ಕೋಲಾರ: ‘ಯುವ ಪೀಳಿಗೆಗೆ ಸಾಹಿತಿ ಲಂಕೇಶ್ರನ್ನು ಪರಿಚಯಿಸುವ ನಿಟ್ಟಿನಲ್ಲಿ ಸಂಸ ಥಿಯೇಟರ್ ಬೆಂಗಳೂರು ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರ – ಶಿವಗಂಗೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 22 ರ ಸೋಮವಾರದಿಂದ ಮಾರ್ಚ್ 28 ರ ಭಾನುವಾರದವರೆಗೆ ಏಳು ದಿನಗಳ ಕಾಲ ಲಂಕೇಶ್ ಸಾಹಿತ್ಯ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದೆ.
‘ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ 7 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಲಂಕೇಶ್ ಕುರಿತಂತೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಊಟ ವಸತಿಯೊಂದಿಗೆ ಆಯೋಜಿಸಿದೆ. ಈ ಕಾರ್ಯಕ್ರಮವು ಲಂಕೇಶರ ಕವಿತೆ, ಕತೆ, ನಾಟಕ, ಕಾದಂಬರಿ, ಅನುವಾದ, ಅಂಕಣ ಬರಹ, ವಿಮರ್ಶೆ ಸಿನಿಮಾ, ಚಳವಳಿಗಳ ಕುರಿತಾಗಿ ತಿಳಿಸಿಕೊಡುವ ಪ್ರಯತ್ನವಾಗಿದೆ ಎಂದು ತಿಳಿಸಿದೆ.
ಮಾರ್ಚ್ 22 ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮವಿದೆ. ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಮಾಜಿ ಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್, ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಬಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎನ್.ಮುನಿಸ್ವಾಮಿ ವಹಿಸಲಿದ್ದಾರೆ.
ಲಂಕೇಶರ ಕೃತಿಗಳು ಕನ್ನಡ ಸಂವೇದನೆಯ ಭಾಗವಾಗಿದ್ದು, ಜಾತ್ಯತೀತತೆ, ನಿಷ್ಟುರತೆ, ಪ್ರಭುತ್ವದೊಡನೆ ಅವರು ಕಾಯ್ದುಕೊಂಡ ಆಂತರ, ಪ್ರಭುತ್ವಗಳ ಹುನ್ನಾರಗಳನ್ನು ಬಯಲು ಮಾಡುವಾಗ ತೋರುತ್ತಿದ್ದ ಧೈರ್ಯ ಅವರಿಗೆ ವಿಶಿಷ್ಟವಾದುದು. ‘ನೀಚನನ್ನು ಯಾವುದೇ ಜಾತಿಯವನಾದರೂ ನೀಚವೆಂದೇ ಕರೆಯಬೇಕು’, ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂಬಂತಹ ಮಾತುಗಳಿಂದ ಅವರ ಚಿಂತನೆಯ ಆಳ ಅಗಲಗಳನ್ನು ಕಾಣಬಹುದು. ಸಂಕ್ರಾಂತಿ’ಯಂತಹ ನಾಟಕವೊಂದು ಬರದಿದ್ದರೆ ವಚನ ಚಳವಳಿಯ ನಿಷ್ಟುರ ವಿಮರ್ಶೆಯ ಸಾಧ್ಯತೆಗಳೇ ತೆರೆದುಕೊಳ್ಳುತ್ತಿರಲಿಲ್ಲ.
