ಟೋಲ್ ರಸ್ತೆ ಬಳಸಲು ಇಚ್ಚಿಸದವರಿಗಾಗಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ಖಾಸಗಿ ಕಂಪೆನಿಗಳ ಮೇಲಿದೆ. ಆದರೆ ಬಹುತೇಕ ಕಡೆ ಪರ್ಯಾಯ ರಸ್ತೆಗಳಿಲ್ಲ, ನಿರ್ವಹಣೆ ಕಳಪೆಯಾಗಿದೆ. ನಿಮಗೆ ಇಷ್ಟ ಇರಲಿ ಬಿಡಲಿ ಟೋಲ್ ರಸ್ತೆಯಲ್ಲೇ ಹಾದು ಹೋಗಬೇಕು. ಸುಂಕ ಪಾವತಿಸಲೇಬೇಕು. ಎರಡು ವರ್ಷಕ್ಕೊಮ್ಮೆ ಶುಲ್ಕವನ್ನು ಪರಿಷ್ಕರಿಸಲು ಅವಕಾಶ ಇದೆ.
– ಉಮೇಶ್ ಕೋಲಿಗೆರೆ, ಪತ್ರಕರ್ತರು
ವಾಜಪೇಯಿ ಸರ್ಕಾರಕ್ಕೂ ಮೊದಲು ಕೇಂದ್ರ ಭೂ ಸಾರಿಗೆ, ಹೆದ್ದಾರಿ ಖಾತೆ ನಮ್ಮ ರಾಜ್ಯದ ಮುಜರಾಯಿ ಖಾತೆಯಂತಿತ್ತು. ಸುವರ್ಣ ಚತುಷ್ಪತ ಯೋಜನೆ ಜಾರಿಯಾಗಿ ಸುಂಕ ವಸೂಲಿ ಆರಂಭವಾಗುತ್ತಿದ್ದಂತೆ ಕೇಳುವವರಿಲ್ಲದ ಖಾತೆಗೆ ರಾಜಯೋಗ ಬಂದಿದೆ.
ಬಿ.ಸಿ.ಖಂಡೂರಿಯಂತಹವರು ನಿರ್ವಹಿಸಿದ ಖಾತೆಯಿಂದು ನಿತೀನ್ ಗಡ್ಕರಿಯಂತಹ ಪ್ರಭಾವಿಗಳ ಪಾಲಾಗಿದೆ. ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಸುವರ್ಣ ಚತುಷ್ಪತ ಯೋಜನೆ ಜಾರಿಯಾಗುವ ವೇಳೆ ಬಹಳಷ್ಟು ಮಂದಿ ಆಕ್ಷೇಪ ವ್ಯಕ್ತ ಪಡಿಸಿದ್ದರು. ನಮ್ಮದೇ ಜಮೀನು, ನಮ್ಮದೇ ರಸ್ತೆ. ದುಡ್ಡು ಕೊಟ್ಟು ಯಾಕೆ ಓಡಾಡಬೇಕು ಎಂಬ ಪ್ರಶ್ನೆ ಕೇಳಿಬಂದಿದ್ದವು. ಆದರೆ ಆ ಧ್ವನಿಗಳು ಕ್ಷೀಣವಾಗಿದ್ದವು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಈಗ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರ ಬದುಕು ಬಂಗಾರವಾಗಲಿದೆ ಎಂದು ಭ್ರಮೆ ಹುಟ್ಟಿಸಿದಂತೆ ಆಗ ಸುವರ್ಣ ಚತುಷ್ಪತ ರಸ್ತೆ ಜನರ ಭಾಗ್ಯದ ಬಾಗಿಲು ತೆರೆದು ಬಿಡುತ್ತದೆ ಎಂದು ಬಿಂಬಿಸಲಾಯಿತು. ಇಂಡಿಯಾ ಶೈನಿಂಗ್ ಅಬ್ಬರದಲ್ಲಿ ವಿರೋಧಿಸುವವರ ಧ್ವನಿಗಳು ನಗೆಪಾಟಲಿಗೀಡಾದ್ದವು. ಸಂವೃದ್ಧ-ಸುಖಿ ಸಾಮಾಜ್ರ್ಯ ನಿರ್ಮಾಣದ ಹೊತ್ತಿನಲ್ಲಿ ಅಪಸ್ವರ ಎತ್ತುವವರು ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲಾಯಿತು.
