ಕೊವಿದ್ ವಿರುದ್ಧ ಸೆಣಸಾಟ, ಸಮತೆಯ ತಲೆಮಾರಿನ ಸೃಷ್ಟಿಗೆ ಕಾದಾಟ

ವಿಶ್ವ ಸಂಸ್ಥೆಯು 2020ರಲ್ಲಿ ‘ಲಿಂಗ ಸಮಾನತೆ-ಮಹಿಳಾ ಹಕ್ಕುಗಳ ಸಾಧನೆ’ಯ ಕರೆ ಕೊಟ್ಟಿತ್ತು. ಆದರೆ 2020 ವೇದನೆಯ ಸಾಗರವೇ ಆಯಿತು. 2021ರಲ್ಲಿ ವಿಶ್ವ ಸಂಸ್ಥೆಯು ‘ಮಹಿಳಾ ನಾಯಕತ್ವ: ಕೊವಿಡ್ 19 ನಂತರದ ವಿಶ್ವದಲ್ಲಿ ಸಮಾನತೆಯ ನಾಳೆಗಳನ್ನು ಸಾಧಿಸುವತ್ತ’ ಎಂಬ ಕರೆ ನೀಡಿದೆ. ಸಮತೆಯ ತಲೆಮಾರು ಎಂಬ ಉಪಥೀಮ್ ನ್ನು ಕೊಟ್ಟು ಎಲ್ಲ ಸ್ತರಗಳ ಮಹಿಳೆಯರಿಗೆ ಬದುಕಿನ ಎಲ್ಲ ತೀರ್ಮಾನಗಳನ್ನು ಮಾಡುವ ಅಧಿಕಾರ, ಸಮಾನ ವೇತನ, ಗೃಹಕೃತ್ಯ ಮತ್ತು ವೇತನವಿಲ್ಲದ ಕೌಟುಂಬಿಕ ಜವಾಬ್ದಾರಿಯ ಸಮಾನ ಹಂಚಿಕೆ, ಎಲ್ಲ ರೀತಿಯ ಹಿಂಸೆಯ ನಿರ್ಮೂಲನೆ ಮತ್ತು ಅವರವರ ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಸೌಲಭ್ಯಗಳ ಲಭ್ಯತೆಗಳನ್ನು ಖಾತ್ರಿ ಮಾಡಬೇಕೆನ್ನುವ ಆಶಯವನ್ನು ಮುಂದಿಟ್ಟಿದೆ. ವಿಶ್ವಸಂಸ್ಥೆಯ ಆಶಯ ಸಾಕಾರಗೊಳ್ಳಬೇಕೆಂದರೆ ಕೃಷಿಕ್ಷೇತ್ರಕ್ಕೆ ಸಂಬಧಿಸಿದತೆ 2009ರಲ್ಲಿಯೇ ರಾಷ್ಟ್ರೀಯ ಮಹಿಳಾ ಆಯೋಗ ರೂಪಿಸಿದ ಕೃಷಿ ಕ್ಷೇತ್ರದ ಮಹಿಳೆಯರ ಕುರಿತು ಕರಡು ರಾಷ್ಟ್ರೀಯ ಧೋರಣೆಯಲ್ಲಿ ಪ್ರಸ್ತಾಪಿಸಿದ ಪರಿಹಾರಗಳನ್ನು ಕೈಗೆತ್ತಿಕೊಳ್ಳಬೇಕು.

 ಕೆ.ಎಸ್.ವಿಮಲ

ಅಂತರ ರಾಷ್ಟ್ರೀಯ ಮಹಿಳಾ ದಿನವೆನ್ನುವಾಗ ಒಂದು ಧೀರೋದಾತ್ತ ಹೋರಾಟದ ಯಶೋಗಾಥೆಯ ನೆನಪು ನೀಡುವ ದಿನ. 1917ರ ರಷ್ಯನ್ ಕ್ರಾಂತಿಗೂ ಮುನ್ನುಡಿ ಬರೆದ ಸೈಂಟ್ ಪೀರ‍್ಸ್ ಬರ್ಗ ನ ಹತ್ತಿ ಗಿರಣಿಯ ಮಹಿಳಾ ಕಾರ್ಮಿಕರ ಹೋರಾಟ ಹಾಗೂ ವಿಶ್ವ ಮಹಾಯುದ್ಧ ತಂದಿತ್ತ ಭೀಕರ ಆಹಾರ ಅಭಾವದ ವಿರುದ್ಧ ‘ಬ್ರೆಡ್ ಅಂಡ್ ರೋಸಸ್’ ಎಂದೇ ಖ್ಯಾತಿ ಪಡೆದ ಹೋರಾಟವನ್ನು ನೆನಪಿಸಿಕೊಳ್ಳುವ ದಿನ. ಹಾಗೆಯೇ ಈ ಹೋರಾಟಗಳು ಕೇವಲ ಲಿಂಗಾಧಾರಿತ ಬೇಡಿಕೆಗಳ ಭಾಗವಾಗಿ ನಡೆದದ್ದಲ್ಲ. ಬದಲಿಗೆ ಎಲ್ಲ ಜನರ ಅದರಲ್ಲಿಯೂ ದುಡಿಯುವ ಜನರ ವರ್ಗಹೋರಾಟದ ಭಾಗವಾಗಿ ಮಹಿಳಾ ವಿಷಯಗಳನ್ನೂ ಪರಿಭಾವಿಸಬೇಕೆಂಬ ಸ್ಪಷ್ಟ ಸಮಾಜವಾದೀ ಕಣ್ಣೋಟ ಹೊಂದಿದ ಕ್ಲಾರಾ ಜೆಟ್ಕಿನ್ ರವರು ಇದನ್ನು ಅಂತರ ರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಮಂಡಿಸಿ ಅದಕ್ಕೆ ಮನ್ನಣೆ ಪಡೆದ ಇತಿಹಾಸವನ್ನೂ ಸ್ಮರಿಸುವ ದಿನ.

