ಬೆಂಗಳೂರು : ರಾಜ್ಯದಲ್ಲಿ ದಲಿತರ ಸ್ಥಿತಿಗಳು ಅತ್ಯಂತ ಶೋಷನೀಯವಾಗಿ ಏಕೆಂದರೆ, ಸರ್ಕಾರ ತನ್ನ ಬಜೆಟ್ನಲ್ಲಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಸ್ಸಿಎಸ್ಪಿ/ ಟಿಎಸ್ಪಿ ಉಪ ಯೋಜನೆಗಳ ಮೂಲಕ ಮೀಸಲಿಟ್ಟ ಹಣದಲ್ಲಿ ಶೇ.50ಕ್ಕಿಂತ ಕಡಿಮೆ ಹಣ ಮಾತ್ರ ಖರ್ಚಾಗಿದ್ದು ಉಳಿದ ಹಣವನ್ನು ಡೀಮ್ಡ್ ಮೂಲಕ ಹಣವನ್ನು ಹಿಂಪಡೆಯುವುದನ್ನು ನಿಲ್ಲಿಸಬೇಕೆಂದು ದಲಿತ ಹಕ್ಕುಗಳ ಸಮಿತಿ(ಡಿಹೆಚ್ಎಸ್) ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ ಆರೋಪಿಸಿದರು.
ಸರ್ಕಾರವು ರೂಪಿಸುವ ಹಲವಾರು ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಕ್ಕೆ ಮೀಸಲಿಟ್ಟ ಕೋಟ್ಯಾಂತರ ರೂ.ಗಳ ಹಣ ಸಮರ್ಪಕವಾಗಿ ಬಳಕೆಯಾಗದೆ ಇರುವ ಹಿನ್ನೆಯಲ್ಲಿ ನಿರಂತರ ಹೋರಾಟದ ಪರಿಣಾಮವಾಗಿ 2013ರಲ್ಲಿ ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಉಪ ಯೋಜನೆಯನ್ನು ದಲಿತರಿಗಾಗಿ ಜಾರಿಗೊಳಿಸಲಾಗಿತ್ತು.
2020-2021ನೇ ಸಾಲಿನ ಬಜೆಟ್ನಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಉಪ ಯೋಜನೆಗೆ ರೂ.27,699 ಕೋಟಿ ರೂ.ಗಳ ಹಣವನ್ನು ಒದಗಿಸುವುದಾಗಿ ನಿರ್ಧರಿಸಿತು. ಆದರೆ ಪರಿಷ್ಕೃತಗೊಂಡು ಅಂತಿಮವಾಗಿ ರೂ.25,616 ಕೋಟಿ ರೂ.ಗಳ ಹಣವನ್ನು ಮೀಸಲಿಟ್ಟಿತು. ಈ ಹಣದಲ್ಲಿ 2020ರ ಡಿಸೆಂಬರ್ ಅಂತ್ಯದವರೆಗೆ ಕೇವಲ ರೂ.12,154 ಕೋಟಿ ರೂ.ಗಳ (ಅಂದರೆ ಶೇ.47.45) ಹಣ ಮಾತ್ರ ಬಳಕೆಯಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟ 3,105 ಕೋಟಿ ರೂ.ಗಳ ಹಣದಲ್ಲಿ 1,355 ಕೋಟಿ ರೂ. (ಶೇ.43.6ರಷ್ಟು) ಹಣ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ರೂ.1341 ಕೋಟಿಯಲ್ಲಿ 585 ಕೋಟಿ ರೂ. ಹಣ ಮಾತ್ರ (ಶೇ.,43.67ರಷ್ಟು) ವೆಚ್ಚವಾಗಿದೆ. ಎಸ್ಸಿಎಸ್ಪಿ/ ಟಿಎಸ್ಪಿ ಉಪ ಯೋಜನೆಗೆ ನಗರಾಭಿವೃದ್ಧಿ ಹಾಗೂ ನೀರಾವರಿ ಇಲಾಖೆಯಲ್ಲಿ ಮೀಸಲಿಟ್ಟ ಕ್ರಮವಾಗಿ 170 ಹಾಗೂ 74.13 ಕೋಟಿ ರೂ.ಗಳ ಹಣವನ್ನು ಅನ್ಯ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗಿದೆ.
