ಸಂಸತ್ತಿನಲ್ಲಿ ಪ್ರಧಾನಿ ಮಾಡಿದ ಒಂದೂವರೆ ಗಂಟೆಯ ದೀರ್ಘ ಭಾಷಣದಲ್ಲಿ ಎಂದಿನ ಟೊಳ್ಳು ದಾವೆಗಳು, ಅಸಂಬದ್ಧ ಹೇಳಿಕೆಗಳಲ್ಲದೆ ರೈತರನ್ನು, ಅವರನ್ನು ಬೆಂಬಲಿಸುತ್ತಿರುವವರನ್ನು ‘ಆಂದೋಲನ ಜೀವಿಗಳು, ‘ಪರಜೀವಿಗಳು’ ಎಂದರು, ‘ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತಗಳಿಗೆ ಬಲಿಯಾದವರು ಎಂದರು..
ನಮ್ಮ ಅನ್ನದಾತರಾಗಿರುವ ನಮ್ಮ ರೈತರಿಗೆ ಇದಕ್ಕಿಂತ ದೊಡ್ಡ ಅವಮಾನ ಇರಲಿಕ್ಕಿಲ್ಲ. ಅವರು ಉತ್ಪಾದಿಸುವ ಧಾನ್ಯಗಳನ್ನು ತಿಂದು ಪ್ರಧಾನ ಮಂತ್ರಿಗಳೂ ಸೇರಿದಂತೆ ನಾವೆಲ್ಲ ಬದುಕುತ್ತಿದ್ದೇವೆ. ಇಂತಹ ಅನ್ನದಾತರನ್ನು ಪ್ರಧಾನ ಮಂತ್ರಿಗಳು ‘ಆಂದೋಲನ ಜೀವಿ’ಗಳು ಮತ್ತು ‘ಪರಜೀವಿ’ಗಳು ಎಂದು ಹೆಸರಿಸುತ್ತಿದ್ದಾರೆ. ನಿಜವಾಗಿಯೂ ‘ಪರಜೀವಿಗಳು ಅಥವ ಪರಾನ್ನ ಜೀವಿಗಳು ನಮ್ಮ ಅನ್ನದಾತರು ಬೆಳೆದು ಕೊಡುವ ಉತ್ಪನ್ನಗಳ ಮೇಲೆಯೇ ಬದುಕುತ್ತಿರುವವರು.
– ಸೀತಾರಾಮ್ ಯೆಚುರಿ
ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಠರಾವಿಗೆ ಉತ್ತರ ಕೊಡುತ್ತ ಪ್ರಧಾನಿ ಮಾಡಿದ ಒಂದೂವರೆ ಗಂಟೆಯ ದೀರ್ಘ ಭಾಷಣದಲ್ಲಿ ಬಹಳಷ್ಟು ಸಮಯವನ್ನು ಅವರು ರಾಷ್ಟ್ರಪತಿಗಳ ಭಾಷಣವನ್ನು ಹೊಗಳುತ್ತ ತನ್ನ ಮತ್ತು ತನ್ನ ಸರಕಾರದ ಬೆನ್ನನ್ನು ತಟ್ಟಿಕೊಳ್ಳುವದರಲ್ಲೇ ಕಳೆದರು. ನಿಜ ಸಂಗತಿಯೆಂದರೆ, ರಾಷ್ಟ್ರಪತಿಗಳ ಭಾಷಣ ಎಂಬುದು ಕೇಂದ್ರ ಸಂಪುಟ ಪ್ರಧಾನಿಯ ಅಧ್ಯಕ್ಷತೆಯಲ್ಲಿ ತಯಾರಿಸುವ ಭಾಷಣ. ಅದನ್ನು ರಾಷ್ಟ್ರಪತಿಗಳು ಓದಿ ಹೇಳುತ್ತಾರೆ. ಆದ್ದರಿಂದ ಮೋದಿಯವರು ತನ್ನ ಸಂಪುಟ ಬರೆದ ಭಾಷಣವನ್ನು ತಾನೇ ಹೊಗಳಿದ್ದಾರಷ್ಟೇ.
ಭಾರತ ಮಹಾಸೋಂಕನ್ನು ನಿಭಾಯಿಸಿದ ವೈಖರಿಯನ್ನು ಜಗತ್ತು ಮೆಚ್ಚಿಕೊಂಡಿದೆ ಎಂದು ಪ್ರಶಂಸಿಸುತ್ತ ಮೋದಿ ತನ್ನ ಸರಕಾರ ಕೊವಿಡ್ ಮಹಾಸೋಂಕನ್ನು ಮತ್ತು ಇದ್ದಕ್ಕಿದ್ದಂತೆ, ಯಾವುದೇ ಯೋಜನೆಯಿಲ್ಲದ, ಸಿದ್ಧತೆಯಿಲ್ಲದ ರಾಷ್ಟ್ರೀಯ ಲಾಕ್‍ಡೌನ್ ಹೇರಿದ ಸಂಕಟಗಳನ್ನು ಹೇಗೆ ನಿಭಾಯಿಸಿತು ಎಂಬ ಬಗ್ಗೆ ಒಂದು ವಿಮರ್ಶಾತ್ಮಕ ಕಣ್ಣೋಟ ಬೀರಲು ನಿರಾಕರಿಸಿದರು. ಈ ಲಾಕ್‍ಡೌನ್ ಅದಾಗಲೇ ವೇಗವಾಗಿ ಏರುತ್ತಿದ್ದ ನಿರುದ್ಯೋಗದೊಂದಿಗೆ ಮುಳುಗಲಾರಂಭಿಸಿದ್ದ ಭಾರತೀಯ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಿತು. ಇದರೊಂದಿಗೇ ಹಸಿವು ಮತ್ತು ಅಪೌಷ್ಟಿಕತೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳು ಮತ್ತು ಅವರ ತಾಯಂದಿರದ್ದು, ಬೆಳೆದಿದೆ. ಭಾರತ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಕೊವಿಡ್ ಸೋಂಕಿತರನ್ನು ಹೊಂದಿದೆ, 1.5ಲಕ್ಷ ಜನ ಸತ್ತಿದ್ದಾರೆ. ಅದೇ ರೀತಿಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ಬಗ್ಗೆ ಒಂದಾದರೂ ಉಲ್ಲೇಖವಿಲ್ಲ.
