪ್ರಿಲ್ 1, 2021ರಿಂದ ಹೊಸ ಸುತ್ತಿನ ಚುನಾವಣಾ ಬಾಂಡುಗಳನ್ನು ಕೊಡಲಾಗುವುದು ಎಂಬ ವರದಿಗಳು ಸಾರ್ವಜನಿಕವಾಗಿ ಇವೆ. ಈಗಾಗಲೇ ಲಭ್ಯವಾಗಿರುವ ಮಾಹಿತಿಗಳು ಎಲ್ಲ ಮೂಲಗಳಿಂದ ಒಟ್ಟು ನಿಧಿ ನೀಡಿಕೆಯಲ್ಲಿ 52% ಬಿಜೆಪಿಗೆ ಹೋಗಿವೆ,ಬೇರೆಲ್ಲಾ ಪಕ್ಷಗಳು ಒಟ್ಟಾಗಿ ಪಡೆದಿರುವುದಕ್ಕಿಂತಲೂ ಹೆಚ್ಚನ್ನು ಪಡೆದಿದೆ ಎಂಬುದನ್ನು ತೋರಿಸುತ್ತವೆ. ಅಸೋಸಿತೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2019ರ ಲೋಕಸಭಾ ಚುನಾವಣೆಗಳ ವರೆಗೆ ಚುನಾವಣಾ ಬಾಂಡುಗಳ ನಿಧಿಗಳಲ್ಲಿ 95%ದಷ್ಟು ಭಾರೀ ಮೊತ್ತವನ್ನು ಪಡೆದಿದೆ ಎಂದು ವರದಿ ಮಾಡಿದೆ. ಇದು ಪ್ರತಿಕೂಲವಾದ ಸ್ವಾಭಾವಿಕ ಪರಿಣಾಮಗಳನ್ನು ಉಂಟು ಮಾಡಿದೆ. ನೆಲಮಟ್ಟದಲ್ಲಿ ಬಿಜೆಪಿಯ ಬಳಿ ಅಪಾರ ಹಣಕಾಸು ಸಂಪನ್ಮೂಲಗಳು ಇರುವುದು ಕಾಣಸಿಗುತ್ತಿದೆ. ಇಲ್ಲಿಯೂ ಚುನಾವಣಾ ಆಯೋಗ ಪ್ರತಿಕೂಲ ಪರಿಣಾಮಗಳನ್ನು ತಟಸ್ಥಗೊಳಿಸಲು ಯಾವುದೇ ವಿವರವಾದ ಕ್ರಿಯಾ ಯೋಜನೆಯನ್ನು ಪ್ರಕಟಿಸಿಲ್ಲ. ಇಂತಹ ಸನ್ನಿವೇಶದಲ್ಲಿ

  1. ಮತಯಂತ್ರಗಳ ಮೂರು ಘಟಕಗಳ ಸರದಿಯನ್ನು ಮರು ರೂಪಿಸಿ, ಮತದಾನ ಘಟಕದಲ್ಲಿ ಮತದಾರರು ಚಲಾಯಿಸುವ ಆಯ್ಕೆ ಇವಿಎಂ ನ ನಿಯಂತ್ರಣ ಘಟಕಕ್ಕೆ ಹೋಗಿ ದಾಖಲೆಯಾಗಿ , ಅಲ್ಲಿಂದ ವಿವಿಪಿಎಟಿಗೆ ಹೋಗುವಂತೆ ಖಾತ್ರಿಪಡಿಸಬೇಕು
  2. ಪ್ರತಿಯೊಂದು ಮತಗಟ್ಟೆಯಲ್ಲಿ ಇವಿಎಂ ನಲ್ಲಿ ದಾಖಲಾದ ದತ್ತಾಂಶದೊಂದಿಗೆ ವಿವಿಪಿಎಟಿ ಕೊಡುವ ಮಾಹಿತಿ 100% ತಾಳೆಯಾಗಬೇಕು.
  3. ಹಣಬಲದ ಪ್ರತಿಕೂಲ ಪರಿಣಾಮವನ್ನು ನಿರ್ಮೂಲಗೊಳಿಸಬೇಕೆಂಬ ಸುಪ್ರಿಂ ಕೋರ್ಟಿನೊಂದಿಗೆ ಹಂಚಿಕೊಂಡ ನಿಮ್ಮ ಆತಂಕದ ಜಾರಿಗೆ ಒಂದು ವಿವರವಾದ ಕಾರ್ಯ ಯೋಜನೆ ಮತ್ತು ಅದರ ಜಾರಿ ಎಷ್ಟಾಗಿದೆಯೆಂಬುದರ ವರದಿ
    ಇವನ್ನು ಕೊಡಬೇಕು ಎಂದು ಆಗ್ರಹಿಸುವುದಲ್ಲದೆ ನಮಗೆ ಪರ್ಯಾಯವೇನೂ ಉಳಿದಿಲ್ಲ.

 

 

Donate Janashakthi Media

Leave a Reply

Your email address will not be published. Required fields are marked *