ರೈತ – ಕೂಲಿಕಾರರ ವಿರೋಧಿ ಬಜೆಟ್ : ಜಿ.ಸಿ.ಬಯ್ಯಾರೆಡ್ಡಿ

ಬೆಂಗಳೂರು : ಕರ್ನಾಟಕ ರಾಜ್ಯದ ಬಿಜೆಪಿ ಸರಕಾರವು ಮಂಡಿಸಿದ 2021-2022ರ ಬಜೆಟ್ ರಾಜ್ಯದ ರೈತರು, ಕೃಷಿಕೂಲಿಕಾರರು ಮತ್ತು ಕಸುಬುದಾರ ಗ್ರಾಮೀಣ ಜನತೆಯ ಪಾಲಿಗೆ ತೀವ್ರ ನಿರಾಸೆಯನ್ನು ತಂದಿದೆ. ಇದು ಕೃಷಿ ಬಿಕ್ಕಟ್ಟನ್ನು ನಿವಾರಿಸಲು ಯಾವುದೇ ರೀತಿಯಲ್ಲಿ ಪೂರಕವಾಗಿಲ್ಲ ಬದಲಿಗೆ ಅದನ್ನು ಮತ್ತಷ್ಠು ಆಳಗೊಳಿಸಲು ನೆರವಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ದ ರಾಜ್ಯ ಸಮಿತಿ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಬಲವಾಗಿ ಖಂಡಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಯು.ಬಸವರಾಜುರವರು ಮಾತನಾಡಿ, ʻʻಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳಿಂದ ರಾಜ್ಯವು ಗಂಭೀರವಾದ ಕೃಷಿ ಬಿಕ್ಕಟ್ಟಿನಲ್ಲಿದೆ. ಕಳೆದ ಮೂರ‍್ನಾಲ್ಕು ವರ್ಷಗಳಿಂದ ಸತತವಾಗಿ ಬರಗಾಲ ಹಾಗೂ ಅತಿವೃಷ್ಠಿಗಳು ರಾಜ್ಯದಲ್ಲಿ ಬಾಧಿಸಿವೆ. ಕಳೆದ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ಹಾಗೂ ಪೂರ್ವಯೋಜಿತ ತಯಾರಿಗಳನ್ನು ಕೈಗೊಳ್ಳದ ಕೇಂದ್ರದ ಬಿಜೆಪಿ ಸರಕಾರವು ಏಕಾಏಕಿಯಾಗಿ ಜಾರಿಗೆ ತಂದ ಲಾಕ್ ಡೌನ್ ಪರಿಣಾಮವಾಗಿ ದೇಶದ ರೈತರು ಒಳಗೊಂಡು ಇಡೀ ರಾಜ್ಯದ ಜನತೆಗೆ ಹೆಚ್ಚಿನ ಸಂಕಷ್ಠವನ್ನುಂಟು ಮಾಡಿತು. ಈ ಬಗ್ಗೆ ರಾಜ್ಯ ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿದೆʼʼ ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು ʻʻಇದರಿಂದ ರಾಜ್ಯದ ರೈತರು, ಕೂಲಿಕಾರರು, ಕಸುಬುದಾರರು, ಕಾರ್ಮಿಕರು, ದಲಿತರು ಮತ್ತು ಮಹಿಳೆಯರು ನಲುಗಿ ಹೋಗಿದ್ದಾರೆ. ತಲಾ ಆದಾಯ ಮತ್ತಷ್ಠು ಕುಸಿದು ಹೋಗಿದೆ. ಇವುಗಳಿಂದಾಗಿ ಬದುಕುವುದಕ್ಕೋಸ್ಕರ ಬಡವರಿಂದ ಶ್ರೀಮಂತರ ಕೈಗೆ ಅವರ ಆಸ್ತಿಗಳು ವರ್ಗಾವಣೆಯಾಗಿವೆ. ಶ್ರೀಮಂತರು ಶ್ರೀಮಂತರಾದರು, ಬಡವರು ಮತ್ತಷ್ಠು ಕೆಟ್ಟ ಬಡತನಕ್ಕೀಡಾಗಿದ್ದಾರೆ.

ಪ್ರತಿದಿನ ಸಂಕಷ್ಟದಿಂದ ಪಾರಾಗದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಲಿಕಾರರು ಹಾಗೂ ಬಡವರು, ದಲಿತರು, ಮಹಿಳೆಯರು, ಮಕ್ಕಳ ಅಪೌಷ್ಠಿಕತೆಯ ಸಾವುಗಳು ದಿನೇ ದಿನೇ ಹೆಚ್ಚಿತ್ತಲೇ ಇವೆʼʼ ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳು, ವಿದ್ಯುತ್ ರಂಗದ ಖಾಸಗೀಕರಣದ ಮಸೂದೆ, ರೈತರು ಹಾಗೂ ಕಾರ್ಮಿಕರ ಉದ್ಯೋಗಗಳನ್ನು ಅಪಹರಿಸುವ ಮತ್ತು ಗ್ರಾಹಕರು ಲೂಟಿಗೊಳಗಾಗುವ ಭೀತಿಯನ್ನು ನಿರ್ಮಿಸಿವೆ. ಜನತೆಯನ್ನು ಕತ್ತಲೆಗೆ ದೂಡಲಿವೆ. ಇದು ಮಾತ್ರವಲ್ಲಾ, ಕಳೆದ ಫೆಬ್ರವರಿ 01ರಂದು ಮಂಡಿಸಿದ ಕೇಂದ್ರ ಸರಕಾರದ ಬಜೆಟ್ ಜನತೆಯ ಮೇಲೆ ದೊಡ್ಡ ತೆರಿಗೆಯ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭಾರವನ್ನು ಹೇರಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಸಾರಿಗೆ ವೆಚ್ಚಗಳು, ಹೋಟೆಲ್ ತಿಂಡಿಗಳ ಬೆಲೆಗಳು ತಕ್ಷಣವೇ ಏರಿಕೆ ಕಂಡಿವೆ.