ಪ್ರಧಾನಿಗಳ ಪ್ರತಿಯೊಂದು ದಾವೆಯನ್ನೂ ಸರಿಯಾದ್ದಲ್ಲ ಎಂದು ನಿರಾಕರಿಸಬಹುದು ಮತ್ತು ಟೊಳ್ಳು ಎಂದು ತೋರಿಸಬಹುದು. ಆದರೆ ಅವರು ಮಾತಾಡಿದ ಹಲವಾರು ವಿಷಯಗಳಲ್ಲಿ, ಕೆಲವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.
‘ಆಂದೋಲನ ಜೀವಿಗಳು’…
ನಮ್ಮ ರೈತರ ಹೋರಾಟದ ಬಗ್ಗೆ ಮಾತಾಡುತ್ತ , ತನ್ನ ಸರಕಾರದ ಕಳೆದ ಆರು ವರ್ಷಗಳಲ್ಲಿ ಭಾರತೀಯ ಕೃಷಿಗೆ ಮತ್ತು ರೈತರಿಗೆ ಹೆಚ್ಚಿನ ಪ್ರಯೋಜನಗಳನ್ನು ಕೊಡಲಾಗಿದೆ ಎಂದು ಅವರು ಹೇಳಿದರು. ಈ ಹೋರಾಟದಲ್ಲಿ 200ಕ್ಕೂ ಹೆಚ್ಚು ರೈತರು ಪ್ರಾಣ ಕಳಕೊಂಡಿರುವ ಬಗ್ಗೆ ಯಾವುದೇ ಪರಿತಾಪವನ್ನು ವ್ಯಕ್ತಪಡಿಸಲು ಅವರು ನಿರಾಕರಿಸಿದರು.
ತದ್ವಿರುದ್ಧವಾಗಿ, ಈ ಐತಿಹಾಸಿಕ ಹೋರಾಟದಲ್ಲಿರುವವರ ವಿರುದ್ಧ ‘ಆಂದೋಲನ ಜೀವಿ’ಗಳೆಂಬ ಹಣೆಪಟ್ಟಿ ಹಚ್ಚಿ ಆರೋಪಣೆಗಳನ್ನು ಎಸೆದರು. ಪ್ರತಿಭಟನಾಕಾರರು ‘ಪರಜೀವಿಗಳು’ ಎಂಬ ವಿಧಕ್ಕೆ ಸೇರಿದವರು ಎನ್ನುವ ವರೆಗೂ ಹೋದರು.
ಭಾರತ ಸ್ವತಂತ್ರವಾದದ್ದು ಜನಗಳ(ಆಂದೋಲನ ಜೀವಿಗಳ) ಒಂದು ಮಹಾನ್ ಸ್ವಾತಂತ್ರ್ಯ ಹೋರಾಟದ ಮೂಲಕ. ಈ ಹೋರಾಟದಿಂದಲೇ , ‘ನಾವು, ಜನತೆ’ ನಮ್ಮ ಸಂವಿಧಾನವನ್ನು ಅಂಗೀಕರಿಸಿ ನಮಗೆ ಒಂದು ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಮತ್ತು ಒಂದು ಸಂಸದೀಯ ಪ್ರಜಾಪ್ರಭುತ್ವವನ್ನು ಕೊಟ್ಟುಕೊಂಡಿದ್ದೇವೆ. ಇದರಿಂದಾಗಿಯೇ ಮೋದಿಯವರು ಇಂದು ಭಾರತದ ಪ್ರಧಾನ ಮಂತ್ರಿಯಾಗಿದ್ದಾರೆ.
ಈ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮಂದಿ ಹುತಾತ್ಮರಾಗಿದ್ದಾರೆ. ಆದರೆ ಆರೆಸ್ಸೆಸ್/ಬಿಜೆಪಿ ಪರಿವಾರದಿಂದ ಒಬ್ಬರನ್ನಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಆಧುನಿಕ ಭಾರತದ ಅಭಿವೃದ್ಧಿಗಾಗಿ ತಮ್ಮ ಪ್ರಾಣತ್ಯಾಗ ಮಾಡಿದವರ ಸಾಲಿನಲ್ಲಿ ಗಣಿಸಲು ಸಾಧ್ಯವಿಲ್ಲ. ಆರೆಸ್ಸೆಸ್ ರಾಷ್ಟ್ರೀಯ ಆಂದೋಲನದಿಂದ ದೂರವೇ ನಿಂತಿತ್ತು, ಕೆಲವೊಂದು ಸಂದರ್ಭಗಳಲ್ಲಿ ಬ್ರಿಟಿಶರೊಂದಿಗೆ ಶಾಮೀಲು ಕೂಡ ಆಯಿತು ಎಂಬುದೊಂದು ಸಾಬೀತಾಗಿರುವ ಸತ್ಯ ಸಂಗತಿ. ಬಿಜೆಪಿ ಹರಿಯಬಿಟ್ಟ ಪ್ರತಿಭಟನಾ ಆಂದೋಲನಗಳಿಂದಾಗಿ ಭಾರತದ ಪ್ರಧಾನ ಮಂತ್ರಿಯ ಸ್ಥಾನಕ್ಕೇರಿರುವ ಒಬ್ಬ ವ್ಯಕ್ತಿ ಹೀಗೆ ಹೇಳುವುದು ಪ್ರತಿಭಟನಾಕಾರರನ್ನು ‘ಆಂದೋಲನ ಜೀವಿ’ಗಳೆಂದು ಛೀಮಾರಿ ಹಾಕುವುದು ಒಂದು ಉದ್ದೇಶಪೂರ್ವಕ ನಡೆಯಾಗಿದೆ.
ಇದು ಪೂರ್ತಿಯಾಗಿ ನಮ್ಮ ಜನತೆಯನ್ನು ಅರಾಜಕೀಯಕರಣಗೊಳಿಸುವ, ಈ ಮೂಲಕ, ಆರೆಸ್ಸೆಸ್‍ನ ಕಥನವನ್ನು, ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ತೆರನ ‘ಹಿಂದೂರಾಷ್ಟ್ರ’ವನ್ನು ಯಾವುದೇ ಪ್ರತಿಭಟನೆಯಿಲ್ಲದೆ ಸ್ಥಾಪಿಸುವ ಪ್ರಯತ್ನವಾಗಿದೆ.
ಪ್ರತಿಭಟನೆಗಳಲ್ಲಿ ಎರಡು ವಿಧಗಳಿವೆ. ಒಂದು, ಭಾರತವನ್ನು, ಜನಗಳ ಬದುಕುಗಳನ್ನು ಮತ್ತು ಜೀವನಾಧಾರಗಳನ್ನು ಉತ್ತಮಗೊಳಿಸಲಿಕ್ಕಾಗಿ ಬದಲಿಸಿದ ಪ್ರತಿಭಟನೆಗಳು ಮತ್ತು ಹೋರಾಟಗಳು. ಇಂತಹ ಸಕಾರಾತ್ಮಕ ಹೋರಾಟಗಳು ಇಂದು ಕೂಡ ಭಾರತೀಯ ಸಂವಿಧಾನದ ರಕ್ಷಣೆಗೆ ಎದ್ದು ನಿಂತು, ನಮ್ಮ ಸಂವಿಧಾನಿಕ ವ್ಯವಸ್ಥೆಯನ್ನು ಮತ್ತು ಅದರ ಸಂಸ್ಥೆಗಳನ್ನು ನಾಶಪಡಿಸುವ ಈ ಸರಕಾರದ ಪ್ರಯತ್ನಗಳನ್ನು ಪ್ರತಿಭಟಿಸುವಲ್ಲಿ ಕೊಡುಗೆ ನೀಡುತ್ತಿವೆ.
….ಮತ್ತು ‘ಪರಜೀವಿಗಳು’
ಪ್ರತಿಭಟನಾಕಾರರ ಇನ್ನೊಂದು ವಿಧವೆಂದರೆ, ದ್ವೇಷ ಮತ್ತು ಹಿಂಸಾಚಾರವನ್ನು ಹರಡಿಸಲು ಹಾಗೂ ನಮ್ಮ ಸಮಾಜವನ್ನು ಅಸ್ಥಿರಗೊಳಿಸಲು ನಮ್ಮ ಜನಗಳನ್ನು ಒಡೆಯುವ ವಿಷಯಗಳನ್ನು ಎತ್ತುವವರದ್ದು. ಉದಾಹರಣೆಗೆ, 1990ರ ದಶಕದಲ್ಲಿ ಬಿಜೆಪಿಯ ‘ರಥಯಾತ್ರೆ’ ತಾನು ಹೋದೆಡೆಗಳಲ್ಲೆಲ್ಲಾ ರಕ್ತಪಾತ ಮತ್ತು ಕೋಮುಗಲಭೆಗಳ ಜಾಡನ್ನೇ ಬಿಡುತ್ತ ಹೋಯಿತು. ಇದರಲ್ಲಿ ಸಾವಿರಾರು ಮಂದಿ ಪ್ರಾಣ ಕಳಕೊಂಡರು. ಅಂತಿಮವಾಗಿ ಇದು ಬಾಬ್ರಿ ಮಸೀದಿಯ ಧ್ವಂಸಕ್ಕೆ, ಭಾರತದ ಜಾತ್ಯತೀತ ಪ್ರಜಾಪ್ರಭುತ್ವದ ಬುನಾದಿಗೆ ಒಂದು ಕಪ್ಪು ಚುಕ್ಕೆ ಹಚ್ಚುವುದಕ್ಕೆ ದಾರಿ ಮಾಡಿ ಕೊಟ್ಟಿತು. ಈ ಹಲವಾರು ದಶಕಗಳಲ್ಲಿ ನಡೆದ ವಿಭಿನ್ನ ಕೋಮುಗಲಭೆಗಳನ್ನು ಕುರಿತ ನ್ಯಾಯಾಂಗ ತನಿಖಾ ಸಮಿತಿಗಳ ಪ್ರತಿಯೊಂದು ವರದಿಯೂ ಕೋಮುಗಲಭೆಗಳನ್ನು ಪ್ರಚೋದಿಸುವಲ್ಲಿ, ಆಮೂಲಕ ಭೀಷಣ ಕೋಮುಗಲಭೆಗಳಲ್ಲಿ ಪ್ರಾಣಹಾನಿಗಳೆಲ್ಲದರಲ್ಲೂ ಆರೆಸ್ಸೆಸ್‍ನ ಪಾತ್ರದತ್ತವೇ ಬೊಟ್ಟು ಮಾಡಿ ತೋರಿಸಿದೆ. ಈ ವಿಧದ ‘ಆಂದೋಲನ ಜೀವಿ’ಗಳ ಬಗ್ಗೆಯೇ ದೇಶ ಮತ್ತು ಜನತೆ ಎಚ್ಚರದಿಂದಿರಬೇಕು.
ಲಕ್ಷಾಂತರ ರೈತರು, ಕಾರ್ಮಿಕರು, ದುಡಿಯುವ ಜನಗಳು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ದಲಿತರು, ಆದಿವಾಸಿಗಳು ಇಂದು ಈ ಸರಕಾರದ ಅಡಿಯಲ್ಲಿ ದೇಶವನ್ನು ಬಿಗಿದಿರುವ ಅತ್ಯಾಚಾರಗಳ ಹೆಚ್ಚಳದ ವಿರುದ್ಧ ಮತ್ತು ಸಂವಿಧಾನ ಖಾತ್ರಿಪಡಿಸಿರುವ ಹಕ್ಕುಗಳ ಹನನದ ವಿರುದ್ಧ ಹೋರಾಟಗಳ ದಾರಿಯಲ್ಲಿದ್ದಾರೆ. ಇದಕ್ಕೆ ಬಿಜೆಪಿ ಸರಕಾರದ ಉತ್ತರ ಕೋಮು ಧ್ರುವೀಕರಣವನ್ನು ಮತ್ತಷ್ಟು ತೀಕ್ಷ್ಣಗೊಳಿಸುವುದು, ಜನಗಳನ್ನು ಒಡೆಯುವುದು, ಕರಾಳ ಶಾಸನಗಳ ಅಡಿಯಲ್ಲಿ ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಹೋರಾಟಗಾರರನ್ನು ಬಂಧಿಸುವುದು, ಜೈಲಿಗಟ್ಟುವುದು. ಪ್ರಜಾಪ್ರಭುತ್ವವನ್ನು ವೇಗವಾಗಿ ಜನಗಳ ಹಕ್ಕುಗಳ ಧ್ವಂಸಕ್ರಿಯೆಯಾಗಿ ಮತ್ತು ಫ್ಯಾಸಿಸ್ಟ್ ತೆರನ ಅಸಹಿಷ್ಣುತೆ ಮತ್ತು ಹಿಂಸಾಚಾರದ ಪ್ರದರ್ಶನವಾಗಿ ಮಾರ್ಪಡಿಸಲಾಗುತ್ತಿದೆ.
ನಮ್ಮ ಸಂವಿಧಾನವನ್ನು, ಪ್ರಜಾಪ್ರಭುತ್ವ ಮತ್ತು ಜನಗಳ ಹಕ್ಕುಗಳನ್ನು ಧ್ವಂಸ ಮಾಡುವ ಪ್ರಯತ್ನದಿಂದ ನಡೆಸುವ ಹೋರಾಟಗಳ ಅಲೆಗಳ ಬೆನ್ನೇರಿ ಅಧಿಕಾರ ಗಳಿಸಿದ ಮಂದಿಯೇ ದೇಶವನ್ನು ಮತ್ತು ಜನಗಳ ಹಕ್ಕುಗಳನ್ನು ನುಂಗಿ ನೀರು ಕುಡಿಯುತ್ತಿರುವ ಪರಾನ್ನಜೀವಿಗಳು. ದೇಶ ಮತ್ತು ಜನತೆ ಇಂತಹ ಮಂದಿಗಳ ಬಗ್ಗೆಯೇ ಎಚ್ಚರದಿಂದಿರಬೇಕಾಗಿದೆ.
ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತ
ನಮ್ಮ ಸಂವಿಧಾನಿಕ ವ್ಯವಸ್ಥೆಯ ರಕ್ಷಣೆಯ ಜನತ ಹೋರಾಟಗಳ ಹಿಂದೆ “ವಿದೇಶಿ ಕೈ”ಗಳಿವೆ ಎಂದು ಆಪಾದಿಸುವ ಭಾರತೀಯ ಆಳುವ ವರ್ಗಗಳ ಚಾಳಿಯಂತೆ, ಪ್ರಧಾನಿ ಮೋದಿ ಈ ಐತಿಹಾಸಿಕ ಹೋರಾಟಗಳನ್ನು, ಮುಖ್ಯವಾಗಿ ರೈತ ಹೋರಾಟವನ್ನು, ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತದ(ಅವರ ಎಫ್.ಡಿ.ಐ.ಯ) ಉತ್ಪನ್ನಗಳು ಎಂದು ವರ್ಣಿಸುವ ಮಟ್ಟಕ್ಕೆ ಹೋಗಿದ್ದಾರೆ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ನಮ್ಮ ಸಂಸ್ಥೆಗಳು ಮತ್ತು ತಮ್ಮ ಸ್ವಂತ ಹಕ್ಕುಗಳ ರಕ್ಷಣೆಗೆ ಜನಗಳು ಎದ್ದು ನಿಲ್ಲುವುದರಲ್ಲಿ ‘ವಿದೇಶಿ’ಯೆಂಬುದು ಏನೂ ಇಲ್ಲ.