ಕಿರಿದಾಗಿದ್ದಾಗಿದ್ದ ರಸ್ತೆಗಳಲ್ಲಿ ದಿನನಿತ್ಯ ಅಪಘಾತಗಳಿಂದಾಗುವ ಸಾವುಗಳನ್ನು ಕಣ್ಣಾರೆ ಕಂಡವರು, ಸಂಚಾರ ದಟ್ಟಣೆಯಿಂದ 60 ಕಿ.ಮೀ.ರಸ್ತೆಯನ್ನು ದಾಟಲು ನಾಲ್ಕು ಗಂಟೆ ಸಮಯ ವ್ಯರ್ಥ ಮಾಡಿದ್ದವರು…. ರಸ್ತೆ ಅಗಲೀಕರಣ ಮತ್ತು ಪುನರ್ ನಿರ್ಮಾಣವನ್ನು ಬೆಂಬಲಿಸಿದರು. ಅವು ಆಗಿನ ಅಗತ್ಯ ಕೂಡ ಆಗಿದ್ದವು. ಹೊಸ ಯೋಜನೆ ಆಗಿದ್ದರಿಂದ ಗುತ್ತಿಗೆದಾರರು ಕೂಡ ಒಂದುವರೆ ವರ್ಷಕ್ಕೆ ಮುಗಿಸಬೇಕಾದ ಕಾಮಗಾರಿಯನ್ನ ವರ್ಷಕ್ಕೆ ಮುಗಿಸಿದರು. ಯೋಜನೆ ಮುಗಿದ ತಕ್ಷಣ ಟೋಲ್ ಹಾಕಿ ಸುಂಕ ಸಂಗ್ರಹಿಸುವ ಧಾವಂತ ಅವರದಾಗಿತ್ತು. ಕಾಮಗಾರಿಯ ವೇಗ ಕಂಡು ಜನ ಮರುಳಾದರು. ವಿರೋಧಿಗಳ ಧ್ವನಿ ಮತ್ತಷ್ಟು ಕ್ಷೀಣವಾಯಿತು.
ರಸ್ತೆ ಕೆಲಸ ಮುಗಿಯಿತು ಸುಂಕ ವಸೂಲಿ ಶುರು ಆಯ್ತು. ಸಂಭ್ರಮ ಪಟ್ಟವರು ಸುಂಕ ಕಟ್ಟುವಾಗ ಸಿಡಿಮಿಡಿಗೊಂಡರು, ಕಣ್ಣುಬಾಯಿ ಬಿಟ್ಟರು, ಗಲಾಟೆ ಮಾಡಿದ್ರು. ಟೋಲ್ ಕಂಪನಿಗಳು ಸ್ಥಳೀಯವಾಗಿ ಗಲಾಟೆಯಲ್ಲಿ ಪಳಗಿದ್ದವರನ್ನು ನೇಮಿಸಿಕೊಂಡು ಬೌನ್ಸರ್ ಗಳಂತೆ ಬಳಸಿದವು. ಗಲಾಟೆಯನ್ನು ಹತ್ತಿಕ್ಕಿದವು. ಸರ್ಕಾರಿ ಒಪ್ಪಂದ ಎಂಬ ನೆಪದಿಂದ ಪೊಲೀಸರು ಟೋಲ್ ಕಂಪನಿಗಳ ರಕ್ಷಣೆಗೆ ನಿಂತರು. ಸ್ವಲ್ಪ ದಿನ ಗಲಾಟೆ ಮಾಡಿದ ಜನ ಕ್ರಮೇಣ ಹೊಂದಿಕೊಂಡರು. ಸುಂಕ ಕೊಡುವುದು