ರೈತರ ಆತ್ಮಹತ್ಯೆಗಳನ್ನು ತಡೆಯಲಾಗಲೀ ಅಥವಾ ಅವರು ಸಾಲದ ಸುಳಿಯಲ್ಲಿ ಸಿಲುಕದಂತೆ ತಡೆಯುವ ಕ್ರಮಗಳಾಗಲಿ ಈ ಬಜೆಟ್ ಪರಿಹಾರ ಒದಗಿಸಲಿಲ್ಲ. ಈ ವರ್ಷವು ರಾಜ್ಯದ ಪ್ರಮುಖ ಬೆಳೆಗಳಾದ ತೊಗರಿ, ಕಡಲೆ, ಜೋಳ, ಮೆಕ್ಕೆಜೋಳ, ಸಜ್ಜೆ, ಭತ್ತ, ಹತ್ತಿ, ಮೆಣಸಿನಕಾಯಿ ಮುಂತಾದವುಗಳಿಗೆ ಬೆಂಬಲ ಬೆಲೆಗಳಿಲ್ಲದೇ ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೃಷಿ ಕೂಲಿಕಾರರ ಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ಲಾಕ್ ಡೌನ್ ಹಾಗೂ ಕೋವಿಡ್ ಕಾರಣದಿಂದ ಹೆಚ್ಚಳಗೊಂಡಿದೆ. ಅಲ್ಲದೆ, ಬರಗಾಲ, ಅತಿವೃಷ್ಟಿಯ ಕಾರಣದಿಂದ ಉದ್ಯೋಗಾವಕಾಶಗಳು ಕೃಷಿಯಲ್ಲಿ ಕುಂಠಿತಗೊಂಡಿವೆ.

ಉದ್ಯೋಗ ಖಾತ್ರಿಯು ತಲಾ ಕುಟುಂಬಕ್ಕೆ ಸರಾಸರಿ 50 ದಿನಗಳು ದೊರೆಯುತ್ತಿಲ್ಲ. ಕೂಲಿಕಾರರ ವೇತನವನ್ನು ಕಾರ್ಮಿಕ ಇಲಾಖೆ ಪ್ರಕಟಿಸಿದಂತೆ 424 ರೂ.ಗಳಿಗೆ ಹೆಚ್ಚಿಸಲಿಲ್ಲ. ಕಾರ್ಮಿಕರಿಗೆ ಕನಿಷ್ಢ ವೇತನದ ಹೆಚ್ಚಳವಿಲ್ಲ. ಕೋವಿಡ್ ಬಾಧೆಯ ಪರಿಹಾರವೂ ಇದರಲ್ಲಿ ಇಲ್ಲವಾಗಿದೆ.

ಹೀಗಾಗಿ, ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ. ಬದಲಿಗೆ, ರಾಜ್ಯದ ಜನತೆಯ ಮೇಲೆ ದೊಡ್ಡ ಸಾಲದ ಹೊರೆಯನ್ನು ಹೇರುವ ಮೂಲಕ ಮತ್ತಷ್ಠು  ಸಂಕಷ್ಠಕ್ಕೀಡು ಮಾಡಿದೆ.

ಬಜೆಟ್‌ನಲ್ಲಿ ದಲಿತರು, ಮಹಿಳೆಯರಿಗೆ ನೀಡಿದ ಹಣವು ಅವರ ಜನಸಂಖ್ಯೆಗನುಗುಣವಾಗಿಲ್ಲ ಮಾತ್ರವಲ್ಲಾ, ಕಳೆದ ಬಾರಿಗಿಂತ ಕಡಿಮೆ ಹಣ ಒದಗಿಸಲಾಗಿದೆ. ಅದರಲ್ಲಿ ಅವರೊಳಗಿನ ಶ್ರೀಮಂತರಿಗೆ ನೆರವಾಗುವ ಇಂಗಿತವನ್ನು ತೋರಿದೆ.

ಶಿಕ್ಷಣಕ್ಕೆ ಕೇವಲ ಶೇ.11 ರಷ್ಟು ಮಾತ್ರವೇ ಒದಗಿಸಿದ್ದರೂ ಅದು ಕಳೆದ ಬಾರಿಗಿಂತ ಕಡಿಮೆಯಾಗಿದೆ. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಹಾಗೂ ದಲಿತರು, ಮಹಿಳೆಯರಿಗೆ ಕಡಿತ ಮಾಡಿ ಮಠ ಮಾನ್ಯಗಳಿಗೆ ನೀಡುವ ಸಂಕುಚಿತ ಜಾತಿ ರಾಜಕಾರಣಕ್ಕೆ ಕ್ರಮವಹಿಸಲಾಗಿದೆ. ಸಮುದಾಯಗಳ ಅಭಿವೃದ್ದಿಯ ಹೆಸರಿನಲ್ಲಿ ನೀಡಲಾಗಿರುವ ಸಾವಿರಾರು ಕೋಟಿ ರೂ ಹಣ ನಿಜ ಫಲಾನುಭವಿಗಳಿಗೆ ಸಿಗದೇ ಗುಳುಂ ಮಾಡಲಷ್ಟೇ ಉಪಯುಕ್ತವಾಗಿದೆ ಎಂದು ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *