ಪಿ. ಲಂಕೇಶ್‌ – ಒಬ್ಬ ಅತ್ಯಂತ ಕಟು ವಿಮರ್ಶಕ

ಮಾರ್ಚ್‌ 08, 1935ರಲ್ಲಿ ಪಿ.ಲಂಕೇಶ್‌ ರವರು ಹುಟ್ಟಿದ ದಿನ. ಅವರನ್ನು ಹಲವು ಪ್ರಕಾರಗಳಲ್ಲಿ ಗುರುತಿಸಲಾಗುತ್ತದೆ. ಅವರನ್ನು ಕೃಷಿಕ, ಅಧ್ಯಾಪಕ, ಲೇಖಕ, ಸಾಹಿತಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಅನುವಾದಕ, ಅಂಕಣಕಾರ, ಪತ್ರಕರ್ತ, ಸಂಪಾದಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಹಾಗೆಯೇ ಒಂದಷ್ಟು ದಿನ ರಾಜಕಾರಣಿಯಾಗಿ ಇವರನ್ನು ಹಲವು ಸ್ಥಾನಗಳಲ್ಲಿ ಗುರುತಿಸಬಹುದು.

ಎರಡು ದಶಕಗಳ ಕಾಲ ಕನ್ನಡ ನಾಡಿನ ಮನಃಸ್ಥಿತಿಯನ್ನು ಜಾಗೃತವಾಗಿಡುವಷ್ಟು ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರು. ಕನ್ನಡ ನಾಡಿನ ಅನೇಕರು ಅವರನ್ನು ಲಂಕೇಶ್‌ ಎಂದು ಗುರುತಿಸದೆ ಮೇಷ್ಟ್ರು ಎಂದೇ ಸಂಬೋಧಿಸುವರು.

ಪಿ.ಲಂಕೇಶ್‌ ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೊನಗನಹಳ್ಳಿಯಲ್ಲಿ. ಇವರ ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಇಂಗ್ಲೀಷಿನಲ್ಲಿ ಎಂ.ಎ. ಪದವೀಧರರಾದ ಇವರು, 1959 ರಿಂದ 1978ರವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಅಧ್ಯಾಪಕ ವೃತ್ತಿಗೆ ರಾಜೀನಾಮೆ ಸಲ್ಲಿಸಿ ʻಲಂಕೇಶ್‌ ಪತ್ರಿಕೆʼ ಪ್ರಾರಂಭ ಮಾಡುವ ಮೂಲಕ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು.

ಇಡೀ ಮಾಧ್ಯಮ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ʻಲಂಕೇಶ್‌ ಪತ್ರಿಕೆʼ ದೊಡ್ಡ ಹೆಸರುವಾಸಿ ಪಡೆದುಕೊಂಡಿತು. ಲಂಕೇಶ್‌ ರವರು ತಮ್ಮ ಬರಹಗಳ ಮೂಲಕ ಜನಮಾನಸದಲ್ಲಿ ʻಜಾಣ ಜಾಣೆಯರʼ ಪತ್ರಿಕೆಯೆಂದೆ ಬಿಂಬಿಸಿದರು. ಪ್ರಖಾರ ಚಿಂತನೆ ಮತ್ತು ನಿಷ್ಠುರ ವ್ಯಕ್ತಿತ್ವ ಇವರು ಸಾಹಿತ್ಯ, ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಆಳಿದರು.

ಅವರ ಯಾವುದೇ ಬರಹ ವಿದ್ದರೂ ಎಂದಿಗೂ ಸಹ ಅವರು ಅತ್ಯಂತ ವಿರ್ಮಶಾತ್ಮಕವಾಗಿ ಇರುತ್ತಿದ್ದವು. ಎಲ್ಲವೂ ಸಹ ಸಾಕಷ್ಟು ಪೂರ್ವ ಯೋಜಿತ ತಯಾರಿಗಳನ್ನು ಕೈಗೊಳ್ಳುವ ಮೂಲಕ ಅವರ ಲೇಖನಗಳನ್ನು ಓದಿದಾಗ ತಿಳಿಯುತ್ತದೆ. ಗುಂಡೂರಾಯ ರಾಜ್ಯ ಸರಕಾರವಿದ್ದಾಗ ಪತ್ರಿಕೆಯ ಬರಹಗಳಿಗೆ ಬರ ಇರುತ್ತಿರಲಿಲ್ಲ. ದಿನಕ್ಕೊಂದು ಹಗರಣಗಳು, ದಿನಕ್ಕೊಂದು ಸುದ್ದಿಗಳು ಸದಾ ಚಾಲ್ತಿಯಲ್ಲಿರುತ್ತಿತ್ತು.

ಬರಹಗಾರರಿಗೆ ʻಲಂಕೇಶ್‌ ಪತ್ರಿಕೆ ಇರುವುದು ಎಂಟು ಪುಟದ್ದು, ಯಾವುದೇ ಬರಹ ಬರೆಯುವುದಿದ್ದರೂ ನೇರಾನೇರ ಬರವಣಿಗೆ ಇರಲಿ. ಸುತ್ತಿಬಳಸಿ ಉದ್ದುದ್ದ ವಾಗಿ ಬರೆಯಬೇಡಿ ಎನ್ನುತ್ತಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಹೆಸರುವಾಸಿಯಾಗಿರುವ ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ʻಲಂಕೇಶ್ ಪತ್ರಿಕೆʼ ಯಲ್ಲಿ ತೊಡಗಿಸಿಕೊಂಡವರು.

ಚಲನಚಿತ್ರಗಳಲ್ಲಿ ನಿರ್ದೇಶಕರಾಗಿ, ನಟರಾಗಿಯೂ ತೊಡಗಿಸಿಕೊಂಡ ಇವರು ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು, ಖಂಡವಿದೆ ಕೊ ಮಾಂಸವಿದೆ ಕೊ ಅವರು ನಿರ್ದೇಶಿಸಿದ ಚಿತ್ರಗಳು. ʻಸಂಸ್ಕಾರʼ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ‘ಎಲ್ಲಿಂದಲೋ ಬಂದರು’ ಚಲನಚಿತ್ರದಲ್ಲೂ ನಟಿಸಿದ್ದಾರೆ.

ರಚಿಸಿದ ಕೃತಿಗಳು

ಇವರು ಬರೆದ ಮೊದಲ ಕಥೆ ‘ವಾಮನ’ (೧೯೫೮),

ಕಥಾ ಸಂಗ್ರಹ :– ಕೆರೆಯ ನೀರನು ಕೆರೆಗೆ ಚೆಲ್ಲಿ(೧೯೬೩), ನಾನಲ್ಲ(೧೯೭೦), ಉಮಾಪತಿ ಯ ಸ್ಕಾಲರ್ ಶಿಪ್ ಯಾತ್ರೆ(೧೯೭೩), ಕಲ್ಲು ಕರಗುವ ಸಮಯ(೧೯೯೦), ಉಲ್ಲಂಘನೆ(೧೯೯೬), ಮಂಜು ಕವಿದ ಸಂಜೆ(೨೦೦೧), ಸಮಗ್ರ ಕಥೆಗಳು (ಸಮಗ್ರ ಸಂಕಲನ)

 ಕಾದಂಬರಿಗಳು :– ಬಿರುಕು (೧೯೬೭), ಮುಸ್ಸಂಜೆಯ ಕಥಾಪ್ರಸಂಗ (೧೯೭೮), ಅಕ್ಕ (೧೯೯೧)