ಮಹಿಳಾ ದಿನದ ಇತಿಹಾಸ

1908ರಿಂದ ಎಂದು ಶುರುವಾಗುವ ಈ ಚರಿತ್ರೆಗೆ ಹಿನ್ನುಡಿ 1857ರಲ್ಲಿಯೇ ಪ್ರಾರಂಭವಾದ ಹೋರಾಟವೆಂದೂ ಇತಿಹಾಸದ ಪುಟಗಳು ಹೇಳುತ್ತವೆ. 1909 ರ ಫೆಬ್ರುವರಿ 28 ರಂದು ಅಮೇರಿಕಾದ ನ್ಯೂಯಾರ್ಕನಲ್ಲಿ ಅಮೆರಿಕಾ ಸಮಾಜವಾದಿ ಪಕ್ಷ  ಮೊದಲ ಮಹಿಳಾ ದಿನವನ್ನು ಆಚರಿಸಿತು ಎಂದೂ ಓದುತ್ತೇವೆ. ಮತ್ತು 1910 ರಲ್ಲಿ ಅಂತರ ರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಜರ್ಮನ್ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ  ಕ್ಲಾರಾ ಜೆಟ್ಕಿನ್ ರವರು ಇದಕ್ಕೆ ಅಂತರ ರಾಷ್ಟ್ರೀಯ ದಿನದ ಮಾನ್ಯತೆಗೆ ಬೇಡಿಕೆ ಇಟ್ಟರು. ಬೇಡಿಕೆ ಮಾನ್ಯವಾಗಿ ಅದು ಅಧಿಕೃತವಾಗಿ ಘೋಷಣೆಯಾಗಿ ನಂತರ 1911ರಲ್ಲಿ ಆಸ್ಟಿçಯಾ, ಡೆನ್ಮಾರ್ಕ, ಜರ್ಮನಿ, ಸ್ವಿಟ್ಜರ್ಲೆಂಡ್ ಮುಂತಾದ ದೇಶಗಳಲ್ಲಿ ಆಚರಣೆಯೂ ಆಯಿತು. ಸಾವಿರಾರು ಮಹಿಳೆಯರು ಬೀದಿಗಳಲ್ಲಿ ನಿಂತು ಸಂಭ್ರಮಿಸಿದ, ತಮ್ಮ ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ ದಿನವಾಗಿ ಹೆಸರಾಯಿತು.

ಕ್ಲಾರಾ ಈ ದಿನವನ್ನು ಕೇವಲ ಮಹಿಳೆಯರ ದಿನವೆಂದು ಮಾತ್ರ ಮಂಡಿಸದೇ ದುಡಿಯುವ ಮಹಿಳೆಯರ ದಿನ ಎಂದು ಮಂಡಿಸಿದ್ದರು. ಎಂದರೆ ಒಟ್ಟು ಶ್ರಮಿಕ ವರ್ಗದ ವರ್ಗ ಹೋರಾಟದ ಅವಿಭಾಜ್ಯ ಭಾಗವಾಗಿಯೇ ಲಿಂಗಾಧಾರಿತ ಸಮಸ್ಯೆಗಳನ್ನೂ ನೋಡಬೇಕೆಂಬ ಅಂತರ್ಗತ ಅಭಿಪ್ರಾಯ ಅದರಲ್ಲಿ ಇತ್ತು. ಆದ್ದರಿಂದಲೇ ಅದು ಆ ಕಾಲದಲ್ಲಿಯೇ ಇದ್ದ ಸುಧಾರಣಾವಾದಿಗಳ ಮಹಿಳಾ ಮತದಾನದ ಹಕ್ಕು, ಮಹಿಳೆಯರ ಪ್ರಜನನ ಕ್ರಿಯೆಯ ಹಕ್ಕು-ಎಂದರೆ ಹೆಣ್ಣಿಗೆ ತನ್ನ ದೇಹದ ಮೇಲಿನ ಅಧಿಕಾರದ ಹಕ್ಕುಗಳನ್ನು ಮಾತ್ರ ಪ್ರತಿಪಾದಿಸುವ ಸೀಮಿತ ದೃಷ್ಟಿಕೋನದಿಂದಾಚೆ, ಅದನ್ನೂ ಒಳಗೊಂಡAತೆ ವರ್ಗ ದೃಷ್ಟಿಕೋನವನ್ನು ಬೆಳೆಸುವ ಆಶಯವನ್ನು ಹೊಂದಿತ್ತು. ಹೀಗೆ ಅಂತರ ರಾಷ್ಟ್ರೀಯ ಸಮಾಜವಾದೀ ಸಮ್ಮೇಳನದಲ್ಲಿ ಅಂಗೀಕಾರಗೊAಡ ಈ ಠರಾವು ವಿಶ್ವದ ಎಲ್ಲೆಡೆ ಮಾನ್ಯತೆ ಪಡೆಯಲಿಲ್ಲ.

