ಬಡ್ಡಿ ರಹಿತ ಹೊಸ ಸಾಲ ಮತ್ತು ಅದಕ್ಕೆ ಪೂರಕವಾಗಿ ಉತ್ಪಾದನೆ, ಮಾರುಕಟ್ಟೆ ಸೌಲಭ್ಯ ನೀಡುವ ಅತ್ಯಗತ್ಯವನ್ನು ಮುಖ್ಯ ಮಂತ್ರಿಗಳು ಪರಿಗಣಿಸಿಲ್ಲ. ಉದ್ಯೊಗದ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು ಅದರ ಬಗ್ಗೆ ಚಕಾರವಿಲ್ಲ. ನಗರ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಹದಗೆಟ್ಟ ನಗರವಾಸಿಗಳ ಬದುಕಿಗೆ ಸ್ವಲ್ಪವಾದರೂ ನೆರವು ನೀಡಬಹುದಾಗಿದ್ದನ್ನು ರಾಜ್ಯದ ಬಜೆಟ್ ಗಮನಕ್ಕೆ ತೆಗೆದುಕೊಂಡಿಲ್ಲ.
-ಕೆ.ಎಸ್ ವಿಮಲಾ
ಮಹಿಳಾ ದಿನದ ಹೆಸರಿನಲ್ಲಿ ಬಜೆಟ್ ನ ಮೊದಲ ಸಾಲುಗಳು ಮಹಿಳಾ ವಿಭಾಗಕ್ಕೆ ಬಂದಿದೆ ಎಂಬುದು ಬಿಟ್ಟರೆ ಖಚಿತವಾಗಿ ಸಮತೆಯ ತಲೆಮಾರು ಕಟ್ಟುವ ಕನಸು ಎಲ್ಲಿಯೂ ಹುಟ್ಟಲಿಲ್ಲ. ಒಟ್ಟು ಬಜೆಟ್ ನ ಕೇವಲ 1% ಹಣಕೊಟ್ಟು ಮಹಿಳೆಯರ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಕಣ್ಕಟ್ಟು ಇದು.
ಕೊವಿಡ್ ನಿಂದ ಕಂಗೆಟ್ಟ ಕಾಲದಲ್ಲಿಯೂ ದಿಟ್ಟತನದಿಂದ ಎದುರಿಸಿದ ಸ್ವಸಹಾಯ ಸಂಘದ ಮಹಿಳೆಯರಿಗೆ ಭರವಸೆ ನೀಡುವ ಅಕ್ಷರಗಳೂ ಕಾಣುತ್ತಿಲ್ಲ. ಅವರು ಕೊವಿಡ್ ಕಾರಣದಿಂದ ಪ್ರಾರಂಭವಾದ ಅವೈಜ್ಞಾನಿಕ ಆನ್ ಲೈನ್ ತರಗತಿಗಳ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ನಡೆಸುತ್ತಿರುವ ಪಕ್ಷ ಪ್ರತಿಪಾದಿಸುವ ಸಿದ್ಧಾಂತದ್ದ ಅತ್ಯಂತ ‘ಪವಿತ್ರ’ ಕುರುಹು ತಾಳಿಯನ್ನು ಮಾರಾಟ ಮಾಡಿ ಆನ್ ಲೈನ್ ಕ್ಲಾಸ್ ಗಳಿಗೆ ವ್ಯವಸ್ಥೆ ಮಾಡಿದ್ದವರಿಗೆ ಮತ್ತೊಮ್ಮೆ ಮೂಗಿಗೆ ತುಪ್ಪ ಸವರಿದ ಹಾಗೆ ಮಾರುಕಟ್ಟೆ ಸೌಲಭ್ಯದ ಪ್ರಸ್ತಾಪ ಮಾತ್ರ ಇದೆ.
ಉತ್ಪಾದನೆಗೆ ಬೇಕಾದ ಬಂಡವಾಳ ನೀಡಿಕೆಗೆ ವ್ಯವಸ್ಥೆ ಮಾಡುವ ಅಗತ್ಯವಿತ್ತು. ಕೊವಿಡ್ ಕಾರಣದಿಂದ ದಿಕ್ಕೆಟ್ಟ ವಿಭಾಗದ ಸಾಲಮನ್ನಾ ಮತ್ತು ಬಡ್ಡಿ ರಹಿತ ಹೊಸ ಸಾಲ,ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮುಕ್ತಿಕೊಡುವ ಬದಲು ಬಾಹ್ಯೋಪಚಾರದ ಮಾತುಗಳು ಹೊಟ್ಟೆ ತುಂಬಿಸಲಾರದು. ಆ ವಿಭಾಗಕ್ಕೆ ಬೇಕಿದ್ದುದು ಹಿಂದಿನ ಸಾಲದ ಮನ್ನಾ. ಈ ಬಗ್ಗೆ ಸ್ವ ಸಹಾಯ ಸಂಘಗಳ ಮಹಿಳೆಯರ ಮಧ್ಯೆ ಕೆಲಸ ಮಾಡುವ ಜನವಾದಿ ಮಹಿಳಾ ಸಂಘಟನೆ ಕೊವಿಡ್ ಲಾಕ್ ಡೌನ್ ಅವಧಿಯಲ್ಲೇ ಸರಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು.