ತಮ್ಮ ಕರ್ತವ ಎಂದುಕೊಂಡು ಬಿಟ್ಟರು. ನಿರ್ಮಾಣ, ನಿರ್ವಹಣೆ, ಹಸ್ತಾಂತರ ಕರಾರಿನ ಮೇಲೆ ರಸ್ತೆಯನ್ನು ಗುತ್ತಿಗೆ ನೀಡಲಾಗಿತ್ತು. ನಿರ್ಮಾಣ, ನಿರ್ವಹಣೆಯ ನಂತರ ಖಾಸಗಿ ಕಂಪನಿಗಳು ಹಸ್ತಾಂತರವನ್ನೇ ಮರೆತು ಬಿಟ್ಟಿವೆ. ಸರ್ಕಾರಗಳು ಕೂಡ ಕಂಪೆನಿಗಳ ಮರೆವನ್ನು ಅನುಸರಿಸುತ್ತಿವೆ.
ಆರಂಭದಲ್ಲಿ ಕೆಲವು ರಸ್ತೆಗಳನ್ನು 18 ವರ್ಷಗಳ ಅವಧಿವರೆಗೂ ಗುತ್ತಿಗೆ ನೀಡಲಾಗಿತ್ತು. ಟೋಲ್ ಶುಲ್ಕ ವಸೂಲಿ ಆರಂಭಿಸಿದ 12 ವರ್ಷಕ್ಕೆ ರಸ್ತೆ ನಿರ್ಮಾಣ ವೆಚ್ಚ ವಸೂಲಿಯಾಗಲಿದೆ, ಬಾಕಿ ಆರು ವರ್ಷ ನಿರ್ವಹಣೆಯ ಒಟ್ಟಾರೆ ವೆಚ್ಚವನ್ನು ವಸೂಲಿ ಮಾಡಿಕೊಳ್ಳಬಹುದು ಎಂಬ ಅಂದಾಜಿತ್ತು. ಗುತ್ತಿಗೆ ಅವಧಿ ಕಳೆದ ವರ್ಷ ಮುಗಿದಿದೆ. ಸರ್ಕಾರಗಳು ಈ ಅವಧಿಯನ್ನು ಸದ್ದಿಲ್ಲದೆ ಈಗ ಮತ್ತೆ 30 ವರ್ಷಗಳಿಗೆ ನವೀಕರಿಸಿಕೊಟ್ಟಿದೆ.
ಆರಂಭದಲ್ಲಿ ಹದಿನೆಂಟು ವರ್ಷಗಳವರಗೆ ಗುತ್ತಿಗೆ ಕೊಟ್ಟಾಗ ಹೊಸ ರಸ್ತೆ ನಿರ್ಮಿಸುವ ಜವಾಬ್ದಾರಿ ಇತ್ತು. ಹಾಲಿ ಇದ್ದ ರಸ್ತೆಯ ಅಕ್ಕ ಪಕ್ಕ ಮರ ಕಡಿದು, ಅಗಲೀಕರಣ ಮಾಡಿ, ಅಗತ್ಯ ಇರುವ ಕಡೆ ಸೇತುವೆಗಳನ್ನು ನಿರ್ಮಿಸಿ, ಟಾರ್ ಹಾಕಿದ್ದು ಬಿಟ್ಟರೆ ಖಾಸಗಿ ಕಂಪೆನಿಗಳು ಬೇರೆನು ಮಾಡಿಲ್ಲ. ನಿಯಮದ ಪ್ರಕಾರ ಸುಸಜ್ಜಿತ ಪರ್ಯಾಯ ರಸ್ತೆ ನಿರ್ಮಿಸಿಲ್ಲ.