ಬಹುಶಃ ಪ್ರಧಾನಿಗಳು ಈ ರೈತ ಹೋರಾಟವನ್ನು ಈ ಸರಕಾರ ದಮನ ಮಾಡುತ್ತಿರುವ ವೈಖರಿಯ ವಿರುದ್ಧ ವ್ಯಕ್ತವಾಗುತ್ತಿರುವ ಅಂತರ್ರಾಷ್ಟ್ರೀಯ ಆಕ್ರೋಶದ ಬಗ್ಗೆ ಹೀಗೆ ಹೇಳುತ್ತಿರಬಹುದು. ನಮ್ಮ ಅನ್ನದಾತರಾಗಿರುವ ನಮ್ಮ ರೈತರಿಗೆ ಇದಕ್ಕಿಂತ ದೊಡ್ಡ ಅವಮಾನ ಇರಲಿಕ್ಕಿಲ್ಲ. ಅವರು ಉತ್ಪಾದಿಸುವ ಧಾನ್ಯಗಳನ್ನು ತಿಂದು ಪ್ರಧಾನ ಮಂತ್ರಿಗಳೂ ಸೇರಿದಂತೆ ನಾವೆಲ್ಲ ಬದುಕುತ್ತಿದ್ದೇವೆ. ಇಂತಹ ಅನ್ನದಾತರನ್ನು ಪ್ರಧಾನ ಮಂತ್ರಿಗಳು ‘ಆಂದೋಲನ ಜೀವಿ’ಗಳು ಮತ್ತು ‘ಪರಜೀವಿ’ಗಳು ಎಂದು ಹೆಸರಿಸುತ್ತಿದ್ದಾರೆ. ನಿಜವಾಗಿಯೂ ‘ಪರಜೀವಿಗಳು ಅಥವ ಪರಾನ್ನ ಜೀವಿಗಳು ನಮ್ಮ ಅನ್ನದಾತರು ಬೆಳೆದು ಕೊಡುವ ಉತ್ಪನ್ನಗಳ ಮೇಲೆಯೇ ಬದುಕುತ್ತಿರುವವರು.
ಟೊಳ್ಳು ದಾವೆಗಳು
ಮೋದಿ ಕಳೆದ ಆರು ವರ್ಷಗಳ ತನ್ನ ನಾಯಕತ್ವದ ಅಡಿಯಲ್ಲಿ ಭಾರತೀಯ ಕೃಷಿ ಮತ್ತು ನಮ್ಮ ರೈತರ ಗಳಿಕೆಗಳು ಅಭೂತಪೂರ್ವ ಎಂದು ಹೇಳಿಕೊಂಡಿದ್ದಾರೆ. ಚರಣ ಸಿಂಗ್ ರವರನ್ನು ಉಲ್ಲೇಖಿಸುತ್ತ, ಅವರ ಅಂದಾಜಿನಂತೆ 51ಶೇ.ದಷ್ಟಿದ್ದ(ಈಗ ಅದು 70ಶೇ. ದಾಟಿದೆ ಎಂಬುದು ಮೋದಿಯ ದಾವೆ) ಸಣ್ಣ ಮತ್ತು ಅಂಚಿನಲ್ಲಿರುವ ರೈತರ ಬದುಕುಗಳನ್ನು ಉತ್ತಮಪಡಿಸಲು ನೆರವಾಗುವಲ್ಲಿ ತನ್ನ ಸರಕಾರ ಬಹಳಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ಪ್ರಧಾನಿಗಳು ಹೇಳಿದರು. ತನ್ನ ಧೋರಣೆಗಳು ಈ ವಿಭಾಗದ ಮೇಲೆ ಗುರಿಯಿಟ್ಟು ಅವರ ಬದುಕನ್ನು ಉತ್ತಮಪಡಿಸಿವೆ ಎಂಬುದು ಅವರ ದಾವೆ.
ಗ್ರಾಮೀಣ ಭಾರತದ ಈ ವಿಭಾಗದ ಬದುಕುಗಳನ್ನು ಉತ್ತಮಪಡಿಸಲೆಂದೇ ಎಡಪಂಥೀಯರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದು ಮತ್ತು ಅಂತಿಮವಾಗಿ ಯುಪಿಎ ಸರಕಾರ ಅದನ್ನು ಜಾರಿ ಮಾಡುವಂತಾದ್ದು.ಸೀ ಯೋಜನೆಯನ್ನು ಮೋದಿ ಪ್ರತಿಪಕ್ಷದಲ್ಲಿದ್ದಾಗ ಅಪಹಾಸ್ಯ ಮಾಡುತ್ತಿದ್ದರು ಮತ್ತು ಕಳೆದ ಆರು ವರ್ಷಗಳಲ್ಲಿ ವ್ಯವಸ್ಥಿತವಾಗಿ ಕಡಿತಗೊಳಿಸುತ್ತ ಬಂದಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳು ಎಗ್ಗಿಲ್ಲದೆ ಮುಂದುವರೆಯುತ್ತಿವೆ. ಹಸಿರು ಕ್ರಾಂತಿಯಿಂದ ಬಹಳಷ್ಟು ಗಳಿಸಿರುವ ಅತ್ಯಂತ ಹೆಚ್ಚು ಸಮೃದ್ಧವಾಗಿರುವ ಪಂಜಾಬಿನಲ್ಲಿ ಕೂಡ ಎನ್.ಎಸ್.ಎಸ್. ದತ್ತಾಂಶಗಳ ಪ್ರಕಾರ ಒಂದು ಬೇಸಾಯ ಕುಟುಂಬದ ಸರಾಸರಿ ತಿಂಗಳ ಆದಾಯ ರೂ.18,059, ತಲಾ ಆದಾಯ ರೂ.3,450. ಹರ್ಯಾಣದಲ್ಲಿ ಇದು ಅನುಕ್ರಮವಾಗಿ ರೂ. 14,434 ಮತ್ತು ರೂ. 2,450.
ನಾವು ಈ ಐತಿಕಾಸಿಕ ರೈತ ಹೋರಾಟದಲ್ಲಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಮಸ್ತ ರೈತಾಪಿಗಳು ಒಂದಾಗಿರುವುದನ್ನು ನೋಡುತ್ತಿದ್ದೇವೆ. ಇವನ್ನು ರದ್ದು ಮಾಡಬೇಕು ಎನ್ನುವುದು ಮೂಲಭೂತ ಬೇಡಿಕೆ.
ಇದ್ಯಾವ ವಿಧದ ಕೃಷಿ ಸುಧಾರಣೆಗಳು?
ಪ್ರತಿಪಕ್ಷಗಳೆಲ್ಲವೂ ಕೃಷಿ ಸುಧಾರಣೆಗಳನ್ನು ಬಯಸುತ್ತವೆ, ಆದರೆ ತನ್ನ ಸರಕಾರ ಇದನ್ನು ತಂದಿರುವುದಕ್ಕಾಗಿಯೇ ಅವನ್ನು ವಿರೋಧಿಸುತ್ತಿವೆ ಎಂದು ಪ್ರಧಾನ ಮಂತ್ರಿಗಳು ಆರೋಪಿಸಿದ್ದಾರೆ. ಇದಕ್ಕಿಂತ ಸತ್ಯದೂರವಾದ ಮಾತು ಬೇರೆ ಇರಲಾರದು.
ಆದರೆ ಯಾವ ವಿಧದ ಸುಧಾರಣೆಗಳು? ಸಿಪಿಐ(ಎಂ) ಭಾರತೀಯ ಕೃಷಿಯನ್ನು ಬಲಪಡಿಸುವ, ದೇಶದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಮತ್ತು ರೈತರಿಗೆ ಒಂದು ಪ್ರತಿಫಲದಾಯಕ ಬೆಲೆಯನ್ನು ಕೊಡುತ್ತಲೇ ಜನಗಳಿಗೆ ಕೈಗೆಟಕುವ ವೆಚ್ಚದಲ್ಲಿ ಆಹಾರವನ್ನು ಒದಗಿಸುವ ಸುಧಾರಣೆಗಳನ್ನು ತರಬೇಕು ಎಂದು ಆಗ್ರಹಿಸುತ್ತ ಬಂದಿದೆ.
ತದ್ವಿರುದ್ಧವಾಗಿ, ಈಗ ತಂದಿರುವ ಕೃಷಿ ಕಾಯ್ದೆಗಳು ಭಾರತೀಯ ಕೃಷಿಯನ್ನು ಧ್ವಂಸ ಮಾಡುತ್ತವೆ, ನಮ್ಮ ರೈತರನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್‍ಗಳ ಮರ್ಜಿಗೆ ಒಳಪಡಿಸುತ್ತವೆ, ಮತ್ತು ಆಹಾರ ಭದ್ರತೆಗೆ ಗಂಡಾಂತರ ತರುತ್ತವೆ. ಆದ್ದರಿಂದಲೇ ಈ ಮೂರು ಕಾಯ್ದೆಗಳಿಗೆ ಈ ವಿರೋಧ. ಇದನ್ನು ಸಿಪಿಐ(ಎಂ) ಸಂಸತ್ತಿನಲ್ಲೂ, ಹೊರಗೂ ದಾಖಲಿಸಿದೆ.
ಕನಿಷ್ಟ ಬೆಂಬಲ ಬೆಲೆ– ಸ್ವಾಮಿನಾಥನ್ ಆಯೋಗದ ಉಪೇಕ್ಷೆ
“ಎಂಎಸ್‍ಪಿ ಇದೆ, ಎಂಎಸ್‍ಪಿ ಇತ್ತು, ಎಂಎಸ್‍ಪಿ ಇರುತ್ತದೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಇದಕ್ಕೆ ಮೊದಲು ಅವರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ಮೊದಲ ಸರಕಾರ ತಮ್ಮದು ಎಂದು ಹೇಳಿಕೊಂಡಿದ್ದರು. ಇಲ್ಲಿಯೂ ಸತ್ಯದೂರವಾದದ್ದು ಬೇರೆ ಇರಲಿಕ್ಕಿಲ್ಲ.
ಸ್ವಾಮಿನಾಥನ್ ಆಯೋಗ ಸಿ2+50% ಎಂಎಸ್‍ಪಿಯನ್ನು ಶಿಫಾರಸು ಮಾಡಿತ್ತು. ಈ ಸರಕಾರ ಕೊಡುತ್ತಿರುವುದು ಹೆಚ್ಚೆಂದರೆ, ಎ2+50% ಮಾತ್ರ. ಈ ಎರಡರ ನಡುವಣ ವ್ಯತ್ಯಾಸ ಗಮನಾರ್ಹವಾಗಿದೆ. ಎ2 ವಾಸ್ತವಿಕವಾಗಿ ತೆತ್ತ ವೆಚ್ಚವಾದರೆ, ಸಿ2 ನಲ್ಲಿ ಸ್ವಂತ ಜಮೀನಿನ ಬಾಡಿಗೆ ಮೌಲ್ಯ ಮತ್ತು ಸ್ವಂತ ಸ್ಥಿರ ಬಂಡವಾಳ ಆಸ್ತಿಗಳ ಮೌಲ್ಯದ ಮೇಲಿನ ಬಡ್ಡಿ ಸೇರಿರುತ್ತದೆ. ಹೀಗೆ, ಕೇಂದ್ರ ಸರಕಾರ ಸ್ವಾಮಿನಾಥನ್ ಆಯೋಗದ ಇತರ ಎಲ್ಲ ಸಲಹೆಗಳನ್ನು ಉಪೇಕ್ಷಿಸಿದೆ ಮಾತ್ರವಲ್ಲ, ಎಂಎಸ್‍ಪಿ ಕುರಿತ ಶಿಫಾರಸನ್ನು ಕೂಡ ನಿರಾಕರಣೆ ಮಾಡಿದೆ.
ಸಿಪಿಐ(ಎಂ)ನ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ‘ಕೃಷಿ ಸುಧಾರಣೆಗಳು’ ಎಂಬ ವಿಭಾಗವಿತ್ತು. ಅದರಲ್ಲಿ ಮೊದಲ ಅಂಶವೆಂದರೆ, ಎಲ್ಲ ರೈತರಿಗೆ ಕನಿಷ್ಟ ಬೆಂಬಲ ಬೆಲೆಗಳಲ್ಲಿ ಮಾರುವ ಕಾನೂನಾತ್ಮಕ ಹಕ್ಕು ಬೇಕೆಂಬ ಆಗ್ರಹ. ಕನಿಷ್ಟ 2017ರಿಂದಲೇ ಸಿಪಿಐ(ಎಂ) ಸದಸ್ಯರು ಸಂಸತ್ತಿನಲ್ಲಿ ಈ ಆಗ್ರಹವನ್ನು ಎತ್ತುತ್ತ ಬಂದಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರಕಾರ ಇಂತಹುದೊಂದು ಕಾಯ್ದೆಯನ್ನು ರೂಪಿಸಿಲ್ಲ. ಪ್ರಸ್ತುತ ಎಂಎಸ್‍ಪಿ ಕೇವಲ 6 ಶೇಕಡಾ ರೈತರಿಗೆ ಮಾತ್ರ ಸಿಗುತ್ತಿದೆ. ಅಲ್ಲದೆ, ದಕ್ಷ ಸಂಗ್ರಹ ವ್ಯವಸ್ಥೆ ಇಲ್ಲದ ಎಂಎಸ್‍ಪಿ ಕೂಡ ಅರ್ಥಹೀನ. ಆದ್ದರಿಂದ ಸಾರ್ವಜನಿಕ ಮತ್ತು ಖಾಸಗಿ ಖರೀದಿ ವ್ಯವಸ್ಥೆಯನ್ನು ದೇಶಾದ್ಯಂತ ಸಾರ್ವತ್ರಿಕಗೊಳಿಸಬೇಕು.
ಪ್ರಚಂಡ ಹುಸಿ ದಾವೆಗಳ ಚಾಳಿ
ಎಂದಿನ ತನ್ನ ಚಾಳಿಯಂತೆ, ಪ್ರಧಾನಿಗಳು ಕೆಲವು ಪ್ರಚಂಡ ಹುಸಿದಾವೆಗಳನ್ನು ಮಾಡಿದ್ದಾರೆ. ಪಶ್ಚಿಮ ಬಂಗಾಲದ ಚುನಾವಣೆಗಳ ಮೇಲೆ ಕಣ್ಣಿಟ್ಟು ಅವರು “ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮಾತ್ರವೇ ಅಲ್ಲ, ಪ್ರಜಾಪ್ರಭುತ್ವದ ಮಾತೆ” ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಹೇಳಿದ್ದರು ಎಂದರು. ಭಾರತೀಯ ಸಂವಿಧಾನದ ಅಡಿಯಲ್ಲಿ ನಾವು ಬಳಸುವ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದು 1950ರಲ್ಲಷ್ಟೇ ಮತ್ತು ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದದ್ದು 1952ರಲ್ಲಿ. ಭಾರತದ ಸಂಸದೀಯ ಪ್ರಜಾಪ್ರಭುತ್ವದ ಆಧುನಿಕ ಜಾತ್ಯತೀತ ಪ್ರಜಾಸತ್ತಾತ್ಮಕ ವ್ಯವಸ್ಥೆ ಸ್ಥಾಪನೆಯಾಗುವ ಮೊದಲು ನೇತಾಜಿಯವರು ಈ ಬಗ್ಗೆ ಇಂತದ್ದೇನಾದರೂ ಹೇಳಿರುವ ಸಾಧ್ಯತೆ ಬಹುಮಟ್ಟಿಗೆ ಇಲ್ಲ. ಇದೇ ರೀತಿ, ಹಸಿರು ಕ್ರಾಂತಿಯನ್ನು ಪ್ರಧಾನಿ ಲಾಲ್ ಬಹಾದ್ದುರ್ ಶಾಸ್ತ್ರಿಯವರು ಆರಂಭಿಸಿದ್ದು ಎಂದರು. ಅದು ನಡೆದದ್ದು 1966ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಅಡಿಯಲ್ಲಿ. ಈ ಹಿಂದಿನಂತೆ, ತಾನು ಏನು ಬೇಕಾದರೂ, ಅಸಂಬದ್ಧವಾದುದನ್ನಾದರೂ ಹೇಳಿದರೂ ನಡೆಯುತ್ತದೆ ಎಂಬ ಆತ್ಮವಿಶ್ವಾಸ ಪ್ರಧಾನಿ ಮೋದಿಗೆ ಇದ್ದಂತಿದೆ.