1917ರಲ್ಲಿ ಸೋವಿಯಟ್ ರಷ್ಯಾ ಕ್ರಾಂತಿಯ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ಹಾಗೂ ಆ ದಿನವನ್ನು ಅಧಿಕೃತವಾಗಿ ರಜಾದಿನವನ್ನಾಗಿ ಘೊಷಿಸಲಾಯಿತು. ಆ ದಿನಗಳಲ್ಲಿ ಅದನ್ನು ಸಮಾಜವಾದಿ ಮತ್ತು ಕಮ್ಯುನಿಸ್ಟ್ ದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. 1967 ರಲ್ಲಿ ಸ್ತ್ರೀವಾದಿ ಚಳುವಳಿಗಳೂ ಇದನ್ನು ಒಪ್ಪಿಕೊಂಡು ಆಚರಣೆಗೆ ಮುಂದಾದರು. 1975ರಲ್ಲಿ ವಿಶ್ವ ಸಂಸ್ಥೆಯೂ ಇದಕ್ಕೆ ಅಧಿಕೃತತೆಯನ್ನು ಘೋಷಿಸಿತು. ಮತ್ತು ತನ್ನ ಸದಸ್ಯ ರಾಷ್ಟçಗಳಲ್ಲಿ ಆಚರಣೆಗೆ ಬೇಕಾದ ಪೂರಕ ಘೊಷಣೆಗಳನ್ನೂ ಕೊಡಲುಪಕ್ರಮಿಸಿತು.

‘ಮಹಿಳಾ ನಾಯಕತ್ವ ಸಮಾನತೆಯ ನಾಳೆಗಳನ್ನು ಸಾಧಿಸುವತ್ತ’

ವಿಶ್ವ ಸಂಸ್ಥೆ 2020ರಲ್ಲಿ ‘ಲಿಂಗ ಸಮಾನತೆ-ಮಹಿಳಾ ಹಕ್ಕುಗಳ ಸಾಧನೆ’ಯ ಕರೆ ಕೊಟ್ಟಿತ್ತು. ಆದರೆ 2020 ವೇದನೆಯ ಸಾಗರವೇ ಆಯಿತು. ಇಡೀ ವಿಶ್ವ ಆ ಹೊತ್ತಿಗಾಗಲೇ ಸೂಕ್ಷ್ಮ ವೈರಾಣುವೊಂದರ ಕಪಿ ಮುಷ್ಟಿಗೆ ಸಿಲುಕಿ ಮುಲುಗುಟ್ಟುತ್ತಿತ್ತು. ಭಾರತದಂಥಹ ದೇಶದಲ್ಲಿ ಜನರ ಕಷ್ಟಕ್ಕೆ ಕುರುಡಾಗಿ ದೊಡ್ಡಣ್ಣನಿಗೆ ಡೊಗ್ಗು ಸಲಾಮು ಹಾಕಲು ರೋಗವನ್ನು ಮುಚ್ಚಿಡುವ ಪ್ರಯತ್ನದಲ್ಲಿ ಸರಕಾರ ನಿರತವಾಗಿತ್ತು. ಆದರೆ ವೈರಾಣುವಿನ ಪ್ರಕೋಪ ಅಮೆರಿಕಾ ದಂಥಹ ಸೋ ಕಾಲ್ಡ್ ‘ಬಲಿಷ್ಠ’ ದೇಶವನ್ನೂ ಹೆಡೆಮುರಿ ಕಟ್ಟಿಬಿಟ್ಟಿತ್ತು. ಆದರೆ ಪುಟ್ಟ ದೇಶ ಕ್ಯೂಬಾ, ವಿಯಟ್ನಾಂ ಗಳು ದೊಡ್ಡ ಆಪತ್ತನ್ನೆದುರಿಸಲಿಲ್ಲ. ಯಾಕೆಂದರೆ ಸಮಾಜವಾದಿ ವ್ಯವಸ್ಥೆಯನ್ನು ಉಳಿಸಿಕೊಂಡ ಕಾರಣದಿಂದ. ಮತ್ತು ತನ್ನುದರದಲ್ಲಿಯೇ ಹುಟ್ಟಿದ ವೈರಾಣುವಿನ ಪ್ರಕೋಪವನ್ನು ಮಣಿಸಿ ಮೆಟ್ಟಿನಿಲ್ಲಲು ಚೈನಾ ಕೂಡಾ ಸಫಲತೆ ಪಡೆದಿದ್ದು ಮತ್ತು ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡರೂ ತನ್ನೆಲ್ಲ ಶಕ್ತಿಯನ್ನೂ ಹಾಕಿ ವೈರಾಣುವಿನೆದುರು ಈಗಲೂ ಸೆಣಸುತ್ತಿರುವ ನಮ್ಮದೇ ಪುಟ್ಟ ರಾಜ್ಯ ಕೇರಳ ಇವು ಮಾದರಿಗಳು. ಯಾಕೆಂದರೆ ಸಮಾಜವಾದೀ ಸಿದ್ದಾಂತದ ನೆಲೆಯಲ್ಲಿ ಸರಕಾರಗಳು ಇರುವ ಕಾರಣದಿಂದ.