ಬಡ್ಡಿ ರಹಿತ ಹೊಸ ಸಾಲ ಮತ್ತು ಅದಕ್ಕೆ ಪೂರಕವಾಗಿ ಉತ್ಪಾದನೆ, ಮಾರುಕಟ್ಟೆ ಸೌಲಭ್ಯ ನೀಡುವ ಅತ್ಯಗತ್ಯವನ್ನು ಮುಖ್ಯ ಮಂತ್ರಿಗಳು ಪರಿಗಣಿಸಿಲ್ಲ. ಉದ್ಯೊಗದ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು ಅದರ ಬಗ್ಗೆ ಚಕಾರವಿಲ್ಲ. ನಗರ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಹದಗೆಟ್ಟ ನಗರವಾಸಿಗಳ ಬದುಕಿಗೆ ಸ್ವಲ್ಪವಾದರೂ ನೆರವು ನೀಡಬಹುದಾಗಿದ್ದನ್ನು ರಾಜ್ಯದ ಬಜೆಟ್ ಗಮನಕ್ಕೆ ತೆಗೆದುಕೊಂಡಿಲ್ಲ.
ಇದನ್ನೂ ಓದಿ : ರಾಜ್ಯ ಬಜೆಟ್ ನಲ್ಲಿ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೆ ಹೆಚ್ಚು
ಕಳೆದ ವರ್ಷ ಘೋಷಿಸಿದ್ದ ಅಸಂಘಟಿತ ವಲಯದ ಗಾರ್ಮೆಂಟ್ ಕಾರ್ಮಿಕರ ಬಸ್ ಪಾಸ್ ಮತ್ತೆ ಪುನರುಚ್ಛರಿಸಿ ಹೊಸತೇನೋ ಕೊಟ್ಟಂತೆ ಮಾಡಲಾಗಿದೆ. ಕೇಂದ್ರದಿಂದ ಬರಬೇಕಾದ ನ್ಯಾಯಯುತ ಪಾಲು ಕೇಳಲಾರದೆ ಅತಿಶಯ ಸಾಲದ ಹೊರೆಯನ್ನು ಹೇರುವ ಬಜೆಟ್ ಇದಾಗಿದೆ. ಜಾತಿ ಆಧಾರಿತ ನಿಗಮಗಳ ಸರ್ವತೋಮುಖ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ನೀಡಿ ಅತೃಪ್ತ ಆತ್ಮಗಳನ್ನು ತೃಪ್ತಿ ಪಡಿಸುವ ಪ್ರಯತ್ನ ಮಾಡಲಾಗಿದೆ.
ಮಹಿಳಾ ಸುರಕ್ಷೆ ಎಂದರೆ ಸಿ.ಸಿ ಕ್ಯಾಮರಾಗಳು ಎಂಬ ಕಲ್ಪನೆಯೇ ಅಸಮಂಜಸವಾಗಿದ್ದರೂ ಅದನ್ನೇ ಮತ್ತೆ ಹೇಳುವ ಮೂಲಕ ಮಹಿಳಾ ಸುರಕ್ಷತೆ ಯನ್ನು ಜಾಳಾಗಿಸಲಾಗಿದೆ. ಮುಂಚೂಣಿ ಸೈನಿಕರೆಂದು ಕರೆದು ಹಾಡಿ ಹೊಗಳಿ ಅಟ್ಟಕ್ಕೇರಿಸಿದ ಅಂಗನವಾಡಿ ಆಶಾ ಬಿಸಿಯೂಟದ ನೌಕರರಿಗೆ ಏನೊಂದೂ ಕೊಟ್ಟ ಮಾಹಿತಿ ಪ್ರಸ್ತಾಪಿತ ಬಜೆಟ್‌ನಲ್ಲಿ ಕಾಣುತ್ತಿಲ್ಲ.
ಕಿವಿಗೆ ಹಿತ,ಕಣ್ಣಿಗೆ ತಂಪು ಜೇಬು ಖಾಲಿ ಎಂಬಂತಿದೆ ಈ ಬಜೆಟ್ : ರಾಜ್ಯದಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗವೆಂದು ಹೇಳಲಾಗಿದೆ. ಆದರೆ ಉದ್ಯೋಗದ ಅವಕಾಶ ಸೃಷ್ಟಿಸುವ ಯಾವ ಪ್ರಸ್ತಾಪಗಳಿಲ್ಲ.