‘ಗುಣಮುಖ’ ನಾಟಕ ಪ್ರಭುತ್ವದ ರೋಗಗ್ರಸ್ಟತೆಯನ್ನು ಅನಾವರಣ ಮಾಡುತ್ತದೆ. ಅದನ್ನು ಇಂದು ಓದಿದರೆ ಮತ್ತಷ್ಟು ಹೊಸ ಹೊಳವುಗಳು ದಕ್ಕುತ್ತವೆ. ದೊರೆ ಈಡಿಪಸ್ ಹಾಗೂ ಪಾಪದ ಹೂಗಳು ಅನುವಾದಗಳು ಕನ್ನಡ ಸಂದರ್ಭದಲ್ಲಿ ವಿರಳಾತಿವಿರಳ. ಮುಟ್ಟಿಸಿಕೊಂಡವನು, ನಿವೃತ್ತರು, ತೋಟದವನು, ಸ್ಪೆಲ್ಲಾ ಎಂಬ ಹುಡುಗಿಯಂತಹ ಪಾತ್ರಗಳು ಕನ್ನಡ ಕಥನಕ್ಕೆ ಹೋಸವಾಗಿವೆ. ಇನ್ನು ಟೀಕೆ – ಟಿಪ್ಪಣಿಯದ್ದು ಮತ್ತೊಂದು ಬಯಲಿನ ವಿಸ್ತಾರ. ಲಂಕೇಶರ ಬರಹಗಳಲ್ಲಿ ಕನ್ನಡದ ವಿಶಿಷ್ಟ ಬಳಕೆಯ ಸಾಧ್ಯತೆಗಳ ಶೋಧವಿದೆ. ಅನವಶ್ಯಕವಾದ ಪದಗಳಾಗಲಿ, ಸಂಸ್ಕೃತ ಭಾಷಾ ಪ್ರೌಢಿಮೆ ಪ್ರದರ್ಶನವಾಗಲಿ ಅವರ ಬರಹಗಳಲ್ಲಿ ಕಡಿಮೆ. ಕನ್ನಡವನ್ನು ಕನ್ನಡದ ಮೂಲಕವೇ ಉನ್ನತ ಹಂತಕ್ಕೇರಿಸುವ ಪ್ರಯತ್ನದ ಭಾಗವಾಗಿಯೇ ಅವರ ಬರಹಗಳನ್ನು ನಾವಿಂದು ಅರ್ಥೈಸಿಕೊಳ್ಳಬೇಕಾಗಿದೆ.
ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕವಾಗಿ ಹಂಚಿಹೋಗಿರುವ ಅವರ ಚಿಂತನೆಗಳ ಆಳದಲ್ಲಿ ಮತ್ತೆ ಮತ್ತೆ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಅವರ ಗಮನವಿರುವುದು ಎದ್ದು ಕಾಣುತ್ತದೆ. ಭ್ರಷ್ಟರಿಗೆ ಸಿಂಹಸ್ವಪ್ನ, ಸ್ವಜನ ಪಕ್ಷಪಾತಿಗಳಿಗೆ ಸದಾ ಮೊನಚಾದ ಸೂಜಿ, ಲಂಪಟರಿಗೆ ಕಂಟಕಪ್ರಾಯ, ಕೋಮುವಾದಿಗಳಿಗೆ ಕೊಡಲೆ, ಓದುಗರಿಗೆ ಮುಲಕದೊಂದಿಗೆ ವೈಚಾರಿಕತೆ ತಂದುಕೊಡುತ್ತಿದ್ದ ಲಂಕೇಶ್ ದೈಹಿಕ ನಿರ್ಗಮನದೊಂದಿಗೆ ಕರ್ನಾಟಕ ಅಧೋಗತಿಗಿಳಿಯುತ್ತಿದೆ. ನೇರ, ನಿಷ್ಟುರ ಸತ್ಯಗಳನ್ನು ಸರಳವಾಗಿ ಆದರೆ ಖಚಿತವಾಗಿ ಹೇಳುತ್ತಿದ್ದ ಅವರ ಶೈಲಿ ಕರ್ನಾಟಕದಿಂದ ದೂರವಾಗಿದೆ ಇಂತಹ ಸಂದರ್ಭದಲ್ಲಿ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಾಹಿತ್ಯ ಸಪ್ತಾಹ ನಡೆಯುತ್ತಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಡಾ. ಪ್ರದೀಪ್ ಮಾಲ್ಗುಡಿ ತಿಳಿಸಿದ್ದಾರೆ.