ಈ ಅವಧಿಯಲ್ಲಿ ವಿಶ್ವ ಸಂಸ್ಥೆ ‘ಮಹಿಳಾ ನಾಯಕತ್ವ: ಕೊವಿಡ್ 19 ನಂತರದ ವಿಶ್ವದಲ್ಲಿ ಸಮಾನತೆಯ ನಾಳೆಗಳನ್ನು ಸಾಧಿಸುವತ್ತ’ ಎಂಬ ಕರೆ ನೀಡಿದೆ.

ಈ ಘೋಷಣೆಯ ಮೂಲಕ ವಿಶ್ವ ಸಂಸ್ಥೆ ಇಡೀ ವಿಶ್ವದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೊವಿದ್ ವಿರುದ್ಧ ಎದುರಾಗಿ ನಿಂತು ಸೆಣಸಿದ ಸಾಮರ್ಥ್ಯವನ್ನು ಗುರುತಿಸುವ ಮತ್ತು ಅದಕ್ಕಾಗಿ ಶ್ಲಾಘಿಸುವ ಧೋರಣೆಯನ್ನು ಮುಂದಿಟ್ಟಿದೆ. ಹಾಗೂ ಈ ವೈರಾಣುವಿನಿಂದ ಚೇತರಿಸಿಕೊಳ್ಳಲು ಅವರು ಮಾಡಿದ ಪ್ರಯತ್ನ ಮತ್ತು ಅದು ಕೊಡಬಹುದಾದ ನಾಳಿನ ಸಮ ಸಮಾಜದ ಕಲ್ಪನೆಯನ್ನು ಗುರುತಿಸಬೇಕೆಂದೂ ಸೂಚಿಸಿದೆ ಎಂದುಕೊಳ್ಳಬಹುದು.