ಅಂಕಣ ಬರಹಗಳ ಸಂಗ್ರಹ :– ಪ್ರಸ್ತುತ (೧೯೭೦), ಕಂಡದ್ದು ಕಂಡಹಾಗೆ (೧೯೭೫), ಟೀಕೆ ಟಿಪ್ಪಣಿ – 1 (೧೯೯೭), ಟೀಕೆ ಟಿಪ್ಪಣಿ – 2 (೧೯೯೭), ಟೀಕೆ ಟಿಪ್ಪಣಿ – 3 (೨೦೦೮), ರೂಪಕ ಲೇಖಕರು (೨೦೦೮), ಸಾಹಿತಿ ಸಾಹಿತ್ಯ ವಿಮರ್ಶೆ (೨೦೦೮), ಮರೆಯುವ ಮುನ್ನ – ಸಂಗ್ರಹ 1 (೨೦೦೯), ಈ ನರಕ ಈ ಪುಲಕ (೨೦೦೯), ಮರೆಯುವ ಮುನ್ನ – ಸಂಗ್ರಹ 2 (೨೦೧೦), ಮರೆಯುವ ಮುನ್ನ – ಸಂಗ್ರಹ 3, ಮನಕೆ ಕಾರಂಜಿಯ ಸ್ಪರ್ಶ (೨೦೧೦), ಆಟ-ಜೂಜು-ಮೋಜು!, ಪಾಂಚಾಲಿ

ಕವನ ಸಂಗ್ರಹಗಳು :– ಬಿಚ್ಚು, ನೀಲು ಕಾವ್ಯ – ಸಂಗ್ರಹ 1, ನೀಲು ಕಾವ್ಯ – ಸಂಗ್ರಹ 2, ನೀಲು ಕಾವ್ಯ – ಸಂಗ್ರಹ 3, ಚಿತ್ರ ಸಮೂಹ (ಸಮಗ್ರ ಸಂಕಲನ), ಅಕ್ಷರ ಹೊಸ ಕಾವ್ಯ, ಪಾಪದ ಹೂಗಳು, ತಲೆಮಾರು,

ಆತ್ಮಕಥೆ :- ಹುಳಿ ಮಾವಿನಮರ

ನಾಟಕಗಳು : ಬಿರುಕು (೧೯೭೩), ಈಡಿಪಸ್ ಮತ್ತು ಅಂತಿಗೊನೆ (೧೯೭೧), ಗುಣಮುಖ (೧೯೯೩), ನನ್ನ ತಂಗಿಗೊಂದು ಗಂಡು ಕೊಡಿ (೧೯೬೩), ತೆರೆಗಳು (೧೯೬೪), ಟಿ. ಪ್ರಸನ್ನನ ಗೃಹಸ್ಥಾಶ್ರಮ (೧೯೬೪), ಕ್ರಾಂತಿ ಬಂತು ಕ್ರಾಂತಿ (೧೯೬೫), ಸಂಕ್ರಾಂತಿ (೧೯೭೧),

ಪ್ರಶಸ್ತಿ – ಪುರಸ್ಕಾರ :

1993 – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -‘ಕಲ್ಲು ಕರಗುವ ಸಮಯ’ – ಸಣ್ಣ ಕತೆಗಳ ಸಂಗ್ರಹ

1977 – ಪಲ್ಲವಿ ಚಲನಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ರಾಷ್ಟ್ರಪ್ರಶಸ್ತಿ

1986 – ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ

ಬಿ.ಎಚ್. ಶ್ರೀಧರ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ

ಸಾಹಿತ್ಯದಲ್ಲಿ ಆಳವಾಗಿ ತೊಡಗಿಕೊಂಡು, ಸಾಹಿತ್ಯದ ಇತಿಹಾಸದಲ್ಲಿ ಮಹತ್ವದ ಲೇಖಕರಾಗಿ ಬಹುಮುಖಿ ವ್ಯಕ್ತಿತ್ವ ಲಂಕೇಶ್‌ 25.01.2000ನೇ ಇಸವಿಯ ನಂತರ ದೈಹಿಕವಾಗಿ ನಮ್ಮನ್ನಗಲಿದರೂ, ಇಂದಿಗೂ ನೆನಪಿನಿಂದ ಮಾಸದ ವ್ಯಕ್ತಿ.

ಇವರ ಪತ್ನಿ ಇಂದಿರಮ್ಮ ಲಂಕೇಶ್‌ ಹಾಗೂ ಗೌರಿ ಲಂಕೇಶ್‌, ಕವಿತಾ ಲಂಕೇಶ್‌, ಇಂದ್ರಜಿತ್‌ ಲಂಕೇಶ್‌ ಮೂರು ಜನ ಮಕ್ಕಳು.

 

Donate Janashakthi Media

Leave a Reply

Your email address will not be published. Required fields are marked *