ರಸ್ತೆಗೆ ಅಗತ್ಯವಾದ ಭೂಮಿಯನ್ನು ಸರ್ಕಾರವೇ ಸ್ವಾಧೀನ ಮಾಡಿಕೊಟ್ಟಿದೆ. ಈಗ ಮೂವತ್ತು ವರ್ಷ ಗುತ್ತಿಗೆ ನವೀಕರಿಸುವಾಗ ರಸ್ತೆ ಅಗಲೀಕರಣ ಸೇರಿದಂತೆ ಯಾವ ಹೆಚ್ಚುವರಿ ವೆಚ್ಚಗಳು ಇರಲಿಲ್ಲ. ಕಿತ್ತು ಹೋದ ರಸ್ತೆ ಒಂದಿಷ್ಟು ತೇಪೆ ಹಾಕಿದರೆ ಸಾಕಿದೆ, ಬಹಳಷ್ಟು ಕಡೆ ಅದನ್ನು ಸರಿಯಾಗಿ ಮಾಡುತ್ತಿಲ್ಲ. ಗಲಾಟೆ ಕಡಿಮೆಯಾಗುತ್ತಿದ್ದಂತೆ ಬೌನ್ಸರ್ ಗಳಾಗಿ ಬಳಕೆಯಾಗಿದ್ದ ಸ್ಥಳೀಯರನ್ನು ಮನೆಗೆ ಕಳುಹಿಸಲಾಗಿದೆ. ಈಗ ವಸೂಲಿಯಾಗುವ ದುಡ್ಡೇಲ್ಲಾ ಲಾಭವೇ ಆಗಿದೆ. ದೇಶದಲ್ಲಿ ಸರಾಸರಿ ದಿನವೊಂದಕ್ಕೆ 80 ಕೋಟಿ ರೂಪಾಯಿಗೂ ಹೆಚ್ಚು ಟೋಲ್ ವಸೂಲಿಯಾಗುತ್ತಿದೆ.
ಟೋಲ್ ರಸ್ತೆ ಬಳಸಲು ಇಚ್ಚಿಸದವರಿಗಾಗಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ಖಾಸಗಿ ಕಂಪೆನಿಗಳ ಮೇಲಿದೆ. ಆದರೆ ಬಹುತೇಕ ಕಡೆ ಪರ್ಯಾಯ ರಸ್ತೆಗಳಿಲ್ಲ, ನಿರ್ವಹಣೆ ಕಳಪೆಯಾಗಿದೆ. ನಿಮಗೆ ಇಷ್ಟ ಇರಲಿ ಬಿಡಲಿ ಟೋಲ್ ರಸ್ತೆಯಲ್ಲೇ ಹಾದು ಹೋಗಬೇಕು. ಸುಂಕ ಪಾವತಿಸಲೇಬೇಕು. ಎರಡು ವರ್ಷಕ್ಕೊಮ್ಮೆ ಶುಲ್ಕವನ್ನು ಪರಿಷ್ಕರಿಸಲು ಅವಕಾಶ ಇದೆ. ರಸ್ತೆ ನಿರ್ಮಾಣ, ನಿರ್ವಹಣೆ ಮತ್ತು ಪ್ರಸಕ್ತ ಹಣದುಬ್ಬರ ಲೆಕ್ಕ ಹಾಕಿ ಶುಲ್ಕ ಪರಿಷ್ಕರಣೆ ಮಾಡಬೇಕೆಂದು ಒಪ್ಪಂದದಲ್ಲಿ ನಮೂದಿಸಲಾಗಿದೆ. ಖಾಸಗಿ ಕಂಪೆನಿಗಳು ಎಷ್ಟು ಸ್ಮಾರ್ಟ್ ಆಗಿವೆ ಎಂದರೆ ಮುಂದಿನ ಐದು ವರ್ಷದ ಹಣದುಬ್ಬರವನ್ನು ಒಮ್ಮೆಲೆ ಅಂದಾಜು ಮಾಡಿ ಶುಲ್ಕ ಏರಿಕೆ ಮಾಡಿ ಬಿಟ್ಟಿವೆ. ಎರಡು ವರ್ಷಕ್ಕೊಮ್ಮೆ ಸುಂಕ ಪರಿಷ್ಕರಣೆಗೆ ಅವಕಾಶ ಇದ್ದರೂ ಐದು ವರ್ಷ ದರ ಹೆಚ್ಚಿಸದೇ ನಷ್ಟ ಅನುಭವಿಸಿಯೇ ರಸ್ತೆ ನಿರ್ವಹಣೆ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿವೆ. ಮತ್ತೆ ಐದು ವರ್ಷಕ್ಕೊಮ್ಮೆ ಮತ್ತೆ ಮುಂದಿನ ಐದು ವರ್ಷದ ಶುಲ್ಕವನ್ನು ಒಮ್ಮೆಲೆ ಹೆಚ್ಚಿಸಿ ಬಿಡುತ್ತವೆ. ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಕೋಲೆ ಬಸವನಂತೆ ಗೋಣು ಆಡಿಸುತ್ತಾರೆ.
ಟೋಲ್ ರಸ್ತೆಗಳು ಆಳುವ ಸರ್ಕಾರಗಳಿಗೆ ಕಲ್ಪವೃಕ್ಷ ಕಾಮಧೇನು ಇದ್ದಂತೆ. ಭ್ರಷ್ಟಚಾರ ರಹಿತವಾದ ಆದಾಯ ತಂದು ಕೊಡುವ ಮೂಲಗಳು. ಅದಕ್ಕಾಗಿಯೇ ಯಾವ ಪಕ್ಷಗಳು ಟೋಲ್ ಗಳ ವಿರುದ್ಧ ಗಟ್ಟಿ ದ್ವನಿ ಎತ್ತುವುದಿಲ್ಲ. ಕಮ್ಯೂನಿಸ್ಟ್ ಆಡಳಿತ ಇರುವ ರಾಜ್ಯಗಳಲ್ಲೂ ಟೋಲ್ ವಸೂಲಿಯಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಿದ್ದ ಕಾಂಗ್ರೆಸ್ ಸರ್ಕಾರ. ವಾಜಪೇಯಿ ಅವರ ಎನ್ ಡಿ ಎ ಸರ್ಕಾರದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ರಸ್ತೆ ಸುಂಕ ವಸೂಲಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಇನ್ನೂ ಮುಂದುವರೆದು ರಾಜ್ಯ ಸರ್ಕಾರಗಳು ರಾಜ್ಯ ಹೆದ್ಧಾರಿ ಮತ್ತು ಜಿಲ್ಲಾ ರಸ್ತೆಗಳಿಗೂ ಟೋಲ್ ಹಾಕಿ ಬಿಟ್ಟಿದೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆಯಿಂದ ಪಕ್ಕದ ರಸ್ತೆಯ ಮನೆಗೆ ಹೋಗಲು ಟೋಲ್ ಕೊಡಬೇಕಾದ ಪರಿಸ್ತಿತಿ ಬರಬಹುದು ಎಂದರೆ ಅತಿರೇಕ ಎನಿಸಲಾರದು.