ಸಮತೆಯ ತಲೆಮಾರು ಸೃಷ್ಟಿ

ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಕೊವಿಡ್ ತನ್ನ ಪ್ರಕೋಪವನ್ನು ತೋರಿಸಿ, ಸರಕಾರಗಳು ಥರಗುಟ್ಟುತ್ತಿರುವಾಗ, ಅನ್ಯ ಮಾರ್ಗವೇ ಇಲ್ಲವೆಂಬತೆ ಘೋಷಿಸಿದ ಲಾಕ್ ಡೌನ್ ಗಳು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಹೆಚ್ಚಿದ ಎಲ್ಲ ರೀತಿಯ ದೌರ್ಜನ್ಯಗಳನ್ನು ವಿಶ್ವಸಂಸ್ಥೆ ಅತ್ಯಂತ ಕಳವಳದಿಂದ ಗುರುತಿಸಿ ಅದನ್ನು ಮಹಾಸೋಂಕಿನ ನೆರಳು ಎಂದು ಕರೆದಿತ್ತು. ಮತ್ತು ಮಹಿಳೆಯರು ಅತಿ ಹೆಚ್ಚಿನ ರೀತಿಯಲ್ಲಿ ಕೌಟುಂಬಿಕ, ಔದ್ಯೋಗಿಕ ಮತ್ತು ಆರೋಗ್ಯ ಸಂಬAಧೀ ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೂ ವಿಶ್ವದ ಹಲವು ಸರಕಾರಗಳು ಘೋಷಿಸಿದ ಪರಿಹಾರಗಳ ಪ್ಯಾಕೇಜ್‌ಗಳಲ್ಲಿ ಲಿಂಗತ್ವ ಸಮನ್ಯಾಯದ ನೆರಳೂ ಕಾಣಿಸಿರಲಿಲ್ಲ. ಅಲ್ಲದೇ ಮಹಾಸೋಂಕು ದೇಶ ದೇಶಗಳಲ್ಲಿ ತಂದೊಡ್ಡಿದ ಔದ್ಯೋಗಿಕ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರೇ ಅಧಿಕ. ನಮ್ಮ ದೇಶದಲ್ಲಿಯೂ ನಾವು ಇದನ್ನೇ ನೋಡುತ್ತಿದ್ದೇವೆ ಇದನ್ನೂ ಗಮನದಲ್ಲಿಟ್ಟುಕೊಂಡೇ ಸಮತೆಯ ತಲೆಮಾರು ಎಂಬ ಉಪಥೀಮ್ ನ್ನು ಕೊಟ್ಟು ಎಲ್ಲ ಸ್ತರಗಳ ಮಹಿಳೆಯರಿಗೆ ಬದುಕಿನ ಎಲ್ಲ ತೀರ್ಮಾನಗಳನ್ನು ಮಾಡುವ ಅಧಿಕಾರ, ಸಮಾನ ವೇತನ, ಗೃಹಕೃತ್ಯ ಮತ್ತು ವೇತನವಿಲ್ಲದ ಕೌಟುಂಬಿಕ ಜವಾಬ್ದಾರಿಯ ಸಮಾನ ಹಂಚಿಕೆ, ಎಲ್ಲ ರೀತಿಯ ಹಿಂಸೆಯ ನಿರ್ಮೂಲನೆ ಮತ್ತು ಅವರವರ ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಸೌಲಭ್ಯಗಳ ಲಭ್ಯತೆಗಳನ್ನು ಖಾತ್ರಿ ಮಾಡಬೇಕೆನ್ನುವ ಆಶಯವನ್ನು ಮುಂದಿಟ್ಟಿದೆ. ವಿಶ್ವದ ಕೇವಲ 20 ರಾಷ್ಟçಗಳಲ್ಲಿ ಮಾತ್ರ ದೇಶದ ಮುಖ್ಯ ಜವಾಬ್ದಾರಿಯನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ. ಆದರೆ ಸಂಕಷ್ಟದ ಸಾಂಕ್ರಾಮಿಕದೆದುರು ಸೆಣಸಿದ ಮುಂಚೂಣಿ ಸೇನಾನಿಗಳಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದಾಗಿತ್ತು. ಆದರೆ ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿ ನಿರ್ಣಾಯಕ ಘಟ್ಟಗಳ ಸಂದರ್ಭದಲ್ಲಿ ಸಲಹೆಗಳನ್ನು ಕೊಡುವ ಜಾಗದಲ್ಲಿ ಮಾತ್ರ ಹೆಚ್ಚು ಪುರುಷರದೇ ಕಾರುಬಾರು. ಇದನ್ನು ಗುರುತಿಸಲಾಗಬೇಕು.

ಭಾರತದಲ್ಲಿ

ಇದೇ ಅವಧಿಯಲ್ಲಿ ಈ ಮಹಿಳಾ ದಿನದ ಸಂದರ್ಭದಲ್ಲಿ ನಮ್ಮ ನೆಲದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಮ ಸಮಾಜದ ಕನಿಷ್ಟ ಕಲ್ಪನೆಗೂ ನಿಲುಕದ ರೀತಿಯಲ್ಲಿವೆ. ದೇಶದ ರಾಜಧಾನಿಯಲ್ಲಿ ಕಳೆದ ಮೂರು ತಿಂಗಳಿಗೂ ಮೀರಿ ಕರಾಳ ಕೃಷಿ ಕಾಯ್ದೆಯ ವಿರುದ್ಧ ಅನ್ನದಾತರು ಪ್ರತಿಭಟನೆಯಲ್ಲಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದಾರೆ. ಯಾಕೆಂದರೆ ದೇಶದ ಕೃಷಿ ಕ್ಷೇತ್ರದ ಬಹುತೇಕ ಕೆಲಸವನ್ನು ನಿರ್ವಹಿಸುವವರು ಮಹಿಳೆಯರೇ. ದುರಂತವೆAದರೆ ಅವರನ್ನು ರೈತರೆಂದು ದೇಶ ಪರಿಗಣಿಸುವುದಿಲ್ಲ. ಯಾಕೆಂದರೆ ಅವಳ ಹೆಸರಿನಲ್ಲಿ ಭೂಮಿ ಇಲ್ಲ, ಆಸ್ತಿ ಇಲ್ಲ, ಸಂಪತ್ತಿನ ಸೃಷ್ಟಿ ಮಾಡುತ್ತಾಳೆ. ಆದರೆ ಅದರ ಒಡತಿ ಆಕೆಯಲ್ಲ. ಸಾಲದೆಂಬಂತೆ ಕಳೆದ ಐದು ವರ್ಷಗಳಲ್ಲಿ 72 ಮಿಲಿಯನ್ ಮಹಿಳೆಯರು ಕೃಷಿ ಮತ್ತು ಕೃಷಿ ಸಂಬAಧೀ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಪುರುಷರು ಕೃಷಿ ಬಿಕ್ಕಟ್ಟಿನ ಪರಿಣಾಮದಿಂದ ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಎಂದರೆ ಈ ವ್ಯವಸ್ಥೆ ಅವರನ್ನು ಕೊಲೆ ಮಾಡಿದೆ. ಬಹುತೇಕ ಮಂದಿಯ ವಿಧವಾ ಪತ್ನಿಯರಿಗೆ ಸಾಲ ಮನ್ನಾ ಅಥವಾ ಪರಿಹಾರದ ಪ್ಯಾಕೇಜ್ ಗಳು ಸಿಗುವುದಿಲ್ಲ ಯಾಕೆಂದರೆ ದಾಖಲೆಗಳಲ್ಲಿ ಅವರು ರೈತರಲ್ಲ. ಪಿ.ಎಂ. ಕಿಸಾನ್ ನಿಧಿ ಎಂಬ ಆಕರ್ಷಕ ಪದಪುಂಜದ ಅತ್ಯಲ್ಪ ಪ್ರಮಾಣದ, ಹಾಗೂ ಅಸಮರ್ಪಕ ಆದಾಯದ ಬೆಂಬಲವೂ ಅವರಿಗೆ ದೊರೆಯುವುದಿಲ್ಲ ಯಾಕೆಂದರೆ ಅವರು ದಸ್ತಾವೇಜಿನಲ್ಲಿ ರೈತರಲ್ಲ. ಸರಕಾರದ ಲಕ್ಷö್ಯ ಕಾರ್ಪೊರೇಟ್ ಮತ್ತು ದೊಡ್ಡ ಉದ್ಯಮಪತಿಗಳ ಥೈಲಿ ತುಂಬಿಸಿ ನಾಳೆಯ ಚುನಾವಣೆಯ ಬಂಡವಾಳ ಹೂಡಿಕೆಯತ್ತ ಇರುವ ಕಾರಣದಿಂದ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಯ ಅಥವಾ ಬಡ್ಡಿ ರಹಿತ ಸಾಲ, ಮುಂತಾದವುಗಳು ಮಹಿಳೆಯರ ಪಾಲಿಗಂತೂ ಗಗನ ಕುಸುಮವೇ ಆಗಿದೆ.