ದಲಿತರಿಗೆ ಭೂ ಒಡೆತನ ಯೋಜನೆ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 11,723 ಅರ್ಜಿಗಳು ಸಲ್ಲಿಕೆಯಾಗಿದ್ದು ಇಂದಿಗೂ ಹಲವರಿಗೆ ಭೂ ಒಡೆತನ ಮಂಜೂರಾಗಿಲ್ಲ. ಭೂ ಒಡೆತನ ಯೋಜನೆಯಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟು ವಿವರಗಳು ಹೊರಬೀಳುತ್ತಿದೆ. ಆದ್ದರಿಂದ ಕಾಯಿದೆಯ 7(ಡಿ) ಕಲಂ ರದ್ದುಗೊಳಿಸಿ, ಯೋಜನೆಯನ್ನು ಏಕಗವಾಕ್ಷಿ ಮೂಲಕ ಜಾರಿಗೊಳಿಸಿ ದುರುಪಯೋಗ ತಡೆಗಟ್ಟಬೇಕೆಂದು ಒತ್ತಾಯಿಸಿದರು.
ನೀರಾವರಿ ಕೊಳವೆ ಬಾವಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿದ ಗಂಗಾ ಕಲ್ಯಾಣ ಯೋಜನೆಗೆ 2018-2019ರ ಸಾಲಿನಲ್ಲಿ 42,471 ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಮೀಸಲಿಟ್ಟ ಹಣ ಕೇವಲ 124 ಕೋಟಿ ರೂ.ಗಳ ಮಾತ್ರ. ಈಗ ಅರ್ಜಿ ಸಲ್ಲಿಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ಯೋಜನೆ ನೆನೆಗುದಿದೆ ಬಿದ್ದಿದೆ. ಅಲ್ಲದೆ, ಗಂಗಾ ಕಲ್ಯಾಣ ಯೋಜನೆಯ ವೈಯುಕ್ತಿಕ ನೀರಾವರಿ ಕೊಳವೆ ಬಾವಿಗಾಗಿ 2019-2020ನೇ ಸಾಲಿನಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ನಿಗಮ -15,230 ಅರ್ಜಿಗಳು, ಕರ್ನಾಟಕ ಆದಿ ಜಾಂಬುವ ಅಭಿವೃದ್ಧಿ ನಿಗಮ – 9,587 ಅರ್ಜಿಗಳು, ಕರ್ನಾಟಕ ತಾಂಡ ನಿಗಮ – 5,954 ಅರ್ಜಿಗಳು ಒಟ್ಟಾರೆಯಾಗಿ 30,769 ಅರ್ಜಗಳು ಸಲ್ಲಿಕೆಯಾಗಿದ್ದರೂ ಸಹ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಪರಿಹಾರ ದೊರಕದೆ ಹಾಗೆ ಉಳಿದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ 2021-2022ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ದಲಿತರಿಗಾಗಿ ಹೆಚ್ಚಿನ ಅನುದಾಗಳನ್ನು ಬಿಡುಗಡೆ ಮಾಡಬೇಕು, ಬಾಕಿ ಉಳಿದಿರುವ ಯೋಜನೆಗಳನ್ನು ಫಲಾನುಭವಿಗಳಿಗೆ ಕೂಡಲೇ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ (ಡಿಹೆಚ್ಎಸ್) ವತಿಯಿಂದ ಮಾರ್ಚ್ 03, 2021ರಂದು ದಲಿತರಿಗೆ ಭೂಮಿ, ವಸತಿ, ಉದ್ಯೋಗಕ್ಕಾಗಿ ಆಗ್ರಹಿಸಿ ಬೃಹತ್ ವಿಧಾನಸೌಧ ಚಲೋ ಮೂಲಕ ಸರ್ಕಾರವನ್ನು ಒತ್ತಾಯಿಸಲು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸರ್ಕಾರವನ್ನು ಎಚ್ಚರಗೊಳಿಸಲಿದ್ದಾರೆ ಎಂದು ಗೋಪಾಲಕೃಷ್ಣ ಅರಳಹಳ್ಳಿರವರು ಹೇಳಿಕೆಯನ್ನು ನೀಡಿದರು.