ಹಿಂದೆ ದಕ್ಷ, ಪ್ರಾಮಾಣಿಕ ಎಂದು ಖ್ಯಾತರಾದ ಇನ್ಸ್ ಪೆಕ್ಟರ್ ಒಬ್ಬರ ಜೊತೆ ಭ್ರಷ್ಟಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಪ್ರಾಮಾಣಿಕ ಲಂಚ ತೆಗೆದುಕೊಳ್ಳುವುದಿಲ್ಲ. ಆದರೆ ಹಣ ಪಡೆಯುವುದಿಲ್ಲ ಎಂದು ಹೇಳಲಾರೆ ಎಂದರು. ಉದಾಹರಣೆಗೆ ಸರ್ಕಾರ ಅಗತ್ಯದಷ್ಟು ಬಸ್ ಗಳನ್ನು ಬಿಡುವುದಿಲ್ಲ. ಪ್ರಯಾಣಕ್ಕೆ ಜನ ಖಾಸಗಿ ಬಸ್ ಗಳನ್ನೇ ಅವಲಂಭಿಸಿರುತ್ತಾರೆ. ಕೆಲವೊಮ್ಮೆ ಒಳಗೆ ಜಾಗ ಸಾಲದೆ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಆ ರೀತಿ ಒವರ್ ಲೋಡ್ ಮಾಡುವುದು ನಿಯಮ ಬಾಹಿರ ಅಂತಹ ಬಸ್ ಗಳನ್ನು ತಡೆದು ದಂಡ ಹಾಕಬೇಕು. ಹಾಕಿದರೆ ಮುಂದೆ ಆ ಬಸ್ಸಿನವ ಹೆಚ್ಚು ಜನರನ್ನು ತುಂಬುವುದಿಲ್ಲ, ಸಾರಿಗೆ ವ್ಯವಸ್ಥೆ ಇಲ್ಲ ಎಂದು ಜನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ, ಕಾನೂನು ಸುವ್ಯವಸ್ಥೆ ಭಂಗವಾಗುತ್ತದೆ. ಟಾಪ್ ಮೇಲೆ ಕುಳಿತವರನ್ನು ಕಂಡು ಕಾಣದೆ ಇದ್ದು ಬಿಟ್ಟರೆ ಆಯ್ತು. ಜನರಿಗೂ ಅನುಕೂಲವಾಗುತ್ತದೆ, ಬಸ್ ಮಾಲೀಕ ಪ್ರತಿ ತಿಂಗಳು ಭಕ್ತಿ ಪೂರ್ವಕವಾಗಿ ತಲುಪಿಸಬೇಕಾದದ್ದನ್ನು ಕೊಟ್ಟು ಹೋಗುತ್ತಾನೆ. ಅದು ಲಂಚ ಅಲ್ಲ. ಒಂದು ವೇಳೆ ನಾವು ಬಸ್ ಮಾಲೀಕನನ್ನು ಬೆದರಿಸಿ ಹಣ ಕಿತ್ತರೆ ಅದು ಲಂಚ ಎಂದು ವ್ಯಾಖ್ಯಾನಿಸಿದರು.
ಒವರ್ ಲೋಡ್ ಹಾಕಿ ಬಸ್ ಅಪಘಾತವಾಗಿ ಜನ ಸತ್ತರೆ ಎಂದು ಪ್ರಶ್ನಿಸಿದೆ. ಆಗ ಒಂದು ಕೇಸು ಜಡಿದು ಒಂದಷ್ಟು ದಿನ ಸುಮ್ಮನಿರಿಸಿದರೆ ಆಯ್ತು. ಉಳಿದಂತೆ ಎಲ್ಲವೂ ಯಥಾರೀತಿ ಮುಂದುವರೆಯಲಿದೆ. ಪ್ರಾಮಾಣಿಕ ಎಂಬ ಬಿರುದು ನನ್ನ ಜೊತೆ ಖಾಯಂ ಉಳಿದುಕೊಳ್ಳಲಿದೆ ಎಂದು ಭುಜ ಕುಣಿಸಿದರು. ಟೋಲ್ ವಿಷಯದಲ್ಲಿ ಸರ್ಕಾರದ ದೋರಣೆಗಳು ಇದೇ ರೀತಿ ಇವೆ. ರಸ್ತೆ ವಿಸ್ತರಣೆ ಮಾಡದಿದ್ದರೆ ಜನ ಶಾಪ ಹಾಕುತ್ತಾರೆ. ಖಾಸಗಿಯವರಿಗೆ ಟೋಲ್ ರಸ್ತೆ ನಿರ್ಮಾಣದ ಗುತ್ತಿಗೆ ಕೊಟ್ಟರೆ ಅವರೇ ಸರ್ಕಾರಕ್ಕೆ ಹಣ ಕೊಡುತ್ತಾರೆ. ಖಾಸಗಿಯವರಿಗೆ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ರಸ್ತೆ ನಿರ್ಮಿಸಿ ಮೂವತ್ತು ನಲವತ್ತು ವರ್ಷ ನಿರಾಯಾಸವಾಗಿ ಸುಂಕ ವಸೂಲಿ ಮಾಡಿಕೊಂಡು ತಲತಲಮಾರಿನವರು ಕುಳಿತು ಉಣ್ಣಬಹುದು. ರಸ್ತೆ ಸರಿ ಇಲ್ಲ ಎಂದು ಜನ ಶಾಪ ಹಾಕುವ ಗೋಳಾಟವು ಇರುವುದಿಲ್ಲ.
ಯಾವುದೇ ಯೋಜನೆಯಾದರೂ ತಾತ್ಕಾಲಿಕ ಲಾಭ ನೋಡುವುದಕ್ಕಿಂತ ದೂರಗಾಮಿ ಪರಿಣಾಮ ನೋಡುವುದು ಬಹಳ ಮುಖ್ಯ. ಅದೇ ರಸ್ತೆಯನ್ನು ಸರ್ಕಾರವೇ ನಿರ್ಮಿಸಿ ಟೋಲ್ ವಸೂಲಿ ಮಾಡಿದ್ದರೆ ಜನರ ದುಡ್ಡು ಬಂಡವಾಳ ಶಾಹಿಗಳ ಬಲಿ ಜಮಾವಣೆಗೊಳ್ಳುವುದು ತಪ್ಪುತ್ತಿತ್ತು. ಫೆಬ್ರವರಿ 15 ರ ಮಧ್ಯರಾತ್ರಿಯಿಂದ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿರುವುದಕ್ಕೆ ಗಲಾಟೆಗಳಾಗುತ್ತಿವೆ. ಜನ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಗೆ ಬಂದು ಬಾಯಿಗೆ ಬಂದಂತೆ ಶಾಪ ಹಾಕುತ್ತಿದ್ದಾರೆ. ಸಾರಿಗೆ ಇಲಾಖೆ ರಸ್ತೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೂ ಟೋಲ್ ಯಾಕೆ ಬೇಕು ಎಂಬ ಪ್ರಶ್ನೆ ಕೇಳುತ್ತಿದ್ದಾರೆ
ಈಗಲಾದರೂ ಫಾಸ್ಟ್ ಟ್ಯಾಗ್ ಇದೆ. ಇನ್ನು ಮುಂದೆ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಫಾಸ್ಟ್ ಟ್ಯಾಗ್ ಇರಲಿ, ಇಲ್ಲದಿರಲಿ ನಿಮ್ಮ ವಾಹನ ಟೋಲ್ ಪಕ್ಕದಲ್ಲಿ ಹಾದು ಹೋದರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳಲಿದೆ. ಸರ್ಕಾರಗಳು ಜನರನ್ನು ಸುಲಿಗೆ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಂತೆ ಒಂದರ ಮೇಲೆ ಒಂದರಂತೆ ನಿಯಮ ರೂಪಿಸುತ್ತಿವೆ. ಆರಂಭದಲ್ಲಿ ಒಂದಿಷ್ಟು ದಿನ ಕೂಗಾಡುವ ಜನ ಕಾಲಕ್ರಮೇಣ ಹೊಂದಿಕೊಳ್ಳುತ್ತಾರೆ.