ಇನ್ನು ಕೊವಿಡ್ ಎದುರು ದೇಶದ ದುಡಿಯುವ ಜನ ಮತ್ತು ವಿಪರೀತವಾಗಿ ಮಹಿಳೆಯರು ಸೆಣಸುತ್ತಿರುವಾಗ ದೇಶರಕ್ಷಕರು ಕೊಂದ ಕಾಯ್ದೆಗಳಲ್ಲಿ ಒಂದು ಅಗತ್ಯ ವಸ್ತುಗಳ ಕಾಯ್ದೆ. ಇದಕ್ಕೆ ತಿದ್ದುಪಡಿ ತಂದು ಅದನ್ನು ಕೊಂದ ಕಾರಣದಿಂದ ಇಂದು ಪಡಿತರ ವ್ಯವಸ್ಥೆ ಏರುಪೇರಾಗುವ ಎಲ್ಲ ಸೂಚನೆಗಳಿವೆ. ಇದು ಮತ್ತೆ ಗಾಯದ ಮೇಲೆ ಬರೆ ಎಳೆಯುವುದು ದುಡಿದು ತಿನ್ನುವ ಜನರಿಗೆ ಅದರಲ್ಲಿಯೂ ಮನೆಯನ್ನು ಸಂಭಾಳಿಸುವ ಅಲಿಖಿತ ಹೊರೆಯನ್ನು ಹೊಣೆಯಾಗಿ ಹೊತ್ತಿರುವ ಮಹಿಳೆಯರಿಗೆ. ಏ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತಂದು ದೇಶಕ್ಕೆ ಮತ್ತು ಕೃಷಿಕರಿಗೆ ಸ್ವಾತಂತ್ರ ಕೊಡುತ್ತೇವೆ ಎನ್ನುವ  ಊರುಹಾಳು ಕ್ರಮದಿಂದಾಗಿಯೂ ದೊಡ್ಡ ಪೆಟ್ಟು ಬೀಳುತ್ತಿದೆ. ತರಕಾರಿ, ಹೈನುಗಾರಿಕೆ ಚಿಲ್ಲರೆ ಮಾರಾಟದ ಮಹಿಳೆಯರು ಬೀದಿಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೃಷಿ ಕ್ಷೇತ್ರದ ಮಹಿಳೆಯರ ಕುರಿತು ರಾಷ್ಟ್ರೀಯ ಧೋರಣೆ