ಈ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳಲ್ಲಿ ಏನೂ ಹುರುಳಿಲ್ಲ, ಪ್ರತಿಯೊಬ್ಬರೂ ಪ್ರತಿಭಟನೆಗಳ ಬಗ್ಗೆ ಮಾತಾಡುತ್ತಾರೆ, ಆ ಪ್ರತಿಭಟನೆಗಳ ಹಿಂದಿರುವ ಕಾರಣಗಳ ಬಗೆಗೆ ಅಲ್ಲ ಎನ್ನುತ್ತಾರೆ ಪ್ರಧಾನಿಗಳು. ಪ್ರತಿಭಟನೆಗಳ ಹಿಂದಿರುವ ಕಾರಣಗಳು ಸ್ವಯಂವೇದ್ಯ, ಇವನ್ನು ಪ್ರಧಾನಿಗೆ ಮತ್ತು ಅವರ ಸರಕಾರಕ್ಕೆ ಅದೆಷ್ಟೋ ಬಾರಿ ತಿಳಿಸಿ ಸುಸ್ತಾಗಿದೆ. ಈ ಕೃಷಿ ಕಾಯ್ದೆಗಳ ಪರಿಣಾಮಗಳನ್ನು ಎಳೆಎಳೆಯಾಗಿ ವಿಶ್ಲೇಷಿಸಲಾಗಿದೆ, ಅವೆಲ್ಲವೂ ಸಾರ್ವಜನಿಕರ ಮುಂದಿವೆ.
ಈ ಕೃಷಿ ಕಾಯ್ದೆಗಳನ್ನು ವಿರೋಧಿಸುವವರು ಭಾರತೀಯ ಕೃಷಿಯ ಮತ್ತು ಅನ್ನದಾತರಾದ ರೈತರ ಸಮೃದ್ಧಿಯನ್ನು ಎತ್ತಿ ಹಿಡಿಯುವವರು. ಈ ಕಾಯ್ದೆಗಳನ್ನು ಪ್ರತಿಪಾದಿಸುವವರು ಮತ್ತು ಬೆಂಬಲಿಸುವವರು ಭಾರತೀಯ ಕೃಷಿಯನ್ನು, ನಮ್ಮ ಉತ್ಪನ್ನಗಳು ಮತ್ತು ನಮ್ಮ ಮಾರುಕಟ್ಟೆಗಳನ್ನು ಕಾರ್ಪೊರೇಟ್‍ಗಳು ತಮ್ಮ ಸುಲಿಗೆಕೋರ ಗರಿಷ್ಟ ಲಾಭ ಗಳಿಕೆಗಾಗಿ ಲೂಟಿ ಹೊಡೆಯಲು ಅನುಕೂಲ ಮಾಡಿಕೊಡುವವರು.
ಈ ಕಾರ್ಪೊರೇಟ್‍ಗಳು ಯಾರು ಎಂಬುದನ್ನೂ ನಮ್ಮ ಅನ್ನದಾತರು ನಿಸ್ಸಂದಿಗ್ಧವಾಗಿ ಗುರುತಿಸಿದ್ದಾರೆ. ಹೀಗೆ ಈ ಐತಿಹಾಸಿಕ ಪ್ರತಿಭಟನೆಗಳಿಗೆ ಕಾರಣಗಳು ಸ್ವಯಂವೇದ್ಯ- ಭಾರತೀಯ ಕೃಷಿಯನ್ನು, ಭಾರತೀಯ ಜನತೆಯನ್ನು ಮತ್ತು ಭಾರತದ ಆಹಾರ ಭದ್ರತೆಯನ್ನು ಉಳಿಸುವುದು.
ಈ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು. ತದನಂತರ ಸರಕಾರ ಕೃಷಿ ಸುಧಾರಣೆಗಳನ್ನು ನಮ್ಮ ರೈತರು, ತಮ್ಮ ಕಾರ್ಪೊರೇಟ್ ಬಂಟರು ಮತ್ತು ಇತರ ಎಲ್ಲ ಭಾಗೀದಾರರೊಂದಿಗೆ ಚರ್ಚಿಸಬೇಕು ಹಾಗೂ ಹೊಸ ಪ್ರಸ್ತಾವಗಳೇನಾದರೂ ಇದ್ದರೆ, ಅವುಗಳನ್ನು ಸಂಸತ್ತಿನ ಮುಂದೆ ತಪಾಸಣೆ ಮತ್ತು ಚರ್ಚೆಗಳಿಗೆ ತರಬೇಕು ಮತ್ತು ನಂತರವೇ ಶಾಸನವನ್ನು ತರಬೇಕು. ಇದೀಗ ಅತ್ಯಂತ ವಿವೇಚನಾಪೂರ್ಣ ಪ್ರಸ್ತಾವನೆ. ಪ್ರಧಾನಿ ಮೋದಿ ತನ್ನ ಮೊಂಡುತನವನ್ನು ಬಿಡಬೇಕು ಮತ್ತು ಈ ಕಾಯ್ದೆಗಳನ್ನು ರದ್ದು ಮಾಡಬೇಕು.