ಏ.ಪಿ.ಎಂ.ಸಿಯನ್ನು ಮುಚ್ಚುವ ಎಲ್ಲ ಅವಕಾಶವಿರುವ ತಿದ್ದುಪಡಿ ತಂದು ಅಲ್ಲಿ ಮಹಿಳೆಯರಿಗೆ ಅವಕಾಶ ಮಾಡುವ ಪ್ರಸ್ತಾಪ ವೇ ಒಂದು ಅಪಹಾಸ್ಯವಾಗಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಇನ್ನು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿಟ್ಟ ಹಾಗೆ ರಾಮ ಮಂದಿರ ಕಟ್ಟುವ ಮೊದಲೇ ಅಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಹಣ ಮೀಸಲಿಟ್ಟ ಸಂಗತಿಯನ್ನಂತೂ ಒಪ್ಪುವುದಾದರೂ ಹೇಗೆ? ಕೊವಿಡ್ ಕಾಲದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡ ಮನೆಗೆಲಸದ ಮಹಿಳೆಯರಲ್ಲಿ ಬಹುತೇಕ ಜನರಿಗೆ ಮರಳಿ ಕೆಲಾ ಸಿಕ್ಕಿಲ್ಲ. ಯಾಕೆಂದರೆ ಉದ್ಯೋಗದಾತರಿಗೇ ಅನೇಕರಿಗೆ ಸರಿಯಾದ ಉದ್ಯೋಗವಿಲ್ಲ. ಸಣ್ಣ ಪುಟ್ಟ ಆದಾಯದಲ್ಲಿ ಸಾಲ ಸೋಲ ಮಾಡಿ ಮನೆ ಕಟ್ಟಿ ಬಾಡಿಗೆ ಕೊಟ್ಟವರ ಮನೆಗಳು ಬಾಡಿಗೆದಾರರಿಲ್ಲದೇ ಖಾಲಿ ಬಿದ್ದಿವೆ.
ಅಂತವರು ಮನೆಗೆಲಸಕ್ಕೆಂದು ಸಹಾಯಕರನ್ನು ನೇಮಿಸಿಕೊಳ್ಳುವ ಮಾತೇ ಇಲ್ಲ. ಪಿ.ಜಿ.ಗಳು ಖಾಲಿಯಾಗಿವೆ. ಅಕಸ್ಮಾತ್ ಹಳೆಯ ಕೆಲಸವೇ ಸಿಕ್ಕರೂ ಮೊದಲಿಗಿಂತ ವೇತನ ಕಡಿಮೆ. ಅಂಥಹ ಮನೆಗೆಲಸದ ಹೆಣ್ಣುಮಕ್ಕಳಿಗೆ ಕನಿಷ್ಟ ಜೀವನ ನಿರ್ವಹಣೆಗೆ ಏನಾದರೂ ಮೀಸಲಿಡುವ ಬದಲು ಗುಡಿ ಕಟ್ಟುವ ಮೊದಲೇ ಯಾತ್ರಿ ನಿವಾಸವಂತೆ. ಜೊತೆಗೇ ರಾಮ ಮಂದಿರದ ಹೆಸರಿನಲ್ಲಿ ಮನೆ ಮನೆ ತಿರುಗಿ ಹಣ ಸಂಗ್ರಹ ಮಾಡುತ್ತಿರುವವರೇ ಮಾಧ್ಯಮಗಳಲ್ಲಿ ಹೇಳಿರುವಂತೆ ಸರಿ ಸುಮಾರು ಎರಡೂವರೆ ಸಾವಿರ ಕೋಟಿ ಹಣ ಸಂಗ್ರಹ ವಾಗಲಿದೆಯಂತೆ.
ಅಪೌಷ್ಟಿಕತೆ ರಕ್ತ ಹೀನತೆಯಿಂದ ಬಳಲುವ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚು ಗಮನ ನೀಡದೇ ಭಾರತ ಸರಕಾರ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನೇ ಅನುಸರಿಸಿ ರಾಜ್ಯದ ಮುಖ್ಯಮಂತ್ರಿ ಗಳು ಅವರು ಮಾಡಿದ ಆಳವಾದ ಗಾಯದ ಮೇಲೆ ಅಳಿಸಲಾಗದ ಬರೆ ಎಳೆದಿದ್ದಾರೆ. ಇದೊಂದು ನಿರಾಶಾದಾಯಕ, ಸಾಲದಹೊರೆ ಹೆಚ್ಚಿಸಿರುವ ಬಜೆಟ್ ಎಂದು ಸ್ಪಷ್ಟವಾಗಿದೆ.