ವಿಶ್ವಸಂಸ್ಥೆಯ ಆಶಯ ಸಾಕಾರಗೊಳ್ಳಬೇಕೆಂದರೆ ಕೃಷಿಕ್ಷೇತ್ರಕ್ಕೆಸಂಬಂಧಿಸಿದಂತೆ 2009ರಲ್ಲಿಯೇ ರಾಷ್ಟ್ರೀಯ ಮಹಿಳಾ ಆಯೋಗ ರೂಪಿಸಿದ ಕೃಷಿ ಕ್ಷೇತ್ರದ ಮಹಿಳೆಯರ ಕುರಿತು ಕರಡು ರಾಷ್ಟ್ರೀಯ ಧೋರಣೆಯಲ್ಲಿ ಪ್ರಸ್ತಾಪಿಸಿದ ಪರಿಹಾರಗಳನ್ನು ಕೈಗೆತ್ತಿಕೊಳ್ಳಬೇಕು. ನೆನಪಿಸಿಕೊಳ್ಳೋಣ, ವಿಶೇಷ ಸಂದರ್ಭವಾಗಿದ್ದ ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನೇತ್ರತ್ವವಾಗಿದ್ದರೂ ಕನಿಷ್ಟ ಸಾಮಾನ್ಯ ಕಾರ್ಯಕ್ರಮದಡಿಯಲ್ಲಿ ಎಡ ಪಕ್ಷಗಳು ಕೇಂದ್ರದ ಸರಕಾರಕ್ಕೆ ಬೆಂಬಲ ಘೋಷಿಸಿತ್ತು, ಹಾಗೂ ಸಿ.ಪಿ.ಐ.(ಎಂ) ಪಕ್ಷವು ಬಾಹ್ಯ ಬೆಂಬಲ ಘೋಷಿಸಿತ್ತು. ಆ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಇಂದಿನ ರಾಷ್ಟ್ರಾಧ್ಯಕ್ಷರಾದ ಪ್ರೊ.ಮಾಲಿನಿ ಭಟ್ಟಾಚಾರ್ಯರ ನೇತೃತ್ವದಲ್ಲಿ ಈ ಕರಡು ಸಿದ್ಧಗೊಂಡಿತ್ತು. ಈ ಸಮಿತಿಯಲ್ಲಿ ಸಂಶೋಧಕರು, ತಜ್ಞರು, ಕೃಷಿ ಮತ್ತು ಕೃಷಿ ಸಂಬAಧಿತ ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಕ್ಷೇತ್ರದ ಕಾರ್ಯಕರ್ತರು ಇದ್ದರು. ಇವರೆಲ್ಲರ ಪ್ರಯತ್ನದಿಂದ ಮಹಿಳೆಯರನ್ನು ರೈತರೆಂದು, ಶ್ರಮಿಕರೆಂದು ಗುರುತಿಸುವ, ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಗೆ ಹಕ್ಕುದಾರರನ್ನಾಗಿಸುವ, ಆಹಾರ ಹಾಗೂ ಆಹಾರದ ಭದ್ರತೆಯ ಹಕ್ಕು ನೀಡುವ, ಬದುಕುವ ಹಾಗೂ ಘನತೆಯ ಕೆಲಸದ ಹಕ್ಕು ಪಡೆಯುವ, ಸಾಲದಿಂದ ಮುಕ್ತಿ ಮತ್ತು ನಿಯಂತ್ರಿತ ಮಾರುಕಟ್ಟೆಯ ಹಕ್ಕು, ನ್ಯಾಯಯುತ ಬೆಲೆ ಪಡೆಯುವ ಹಕ್ಕು – ಇವೆಲ್ಲವನ್ನೂ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಹಿಳೆಯರಿಗೂ ಲಭ್ಯಗೊಳಿಸಬೇಕೆಂದು ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ ಅಂದಿನ ಯು.ಪಿ.ಏ ಅಥವಾ ನಂತರ ಬಂದ ಬಾಯಿಬಡುಕ, ಘೋಷಣಾ ಪ್ರವೀಣ ಎನ್.ಡಿ.ಏ ಸರಕಾರಗಳಾಗಲೀ ಅತ್ತ ಕಣ್ಣೆತ್ತಿಯೂ ನೋಡಿಲ್ಲ. ಆ ಕಾರಣದಿಂದಾಗಿ ಇಂದು ಕೂಡಾ ಕೃಷಿಯ ಬಹುತೇಕ ಕೆಲಸವನ್ನು ಮಹಿಳೆಯರೇ ಮಾಡುತ್ತಿದ್ದಾಗ್ಯೂ, ಹಾಗೂ ಕೊರೆಯುವ ಛಳಿಯಲ್ಲಿ, ಸುರಿಯುವ ಮಳೆಯಲ್ಲಿ ನನ್ನ ನೆಲ ನನ್ನ ಹೊಲ, ನನ್ನ ಬೇಳೆ, ನನ್ನ ಬದುಕು ಕಾರ್ಪೊರೇಟ್ ವಶ ಮಾಡಲು ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಜಪ್ಪಿಸಿ ಮಹಿಳೆಯರು ಬಂದು ಕುಳಿತರು. ಆದರೆ ದೇಶದ ಸರ್ವೋಚ್ಛ ನ್ಯಾಯಾಲಯವೂ ತಾನು ತಿನ್ನುವ ಅನ್ನವನ್ನು ಮರೆತು ಮಹಿಳೆಯರೇಕೆ ಅಲ್ಲಿ ಕುಳಿತುಕೊಳ್ಳಬೇಕು ಎನ್ನುವ ಪ್ರಶ್ನೆ ಕೇಳುವ ಸ್ಥಿತಿ ಇದೆ.

ಸಮತೆಯ ತಲೆಮಾರಿನ ಸೃಷ್ಟಿಗೆ ಸಮಾಜವನ್ನು ಸಜ್ಜುಗೊಳಿಸಬೇಕಿದೆ.

ಆದರೆ ನಾವು ಇತಿಹಾಸ ಸೃಷ್ಟಿಸಿದವರು. ಶತಮಾನದ ಹಿಂದೆಯೇ ಅತಿಮಾನವರಂತೆ ವರ್ತಿಸಿದವರಿಗೆ ಪ್ರತಿಭಟನೆಯ ಮೂಲಕ ಬಿಸಿ ಹತ್ತಿಸಿದವರು. ವಿಶ್ವವೇ ಒಪ್ಪಿಕೊಂಡ ಇತಿಹಾಸವನ್ನು 1857ರಲ್ಲಿಯೇ ಬರೆದವರು.

ಹೋರಾಟದ ದಾರಿಯಲ್ಲಿ ನಂಬಿಕೆ ಇಟ್ಟು ಪ್ರತಿಭಟನೆಯ ಹಕ್ಕನ್ನು ನೀಡಿದ ಸಂವಿಧಾನದ ಬೆಳಕಿನಲ್ಲಿ ಜನ ವಿರೋಧೀ ಕೃಷಿ, ಕಾರ್ಮಿಕ ಕಾಯ್ದೆಗಳ ವಿರುದ್ಧ ದಣಿವರಿಯದ ಹೋರಾಟಕ್ಕೆ ದುಡಿಯುವ ವರ್ಗ ಇಳಿದಿದೆ. ಸಂಘರ್ಷದ ರಣ ಕಹಳೆ ದೇಶದಾದ್ಯಂತ ಮೊಳಗಿದೆ. ಶ್ರಮಿಕರಿಗೆ ಕಳೆದುಕೊಳ್ಳಲಿರುವುದು ದಾಸ್ಯದ ಶ್ರಂಖಲೆ ಮಾತ್ರ. ಚರಿತ್ರೆ ಪುನರಾವರ್ತನೆಯಾಗುವುದು ಎಂಬ ನಾಣ್ಣುಡಿ ಶ್ರಮಜೀವಿಗಳ ಸಂಘರ್ಷದ ವಿಷಯದಲ್ಲಿ ಸುಳ್ಳಾಗುವುದಿಲ್ಲ.

ಇದರ ಜೊತೆಯೇ ಗಾರ್ಮೆಂಟ್ ಮಹಿಳೆಯರೂ ಸೇರಿದಂತೆ ಅಸಂಘಟಿತ ವಲಯದ ಎಲ್ಲ ಕಾರ್ಮಿಕರು ಸರಕಾರದ ಕ್ರೂರ ಕೈಗಾರಿಕಾ ನೀತಿಯ ಬಲಿಪಶುಗಳಾಗುತ್ತಿದ್ದಾರೆ. ಯೋಜನಾ ಕಾರ್ಮಿಕರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿರುವ ಸರಕಾರಗಳು ಕೊವಿಡ್ ವೈರಾಣುವಿನೆದುರು ಬರಿಗೈಯಲ್ಲಿ ಅವರನ್ನು ಸೆಣಸಲು ಬಿಟ್ಟಿದೆ. ಬಾಹ್ಯೋಪಚಾರದ ಮುಂಚೂಣಿ ಸೇನಾನಿಗಳೆಂಬ ಬಿರುದು ಬಾವಲಿಗಳನ್ನು ಕೊಟ್ಟು ಜೀವ ಬಲಿತೆಗೆದುಕೊಂಡ ರಾಕ್ಷಸೀ ಪೃವೃತ್ತಿಯನ್ನೂ ಕಂಡಿದ್ದೇವೆ.

ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು. ಸಂಘರ್ಷದ ದಾರಿಯಲ್ಲಿ ನಡೆಯುವಾಗ ಕಲ್ಲು ಮುಳ್ಳುಗಳು. ಲಾಠಿ ಬೂಟುಗಳು ನಮಗೆ ಹೂ ಹಾಸಿಗೆಯಂತೆ. ವಾಟರ್ ಜೆಟ್ ಗಳು ಮೇಘಮಲ್ಹಾರದಂತೆ. ಕಾಮ್ರೆಡ್ ಕ್ಲಾರಾಗೊಂದು ಲಾಲ್ ಸಲಾಂ. ಹತ್ತಿ ಗಿರಣಿಯ ಹುತಾತ್ಮ ಸೋದರಿಯರೇ, ನೀವು ಚಿರಾಯುಗಳು. ಹೋರಾಟದ ದಾರಿಯಲ್ಲಿ ನಮಗೆ ನಿಮ್ಮ ಹೆಜ್ಜೆ ಗುರುತುಗಳಿವೆ. ಸಮತೆಯ ತಲೆಮಾರಿನ ಸೃಷ್ಟಿಗೆ ಸಮಾಜವನ್ನು ಸಜ್ಜುಗೊಳಿಸಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *